ಸದ್ದಿಲ್ಲದೆ ಸಾಗಿದೆ ಕೆರೆ ಉಳಿಸುವ ಸೇವೆ

ನೀರುತ್ತರ 3

Team Udayavani, May 16, 2019, 3:09 AM IST

ಬೆಂಗಳೂರು: ಬೆಂಗಳೂರಿನಲ್ಲಿ ಕೆರೆಗಳಿಗೆ ಕೊರತೆ ಇಲ್ಲ. ಆದರೆ, ಅವುಗಳನ್ನು ಕೆರೆಯಾಗಿಯೇ “ಉಳಿಸಿಕೊಳ್ಳುವ’ ಪ್ರಯತ್ನಗಳು ಮಾತ್ರ ಕಡಿಮೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಕೆರೆಗಳಿಗೆ ಮರುಜೀವ ನೀಡಲು ಸ್ವಯಂ ಸೇವಾ ಸಂಸ್ಥೆಯೊಂದು ಮುಂದಾಗಿದೆ.

2010ರಲ್ಲಿ ಕೆರೆ ಅಭಿವೃದ್ಧಿಯ ಯೋಜನೆ ರೂಪಿಸಿಕೊಂಡಿರುವ ಯುನೈಟೆಡ್‌ ವೇ ಬೆಂಗಳೂರು ಸಂಸ್ಥೆಯ ತಂಡ, ಇಲ್ಲಿಯವರೆಗೆ 20ಕ್ಕೂ ಹೆಚ್ಚು ಕೆರೆಗಳ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದರಲ್ಲಿ ಕೆಲವು ಕೆರೆಗಳು ಸಂರ್ಪೂಣವಾಗಿ ಅಭಿವೃದ್ಧಿಗೊಂಡಿದ್ದು, ಇನ್ನೂ ಕೆಲವು ಪ್ರಗತಿಯಲ್ಲಿದೆ.

ಕೆರೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ವಿವಿಧ ಸಸಿಗಳನ್ನು ನೆಡುವುದು ಮತ್ತು ಆ ಪ್ರದೇಶಗಳಲ್ಲಿ ಕೆರೆಯ ಸಮೀಪವೇ ಇರುವ ಜನರಿಗೆ ಕೆರೆ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ, ಕೆರೆ ಕಾಳಜಿಗೆ ಸುತ್ತಲಿನ ನಿವಾಸಿಗಳದ್ದೇ ಒಂದು ತಂಡವನ್ನು ರಚಿಸುವ ಕೆಲಸವನ್ನು ಸಂಸ್ಥೆ ಮಾಡಿದೆ.

ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಸದಸ್ಯ ಡೇವಿಡ್‌, 2010ರಲ್ಲಿ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ “ವೆಕ್‌ ದಿ ಲೆಕ್‌’ ಎನ್ನುವ ಪರಿಕಲ್ಪನೆಯೊಂದಿಗೆ ಕೆರೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಿದೆವು.

ಇದಕ್ಕೆ ಬಿಬಿಎಂಪಿಯ ಸಹಯೋಗ ಪಡೆದುಕೊಳ್ಳಲಾಯಿತು. ಮೊದಲ ಹಂತದಲ್ಲಿ ನಗರದಲ್ಲಿ ಇರುವ ಕೆರೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಉಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡಲಾಯಿತು’ ಎಂದು ಹೇಳಿದರು.

ಕೆರೆಗಳ ಸುತ್ತ ಹಸಿರು ಸಿರಿ: ದೊಡ್ಡಕುಡ್ಲು ಕೆರೆ, ಯಲಹಂಕ ಕೆರೆಯ ಸುತ್ತ ಸಾವಿರಾರು ಸಸಿಗಳನ್ನು ನೆಡಲಾಗಿದ್ದು, ಇವು ಸಮೃದ್ಧವಾಗಿ ಬೆಳೆದಿವೆೆ. ಕೆರೆ ಸುತ್ತಲೂ ಸಸಿಗಳನ್ನು ನೆಡುವಾಗ ಪಕ್ಷಿಗಳು ವಾಸಿಸುವ ಮತ್ತು ಹೆಚ್ಚು ಹಣ್ಣು ಬಿಡುವ ಜಾತಿಯ ಮರದ ಸಸಿಗಳನ್ನೇ ಹೆಚ್ಚಾಗಿ ನೆಡಲಾಗಿದೆ.

“ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ನೀರನ್ನು ಸಂಗ್ರಹಿಸುವ ಮತ್ತು ಪಕ್ಷಿಗಳು ಹೆಚ್ಚಾಗಿ ವಾಸಿಸಲು ಯೋಗ್ಯವಾಗಿರುವ ಸಸಿಗಳನ್ನು ನೆಡಲಾಗಿದೆ. ಮರಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಶುದ್ಧ ಪರಿಸರ ನಿರ್ಮಾಣವಾಗಿದೆ. ಇದರಿಂದ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಯಾಮ ಮಾಡುವುದಕ್ಕೆ ಬರುವ ನಡಿಗೆದಾರರ ಸಂಖ್ಯೆಯೂ ಹೆಚ್ಚಾಗಿದೆ’ ಎಂದು ಸಂಸ್ಥೆಯ ಸದಸ್ಯೆ ನೀತಾ ಹೇಳುತ್ತಾರೆ.

