ವೈದ್ಯಕೀಯ ಕೋರ್ಸುಗಳ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

Team Udayavani, Jun 26, 2019, 3:05 AM IST

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಶುಲ್ಕ ಹೆಚ್ಚಳ ವಿರೋಧಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮಲ್ಲೇಶ್ವರದ ಕುವೆಂಪು ಪ್ರತಿಮೆ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು , 2019-20ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಶುಲ್ಕ ಸರಾಸರಿ ಶೇ.15ರಷ್ಟು ಹೆಚ್ಚಳ ತೀರ್ಮಾನವನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿಮಾತನಾಡಿದ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ, ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಕೋಟಾದಲ್ಲಿ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಮಾಡುವವರು ವಾರ್ಷಿಕ 1,11,959 ರೂ. ಹಾಗೂ ದಂತ ವೈದ್ಯಕೀಯ ಶಿಕ್ಷಣ ಪಡೆಯುವವರು ವಾರ್ಷಿಕ 72,484 ರೂ. ಶುಲ್ಕ ಪಾವತಿಸಬೇಕಾಗುತ್ತದೆ.

ಸರ್ಕಾರಿ ಕೋಟಾದ ಜತೆಗೆ ವಿಶೇಷ ಕೋಟಾದಡಿ ಪಡೆದ ಸೀಟಿನ ಶುಲ್ಕವನ್ನು ಸರ್ಕಾರ ತನಗೆ ಇಚ್ಛೆಗೆ ಬಂದಂತೆ ಹೆಚ್ಚಿಸಿದರೆ ವೈದ್ಯಕೀಯ ಶಿಕ್ಷಣ ಬಡವರ ಪಾಲಿಗೆ ಕನಸಾಗಲಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಸರ್ಕಾರದ ಇಂತಹ ನಿರ್ಧಾರದಿಂದಾಗಿ ವೈದ್ಯಕೀಯ ಶಿಕ್ಷಣದಿಂದ ದೂರ ಉಳಿಯುವಂತಾಗಿದೆ ಎಂದು ಹೇಳಿದರು.

ಸಂವಿಧಾನದ ಆಶಯದಂತೆ ಸರ್ವರಿಗೂ ಸರ್ವ ರೀತಿಯ ಶಿಕ್ಷಣ ಲಭ್ಯವಾಗುವಂತಿರಬೇಕು. ಈ ರೀತಿ ಸರ್ಕಾರ ಶುಲ್ಕ ಹೆಚ್ಚಳಗೊಳಿಸುತ್ತಿರುವುದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕಾದ ಸರ್ಕಾರವೇ ಪ್ರತಿವರ್ಷ ಶುಲ್ಕ ಹೆಚ್ಚಿಸಿ ಖಾಸಗಿ ಕಾಲೇಜುಗಳ ಲಾಬಿಗೆ ಬೆಂಬಲಿಸುತ್ತಿರುವುದು ವಿಪರ್ಯಾಸ.

ಕೂಡಲೇ ಸರ್ಕಾರ ತನ್ನ ಈ ತೀರ್ಮಾನದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಜಾರಿಗೊಳಿಸಿದೆ. ಈ ನೀತಿಯು ಈಗಾಗಲೇ ಹಲವಾರು ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಆದರೆ ಕರ್ನಾಟಕ ಸರ್ಕಾರ ಈ ನೀತಿ ಅನುಷ್ಠಾನಗೊಳಿಸದೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ.

ಆದಷ್ಟು ಶೀಘ್ರವಾಗಿ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿಯ ಮಹಾನಗರ ಕಾರ್ಯದರ್ಶಿ ಸುರಾಜ್‌ ಮತ್ತಿತರರು ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