“ಉಗ್ರ ವದಂತಿ’ಗೆ ಸುಸ್ತಾದ ಪೊಲೀಸರು

Team Udayavani, May 7, 2019, 3:10 AM IST

ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದ ಶಂಕಿತ ಉಗ್ರರು ಬೆಂಗಳೂರಿಗೆ ಹೋಗಿದ್ದರು ಎಂಬ ಲಂಕಾ ಸೇನಾ ಮುಖ್ಯಸ್ಥರ ಹೇಳಿಕೆ ಬೆನ್ನಲ್ಲೇ ಎಲ್ಲೆಡೆ ಕಟ್ಟೆಚ್ಚರ ವಹಿಸಿರುವ ರಾಜ್ಯ ಹಾಗೂ ನಗರ ಪೊಲೀಸರಿಗೆ, ಅಪಾರ್ಟ್‌ಮೆಂಟ್‌ ವ್ಯವಸ್ಥಾಪಕರೊಬ್ಬರು ಮಾಡಿದ ಎಡವಟ್ಟು ತಲೆಬಿಸಿಗೆ ಕಾರಣವಾಗಿದೆ.

ನಗರದ ಅಪಾರ್ಟ್‌ಮೆಂಟ್‌ನ ವ್ಯವಸ್ಥಾಪಕರೊಬ್ಬರು, ಬೆಂಗಳೂರಿಗೆ ನಾಲ್ವರು ಉಗ್ರರು ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ನಗರ ಪೊಲೀಸರು, ಇದೊಂದು ಸುಳ್ಳು ವದಂತಿ. ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ಏನಿದು ಘಟನೆ?: ವೈಟ್‌ಫೀಲ್ಡ್‌ ವಲಯದ ಬೆಳ್ಳಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನ ವ್ಯವಸ್ಥಾಪಕರೊಬ್ಬರು ಟ್ವಿಟರ್‌ನಲ್ಲಿ, “ನಾಲ್ವರು ಉಗ್ರರು ಬೆಂಗಳೂರಿಗೆ ಬಂದಿದ್ದು, ಮುಂದಿನ 15 ದಿನಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲಿದ್ದಾರೆ. ರಾಜಧಾನಿಯ ವೈಟ್‌ಫೀಲ್ಡ್‌ ಮತ್ತು ಬೆಳ್ಳಂದೂರು ಪ್ರದೇಶದಲ್ಲಿರುವ ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲಿದ್ದಾರೆ.

ಹೀಗಾಗಿ ಆ ಪ್ರದೇಶಗಳ ಸ್ಥಳೀಯ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು. ಅನುಮಾನಸ್ಪದ ವ್ಯಕ್ತಿಗಳು ಹಾಗೂ ಈ ಫೋಟೋಗಳಲ್ಲಿರುವ ವ್ಯಕ್ತಿಗಳು ಎಲ್ಲಾದರೂ ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್‌ ಠಾಣೆ ಹಾಗೂ ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ’ ಎಂದು ಇಬ್ಬರು ಮಹಿಳೆಯರು ಸೇರಿ ನಾಲ್ವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ತಮ್ಮದೆ ಅಪಾರ್ಟ್‌ಮೆಂಟ್‌ನ ಕೆಲ ಗ್ರೂಪ್‌ಗ್ಳಿಗೂ ರವಾನಿಸಿದ್ದಾರೆ.

ಈ ಸುದ್ದಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ಗಳ ಮೂಲಕ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಕೆಲವರು ನಗರ ಪೊಲೀಸರ ಟ್ವಿಟರ್‌ ಖಾತೆಗೆ ಟ್ಯಾಗ್‌ ಮಾಡಿ ಸ್ಪಷ್ಟನೆ ನೀಡುವಂತೆ ಮನವಿ ಮಾಡಿದ್ದರು. ಇದರಿಂದ ಎಚ್ಚೆತ್ತ ನಗರ ಪೊಲೀಸರು, ಟ್ವಿಟರ್‌ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ.
“ಇದೊಂದು ಸುಳ್ಳು ವದಂತಿ.

