ಡಿಕೆಶಿ ಬಂಧನ ವಿರೋಧಿಸಿ ಪ್ರತಿಭಟನೆ

Team Udayavani, Sep 11, 2019, 3:10 AM IST

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಇಡಿ ಅಧಿಕಾರಿಗಳು ಬಂಧಿಸಿರುವುದು ಖಂಡಿಸಿ ಒಕ್ಕಲಿಗ ಸಂಘ-ಸಂಸ್ಥೆಗಳ ಒಕ್ಕೂಟ ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಹಲವು ಸಂಘಟನೆಗಳು ಪ್ರತಿಭಟನೆ ಹಾಗೂ ಮೆರವಣಿಗೆಗೆ ಅವಕಾಶ ಕೋರಿದ್ದು, ಸುತ್ತಮುತ್ತಲ ಜಿಲ್ಲೆಗಳಿಂದ ಸುಮಾರು 35 ರಿಂದ 40 ಸಾವಿರ ಜನರು ಪಾಲ್ಗೊಳ್ಳುವ ಮಾಹಿತಿಯಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಹೇಳಿದರು.

ಸಂಚಾರ ದಟ್ಟಣೆ ಉಂಟಾಗಬಹುದಾದ ಹಿನ್ನೆಲೆಯಲ್ಲಿ ನಿಗದಿ ಪಡಿಸಿದ ಮಾರ್ಗದಲ್ಲೇ ಮೆರವಣಿಗೆ ನಡೆಯಬೇಕು. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸುವುದು, ಪಟಾಕಿ ಸಿಡಿಸುವುದು ಮಾಡಬಾರದು, ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು ಸೇರಿ 15 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ. ಅಲ್ಲದೆ, ಪ್ರತಿಭಟನೆ ಆಯೋಜಕರಿಂದ ಹಣ ಸಹಿತ ಬಾಂಡ್‌ ಪೇಪರ್‌ ಮೇಲೆ ಸಹಿ ಪಡೆಯಲಾಗಿದೆ.

ಈ ಮಾರ್ಗದುದ್ದಕ್ಕೂ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದ್ದು, ಒಂದು ವೇಳೆ ಸಾರ್ವಜನಿಕರ ಶಾಂತಿಗೆ ಧಕ್ಕೆ ಬಂದರೆ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಹತ್ತು ಸಂಘಟನೆಗಳ ಮುಖಂಡರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪೊಲೀಸ್‌ ಆಯುಕ್ತರು ಎಚ್ಚರಿಕೆ ನೀಡಿದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನ ಹೊರಡುವ ರ್ಯಾಲಿ ಸ್ವಾತಂತ್ರ್ಯ ಉದ್ಯಾನವನದವರೆಗೆ ಸುಮಾರು 5.2 ಕಿ.ಮೀಟರ್‌ ಮೆರವಣಿಗೆ ನಡೆಯಲಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಮೆರವಣಿಗೆ ನಡೆಯಲು ಮಹಿಳೆಯರು ಸೇರಿದಂತೆ ಒಂದು ಸಾವಿರ ಹೆಚ್ಚು ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳುವಂತೆ ಸಂಘಟನೆಗಳಿಗೆ ಸೂಚಿಸಲಾಗಿದೆ. ಪ್ರತಿಭಟನೆ ರ್ಯಾಲಿ ನಡೆಯುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಈ ಮಾರ್ಗಗಳಲ್ಲಿ ಆ್ಯಂಬುಲೆನ್ಸ್‌ ಸಂಚರಿಸದಂತೆ ಸೂಚಿಸಲಾಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಭದ್ರತೆ ಹೇಗೆ?: ನಗರ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ಮೂವರು ಹೆಚ್ಚುವರಿ ಪೊಲೀಸ್‌ ಆಯುಕ್ತರು, 11 ಮಂದಿ ಡಿಸಿಪಿ, 42 ಎಸಿಪಿ, 106 ಇನ್‌ಸ್ಪೆಕ್ಟರ್‌, 273 ಸಬ್‌ಇನ್‌ಸ್ಪೆಕ್ಟರ್‌, 374 ಎಎಸ್‌ಐಗಳು ಒಟ್ಟು 2,280 ಮಂದಿ ಹಾಗೂ 550 ಮಂದಿ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಜತೆಗೆ ಸ್ಥಳದಲ್ಲಿ ಅಗ್ನಿಶಾಮಕ ದಳ, ಆ್ಯಂಬುಲೆನ್ಸ್‌ಗಳು, ಮೆರವಣಿಗೆ ಸಾಗುವ ಮಾರ್ಗದಲ್ಲಿ 500 ಸಿಸಿಟಿವಿ ಕ್ಯಾಮೆರಾಗಳು, ಮಫ್ತಿಯಲ್ಲಿ ಮಹಿಳಾ ಸಿಬ್ಬಂದಿ ಕೂಡ ಇರಲಿದ್ದಾರೆ. ಬೇರೆ ಕಡೆಯಿಂದ ಪ್ರತಿಭಟನೆಗೆ ಆಗಮಿಸುವ ವಾಹನಗಳ ನಂಬರ್‌ ಹಾಗೂ ಫೋಟೋಗಳನ್ನು ಪಡೆದುಕೊಳ್ಳಲಾಗುವುದು. ಹಾಗೆಯೇ ಸಂಚಾರ ದಟ್ಟಣೆ ನಿರ್ವಹಣೆಗೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತರು ಹೇಳಿದರು.

