ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಲೇಟ್‌ಲೆಟ್‌ ನೋ ಸ್ಟಾಕ್‌!

Team Udayavani, Aug 15, 2019, 3:10 AM IST

ಬೆಂಗಳೂರು: ಜೀವ ರಕ್ಷಕ “ಪ್ಲೇಟ್‌ಲೆಟ್‌’ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಸರಿಗೆ ಮಾತ್ರ ಉಚಿತ. ಆದರೆ, ಯಾವಾಗ ಕೇಳಿದರೂ “ನೋ ಸ್ಟಾಕ್‌’ ಬೋರ್ಡ್‌ ಖಚಿತ. ನಗರದಲ್ಲಿ ಡೆಂಘೀ ಪ್ರಕರಣಗಳು ಏರುಮುಖದಲ್ಲಿ ಸಾಗುತ್ತಿದ್ದು, ಪ್ಲೇಟ್‌ಲೆಟ್‌ಗಳಿಗೆ ಸಾಕಷ್ಟು ಬೇಡಿಗೆ ಇದೆ. ಆರೋಗ್ಯ ಇಲಾಖೆ ನಿಯಮದಂತೆ ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರಗಳು ಬಡ ರೋಗಿಗಳಿಗೆ ಉಚಿತವಾಗಿ ಪ್ಲೇಟ್‌ಲೆಟ್‌ ನೀಡಬೇಕು.

ಆದರೆ, ಅಲ್ಲಿ ದಾಸ್ತಾನು ಕೊರತೆಯಿದೆ. ಸಾಲು ಸಾಲು ರಜೆಯಿಂದ ದಾನಿಗಳ ಕೊರತೆ, ಸಾಕಷ್ಟು ಪ್ರಮಾಣದಲ್ಲಿ ರಕ್ತದಾನ ಶಿಬಿರ ನಡೆಯದಿರುವುದು ಹಾಗೂ ಪ್ಲೇಟ್‌ಲೆಟ್‌ಗಳು ಕೇವಲ ಐದು ದಿನ ಜೀವಿತಾವಧಿ ಹೊಂದಿರುವುದು ಇದಕ್ಕೆ ಕಾರಣ. ಆದರೆ, ನಗರದ ಖಾಸಗಿ ಆಸ್ಪತ್ರೆ, ಖಾಸಗಿ ಸಂಸ್ಥೆ, ಸೇವಾ ಸಂಸ್ಥೆಗಳು ನಡೆಸುತ್ತಿರುವ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್‌ಲೆಟ್‌ ದಾಸ್ತಾನು ಇದೆ.

ಆದರೆ, ಅಲ್ಲಿ ಉಚಿತವಿಲ್ಲ. ಹಣ ನೀಡಬೇಕಾಗಿದೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಸಂಬಂಧಿಕರು ಅನಿವಾರ್ಯವಾಗಿ ಖಾಸಗಿ ರಕ್ತ ನಿಧಿ ಕೇಂದ್ರಗಳಿಗೆ ಮೊರೆ ಹೋಗುವಂತಾಗಿದೆ. ಒಂದು ಯೂನಿಟ್‌ಗೆ 700 ರೂ.ರಿಂದ 1000 ರೂ. ಹಣ ನೀಡಿ ಪಡೆಯುವಂತಾಗಿದೆ.

ದಾಸ್ತಾನು ಕೊರತೆ: ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ ಒಂದು ವಾರದಿಂದ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಾದ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಕೆ.ಸಿ.ಜನರಲ್‌ಆಸ್ಪತ್ರೆ, ಸಂಜಯ್‌ಗಾಂಧಿ ಸಂಶೋಧನಾ ಸಂಸ್ಥೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ನಿಮ್ಹಾನ್ಸ್‌ , ಕಿದ್ವಾಯಿ ಗಂಥಿ ಸಂಸ್ಥೆ ಹಾಗೂ ಕಮಾಂಡೊ ಆಸ್ಪತ್ರೆಗಳ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್‌ಲೆಟ್‌ ಕೊರತೆ ಕಂಡುಬಂದಿದೆ.

