ಅಂತಿಮ ದರ್ಶನಕ್ಕೆ ಜನಸಾಗರ

Team Udayavani, Apr 25, 2019, 4:15 AM IST

ನೆಲಮಂಗಲ: ಶ್ರೀಲಂಕಾದ ಕೊಲೊಂಬೋದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟ 7 ಮಂದಿ ಪೈಕಿ ತಾಲೂಕಿನ ಮೂವರ ಮೃತದೇಹಗಳು ಬುಧವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಬಂದಿದ್ದು, 5 ಗಂಟೆಗೆ ನೆಲಮಂಗಲಕ್ಕೆ ತಲುಪಿದವು. ಸಾರ್ವಜನಿಕ ದರ್ಶನದ ನಂತರ, ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮೃತದೇಹಗಳನ್ನು ಪಟ್ಟಣದ ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಇರಿಸಿ, ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು, ಸಾವಿರಾರು ಬೆಂಬಲಿಗರು, ಕಾರ್ಯಕರ್ತರು ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಸಾರ್ವಜನಿಕ ದರ್ಶನಕ್ಕೆ ಅವಕಾಶ: ನೆಲಮಂಗಲ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎನ್‌.ಲಕ್ಷ್ಮೀನಾರಾಯಣ್‌ (55)ಹಾಗೂ ಜೆಡಿಎಸ್‌ ಮುಖಂಡ ಎಚ್‌.ಶಿವಕುಮಾರ್‌ (58) ಅವರ ದೇಹಗಳನ್ನು ಅವರ ನಿವಾಸದಿಂದ ಬೆಳ್ಳಿ ರಥದಲ್ಲಿರಿಸಿ ಮರೆವಣಿಗೆ ಮೂಲಕ ಅಂಬೇಡ್ಕರ್‌ ಕ್ರೀಡಾಂಗಣಕ್ಕೆ ತರಲಾಯಿತು. ಬೆಳಗ್ಗೆ 8.30ಕ್ಕೆ ಸಾರ್ವಜನಿಕ ದರ್ಶನ ಆರಂಭಿಸಿ, ಮಧ್ಯಾಹ್ನ 1.30ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಬಂದುಹೋದ ಬಳಿಕ ಮುಕ್ತಾಯಗೊಳಿಸಲಾಯಿತು. ನಂತರ ಮೃತರ ಸ್ವಗ್ರಾಮಗಳಿಗೆ ಅಂತಿಮ ಸಂಸ್ಕಾರಕ್ಕಾಗಿ ದೇಹಗಳನ್ನು ರವಾನಿಸಲಾಯಿತು.

ತುಂಬಲಾರದ ನಷ್ಟ: ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಶ್ರೀಲಂಕಾದ ಕೊಲೊಂಬೋದಲ್ಲಿ ಭಾನುವಾರ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ ಕರ್ನಾಟಕದ 10 ಜನರು ಮೃತಪಟ್ಟಿದ್ದು, ಆ ಪೈಕಿ 7 ಜನ ಜೆಡಿಎಸ್‌ ಮುಖಂಡರಿದ್ದಾರೆ. ಇದು ಪಕ್ಷಕ್ಕೆ ತುಂಬಲಾರದ ನಷ್ಟ. ಈಗಾಗಲೇ ನಾಲ್ಕು ಜನರ ಮೃತದೇಹಗಳನ್ನು ರಾಜ್ಯಕ್ಕೆ ತರಲಾಗಿದೆ. ಉಳಿದ ಮೂವರ ದೇಹಗಳು ಶ್ರೀಲಂಕಾದಿಂದ ಬರಬೇಕಿದೆ ಎಂದರು.

ಭಯೋತ್ಪಾದನೆ ನಿರ್ನಾಮ ಅಗತ್ಯ: “ಭಯೋತ್ಪಾದನೆಯನ್ನು ಬುಡ ಸಮೇತ ನಿರ್ನಾಮ ಮಾಡುವ ನಿಟ್ಟಿನಲ್ಲಿ ಜಗತ್ತಿನ ಎಲ್ಲಾ ದೇಶಗಳು ಹೋರಾಟ ಮಾಡುವ ಅಗತ್ಯವಿದೆ,’ ಎಂದು ಹೇಳಿದ ಮಾಜಿ ಪ್ರಧಾನಿ, “ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವ ಮೂಲಕ ಭಯೋತ್ಪಾದಕರ ಹಾವಳಿ ಅಂತ್ಯಗೊಳಿಸಬೇಕು. ಮೃತ ಮುಖಂಡರು ತಾಲೂಕಿನಲ್ಲಿ ಪಕ್ಷಕ್ಕೆ ಆಧಾರ ಸ್ತಂಭಗಳಾಗಿದ್ದರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರಿಗೆ ನೀಡಲಿ,’ ಎಂದರು.

