ಬಿಟಿಎಂ ನಿವಾಸಿಗಳಿಗಿಲ್ಲ ಅನಿಲ ಭಾಗ್ಯ!
Team Udayavani, Jun 19, 2019, 3:09 AM IST
ಬೆಂಗಳೂರು: ಇದು ಗಂಡ-ಹೆಂಡತಿ ಗುದ್ದಾಟದಲ್ಲಿ ಕೂಸು ಬಡವಾದ ಪ್ರಸಂಗ. ಬಿಬಿಎಂಪಿ ಮತ್ತು ಗೇಲ್ ನಡುವೆ ಅನಿಲ ಕೊಳವೆ ಮಾರ್ಗ ಅಳವಡಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತಿಕ್ಕಾಟದಿಂದ ಬಿಟಿಎಂ ಲೇಔಟ್ ಹಾಗೂ ಪಟ್ಟಾಭಿರಾಮನಗರದ ಸಾವಿರಾರು ನಿವಾಸಿಗಳು “ಅನಿಲ ಭಾಗ್ಯ’ದಿಂದ ವಂಚಿತರಾಗುತ್ತಿದ್ದಾರೆ.
ಎರಡೂ ಬಡಾವಣೆ ನಿವಾಸಿಗಳು ಕೊಳವೆ ಮೂಲಕ ಬರುವ ಅಡುಗೆ ಅನಿಲಕ್ಕಾಗಿ ಮೂರು ವರ್ಷಗಳ ಹಿಂದೆಯೇ ಹಣ ಪಾವತಿಸಿ, ಹೆಸರು ನೋಂದಾಯಿಸಿದ್ದಾರೆ. ಗ್ಯಾಸ್ ಪೈಪ್‌ಲೈನ್ ಕೂಡ ಬಡಾವಣೆ ಹೊಸ್ತಿಲಲ್ಲಿ ಬಂದುನಿಂತಿದೆ. ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಅಗೆಯಲಿರುವ ರಸ್ತೆಗೆ ಪ್ರತಿಯಾಗಿ ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಗೇಲ್) ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಮೂರು ವರ್ಷಗಳ ಹಿಂದೆಯೇ 18 ಕೋಟಿ ಹಣ ಪಾವತಿಸಿದೆ. ಆದರೆ, ಇದುವರೆಗೆ ರಸ್ತೆ ಅಗೆಯಲು ಅವಕಾಶ ನೀಡಿರಲಿಲ್ಲ. ಹಾಗಾಗಿ ಬೇಸತ್ತ ಗೇಲ್, ಯೋಜನೆಯನ್ನೇ ಸ್ಥಳಾಂತರಿಸಲು ನಿರ್ಧರಿಸಿದೆ.
ಬಿಟಿಎಂ ಲೇಔಟ್‌ನಿಂದ ಯಲಹಂಕಕ್ಕೆ ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಉದ್ದೇಶಿಸಲಾಗಿದ್ದು, ಈ ಸಂಬಂಧ ಪೂರ್ವಸಿದ್ಧತೆ ಕೂಡ ಮಾಡಿಕೊಂಡಿದೆ. ಹೀಗೆ ಬದಲಿ ಮಾರ್ಗದಲ್ಲಿ ಅಳವಡಿಸಲು ಬಿಬಿಎಂಪಿ ಕೂಡ ಅನುಮತಿ ನೀಡಿದೆ. ಈ ಮೂಲಕ ಬಿಟಿಎಂ ಲೇಔಟ್ ಮತ್ತು ಪಟ್ಟಾಭಿರಾಮನಗರದ ನಿವಾಸಿಗಳು