ಜಯದೇವ ಹೃದ್ರೋಹ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಮಾತ್ರ 10 ಯುನಿಟ್‌ನಷ್ಟು ದಾಸ್ತಾನಿದೆ. ಶಿವಾಜಿನಗರದ ಬೌರಿಂಗ್‌ ಹಾಗೂ ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಪ್ಲೇಟ್‌ಲೆಟ್‌ ದಾಸ್ತಾನು ಇಲ್ಲ. ಈ ಆಸ್ಪತ್ರೆಯಲ್ಲಿ ಸಾಕಷ್ಟು ಮಂದಿ ಡೆಂಘೀ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಪ್ಲೇಟ್‌ಲೆಟ್‌ ಬೇಕಾದರೆ ಖಾಸಗಿ ರಕ್ತಕೇಂದ್ರಗಳ ಅವಲಂಬನೆ ಅನಿವಾರ್ಯ. ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಬೆರಳಣಿಕೆಯಷ್ಟು ದಾಸ್ತಾನು ಇದ್ದರೂ, ಗುರುವಾರ ವೇಳೆ ಅವುಗಳ ಜೀವಿತಾವಧಿ ಮುಗಿಯಲಿದ್ದು, ಕೊರತೆ ಉಂಟಾಗಲಿದೆ.

ಖಾಸಗಿಯಲ್ಲಿ ಭಾರೀ ಬೇಡಿಕೆ: ಖಾಸಗಿ, ಎನ್‌ಜಿಒ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್‌ಲೆಟ್‌ಗಳಿಗೆ ಬೇಡಿಕೆ ಇದೆ. ಚಾಮರಾಜಪೇಟೆಯ ರಾಷ್ಟ್ರೋತ್ಥಾನ ರಕ್ತನಿಧಿಕೇಂದ್ರ, ಇಂದಿರಾನಗರದ ಬೆಂಗಳೂರು ರೋಟರಿ ಟಿಟಿಕೆ ರಕ್ತನಿಧಿ ಕೇಂದ್ರ, ನಾರಾಯಯಣ ಹೃದಯಾಲಯ ಪ್ರೈ.ಲಿನಂತಹ ಪ್ರಮುಖ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್‌ಲೆಟ್‌ 100ಕ್ಕೂ ಹೆಚ್ಚು ಯೂನಿಟ್‌ ದಾಸ್ತಾನು ಇದ್ದು, ಇವುಗಳಲ್ಲಿ ಸಾಮಾನ್ಯ ದಿನಗಳಲ್ಲಿ 10 ಯುನಿಟ್‌ನಷ್ಟು ಬೇಡಿಕೆ ಇತ್ತಾದರೂ ಇದೀಗ ನಗರದಲ್ಲಿ ಡೆಂಘೀ ಉಲ್ಬಣವಾಗಿರುವುದರಿಂದ ನಿತ್ಯ 50 ಯುನಿಟ್‌ಗೂ ಹೆಚ್ಚು ಬೇಡಿಕೆ ಇದೆ.

