ಐಎಂಎ ಪ್ರಕರಣಕ್ಕೆ ರಾಜಕೀಯ ಬಣ್ಣ

Team Udayavani, Jul 25, 2019, 3:10 AM IST

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬಹುಕೋಟಿ ಐಎಂಎ ಪ್ರಕರಣ ಇದೀಗ ಸಂಪೂರ್ಣವಾಗಿ ರಾಜಕೀಯ ಬಣ್ಣ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಸಹ ಕೇಂದ್ರ ಸರ್ಕಾರದ ಆಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮೂಲಕ ಹಿಂದಿನಿಂದಲೂ ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಖುದ್ದು ಮುಖ್ಯಮಂತ್ರಿ (ಈಗ ಹಂಗಾಮಿ ಸಿಎಂ) ಎಚ್‌.ಡಿ.ಕುಮಾರಸ್ವಾಮಿ ಅವರು, ಮಂಗಳವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ಚರ್ಚೆಯಲ್ಲಿ ಈ ಕುರಿತು ಪ್ರಸ್ತಾಪಿಸಿರುವುದು ಈ ಆರೋಪಗಳಿಗೆ ಇಂಬು ನೀಡುವಂತಿದೆ. ಇ.ಡಿ ಅಧಿಕಾರಿಗಳು ಸಹ ಈ ಆರೋಪಕ್ಕೆ ಪೂರಕವಾಗೇ ನಡೆದುಕೊಳ್ಳುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸತತ ಪ್ರಯತ್ನಗಳ ಬಳಿಕ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಕಲ ಸಿದ್ಧತೆ ನಡೆಸಿದೆ. ಈ ಮಧ್ಯೆ ಮತ್ತೆ ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇ.ಡಿ ಮೂಲಕ ಕಟ್ಟಿಹಾಕುವ ತಂತ್ರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜೂ.8ರಂದು ದೇಶ ಬಿಟ್ಟು ಪರಾರಿಯಾದ ಮನ್ಸೂರ್‌ ಖಾನ್‌, ರಹಸ್ಯ ಸ್ಥಳದಲ್ಲಿ ಕುಳಿತು ಆಡಿಯೋ ಹಾಗೂ ವಿಡಿಯೋಗಳನ್ನು ಬಿಡುಗಡೆ ಮಾಡಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಆರ್‌.ರೋಷನ್‌ ಬೇಗ್‌, ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್‌ ಖಾನ್‌ ಸೇರಿ ಪ್ರಭಾವಿ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಹೆಸರು ಪ್ರಸ್ತಾಪಿಸಿದ್ದ. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ), ಆರೋಪಿ ಮನ್ಸೂರ್‌ ಹೆಸರು ಪ್ರಸ್ತಾಪಿದ ಜನಪ್ರತಿನಿಧಿಗಳನ್ನು ಒಂದು ಸುತ್ತು ವಿಚಾರಣೆ ನಡೆಸಿದ್ದು, ನಾಮನಿರ್ದೇಶಿತ ಕಾರ್ಪೊರೇಟರ್‌ ಸೇರಿ 23 ಮಂದಿಯನ್ನು ಬಂಧಿಸಿದೆ. ಅಲ್ಲದೆ, ಕಂಪನಿಗೆ ಸೇರಿದ ಕೋಟ್ಯಂತರ ರೂ. ಆಸ್ತಿಯನ್ನು ಜಪ್ತಿ ಮಾಡಿಕೊಂಡಿದೆ.

