ನೇತ್ರದಾನಿಗಳೇ ಇಲ್ಲಿ ನೇತಾರರು

Team Udayavani, Aug 26, 2019, 3:08 AM IST

ಬೆಂಗಳೂರು: ಸಾಮಾನ್ಯವಾಗಿ ಬಹುತೇಕ ಸ್ವಯಂ ಸೇವಾ ಸಂಸ್ಥೆಗಳಲ್ಲಿ ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಸಿದರೆ ಸಾಕು. ಆದರೆ, ಇಲ್ಲಿ ಸದಸ್ಯತ್ವದಿಂದ ಅವರ ಕೆಲಸ ಆರಂಭವಾಗುತ್ತದೆ. ಇಂತಹದೊಂದು ವಿನೂತನ ಕಾರ್ಯವನ್ನು ನಯನ ಜ್ಯೋತಿ ಟ್ರಸ್ಟ್‌ ನಡೆಸಿಕೊಂಡು ಬಂದಿದೆ.

ದೇಶದಲ್ಲಿ 1.2 ಲಕ್ಷ ಮಂದಿ ಕಣ್ಣಿನ ಕಸಿ ಅಗತ್ಯವಿರುವ ಅಂಧರಿದ್ದಾರೆ. ಇವರಿಗೆ ನೆರವಾಗಲೆಂದು 500ಕ್ಕೂ ಹೆಚ್ಚು ನೇತ್ರ ಬ್ಯಾಂಕ್‌ಗಳು, ಸಾವಿರಾರು ನೇತ್ರದಾನ ಜಾಗೃತಿ ಸ್ವಯಂ ಸೇವಾ ಸಂಸ್ಥೆಗಳು, ಲಕ್ಷಾಂತರ ಮಂದಿ ನೇತ್ರದಾನಕ್ಕಾಗಿ ನೋಂದಣಿ ಮಾಡಿಸಿದವರಿದ್ದಾರೆ.

ಆದರೂ, ಇವರುಗಳ ನಡುವಿನ ಅಂತರದಿಂದ ನೇತ್ರದಾನ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಹೀಗಾಗಿ, ಆಸಕ್ತರನ್ನು ಕೇವಲ ದಾನಿಗಳಾಗಿ ನೋಂದಣಿ ಮಾಡಿಸದೆ, ಅವರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಜತೆಗೆ ಬದುಕಿರುವಂತೆಯೇ ನೆರೆಹೊರೆಯವರು, ಪರಿಚಿತರು ನಿಧನರಾದ ಸಂದರ್ಭದಲ್ಲಿ ಅವರ ಕಣ್ಣುಗಳನ್ನು ದಾನ ಮಾಡಿಸುವ ಜವಬ್ದಾರಿಯನ್ನು ಹೊರಿಸುವ ಕಾರ್ಯವನ್ನು ನಯನ ಜ್ಯೋತಿ ಟ್ರಸ್ಟ್‌ ಮಾಡುತ್ತಿದೆ.

ಕೇವಲ ಒಂದು ಮೊಬೈಲ್‌ ಎಸ್‌ಎಂಎಸ್‌ ಮೂಲಕ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುವ ಈ ಟ್ರಸ್ಟ್‌, ನೋಂದಾಯಿತರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭಗಳಲ್ಲಿ ನೇತ್ರದಾನಕ್ಕೆ ಪ್ರೊತ್ಸಾಹಿಸಿರುವ ಮಹಾನ ವ್ಯಕ್ತಿಗಳ ನುಡಿಗಳೊಂದಿಗೆ ಶುಭಾಶಯ ಕೋರಿ ತಮ್ಮ ನೇತ್ರದಾನ ನೋಂದಣಿ ನೆನಪಿಸುವ ಜತೆಗೆ ಇತರಿಂದ ನೇತ್ರದಾನ ಮಾಡಿಸುವ ಜವಾಬ್ದಾರಿಯನ್ನು ಎಚ್ಚರಿಸುತ್ತದೆ.

ಇಲ್ಲಿಯವರೆಗೂ 60 ಸಾವಿರಕ್ಕೂ ಹೆಚ್ಚು ಮಂದಿ ಈ ಟ್ರಸ್ಟ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದು, ಸಾವಿರಾರು ಕಣ್ಣುಗಳ ದಾನ ಮಾಡಿಸಲಾಗಿದೆ. ಜತೆಗೆ ವರ್ಷಗಳ ಹಿಂದೆಯೇ ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯೊಂದಿಗೆ ಮಾತನಾಡಿ ಆರೋಗ್ಯ ಸಹಾಯವಾಣಿಗಳಾದ 104 ಹಾಗೂ 108 ರಲ್ಲಿ ನೇತ್ರದಾನ ಮಾಹಿತಿ, ಮಾರ್ಗದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ.