ಹೀಗಾಗಿ, ಆರೋಗ್ಯ ಇಲಾಖೆಯು ಖಾಸಗಿ ರಕ್ತನಿಧಿ ಕೇಂದ್ರಗಳೊಂದಿಗೆ ಮಾತುಕತೆ ನಡೆಸಿ ನಿರ್ದಿಷ್ಟ ದರ ನಿಗದಿ ಮಾಡಿ, ಜತೆಗೆ ದಸ್ತಾನು ವಿಚಾರದಲ್ಲೂ ಸಮನ್ವತೆ ಸಾಧಿಸಿ ರೋಗಿಗಳಿಗೆ ಅಗತ್ಯವಾದ ಪ್ಲೇಟ್‌ಲೆಟ್‌ ಸಕಾಲಕ್ಕೆ ಸಿಗುವಂತೆ ನೋಡಿಕೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ನಿರ್ದಿಷ್ಟ ದರ ನಿಗದಿ ಇಲ್ಲ: ಎಲ್ಲಾ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಏಕ ರೂಪದಲ್ಲಿ ದರ ಪಾಲನೆ ಮಾಡುತ್ತಿಲ್ಲ. ರಾಷ್ಟ್ರೋತ್ಥಾನ ಸೇರಿದಂತೆ ಕೆಲವು ಕಡೆಗಳಲ್ಲಿ ಸರ್ಕಾರ ದರ ಪಾಲನೆಯಾಗುತ್ತಿದೆ. ಉಳಿದಂತೆ ಬಹುತೇಕ ಕಡೆಗಳಲ್ಲಿ 50 ಎಂ.ಎಲ್‌ನ ಒಂದು ಯುನಿಟ್‌ಗೆ 600 ರಿಂದ 1,000 ರೂ.ವರೆಗೂ ದರ ಪಡೆಯುತ್ತಿದ್ದಾರೆ. ಜತೆಗೆ ಇಲ್ಲಿ ಎಸ್‌ಡಿಪಿ (ಸಿಂಗಲ್‌ ಡೋನರ್‌ ಪ್ಲೇಟ್‌ಲೆಟ್ಸ್‌) ವ್ಯವಸ್ಥೆ ಇದ್ದು, ಇದು 250 ಎಂ.ಎಲ್‌ನ ಯುನಿಟ್‌ ಆಗಿದ್ದು, 40 ಸಾವಿರಕ್ಕೂ ಹೆಚ್ಚು ಪ್ಲೇಟ್‌ಲೆಟ್‌ ಲಭ್ಯವಾಗುತ್ತವೆ. ಹೀಗಾಗಿ, ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ನಿತ್ಯ 10ಕ್ಕೂ ಹೆಚ್ಚು ಎಸ್‌ಡಿಪಿ ಯೂನಿಟ್‌ ಪ್ಲೇಟ್‌ಲೆಟ್‌ ಬೇಡಿಕೆ ಇದೆ. ಎಸ್‌ಡಿಪಿಗೆ 10,000 ರೂ.ಗಿಂತಲೂ ಹೆಚ್ಚು ದರವಿದೆ.

ಸರ್ಕಾರಿ ಆಸ್ಪತ್ರೆಗಳ ರಕ್ತನಿಧಿ ಕೇಂದ್ರಗಳಿಗೆ ಬಂದು ರಕ್ತ ಅಥವಾ ಪ್ಲೇಟ್‌ಲೆಟ್‌ ಲಭ್ಯವಿದೆಯೇ ಎಂದು ಕೇಳುವವರ ಸಂಖ್ಯೆ ಹೆಚ್ಚಿದ್ದು, ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವವರಿಲ್ಲ. ರಕ್ತ ಪಡೆದು ಹೋಗುವವರಿಗೂ ರಕ್ತದಾನ ಮಾಡಿ ಎಂದು ನಾವು ಒತ್ತಾಯ ಮಾಡುವಂತಿಲ್ಲ. ಪ್ಲೇಟ್‌ಲೆಟ್‌ಗಳ ಜೀವಿತಾವಧಿಯೂ ಕಡಿಮೆ ಇದ್ದು, ನಿರಂತರವಾಗಿ ರಕ್ತದಾನಿಗಳು ಲಭ್ಯವಿದ್ದರೆ ಮಾತ್ರ ದಾಸ್ತಾನು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ನಿರಂತರ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ದಾಸ್ತಾನು ಮಾಡಲಾಗುತ್ತದೆ.
-ಭಾನುಮೂರ್ತಿ, ಕೆ.ಸಿ.ಜನರಲ್‌ ಆಸ್ಪತ್ರೆ ಮೇಲ್ವಿಚಾರಕರು

ನಿಗದಿತವಾಗಿ ರಕ್ತದಾನ ಶಿಬಿರ ನಡೆಸುತ್ತೇವೆ. ಇತ್ತೀಚೆಗೆ ಡೆಂಘೀ ಹೆಚ್ಚಾಗಿರುವುದರಿಂದ ಪ್ಲೇಟ್‌ಲೆಟ್‌ ಬೇಡಿಕೆ ಹೆಚ್ಚಿದೆ. ಹೀಗಾಗಿ, ಸಂಗ್ರಹವಾದ ರಕ್ತವನ್ನು ವಿಭಾಗಿಸಿ ಪ್ಲೇಟ್‌ಲೆಟ್‌ ಹೆಚ್ಚು ದಾಸ್ತಾನು ಮಾಡಿಕೊಳ್ಳುತ್ತೇವೆ. ಕಳೆದ ತಿಂಗಳು ಸುಮಾರು 2000 ಯುನಿಟ್‌ ಪ್ಲೇಟ್‌ಲೆಟ್‌ ಖರ್ಚಾಗಿದೆ. ನಿತ್ಯ 80ಕ್ಕೂ ಹೆಚ್ಚು ಯುನಿಟ್‌ ಬೇಡಿಕೆ ಇದ್ದು, ಅದರಲ್ಲಿ ಎಸ್‌ಟಿಪಿ 19 ಯುನಿಟ್‌ ಬೇಡಿಕೆ ಇದೆ.
-ಡಾ.ಅಂಕಿತ್‌, ಬೆಂಗಳೂರು ರೋಟರಿ ಟಿಟಿಕೆ ರಕ್ತನಿಧಿ ಕೇಂದ್ರ

