ವೇಶ್ಯಾವಾಟಿಕೆ: ಇಬ್ಬರ ಬಂಧನ
Team Udayavani, Aug 27, 2018, 12:38 PM IST
ಬೆಂಗಳೂರು: ಕೆಲಸ ಕೊಡಿಸುವ ಆಮಿಷವೊಡ್ಡಿ ಪಶ್ಚಿಮ ಬಂಗಾಳ ಸೇರಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ಬಳಿಕ ಅವರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ. ವೈ.ವೆಂಕಟೇಶ್ (33) ಲಿಂಗಾನಂದ ಹಿರೇಮಠ (39) ಬಂಧಿತ ಆರೋಪಿಗಳು.
ಏಜೆಂಟರ ಮೂಲಕ ಹೊರ ರಾಜ್ಯಗಳಿಂದ ಕರೆಸಿಕೊಂಡ ಯುವತಿಯರ ಮೂಲಕ ಸಹಕಾರ ನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳು, ತಮ್ಮ ಮೊಬೈಲ್ ಮೂಲಕ ಯುವತಿಯರ ಫೋಟೋ ಕಳುಹಿಸಿ ಗಿರಾಕಿಗಳನ್ನು ಕರೆಸಿಕೊಳ್ಳುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ಯುವತಿಯನ್ನು ರಕ್ಷಿಸಲಾಗಿದೆ. ಜತೆಗೆ ಆರೋಪಿಗಳಿಬ್ಬರನ್ನು ಬಂಧಿಸಿ 4 ಮೊಬೈಲ್, ಒಂದು ಬೈಕ್, 1000 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.