ಯಾವ ಮಾರ್ಗದಲ್ಲಿ ಮೆರವಣಿಗೆ?: ನ್ಯಾಷನಲ್‌ ಕಾಲೇಜ್‌ ಮೈದಾನ, ಸಜ್ಜನ್‌ರಾವ್‌ ವೃತ್ತ, ಜೆ.ಸಿ.ರಸ್ತೆ, ಹಡ್ಸನ್‌ ವೃತ್ತ, ಮೈಸೂರು ಬ್ಯಾಂಕ್‌ ವೃತ್ತ, ಅರಮನೆ ರಸ್ತೆ, ಕಾಳಿದಾಸ ರಸ್ತೆ, ಶೇಷಾದ್ರಿ ರಸ್ತೆ, ಫ್ರೀಡಂ ಪಾರ್ಕ್‌

ಅಹಿತಕರ ಘಟನೆ ನಡೆದರೆ ಯಾರು ಹೊಣೆ: ಪ್ರತಿಭಟನೆ ಹಾಗೂ ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸಿದರೆ ಕನ್ನಡ ಸಂಘಟನೆಗಳ ಮುಖಂಡರಾದ ಟಿ.ನಾರಾಯಣಗೌಡ, ವೈ.ಡಿ.ರವಿಶಂಕರ್‌, ಬಸವರಾಜು ಕಡುಕೊಠಿ, ಜೆ.ನಾಗರಾಜ್‌, ಭಾರತೀ ಶಂಕರ್‌, ರಾಧಾವೆಂಕಟೇಶ್‌, ಕುಮಾರ್‌, ಅನಿಲ್‌ ಗೌಡ, ಜಗದೀಶ್‌ ಗೌಡ, ಕೆ.ಕೃಷ್ಣಮೂರ್ತಿ ಇವರನ್ನು ಹೊಣೆ ಮಾಡಲಾಗುವುದು ಎಂದು ಪೊಲೀಸ್‌ ಆಯುಕ್ತರು ಹೇಳಿದ್ದಾರೆ.