ತಮ್ಮದಲ್ಲದ ತಪ್ಪಿಗೆ ಸೌಲಭ್ಯ ವಂಚಿತರಾಗುವಂತಾಗಿದೆ. ಈ ಪ್ರದೇಶದಲ್ಲಿ ಸುಮಾರು 30 ಸಾವಿರ ಗ್ರಾಹಕರನ್ನು ಗೇಲ್ ನಿರೀಕ್ಷಿಸಿತ್ತು ಎಂದು ಪ್ರಾಧಿಕಾರದ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಬಿಟಿಎಂ ಲೇಔಟ್‌ನಲ್ಲಿ ಸುಮಾರು 97 ಕಿ.ಮೀ. ಹಾಗೂ ಅದಕ್ಕೆ ಹೊಂದಿಕೊಂಡಿರುವ ಪಟ್ಟಾಭಿರಾಮನಗರದಲ್ಲಿ 30 ಕಿ.ಮೀ. ಉದ್ದ ಅನಿಲ ಕೊಳವೆಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇಲ್ಲಿ ಕೊಳವೆ ಮಾರ್ಗ ಅಳವಡಿಕೆಗಾಗಿ ರಸ್ತೆ ಅಗೆಯಲು 2016ರ ನವೆಂಬರ್‌ನಲ್ಲೇ 18 ಕೋಟಿ ರೂ. (ಎರಡೂ ರಸ್ತೆ ಸೇರಿ) ಪಾವತಿಸಿ, ಪಾಲಿಕೆ ಕೇಂದ್ರ ಕಚೇರಿಯಿಂದ ಅನುಮತಿಯನ್ನೂ ಪಡೆಯಲಾಗಿತ್ತು. ಇನ್ನೇನು ಕಾಮಗಾರಿ ಕೈಗೆತ್ತಿಕೊಳ್ಳುವಷ್ಟರಲ್ಲಿ ಸ್ಥಳೀಯ ವಾರ್ಡ್ ಎಂಜಿನಿಯರ್, ಹೊಸ ರಸ್ತೆ ನಿರ್ಮಿಸುವುದರಿಂದ ಅಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂದು ನೋಟಿಸ್ ಜಾರಿ ಮಾಡಿದ್ದಾರೆ.
ವಿಚಿತ್ರವೆಂದರೆ ಅರ್ಧಕ್ಕರ್ಧ ಬೆಂಗಳೂರು ಸುತ್ತಿಬಂದರೂ ಬಿಟಿಎಂ ಲೇಔಟ್‌ನಲ್ಲಿ ಮಾತ್ರ ಪ್ರವೇಶ ಸಿಗುತ್ತಿಲ್ಲ. ಇದರಿಂದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಒಂದೆಡೆ ಮುಂಗಡ ಹಣವೂ ನಿರುಪಯುಕ್ತವಾಗಿತ್ತು. ಮತ್ತೂಂದೆಡೆ ಕಾಮಗಾರಿಯೂ ಪ್ರಗತಿ ಕಂಡಿರಲಿಲ್ಲ. ಇನ್ನೊಂದೆಡೆ ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳಿಂದಲೂ ನಿರೀಕ್ಷಿತ ಸಹಕಾರ ದೊರೆಯಲಿಲ್ಲ. ಪರಿಣಾಮ ಅನಿವಾರ್ಯವಾಗಿ ಬದಲಿ ಸ್ಥಳ ಆಯ್ಕೆ ಮಾಡಲಾಗಿದೆ ಎಂದು ಪ್ರಾಧಿಕಾರದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅನಿರೀಕ್ಷಿತ ಅನಿಲ ಭಾಗ್ಯ!: ಗೇಲ್‌ನ ಈ ನಿರ್ಧಾರವು ಯಲಹಂಕ ನಿವಾಸಿಗಳಿಗೆ ಬಯಸದೆ ಬಂದ ಭಾಗ್ಯವೂ ಆಗಿದೆ. ಆ ಭಾಗದಲ್ಲಿ ಸುಮಾರು 50 ಕಿ.