ಅಹಿಂಸೆ, ಶಾಂತಿ ಅಂಶಗಳು ಜಗತ್ತಿಗೆ ಮಾದರಿ

Team Udayavani, Jun 24, 2019, 3:07 AM IST

ಬೆಂಗಳೂರು: ಜೈನ ಧರ್ಮವು ಪುರಾತನ ಆಚರಣೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದು, ಸ್ವಯಂ ಕಠೊರ ಆಚರಣೆಗಳ ಮೂಲಕ ಅಹಿಂಸೆ ಹಾಗೂ ಶಾಂತಿ ಸಂದೇಶಗಳನ್ನು ಸಾರುತ್ತಿರುವ ಪ್ರಪಂಚದ ವಿಶೇಷ ಧರ್ಮವಾಗಿದೆ ಎಂದು ಜಲಸಂಪನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಆಚಾರ್ಯ ಮಹಾಶ್ರಮಣ್‌ ಚತುರ್ಮಾಸ ಟ್ರಸ್ಟ್‌ ವತಿಯಿಂದ ಬೆಂಗಳೂರು ಅರಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೈನ ಸಮುದಾಯದ ಎಚ್‌.ಎಚ್‌.ಆಚಾರ್ಯ ಮಹಾಶ್ರಮಂಜಿ ಅವರ ಅಭಿನಂದನೆ ಹಾಗೂ ನಾಗರಿಕ ಅಭಿನಂದನಾ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಜೈನ ಧರ್ಮದ ಆಚರಣೆಗಳು ಪ್ರಧಾನವಾಗಿ ಅಹಿಂಸೆ ಹಾಗೂ ಶಾಂತಿ ಅಂಶಗಳನ್ನು ಒಳಗೊಂಡಿದ್ದು, ಎಲ್ಲರಿಗೂ ಮಾದರಿಯಾಗಿವೆ. ಜೈನ ಮನಿಗಳು ಹಾಗೂ ಜೈನ ಧರ್ಮ ಪಾಲಕರು ಸ್ವಯಂ ಕಠೊರ ಆಚರಣೆಗಳ ಮೂಲಕ ಪ್ರಪಂಚಕ್ಕೆ ಅಹಿಂಸೆ ಸಂದೇಶ ಸಾರುತ್ತಿದ್ದಾರೆ ಎಂದರು.

ಧರ್ಮ ಯಾವುದಾದರೂ ತತ್ವ ಒಂದೇ ಆಗಿರುತ್ತದೆ ಎಂಬುದನ್ನು ಮರೆಯಬಾರದು. ಮಹಾಶ್ರಮಂಜಿ ಕಾಲ್ನಡಿಗೆಯ ಮೂಲಕ ಸಂಚರಿಸಿ ಅಹಿಂಸೆ, ಶಾಂತಿ ಸಂದೇಶವನ್ನು ಪ್ರಪಂಚಕ್ಕೆ ಸಾರುತ್ತಿದ್ದಾರೆ. ಇಂತಹ ಮಹನೀಯರು ನಮ್ಮ ರಾಜ್ಯಕ್ಕೆ ಬೆಂಗಳೂರಿಗೆ ಬಂದಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಪ್ರಕೃತಿಯಲ್ಲಿ ಶೇಷ್ಠ ಎಂದು ಕರೆಸಿಕೊಳ್ಳುವ ಮಾನವನಿಂದಲೇ ಎರಡು ಮಹಾಯುದ್ಧಗಳು ನಡೆದಿವೆ. ಹೀಗಾಗಿ, ಜಗತ್ತಿಗೆ ಅಂಹಿಸೆ ಹಾಗೂ ಶಾಂತಿ ಸಂದೇಶದ ಅವಶ್ಯಕತೆ ಹೆಚ್ಚಿದೆ.

ನಮ್ಮ ವಿಜ್ಞಾನ ಹೊರಗಿನ ಬದುಕಿನಲ್ಲಿ ಆವಿಷ್ಕಾರ ಕ್ರಾಂತಿ ಮಾಡಿರಬಹುದು. ಆದರೆ, ಮನಸಿನಲ್ಲಿ ಕೆಟ್ಟ ಭಾವನೆಯನ್ನು ತೊಳೆದು ಹಾಕುವ ಯಾವುದೇ ತಂತ್ರಜ್ಞಾನ ಆವಿಷ್ಕಾರ ಮಾಡಿಲ್ಲ. ವ್ಯಕ್ತಿಯು ಮೊದಲು ಆಂತರಿಕ ವಿಚಾರಗಳ ಹಿಡಿತ ಸಾಧಿಸಬೇಕು ಎಂದು ಸಂದೇಶ ನೀಡಿದರು.