ಇದನ್ನು ನಂಬಬೇಡಿ ಮತ್ತು ಪ್ರೋತ್ಸಾಹಿಸಬೇಡಿ. ಸಾರ್ವಜನಿಕರು ಈ ತರಹದ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಬಾರದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ’ ಎಂದು ಮನವಿ ಮಾಡಿದ್ದಾರೆ. ಜತೆಗೆ, ಅಪಾರ್ಟ್‌ಮೆಂಟ್‌ ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಮ್ಯಾನೆಜರ್‌ ಗೊಂದಲ: ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ನಗರದ ಎಲ್ಲೆಡೆ ಆಯಾ ಪೊಲೀಸ್‌ ಠಾಣೆಗಳ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಪರಾಧ ಚಟುವಟಿಕೆಗಳ ಕುರಿತು ನಿರಂತರವಾಗಿ ಅರಿವು ಮೂಡಿಸುತ್ತಿದ್ದಾರೆ.

ಅದೇ ರೀತಿ ಎರಡು ದಿನಗಳ ಹಿಂದೆ ಬೆಳ್ಳಂದೂರು ಠಾಣೆ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪೊಲೀಸರು, ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ನಗರದಲ್ಲಿ ಉಗ್ರರು ಬಂದಿದ್ದಾರೆ ಎಂಬ ವದಂತಿಗಳು ಇವೆ. ಅವುಗಳಿಗೆ ಕಿವಿಗೊಡಬೇಡಿ. ಒಂದು ವೇಳೆ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಆದರೆ, ಅಪಾರ್ಟ್‌ಮೆಂಟ್‌ನ ಮ್ಯಾನೆಜರ್‌ ಗೊಂದಲಕ್ಕೀಡಾಗಿ, ಉಗ್ರರೆಂದರೆ ಯಾರು? ಹೇಗಿರುತ್ತಾರೆ ಎಂದೆಲ್ಲ ಪ್ರಶ್ನಿಸಿದ್ದಾರೆ. ಈ ಕುರಿತು ಸಿಬ್ಬಂದಿ ವಿವರಿಸಿದ್ದಾರೆ. ಇದರಿಂದ ಅವೇಶಕ್ಕೊಳಗಾದ ಮ್ಯಾನೇಜರ್‌, ಮಾಧ್ಯಮಗಳಲ್ಲಿ ಪ್ರಸಾರವಾದ ಶ್ರೀಲಂಕಾ ಸ್ಫೋಟದ ಶಂಕಿತರ ಫೋಟೋಗಳನ್ನು ಗೂಗಲ್‌ ಮೂಲಕ ಸಂಗ್ರಹಿಸಿ, ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿ, ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ ನಿತ್ಯ ತಪಾಸಣೆ: ಕೆಲ ದಿನಗಳ ಹಿಂದೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ಹಾಗೂ ಇತರೆ ಮೂಲಗಳ ಮಾಹಿತಿಯನ್ನಾಧರಿಸಿ ರಾಜ್ಯ ಪೊಲೀಸ್‌ ಇಲಾಖೆ ಎಲ್ಲೆಡೆ ಹೈಅಲರ್ಟ್‌ ಘೋಷಣೆ ಮಾಡಿತ್ತು. ಈ ಮಧ್ಯೆಯೇ ಲಂಕಾ ಸೇನಾ ಮುಖ್ಯಸ್ಥರು ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಸ್ಫೋಟದ ಶಂಕಿತ ಉಗ್ರರು ಬೆಂಗಳೂರಿಗೂ ಹೋಗಿದ್ದರು ಎಂದು ಹೇಳಿಕೆ ನೀಡಿದ್ದರು.

ಇದರಿಂದ ಎಚ್ಚರಗೊಂಡ ನಗರ ಪೊಲೀಸರು, ನಗರಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿ ಎಲ್ಲ ಸಾರ್ವಜನಿಕ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಪ್ರತಿನಿತ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸುತ್ತಿದ್ದಾರೆ.

ಮತ್ತೂಂದೆಡೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಪಾಸ್‌ ಪೋರ್ಟ್‌ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರುವ ಪೊಲೀಸರು ವಿದೇಶ ಅಥವಾ ನೆರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವ ವ್ಯಕ್ತಿಗಳ ಬಗ್ಗೆ ನಿಗಾವಹಿಸಿದ್ದು, ಅವರ ಕಾರ್ಯಚಟುವಟಿಕೆಗಳ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