ಈ ಪರ್ಯಾಯ ಮಾರ್ಗಗಳನ್ನು ಬಳಸಿ
-ಲಾಲ್‌ಬಾಗ್‌ ವೆಸ್ಟ್‌ಗೇಟ್‌ ಆರ್‌.ವಿ.ರಸ್ತೆ
-ನ್ಯಾಷನಲ್‌ ಕಾಲೇಜ್‌ ಜಂಕ್ಷನ್‌
-ಶೇಷ ಮಹಲ್‌ ಜಂಕ್ಷನ್‌
-ಕೆ.ಆರ್‌.ರಸ್ತೆ-ಮೆಡಿಕೇರ್‌ ಆಸ್ಪತ್ರೆ ಜಂಕ್ಷನ್‌
-ಬಸಪ್ಪ ಸರ್ಕಲ್‌
-ಎಲ್‌.ಬಿ.ಎಫ್.ರಸ್ತೆ ಲಾಲ್‌ಭಾಗ್‌ ಮೈನ್‌ ಗೇಟ್‌
-ಕಾಫಿ ಪಾುಂಟ್‌ ಆರ್ಮುಗಂ ರಸ್ತೆ
-ಜರ್ನಲಿಸ್ಟ್‌ ಕಾಲೋನಿ
-ಆನಂದರಾವ್‌ ವೃತ್ತದ ಬಳಿ
-ಖೋಡೆ ಜಂಕ್ಷನ್‌
-ಮೈಸೂರು ಬ್ಯಾಂಕ್‌ ಜಂಕ್ಷನ್‌
-ನವರಂಗ್‌ ಜಂಕ್ಷನ್‌ ಬಳಿ
-3.ಪಿ.ಎಫ್.ಜಂಕ್ಷನ್‌ ಬಳಿ
-ಮಲ್ಲೇಶ್ವರಂ ಬ್ರಿಡ್ಜ್ ಬಳಿ
-ಸಂಗೊಳ್ಳಿರಾಯಣ್ಣ ವೃತ್ತ
-ಆನಂದ್‌ ರಾವ್‌ ವೃತ್ತದ ಜೆಡಿಎಸ್‌ ಕ್ರಾಸ್‌ ಹತ್ತಿರ
-ಆನಂದ್‌ ರಾವ್‌ ಸರ್ಕಲ್‌
-ಮೈಸೂರು ಬ್ಯಾಂಕ್‌ ವೃತ್ತ
-ಮಹಾರಾಣಿ ಬ್ರಿಡ್ಜ್

ವಾಹನ ನಿಲುಗಡೆಗೆ ಈ ಸ್ಥಳಗಳು ಸೂಕ್ತ
-ಸರ್ಕಾರಿ ಕಲಾ ಮತ್ತು ಜ್ಞಾನ ಕಾಲೇಜ್‌ ಆವರಣ
-ಬನ್ನಪ್ಪ ಪಾರ್ಕ್‌ (ದ್ವಿಚಕ್ರ ವಾಹನಗಳಿಗೆ ಮಾತ್ರ)
-ವೈ.ಎಂ.ಸಿ.ಎ. ಮೈದಾನ, ನೃಪತುಂಗ ರಸ್ತೆ
-ಕನಕಪುರ ಕಡೆುಂದ ಬರುವ ವಾಹನಗಳಿಗೆ
-ಆರ್ಮುಗಂ ಸರ್ಕಲ್‌
-ಪಟಾಲಮ್ಮ ರಸ್ತೆ
-ಹೋಂ ಸ್ಕೂಲ್‌ ಜಂಕ್ಷನ್‌
-ನಾರಾಯಣ ರೋಡ್‌
-ಕೆ.ಆರ್‌.ರಸ್ತೆ
-ಹೋಂ ಸ್ಕೂಲ್‌ ರಸ್ತೆ
-ಮೈಸೂರು ರಸ್ತೆ ಕಡೆುಂದ ಬರುವ ವಾಹನಗಳಿಗೆ
-ಬಸವನಗುಡಿ ರಸ್ತೆ ( ಉಮಾ ಟಾಕೀಸ್‌ ವರೆಗೆ)
-ಮರಾಠ ಹಾಸ್ಟೆಲ್‌
-ಶಂಕರಪುರ ಪಿ.ಎಸ್‌.ರಸ್ತೆ

ಬಸ್‌ ನಿಲುಗಡೆಗೆ ಅವಕಾಶ: ಅರಮನೆ ರಸ್ತೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ, ಎಲ್‌.ಟಿ.ಪಿ. ರಸ್ತೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ , ಶೇಷಾದ್ರಿ ರಸ್ತೆಯಲ್ಲಿ ರಸ್ತೆಯ ಒಂದು ಬದಿ, ಲಕ್ಷ್ಮಣ ಪುರಿ ಬ್ರಿಡ್ಜ್ ಕೆಳಗಡೆ ಇರುವ ಧನ್ವಂತ್ರಿ ರಸ್ತೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ಸುಮಾರು 20 ಬಸ್ಸುಗಳಿಗೆ ಪಾರ್ಕಿಂಗ್‌ ಮಾಡಲು ಅವಕಾಶವಿರುತ್ತದೆ.

ಪೊಲೀಸ್‌ ಇಲಾಖೆ ಷರತ್ತುಗಳೇನು?
* ಸಂಘಟಕರು ಅನುಮತಿ ನೀಡಲಾದ ವೇಳೆಗೆ ಹಾಗೂ ನಿಗದಿಪಡಿಸಿದ ಮಾರ್ಗಕ್ಕೆ ಬದ್ಧರಾಗಿರಬೇಕು. ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು.