“ಕೆರೆ ಮಧ್ಯೆ ಇರುವ ನಡುಗಡ್ಡೆಯ ಪ್ರದೇಶದ ಮೇಲೂ ಪಕ್ಷಿಗಳು ವಾಸಿಸಲು ಯೋಗ್ಯವಾದ ಸಸಿಗಳನ್ನು ನೆಡಲಾಗಿದೆ. ಇದರಿಂದ ವಲಸೆ ಪಕ್ಷಿಗಳು ಬೆಂಗಳೂರಿನ ಕೆರೆಗಳತ್ತ ಹಾರಿ ಬರುತ್ತಿವೆ. ಈ ಪ್ರದೇಶಕ್ಕೆ ತ್ಯಾಜ್ಯ ಸೇರದಿರುವಂತೆ ಕೂಡ ಕಾಳಜಿ ವಹಿಸಲಾಗಿದೆ’ ಎಂದು ನೀತಾ ವಿವರಿಸುತ್ತಾರೆ.

ಸ್ಥಳೀಯರಿಂದಲೇ ನಿರ್ವಹಣೆ: ಕೆರೆಗಳ ಅಭಿವೃದ್ಧಿ ಉಸ್ತುವಾರಿಯನ್ನು ಮೂರರಿಂದ ನಾಲ್ಕು ವರ್ಷ ನೋಡಿಕೊಳ್ಳುವ ಯುನೈಟೆಡ್‌ ಸಂಸ್ಥೆ, ಸಂರ್ಪೂಣವಾಗಿ ಅಭಿವೃದ್ಧಿಪಡಿಸಿದ ನಂತರ ಕೆರೆ ನಿರ್ವಹಣೆಯ ಉಸ್ತುವಾರಿಯನ್ನು ಅದರ ಬಗ್ಗೆ ಕಾಳಜಿ ಇರುವ ಸ್ಥಳೀಯರಿಗೆ ವಹಿಸುತ್ತಿದೆ.

ಅಭಿವೃದ್ಧಿಗೊಂಡ ಕೆರೆ ಆವರಣದಲ್ಲಿ ಸುತ್ತ ಪ್ಲಾಸ್ಟಿಕ್‌ ಮತ್ತು ತ್ಯಾಜ್ಯ ಸೇರದ ರೀತಿಯಲ್ಲಿ ತಡೆಯವುದು ಮತ್ತು ಕೆರೆಯ ಸುತ್ತ ಬೆಳೆದ ಕಳೆಯನ್ನು ಕೀಳುವ ಕೆಲಸವನ್ನು ಸ್ಥಳೀಯರ ತಂಡ ಮುಂದುವರಿಸಿಕೊಂಡು ಹೋಗುತ್ತದೆ. ಆ ಮೂಲಕ ಸ್ಥಳೀಯರು ಮತ್ತು ಕೆರೆಯ ನಡುವೆ ಅವಿನಾಭಾವ ಸಂಬಂಧವನ್ನು ಸಂಸ್ಥೆ ನಿರ್ಮಿಸಿದೆ.

ಬಿಬಿಎಂಪಿ ವ್ಯಾಪ್ತಿಯ ಕೊಡಿಗೆಸಿಂಗಸಂದ್ರ ಕೆರೆ, ದೇವಸಂದ್ರ, ರಾಚೇನಹಳ್ಳಿ, ಮಹದೇವಪುರ, ದಾಸರಹಳ್ಳಿ, ಸಿಂಗಸಂದ್ರ, ಕೊಡ್ಲುದೊಡ್ಡ, ಸೀಗೆಹಳ್ಳಿ, ಕೆಂಪಾಂಬುದಿ ಕೆರೆ, ಉತ್ತರಹಳ್ಳಿ, ಬೈರಸಂದ್ರ, ಕೈಕೊಂಡ್ರಹಳ್ಳಿ, ಸಾವಲ್‌ ಕೆರೆ, ಶೀಲವಂತ ಕೆರೆ, ಕೌದೇನಹಳ್ಳಿ ಕೆರೆ ಸೇರಿದಂತೆ ಹಲವು ಕರೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನ ಹೊರವಲಯದ ತೆರೆಪೇಟೆ ಕೆರೆ, ಇಬಲೂರು ಕೆರೆ, ನಂದಿ ಕೆರೆ ಮತ್ತು ಸೊಂಪುರ ಕೆರೆಗಳನ್ನೂ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಕೆರೆ ಶುದ್ಧತೆ ಮುಂದಿನ ಆದ್ಯತೆ: “ಮೊದಲ ಹಂತದಲ್ಲಿ ಕೆರೆಗಳನ್ನು ಉಳಿಸುವ ಕೆಲಸ ಮಾಡಲಾಗಿದೆ. ಎರಡನೇ ಹಂತದಲ್ಲಿ ಅವುಗಳಿಗೆ ಕೊಳಚೆ ನೀರು ಸೇರದೆ ಇರುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ಯೋಜನೆ ರೂಪಿಸಿಕೊಳ್ಳುತ್ತಿದ್ದೇವೆ. ನಗರದ ಕೆರೆಗಳನ್ನು ಉಳಿಸಿಕೊಳ್ಳಲು ಇರುವ ಬಹುದೊಡ್ಡ ಸವಾಲೇ ಕೊಳಚೆ ಮತ್ತು ರಾಜಕಾಲುವೆ ನೀರ‌ು ಸೇರದಂತೆ ತಡೆಯುವುದಾಗಿದೆ’ ಎನ್ನುತ್ತಾರೆ ಸಂಸ್ಥೆ ಪ್ರತಿನಿಧಿ ಡೇವಿಡ್‌.

* ಹಿತೇಶ್‌ ವೈ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