ಈ ನಡುವೆಯೇ ಮನ್ಸೂರ್‌ ಖಾನ್‌ನ ವಿಡಿಯೋ ಹಾಗೂ ಸ್ಥಳೀಯ ಪೊಲೀಸ್‌ ಠಾಣೆಗೆ ಬರುತ್ತಿದ್ದ ದೂರುಗಳನ್ನು ಆಧರಿಸಿ ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಿತವಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002 (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಮತ್ತೂಂದೆಡೆ ಎಸ್‌ಐಟಿ, ವಂಚನೆಗೆ ಸಹಕಾರ ನೀಡಿದ ಪ್ರತಿಯೊಬ್ಬ ಆರೋಪಿಯನ್ನು ಬಂಧಿಸುತ್ತಾ, ಮನ್ಸೂರ್‌ ಖಾನ್‌ ಬಂಧನಕ್ಕೆ ಬ್ಲೂ ಕಾರ್ನರ್‌ ನೋಟಿಸ್‌ ಕೂಡ ಹೊರಡಿಸಿತ್ತು.

ಆದರೆ, ಇ.ಡಿ ಮಾತ್ರ ಯಾವುದೇ ನೋಟಿಸ್‌ ಹೊರಡಿಸದೆ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ನ ಚಲನವಲನಗಳ ಮೇಲೆ ನಿಗಾವಹಿಸಿತ್ತಾ, ಎಸ್‌ಐಟಿ ವಶದಲ್ಲಿದ್ದ ಆರೋಪಿಗಳ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಈ ವೇಳೆ ಕೆಲವರು ಮೈತ್ರಿ ಸರ್ಕಾರದ ಕೆಲ ಪ್ರಭಾವಿ ರಾಜಕೀಯ ಮುಖಂಡರ ಹೆಸರು ಬಾಯಿಬಿಟ್ಟಿದ್ದ ಎಂದು ಹೇಳಲಾಗಿದೆ.

ಎಸ್‌ಐಟಿ ಲೋಪ-ಇಡಿಗೆ ವರದಾನ: ಪೊಲೀಸರು ತಮಗಿರುವ ಸಿಆರ್‌ಪಿಸಿ ಅಧಿಕಾರವನ್ನು ದೇಶದೊಳಗೆ ಮಾತ್ರ ಚಲಾಯಿಸಬಹುದು. ನಿಯಮದ ಪ್ರಕಾರ ವಿದೇಶದಲ್ಲಿರುವ ಆರೋಪಿಯನ್ನು ವಶಕ್ಕೆ ಪಡೆಯಲು ಅಥವಾ ಬಂಧಿಸಲು ಸ್ಥಳೀಯ ಕೋರ್ಟ್‌ ಜತೆಗೆ ಕೇಂದ್ರದ ವಿದೇಶಾಂಗ ಮತ್ತು ಗೃಹ ಸಚಿವಾಲಯ ಸಂಪರ್ಕದಲ್ಲಿದ್ದು, ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ಯಾವ ಪ್ರಕ್ರಿಯೆಯನ್ನೂ ಮಾಡದ ಎಸ್‌ಐಟಿ ಅಧಿಕಾರಿಗಳು, ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್‌ ಖಾನ್‌ನನ್ನು ಮನವೊಲಿಸಿ ಅನಧಿಕೃತವಾಗಿ ವಶಕ್ಕೆ ಪಡೆಯಲು ಕಾರ್ಯತಂತ್ರ ರೂಪಿಸಿದ್ದರು.

15 ದಿನಗಳ ಕಾಲ ಅಲ್ಲೇ ಇದ್ದ ಇಬ್ಬರು ಡಿವೈಎಸ್‌ಪಿ ನೇತೃತ್ವದ ತಂಡ, ಒಣ ಹಣ್ಣು ವ್ಯಾಪಾರಿಗಳ ಸೋಗಿನಲ್ಲಿ ಆರೋಪಿಯನ್ನು ಸಂಪರ್ಕಿಸಿ ದೇಶಕ್ಕೆ ಕರೆತರುವ ಎಲ್ಲ ಪ್ರಯತ್ನದಲ್ಲೂ ಸಫ‌ಲವಾಗಿತ್ತು ಎನ್ನಲಾಗಿದೆ. ಈ ನಡುವೆಯೇ ಆರೋಪಿ ಸಹ ದೇಶಕ್ಕೆ ವಾಪಸ್‌ ಬರುತ್ತಿರುವುದಾಗಿ ವಿಡಿಯೋ ಹರಿಬಿಟ್ಟಿದ್ದ.