ಆದಿಚುಂಚನಗಿರಿ ಸ್ವಾಮೀಜಿಗಳಿಗೂ ಜೈನ ಸಮುದಾಯದ ಆಚಾರ್ಯರಿಗೂ ಬಹಳ ಒಡನಾಟವಿತ್ತು. ಎರಡೂವರೆ ದಶಕಗಳಿಂದ ದೇಶ ವಿದೇಶದಲ್ಲಿ ನಡೆದ ಚರ್ತುಮಾಸ ಸಂದರ್ಭದ ಆಚಾರ್ಯರ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದಿಂದ ಭಾಗವಹಿಸುತ್ತಾ ಬಂದಿದ್ದೇವೆ.

ಆಚಾರ್ಯರು ಬದುಕಿನುದ್ಧಕ್ಕೂ ಅಹಿಂಸೆ ವೃತ ಧರಿಸಿ, ಎಲ್ಲೆಡೆ ಕಾಲ್ನಡಿಗೆಯಲ್ಲಿ ಅಹಿಂಸೆ ಯಾತ್ರೆ ಮಾಡಿ ಸಂದೇಶ ಸಾರುತ್ತಾ ಬಂದಿದ್ದಾರೆ. ಇಂತಹ ಮಹನೀಯರನ್ನು ಬಹುದಿನಗಳಿಂದ ಕರ್ನಾಟಕಕ್ಕೆ ಆಗಮಿಸುವಂತೆ ಕೋರುತ್ತಾ ಬಂದಿದ್ದು, ಇಂದು ಅವರನ್ನು ಸ್ವಾಗತಿಸಲು ಹೆಮ್ಮೆಯಾಗುತ್ತಿದೆ ಎಂದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್‌ ಮಾತನಾಡಿ, ಹಿಂದಿನಿಂದಲೂ ನಮ್ಮ ವಂಶಸ್ಥರಿಗೂ ಹಾಗೂ ಜೈನ ಧರ್ಮಕ್ಕೂ ಅವಿನಾಭಾವ ಸಂಬಂಧವಿದ್ದು, ಜೈನ ಆಚಾರ್ಯರನ್ನು ಸತ್ಕರಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಶಾಂತಿಧೂತ ಆಚಾರ್ಯ ಮಹಾಶ್ರಮಂಜಿ ಅವರನ್ನು ನಮ್ಮ ಬೆಂಗಳೂರು ಅರಮನೆಗೆ ಆಹ್ವಾನಿಸಲು ಹೆಮ್ಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಆಚಾರ್ಯ ಸಂದೇಶಗಳನ್ನು ಒಳಗೊಂಡ ಕನ್ನಡ ಪುಸ್ತಕಗಳನ್ನು ಈ ವೇಳೆ ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌, ಮೇಯರ್‌ ಗಂಗಾಬಿಕೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಭಾಗವಹಿಸಿದ್ದರು.

ಸದ್ಭಾವನೆ, ನೈತಿಕತೆ ಹಾಗೂ ಮಾದಕ ವ್ಯಸನ ಮುಕ್ತಿ: ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಎಚ್‌.ಎಚ್‌.ಆಚಾರ್ಯ ಮಹಾಶ್ರಮಂಜಿ ಅವರು, ಎಲ್ಲೆಡೆ ಜೈನ ಪರಂಪರೆಯ ಅಹಿಂಸೆ ಸಂದೇಶ ಸಾರುವ ನಿಟ್ಟಿನಲ್ಲಿ 2014 ನವೆಂಬರ್‌ನಲ್ಲಿ ದೆಹಲಿಯಿಂದ ಕಲಾ°ಡಿಗೆ ಮೂಲಕ ಅಹಿಂಸಾ ಯಾತ್ರೆ ಆರಂಭಿಸಲಾಯಿತು. ಈವರೆಗೆ ವಿವಿಧ ರಾಜ್ಯಗಳು, ಎರಡು ದೇಶಗಳನ್ನು ಸಂಚರಿಸಿದ್ದೇವೆ. ಮುಖ್ಯವಾಗಿ ಎಲ್ಲೆಡೆ ಸದ್ಭಾವನೆ, ಕೆಲಸದಲ್ಲಿ ನೈತಿಕತೆ, ಮಾದಕ ವಸ್ತುಗಳಿಂದ ಮುಕ್ತಿ ವಿಷಯವನ್ನು ಬೋಧಿಸಲಾಗುತ್ತಿದೆ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