ರಾಜಕೀಯ ಪ್ರಹಸನ ಖಂಡಿಸಿ ರೈತ ಸಂಘದಿಂದ ಧರಣಿ

Team Udayavani, Jul 10, 2019, 3:07 AM IST

ಬೆಂಗಳೂರು: ಶಾಸಕರ ರಾಜೀನಾಮೆ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು. ಶಾಸಕರ ಕುದುರೆ ವ್ಯಾಪಾರದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಕಗ್ಗೊಲೆ ಮಾಡುತ್ತಿರುವ ಈ ಸಂದರ್ಭದಲ್ಲಿ ವಿಧಾನಸಭೆ ವಿಸರ್ಜಿಸುವಂತೆ ಪ್ರತಿಭಟನಾಕರರು ಆಗ್ರಹಿಸಿದರು.

ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿರುವ ಶಾಸಕರ ಮುಖಕ್ಕೆ ಉಗಿಯುವ ಚಳವಳಿ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಸ್ವಾತಂತ್ರ್ಯ ಉದ್ಯಾನದಿಂದ ವಿಧಾನಸೌಧದತ್ತ ತೆರಳಲು ಮುಂದಾದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ವಿಧಾನಸೌಧದತ್ತ ತೆರಳದಂತೆ ತಡೆದರು. ಇದಕ್ಕೆ ಪ್ರತಿರೋಧ ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದು ಎರಡು ಬಸ್‌ಗಳಲ್ಲಿ ಕರೆದೊಯ್ದರು.

ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಣಕಿಸುವ ಘಟನೆಗಳು ಜರುಗುತ್ತಿವೆ. ಜನ ಸೇವೆ ಮಾಡಲು ಆಯ್ಕೆಯಾದ ಶಾಸಕರು ವ್ಯಾಪಾರದ ವಸ್ತುವಾಗಿದ್ದಾರೆ. ಮೂರು ಪಕ್ಷಗಳಿಗೆ ರಾಜ್ಯದ ಹಿತಕಾಪಾಡುವ ಬದಲು ಪರಸ್ಪರ ಕಾಲೆಳೆಯುವಲ್ಲಿ ನಿರತವಾಗಿವೆ. 224 ಶಾಸಕರು ಅಯೋಗ್ಯರಾಗಿದ್ದು ಮಂತ್ರಿಗಿರಿ, ದುಡ್ಡಿಗಾಗಿ ಹಪಾಹಪಿಸುವ ಈ ಶಾಸಕರಿಗೆ ಮಾನ ಮಾರ್ಯದೆ ಇಲ್ಲ.

ಇವರಿಗೆ ವಿಧಾನಸೌಧ ಪ್ರವೇಶಿಸುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ರಾಜಕೀಯ ಪಕ್ಷಗಳ ನಡೆಗಳನ್ನು ಜನರು ಒಕ್ಕೊರಲಿನಿಂದ ವಿರೋಧಿಸಬೇಕು. ಕೂಡಲೇ ಈ ದೊಂಬರಾಟಗಳನ್ನು ನಿಲ್ಲಿಸಿ ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸಬೇಕು ಎಂದು ಆಗ್ರಹಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