ಈ ವಿಚಾರ ತಿಳಿದಿದ್ದ ಇ.ಡಿ ತತ್‌ಕ್ಷಣ ಮಧ್ಯಪ್ರವೇಶಿಸದೆ ಇಮಿಗ್ರೇಷನ್‌ ಅಧಿಕಾರಿಗಳಿಗೆ ಮೌಖೀಕವಾಗಿ ಮಾಹಿತಿ ನೀಡಿ, ಆರೋಪಿ ದೆಹಲಿಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ, ಆತನನ್ನು ವಶಕ್ಕೆ ಪಡೆದು ಕೋರ್ಟ್‌ಗೆ ಹಾಜರು ಪಡಿಸಿ, ವಶಕ್ಕೆ ಪಡೆದುಕೊಂಡಿದೆ. ಎಸ್‌ಐಟಿ ಲೋಪವನ್ನು ಅಸ್ತ್ರವನ್ನಾಗಿಸಿಕೊಂಡಿರುವ ಇ.ಡಿ ಅಧಿಕಾರಿಗಳು ಪದೇ ಪದೆ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಪ್ರಭಾವಿಗಳ ಹೆಸರು ಬಾಯಿಬಿಡಿಸಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ಅಭಿಯೋಜಕರ ಬದಲಾವಣೆ: ಮತ್ತೂಂದೆಡೆ ಮಹತ್ವದ ಬೆಳವಣಿಗೆಯೊಂದರಲ್ಲಿ ತಮ್ಮ ಪರ ವಾದ ಮಂಡಿಸಲು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ನ ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ಅವರನ್ನು ನೇಮಿಸಿಕೊಂಡಿದೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪ್ರಭಾವಿಗಳ ಹೆಸರು ಬಾಯಿಬಿಡಿಸಲು ಕಸರತ್ತು: ಮೂರು ದಿನಗಳ ಕಾಲ ಇ.ಡಿ ವಶದಲ್ಲಿದ್ದ ಮನ್ಸೂರ್‌ ಖಾನ್‌, ವಿಚಾರಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕರಾದ ರೋಷನ್‌ ಬೇಗ್‌, ಜಮೀರ್‌ ಅಹಮದ್‌ ಖಾನ್‌ ಸೇರಿ ಹಲವು ಪ್ರಭಾವಿ ಜನಪ್ರತಿನಿಧಿಗಳ ಹೆಸರು ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಜು.26ರವರೆಗೆ ವಶಕ್ಕೆ ಪಡೆದಿರುವ ಇ.ಡಿ, ಇನ್ನಷ್ಟು ಪ್ರಭಾವಿಗಳ ಹೆಸರನ್ನು ಆತನಿಂದ ಬಾಯಿಬಿಡಿಸಲು ಕಸರತ್ತು ನಡೆಸುತ್ತಿದೆ. ಆದರೆ, ಆತ ಮಾತ್ರ ಎದೆ ನೋವಿನ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಮಧ್ಯೆ ಐದು ದಿನಗಳು ಕಳೆದರೂ ಆರೋಪಿಯನ್ನು ತಮ್ಮ ವಶಕ್ಕೆ ಕೊಡಲು ಇ.ಡಿ ಮೀನಮೇಷ ಎಣಿಸುತ್ತಿದೆ ಎಂದು ಎಸ್‌ಐಟಿ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಐಎಂಎ ತನಿಖೆ ಮಾಹಿತಿ ಇಲ್ಲ: ಬಾಲಕೃಷ್ಣನ್‌
ಬೆಂಗಳೂರು: ಐಎಂಎ ಸಂಸ್ಥೆಯ ವಂಚನೆ ಪ್ರಕರಣದಲ್ಲಿ ಐಟಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದ್ದು, ಅವರ ಬಳಿ ಏನು ಮಾಹಿತಿ ಎಂಬುದು ನನಗೆ ಗೊತ್ತಿಲ್ಲ ಎಂದು ಎಂದು ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ (ಕರ್ನಾಟಕ-ಗೋವಾ ವಲಯ) ಬಿ.ಆರ್‌.ಬಾಲಕೃಷ್ಣನ್‌ ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಐಎಂಎ ಸಂಸ್ಥೆಯ ಹಗರಣ ಸಂಬಂಧ ಆದಾಯ ತೆರಿಗೆ ಇಲಾಖೆಗೆ ಯಾರಾದರೂ ದೂರು ನೀಡಿದರೆ ತನಿಖೆ ನಡೆಸಲು ಸಿದ್ಧ. ಆದರೆ, ಈವರೆಗೆ ಈ ಬಗ್ಗೆ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಈ ಪ್ರಕರಣದಲ್ಲಿ ಐಟಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಇಡಿ ಮತ್ತು ಎಸ್‌ಐಟಿ ತನಿಖೆ ನಡೆಸುತ್ತಿವೆ. ಅವರ ಬಳಿ ಏನು ಮಾಹಿತಿ ಇದೆ ಎಂಬುದು ನಮಗೆ ಗೊತ್ತಿಲ್ಲ ಎಂದು ಹೇಳಿದರು.