ಮೀ. ಉದ್ದದ ಅನಿಲ ಕೊಳವೆ ಮಾರ್ಗ ನಿರ್ಮಿಸಲಾಗುತ್ತಿದೆ. ಈಗಾಗಲೇ ಪೈಪ್‌ಗ್ಳನ್ನು ಸ್ಥಳದಲ್ಲಿ ಇಡಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ. ಮಳೆಗಾಲ ಇರುವುದರಿಂದ ಬರುವ ಕೆಲವು ತಿಂಗಳು ಕಾಮಗಾರಿ ತುಸು ಮಂದಗತಿಯಲ್ಲಿ ಸಾಗಲಿದೆ. ಈ ಭಾಗದಲ್ಲೂ ಹೆಚ್ಚು-ಕಡಿಮೆ 30 ಸಾವಿರ ಗ್ರಾಹಕರು ಫಲಾನುಭವಿಗಳಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾವು ಈಗಾಗಲೇ ಹಣ ಪಾವತಿಸಿ, ಹೆಸರು ನೋಂದಾಯಿಸಿಕೊಂಡಿದ್ದೆವು. ಮೂರು ವರ್ಷಗಳಿಂದ ಇದಕ್ಕಾಗಿ ಕಾಯುತ್ತಿದ್ದೇವೆ. ಪೈಪ್‌ಲೈನ್ ಅಳವಡಿಕೆಗೆ ಅನುವು ಮಾಡಿಕೊಡುವಂತೆ ಬಿಬಿಎಂಪಿಗೆ ಹಾಗೂ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಗೇಲ್‌ಗೆ ಸೂಚಿಸಬೇಕು ಎಂದು ಈ ಹಿಂದೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ, ಸ್ಥಳೀಯ ಶಾಸಕರನ್ನೂ ಒತ್ತಾಯಿಸಲಾಗಿತ್ತು.
ಈಗ ಏಕಾಏಕಿ ಯೋಜನೆಯನ್ನೇ ಸ್ಥಳಾಂತರಿಸಲಾಗುತ್ತಿದೆ. ನಮ್ಮದಲ್ಲದ ತಪ್ಪಿಗೆ ಸೌಲಭ್ಯದಿಂದ ವಂಚಿತರನ್ನಾಗಿ ಮಾಡುತ್ತಿರುವುದು ಎಷ್ಟು ಸರಿ ಎಂದು ಬಿಟಿಎಂ ಲೇಔಟ್‌ನ ಕೆಎಎಸ್ ಆಫೀಸರ್ ಕಾಲೊನಿಯ ಸ್ಪಂದನ ನಾಗರಿಕ ವೇದಿಕೆ ಕಾರ್ಯದರ್ಶಿ ಜೆ. ಶಿವರಾಮನ್ ಪ್ರಶ್ನಿಸುತ್ತಾರೆ. ಶೀಘ್ರದಲ್ಲೇ ಸ್ಥಳೀಯ ಶಾಸಕರನ್ನು ಭೇಟಿಯಾಗಿ, ಬಿಟಿಎಂ ಲೇಔಟ್‌ನಿಂದ ಸ್ಥಳಾಂತರಿಸದಂತೆ ಒತ್ತಾಯಿಸಲಾಗುವುದು ಎಂದೂ ಅವರು ತಿಳಿಸಿದರು.