ವೈದ್ಯರು ನಮ್ಮಲ್ಲಿ ಪ್ಲೇಟ್‌ಲೆಟ್‌ ಲಭ್ಯವಿಲ್ಲ, ಹೊರಗಡೆಯಿಂದ ತನ್ನಿ ಎಂದು ಹೇಳುತ್ತಾರೆ. ಖಾಸಗಿ ರಕ್ತನಿಧಿಕೇಂದ್ರದಲ್ಲಿ 700 ರೂ. ಪಡೆಯುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಇದ್ದರೂ ದಾಸ್ತಾನು ಇಲ್ಲದೇ ಉಪಯೋಗವಾಗುತ್ತಿಲ್ಲ. ಪ್ಲೇಟ್‌ಲೆಟ್‌ ಸಂಖ್ಯೆ 10 ಸಾವಿರಕ್ಕೂ ಕಡಿಮೆ ಬಂದರೆ ಎಸ್‌ಡಿಪಿ ತರಲು ವೈದ್ಯರು ಹೇಳುತ್ತಾರೆ, ಒಂದು ಯುನಿಟ್‌ಗೆ 10 ಸಾವಿರಕ್ಕೂ ಹೆಚ್ಚಿದ್ದು, ಬಡವರಿಗೆ ಹಣ ಹೊಂದಿಸುವುದೇ ಕಷ್ಟ.
-ಅಂಜನ್‌ಕುಮಾರ್‌, ರೋಗಿ ಸಂಬಂಧಿ

* ಜಯಪ್ರಕಾಶ್‌ ಬಿರಾದಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಅತ್ತ ಸರ್ಕಾರ ಮಾರ್ಚ್‌ 5ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ಗೆ ಸಜ್ಜಾಗುತ್ತಿದ್ದರೆ, ಇತ್ತ ಸ್ಥಳೀಯ ಸಂಸ್ಥೆಗಳು ಬೆಂಗಳೂರಿಗೆ ಏನೇನು ಅವಶ್ಯಕತೆ ಇದೆ ಎಂಬುದರ...

  • ಬೆಂಗಳೂರು: ನಗರದ ಪಾರಂಪರಿಕ ಕಟ್ಟಡಗಳು ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ತಜ್ಞರ ಸಮಿತಿ ರಚನೆ ಮಾಡಲು ಪಾಲಿಕೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಕೃಷ್ಣರಾಜೇಂದ್ರ...

  • ಬೆಂಗಳೂರು: ಮಹಿಳೆಯೊಬ್ಬರ ಮನೆಗೆ ನುಗ್ಗಿ ದಾಂಧಲೆಗೆ ಮುಂದಾಗಿ, ಅವರ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂ ಮಾಡಿದ್ದ ಆರೋಪಿ ಶ್ರೀನಿವಾಸ ಅಲಿಯಾಸ್‌ ಸೀಗಡಿ...

  • ಬೆಂಗಳೂರು: ಜನಪ್ರತಿನಿಧಿಗಳು ಮತ್ತು ಅಧಿ ಕಾರಿಗಳಿಗೆ ನೈತಿಕತೆ, ಶಿಸ್ತು ಅಗತ್ಯ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ಚುಂಚಶ್ರೀ ಬಳಗ ಭಾನುವಾರ ಜ್ಞಾನ ಜ್ಯೋತಿ...

  • ಯಲಹಂಕ: ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಮಾದಾದರ, ಸಿದ್ದನಹೊಸಹಳ್ಳಿ ಮತ್ತು ಮಾದನಾಯಕನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ "ಮಾದನಾಯಕನಹಳ್ಳಿ...

ಹೊಸ ಸೇರ್ಪಡೆ