ಟ್ರಸ್ಟ್‌ನ ಸಂಸ್ಥಾಪಕ ಜಯರಾಮ್‌ ಅವರು ಈವರೆಗೂ 200ಕ್ಕೂ ಹೆಚ್ಚು ಮೃತರಿಂದ ಕಣ್ಣಿನ ದಾನ ಮಾಡಿಸಿದ್ದಾರೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಸನ್ಮಾನ, ಅಭಿನಂದನಾ ಪತ್ರವನ್ನೂ ಪಡೆದಿದ್ದಾರೆ. ಇಂದಿಗೂ ಟ್ರಸ್ಟ್‌ನ ನೋಂದಾಯಿತರು ಯಾವ ಸಮಯದಲ್ಲಿ ಕರೆ ಮಾಡಿದರೂ ಮೃತರ ಕುಟುಂಬಕ್ಕೆ ನೇತ್ರದಾನಕ್ಕೆ ಅವಕಾಶ ನೀಡುವಂತೆ ಪ್ರೇರೇಪಣೆ ಮಾಡುತ್ತಾರೆ.

ಜತೆಗೆ ತಮ್ಮ ನೆರೆಹೊರೆ, ಸ್ನೇಹಿತರು ನಿಧನರಾದರು ಅಲ್ಲಿಗೆ ತೆರಳಿ ದಾನಕ್ಕೆ ಮನವೊಲೈಸುತ್ತಾರೆ. “ಕೇವಲ ಜಾಗೃತಿ ಮೂಡಿಸಿದರೆ, ನೋಂದಣಿ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಸಭೆ, ಅಭಿಯಾನಗಳಲ್ಲಿ ನೋಂದಣಿ ಮಾಡಿಸಿದವರು ಅಥವಾ ಅವರ ಕುಟುಂಬದವರು ಮರೆತಿರುತ್ತಾರೆ. ಮರಣಾನಂತರ ಸಂಪರ್ಕ ಸಾಧ್ಯವಾಗುವುದಿಲ್ಲ.

ಆಗ ನೇತ್ರದಾನ ಕೇವಲ ಕಾಗದಕ್ಕೆ ಸೀಮಿತವಾಗುತ್ತದೆ. ಇದಕ್ಕಾಗಿಯೇ ನೋಂದಣಿ ಮಾಡಿಸಿದವರೊಂದಿಗೆ ನಿರಂತರ ಸಂಪರ್ಕ ಇರಬೇಕು. ಜತೆಗೆ ಅವರು ಬದುಕಿರುವಂತೆಯೇ ಮೃತರ ಕುಟುಂಬಕ್ಕೆ ಪ್ರೇರೇಪಿಸಿ ಅವರ ಕಣ್ಣುಗಳನ್ನು ದಾನ ಮಾಡಿಸಬೇಕು. ಈ ನಿಟ್ಟಿನಲ್ಲಿ ನಯನಜ್ಯೋತಿ ಟ್ರಸ್ಟ್‌ ಕಾರ್ಯನಿರತವಾಗಿದೆ ಎನ್ನುತ್ತಾರೆ ಜಯರಾಮ್‌.

ದಾನಕ್ಕೆ ಪ್ರೇರಣೆ ಅಗತ್ಯ: ದೇಶದಲ್ಲಿ ವಾರ್ಷಿಕ 20 ಸಾವಿರ ಮಂದಿ ಕಾರ್ನಿಯಾ ಅಂಧತ್ವಕ್ಕಿಡಾಗುತ್ತಿದ್ದಾರೆ. ಕಾರ್ನಿಯಾ ಎಂದರೆ ಕಣ್ಣಿನ ಮುಂಭಾಗದಲ್ಲಿರುವ ಪಾರದರ್ಶ ಬಿಳಿ ಭಾಗವೇ ಆಗಿದೆ. ಇದು ಮಸುಕಾದರೆ, ಪಾರದರ್ಶಕತೆ ಕಳೆದುಕೊಂಡರೆ ದೃಷ್ಠಿ ಹೋಗುತ್ತದೆ. ಇವರಿಗೆ ಕಾರ್ನಿಯಾ ಕಸಿ ಮಾಡುವುದರಿಂದ ದೃಷ್ಠಿಯನ್ನು ಮರಳಿಸಬಹುದು. ವ್ಯಕ್ತಿ ಮರಣಾನಂತರವೇ ಕಣ್ಣುಗಳ ದಾನಕ್ಕೆ ಅವಕಾಶವಿದೆ.

ದೇಶದಲ್ಲಿ ವಾರ್ಷಿಕ 90 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಾರೆ. ಆದರೆ, ಮೌಡ್ಯ, ಮಾಹಿತಿ ಕೊರತೆಯಂತಹ ನಾನಾ ಕಾರಣಗಳಿಂದ ನೇತ್ರದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆ ನಿಟ್ಟಿನಲ್ಲಿ ಅಗತ್ಯ ಪ್ರೇರೇಪಣೆ ಅಗತ್ಯವಿದೆ. ಲಿಂಗ, ವಯಸ್ಸು ಅಥವಾ ಸಾಮಾಜಿಕ ಅಂತಸ್ತಿನ ಭೇದ ಭಾವವಿಲ್ಲದೆ ಯಾರು ಬೇಕಾದರೂ ನೇತ್ರದಾನ ಮಾಡಬಹುದು.