ಯಲಹಂಕ ಯಾಕೆ?: ಯಲಹಂಕದಲ್ಲಿ ಈಗಾಗಲೇ ಅನಿಲ ಕೊಳವೆ ಮಾರ್ಗ ಹಾದುಹೋಗಿದೆ. ಅಲ್ಲಿರುವ ರೈಲ್ ವ್ಹೀಲ್ ಫ್ಯಾಕ್ಟರಿ ಮತ್ತು ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಕ್ವಾಟ್ರಸ್‌ಗೆ ಇದೇ ಕೊಳವೆ ಮಾರ್ಗದ ಸಂಪರ್ಕ ಕಲ್ಪಿಸಲಾಗಿದೆ. ಇದು ಕಾಮಗಾರಿ ವೇಗವಾಗಿ ಸಾಗಲಿಕ್ಕೂ ಅನುಕೂಲ ಆಗಲಿದೆ. ಹಾಗಾಗಿ, ಈ ಪ್ರದೇಶ ಆಯ್ಕೆ ಮಾಡಲಾಗಿದೆ ಎಂದು ಗೇಲ್ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಅಗ್ಗ ಮತ್ತು ಸುರಕ್ಷಿತ: ನೇರವಾಗಿ ಮನೆಗೆ ಸಂಪರ್ಕ ಕಲ್ಪಿಸುವ ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಎಲ್‌ಪಿಜಿಗಿಂತ ಅಗ್ಗ ಹಾಗೂ ಸುರಕ್ಷಿತ ಮತ್ತು ದಿನದ 24 ಗಂಟೆ ಲಭ್ಯವಾಗುವಂತಹದ್ದು. ಒಂದು ಎಲ್‌ಪಿಜಿ ಸಿಲಿಂಡರ್‌ಗೆ ತಗಲುವ ವೆಚ್ಚಕ್ಕೆ ಹೋಲಿಸಿದರೆ, ಸಿಎನ್‌ಜಿ ಸಬ್ಸಿಡಿ ರಹಿತ ಶೇ. 33ರಷ್ಟು ಹಾಗೂ ಸಬ್ಸಿಡಿ ಸಹಿತ ಶೇ. 11ರಷ್ಟು ಅಗ್ಗವಾಗಿದೆ. ಅಲ್ಲದೆ, ಈ ಅನಿಲ ಸೋರಿಕೆಯಿಂದ ಯಾವುದೇ ಅಪಾಯ ಇಲ್ಲ. ಈ ಕಾರಣಕ್ಕೆ ಜನ ಹೆಚ್ಚು ಸಿಎನ್‌ಜಿ ಸಂಪರ್ಕಕ್ಕೆ ಆಸಕ್ತಿ ಹೊಂದಿದ್ದಾರೆ. ಆದರೆ, ಇದು ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಮಾತ್ರ ಸಾಕಾರಗೊಳ್ಳುತ್ತದೆ.
ಯೋಜನೆ ಕುರಿತು: ಈವರೆಗೆ ಒಟ್ಟಾರೆ 1,200 ಕಿ.ಮೀ. ಅನಿಲ ಕೊಳವೆ ಮಾರ್ಗ ಅಳವಡಿಕೆ ಆಗಿದ್ದು, 14 ಸಾವಿರ ಕುಟುಂಬಗಳಿಗೆ ಈಗಾಗಲೇ ಸಂಪರ್ಕ ಕಲ್ಪಿಸಲಾಗಿದೆ. 90 ಸಾವಿರ ಗ್ರಾಹಕರ ಮನೆಗಳಿಗೆ ಸ್ಮಾರ್ಟ್ ಮೀಟರ್ ಸೇರಿದಂತೆ ಮೂಲಸೌಕರ್ಯ ಅಳವಡಿಸಲಾಗಿದ್ದು, ಅನಿಲ ಪೂರೈಕೆ ಮಾತ್ರ ಬಾಕಿ ಇದೆ. ಎಚ್‌ಎಸ್‌ಆರ್ ಲೇಔಟ್, ಸಿಂಗಸಂದ್ರ, ಮಂಗನಪಾಳ್ಯ, ಡಾಲರ್ ಕಾಲೊನಿ, ಸಂಜಯನಗರ, ಪೀಣ್ಯ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ, ಜಿಗಣಿ ಕೈಗಾರಿಕೆ ಪ್ರದೇಶಗಳು, ಹೆಣ್ಣೂರು, ಎಚ್‌ಆರ್‌ಬಿಆರ್ ಲೇಔಟ್, ಮಂತ್ರಿವೆಬ್‌ಸಿಟಿ ಮತ್ತಿತರ ಕಡೆಗಳಲ್ಲಿ ಸಂಪರ್ಕ ಕಲ್ಪಿಸಲಾಗಿದೆ.
* ವಿಜಯಕುಮಾರ್ ಚಂದರಗಿ