ಇದೇ ವೇಳೆ ಪಟ್ಟಣದ ಅಂಬೇಡ್ಕರ್‌ ಕ್ರೀಡಾಂಗಣಕ್ಕೆ ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಹೊನ್ನಮ್ಮಗ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ಕಂಚಗಲ್‌ ಬಂಡೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಸಂಸದ ವೀರಪ್ಪ ಮೊಯ್ಲಿ, ವಸತಿ ಸಚಿವ ಎಂಟಿಬಿ ನಾಗರಾಜು, ಮಾಜಿ ಸಚಿವರಾದ ಬಿ.ಎನ್‌.ಬಚ್ಚೇಗೌಡ, ಅಂಜನಮೂರ್ತಿ, ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ,

ಆರ್‌.ಮಂಜುನಾಥ್‌, ಡಿ.ಸಿ.ಗೌರಿಶಂಕರ್‌, ವಿಧಾನ ಪರಿಷತ್‌ ಸದಸ್ಯ ಬಿಎಂಎಲ್‌ ಕಾಂತರಾಜು, ವಿಧಾನ ಪರಿಷತ್‌ ಮಾಜಿ ಸದಸ್ಯ ಇ.ಕೃಷ್ಣಪ್ಪ, ಮಾಜಿ ಶಾಸಕ ನಾಗರಾಜು, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್‌, ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ, ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಸೇರಿದಂತೆ ನೂರಾರು ಮುಖಂಡರು ಮೃತರ ಅಂತಿಮ ದರ್ಶನ ಪಡೆದರು.

ಅಂತಿಮ ಸಂಸ್ಕಾರ: ಅಂತಿಮ ದರ್ಶನದ ಬಳಿಕ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಗೋವೆನಹಳ್ಳಿಯಲ್ಲಿ ಶಿವಣ್ಣ ಅವರ ಅಂತಿಮ ಸಂಸ್ಕಾರ ನೆರವೇರಿತು. ಪುತ್ರ ಡಾ.ಮಂಜುನಾಥ್‌ ಮತ್ತು ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ತಾಲೂಕಿನ ಕಸಬಾ ಹೋಬಳಿ ಕಾಚನಹಳ್ಳಿಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್‌ ಅವರ ಪುತ್ರ ಅಭಿಲಾಷ್‌ ಮತ್ತು ಕುಟುಂಬ ಸದಸ್ಯರು ಅಂತಿಮ ಸಂಸ್ಕಾರ ನೆರವೇರಿಸಿದರು.

ಬೆಂಗಳೂರಿನ ದಾಸರಹಳ್ಳಿ ನಿವಾಸದಲ್ಲಿ ಕೆ.ಜಿ.ಹನುಮಂತರಾಯಪ್ಪ ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಿಟ್ಟು ಬಳಿಕ ಮೃತರ ಸ್ವಗ್ರಾಮ ಕಾಚನಹಳ್ಳಿ ಗ್ರಾಮದವರೆಗೂ ಮೆರವಣಿಗೆ ಮೂಲಕ ಬರಮಾಡಿಕೊಂಡು ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಮೂರೂ ಮಂದಿ ಒಕ್ಕಲಿಗ ಸಮುದಾಯದವರಾಗಿದ್ದು, ಹಿಂದೂ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಟೈಮ್‌ ಲೈನ್‌….
ಬೆಳಗಿನ ಜಾವ 3 ಗಂಟೆ: ವಿಮಾನದ ಮೂಲಕ ಬೆಂಗಳೂರು ತಲುಪಿದ ಮೃತರ ದೇಹಗಳು

ಮುಂಜಾನೆ 5 ಗಂಟೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೆಲಮಂಗಲಕ್ಕೆ ರವಾನೆ

ಬೆಳಗ್ಗೆ 7.30: ಬೆಳ್ಳಿ ರಥದಲ್ಲಿ ಹೊರಟ ಮೃತ ದೇಹಗಳ ಮೆರವಣಿಗೆ

ಬೆಳಗ್ಗೆ 8.30: ಅಂಬೇಡ್ಕರ್‌ ಮೈದಾನದಲ್ಲಿ ಅಂತಿಮ ದರ್ಶನ ಆರಂಭ

ಮಧ್ಯಾಹ್ನ 1.30: ಮಾಜಿ ಪ್ರಧಾನಿ ಎಚ್‌ಡಿಡಿ, ಸಿಎಂ ಎಚ್‌ಡಿಕೆ ಆಗಮನ

ಮಧ್ಯಾಹ್ನ 2 ಗಂಟೆ: ಮೃತರ ಸ್ವಗ್ರಾಮಗಳತ್ತ ದೇಹಗಳ ರವಾನೆ, ಅಂತ್ಯ ಸಂಸ್ಕಾರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