ಇದಲ್ಲದೆ, ಕನ್ನಡಕ ಬಳಕೆ ಮಾಡುವವರು, ನೇತ್ರ ಚಿಕಿತ್ಸೆಗೊಳಗಾದವರು, ಅನಾರೋಗ್ಯದಿಂದ ಸಾವಿಗೀಡಾದವರು, ಜತೆಗೆ ಕಾರ್ನಿಯ ಉತ್ತಮವಾಗಿರುವ ಅಂಧರು ಕೂಡ ನೇತ್ರದಾನ ಮಾಡಬಹುದು. ವ್ಯಕ್ತಿ ಮೃತಪಟ್ಟನಂತರ ಆರು ಗಂಟೆ ಒಳಗೆ ಸಂಬಂಧಪಟ್ಟವರು ಆರೋಗ್ಯ ಇಲಾಖೆ “104′ ಸಹಾಯವಾಣಿಗೆ ಕರೆ ಮಾಡಿ ನೇತ್ರದಾನ ಮಾಡಬಹುದು.

* ನೇತ್ರದಾನಕ್ಕೆ ಹಾಗೂ ನೇತ್ರದಾನ ಪ್ರೇರೇಪಕರಾಗಲು ಟ್ರಸ್ಟ್‌ ನೋಂದಣಿಗೆ: Eye>space>name>place 7039670396 ಎಸ್‌ಎಂಎಸ್‌ ಮಾಡಬಹುದು.

ಮೃತ ವ್ಯಕ್ತಿಯ ಕುಟುಂಬಕ್ಕೆ ಒಂದಿಷ್ಟು ಪ್ರೇರೇಪಣೆ ಮಾಡಿದರೆ ಸಾಕು ಖಂಡಿತ ನೇತ್ರದಾನಕ್ಕೆ ಒಪ್ಪಿಗೆ ನೀಡುತ್ತಾರೆ. ಆ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸುವ ಆಸಕ್ತರಿಗೆ ಟ್ರಸ್ಟ್‌ ವೇದಿಕೆಯಾಗಿದ್ದು, ಅಗತ್ಯ ಮಾಹಿತಿ, ನೇತ್ರ ಬ್ಯಾಂಕ್‌ಗಳ ನೆರವನ್ನು ನೀಡಲಾಗುತ್ತದೆ.
-ಜಯರಾಮ್‌, ಸಂಸ್ಥಾಪಕರು ನಯನ ಜ್ಯೋತಿ ಟ್ರಸ್ಟ್‌

* ಜಯಪ್ರಕಾಶ್‌ ಬಿರಾದಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ನಾಲ್ಕಂತಸ್ತಿನ ಫ‌ರಾ ಟವರ್‌ನ ನೆಲಮಹಡಿಯಲ್ಲಿ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ತೀವ್ರ ಆತಂಕಕ್ಕೆ...

  • ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಪ್ರತಿಪಕ್ಷಗಳ ಶಾಸಕರಿಗೆ ಒಂದೊಂದೇ ಶಾಕ್‌ ನೀಡುತ್ತಿದ್ದು, ಅನರ್ಹ ಶಾಸಕರ ಕ್ಷೇತ್ರಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವುದರ...

  • ಬೆಂಗಳೂರು: ನಾಲ್ಕು ವರ್ಷದ ಬಳಿಕ ಬಿಬಿಎಂಪಿಯಲ್ಲಿ ಮೂರು ವರ್ಷಗಳ ಆಡಳಿತ ವರದಿ ಮಂಡಯಾಗಿದ್ದು, ರಸ್ತೆ ಕಾಮಗಾರಿ, ಸ್ಮಶಾನಗಳ ಅಭಿವೃದ್ಧಿಗೆ ಹಾಗೂ ಸಣ್ಣ ಪುಟ್ಟ ಕಾಮಗಾರಿಗಳಿಗೂ...

  • ಬೆಂಗಳೂರು: ಜಲಮಂಡಳಿ ಪೂರೈಸುತ್ತಿರುವ ತೃತೀಯ ಹಂತದ ಸಂಸ್ಕರಿಸಿದ ನೀರಿಗೆ ಸಾರ್ವಜನಿಕರಿಂದ ಬೇಡಿಕೆ ಆರಂಭವಾಗಿದೆ. ಹೀಗಾಗಿ ಜಲಮಂಡಳಿ ಅಧಿಕಾರಿಗಳು, ನಗರದ ಪ್ರಮುಖ...

  • ಬೆಂಗಳೂರು: ರಾಜ್ಯದ ನೆರೆ ಪೀಡಿತ ಜಿಲ್ಲೆಗಳಲ್ಲಿ ಕರ್ನಾಟಕ ಫೋಟೋ ಜರ್ನಲಿಸ್ಟ್‌ ಅಸೋಸಿಯೇಷನ್‌ ವತಿಯಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ನೆರೆಯ ಭೀಕರತೆಯ...

ಹೊಸ ಸೇರ್ಪಡೆ