* ಕಾರ್ಯಕ್ರಮದ ಸಮಯದಲ್ಲಿ ಯಾವುದೇ ಧಾರ್ಮಿಕ ರಾಜಕೀಯ, ಸಾಮಾಜಿಕ ಭಾಷಾವಾರು ಅಥವಾ ಸಾಂಸ್ಕೃತಿಕ ಗುಂಪುಗಳನ್ನು ಕೆರಳಿಸುವ ಘೋಷಣೆ ನೀಡಬಾರದು.

* ಕರ್ನಾಟಕ ಪೊಲೀಸ್‌ ಕಾಯ್ದೆ 1963ರ ಕಲಂ-36 ಮತ್ತು 37ರಲ್ಲಿ ಹೇಳಿರುವ ಅಂಶಗಳನ್ನು ಉಲ್ಲಂಘಿಸಬಾರದರು.

* ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿ ವರ್ಧಕಬಳಸುವಾಗ ಆ ಸ್ಥಳದಿಂದ ಹೊರಹೊಮ್ಮುವ ಧ್ವನಿಯು ಆ ಜಾಗದ ಶಬ್ಧ ಮಾಲಿನ್ಯ ನಿಯಂತ್ರಣಕ್ಕೆ ನಿಗದಿಪಡಿಸಿದ ಶಬ್ಧ ಮಟ್ಟಕ್ಕಿಂತ ಕೇವಲ 10 ಡಿಬಿ (ಎ)ನಷ್ಟು ಹೆಚ್ಚು ಅಥವಾ ಒಟ್ಟಾರೆಯಾಗಿ 75 ಡಿಬಿ (ಎ) ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಮೀರಬಾರದು.

* ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ್ದಲ್ಲಿ ಅರ್ಜಿದಾರರೇ ಸಂಪೂರ್ಣ ಹೊಣೆಗಾರರಾಗುತ್ತಾರೆ.

* ಸಂಘಟಕರು ಕಾರ್ಯಕ್ರಮವನ್ನು ಸುವ್ಯವಸ್ಥೆ ರೀತಿಯಲ್ಲಿ ನಡೆಸಿಕೊಂಡು ಹೋಗುವುದು ಹಾಗೂ ಜವಾಬ್ದಾರಿಯುತ ಸದಸ್ಯರು ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಿ, ಯಾವುದೇ ಅವಘಡ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು.

* ಕಾರ್ಯಕ್ರಮವನ್ನು ಅನುಮತಿ ನೀಡಿರುವಸ್ಥಳದಲ್ಲಿ ನಡೆಸಬೇಕು. ರಸ್ತೆಗಿಳಿದು ರಸ್ತೆ ಬಂದ್‌ ಮತ್ತು ವಾಹನಗಳ ಸಂಚಾರಕ್ಕೆ ಅಡಚಣೆ ಮಾಡಬಾರದು.

* ಕಾರ್ಯಕ್ರಮದ ವೇಳೆ ಪಟಾಕಿ ಹಚ್ಚುವುದು, ಯಾವುದೇ ವಸ್ತುಗಳನ್ನು ಸುಟ್ಟುಹಾಕುವನ್ನು ಮಾಡಬಾರದು. ರ್ಯಾಲಿ ಶಾಂತಿಯುತವಾಗಿ ನಡೆಯಬೇಕು.

* ಕಾರ್ಯಕ್ರಮದ ಸಮಯದಲ್ಲಿ ಗಲಭೆಯಲ್ಲಿ ತೊಡಗಿ ಸಾರ್ವಜನಿಕರ ಆಸ್ತಿಪಾಸ್ತಿ, ಜೀವ ಹಾನಿ ಮಾಡಬಾರದು. ಮಾಡಿದವರ ಮೇಲೆ ಕಾನೂನಿನಡಿ ಕಠಿಣ ಕ್ರಮ ಜರುಗಿಸಲಾಗುವುದು.

* ಪ್ರತಿಭಟನಾಕಾರರು ಬಲವಂತವಾಗಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು, ಸಂಸ್ಥೆಗಳನ್ನು ಮುಚ್ಚಿಸುವಂತಿಲ್ಲ. ಆಯುಧಗಳನ್ನು ತರುವಂತಿಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