2017ರಲ್ಲಿ ನೋಟು ರದ್ದತಿ ನಂತರ ಉದ್ದೇಶಿತ ಸಂಸ್ಥೆಯಲ್ಲಿ ಸಾಕಷ್ಟು ವೃದ್ಧಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನೋಟು ರದ್ದತಿ ಮತ್ತು ಐಎಂಎಗೂ ನಂಟು ಇರುವ ಬಗ್ಗೆ ತನಿಖೆ ನಡೆಸಿದ್ದು, ಈ ವೇಳೆ ದೊರೆತ ಮಾಹಿತಿಗಳನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೂ ನೀಡಲಾಗಿದೆ ಎಂದರು.

* ಮೋಹನ್‌ ಭದ್ರಾವತಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ನಗರದಲ್ಲಿರುವ ಜಾಹೀರಾತು (ಕಬ್ಬಿಣದ ಸ್ಟ್ರಕ್ಚರ್‌) ಫ‌ಲಕಗಳನ್ನು 15ದಿನಗಳ ಒಳಗಾಗಿ ತೆರವು ಮಾಡುವುದಕ್ಕೆ ಕ್ರಮ ವಹಿಸುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್‌....

  • ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ 1,253 ಕೋಟಿ ರೂ.ಮೀಸಲಿಡುವಂತೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿಯ...

  • ಬೆಂಗಳೂರು: ದೇಶ ಕಟ್ಟಿದ ಮಹಾರತ್ನಗಳಂಥ ಕಂಪನಿಗಳನ್ನೇ ಕೇಂದ್ರ ಸರ್ಕಾರ ಬಿಕರಿಗಿಟ್ಟಿದೆ ಎಂದು ಸಾಹಿತಿ ದೇವನೂರು ಮಹಾದೇವ ಆತಂಕ ವ್ಯಕ್ತಪಡಿಸಿದರು. ಕೆನರಾ ಬ್ಯಾಂಕ್‌...

  • ಬೆಂಗಳೂರು: ಹಿಂದೂ ಆಧ್ಯಾತ್ಮಿಕತೆಗೂ ಸೂಫಿ ಚಿಂತನೆಗೂ ಹತ್ತಿರದ ನಂಟಿದೆ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಅಂಕಿತ ಪ್ರಕಾಶನ ಶನಿವಾರ ಬಸವನಗುಡಿಯ...

  • ಬೆಂಗಳೂರು: ಪ್ರಾಪ್ತ ಬಾಲಕನಿಗೆ ಆತನ ಪೋಷಕರೇ ಬಲವಂತವಾಗಿ ಮದುವೆ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ...

ಹೊಸ ಸೇರ್ಪಡೆ