ಫ್ಯಾಮಿಲಿ ಮೆಡಿಸಿನ್‌ ಸ್ನಾತಕೋತ್ತರ ಕೋರ್ಸ್‌ : ಕುಟುಂಬ ವೈದ್ಯ ಪರಿಕಲ್ಪನೆಗೆ ಹೊಸ ಸ್ಪರ್ಶ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಚಿಂತನೆ

Team Udayavani, Feb 7, 2020, 8:31 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಂಗಳೂರು: ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಫ್ಯಾಮಿಲಿ ಮೆಡಿಸಿನ್‌ ಸ್ನಾತಕೋತ್ತರ ಕೋರ್ಸ್‌ ಆರಂಭಿಸುವ ಮೂಲಕ ಕುಟುಂಬ ವೈದ್ಯ ಪರಿಕಲ್ಪನೆಗೆ ಹೊಸ ರೂಪ ನೀಡಲು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಸಜ್ಜಾಗಿ ನಿಂತಿದೆ.

ವಿದೇಶಗಳಲ್ಲಿ ಕುಟುಂಬ ವೈದ್ಯ (ಫ್ಯಾಮಿಲಿ ಡಾಕ್ಟರ್‌) ಪರಿಕಲ್ಪನೆ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಭಾರತದ ಸಹಿತ ಬಹುತೇಕ ರಾಷ್ಟ್ರಗಳಲ್ಲಿ ಇಂದಿಗೂ ಕುಟುಂಬ ವೈದ್ಯರು ಇರುವರಾದರೂ ಅಷ್ಟೊಂದು ವ್ಯವಸ್ಥಿತವಾಗಿ ಸಾಮಾನ್ಯ ಜನರಿಗೆ ಈ ಸೇವೆ ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜೀವ್‌ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ವೈದ್ಯಕೀಯ ವಿಜ್ಞಾನ ವಿಭಾಗದಿಂದ ಫ್ಯಾಮಿಲಿ ಮೆಡಿಸಿನ್‌ ಸ್ನಾತಕೋತ್ತರ ಕೋರ್ಸ್‌ ಆರಂಭಿಸಿ, ಕುಟುಂಬ ವೈದ್ಯರ ಸೇವೆಯನ್ನು ಅತಿ ಸುಲಭವಾಗಿ ಸಾಮಾನ್ಯ ಜನರು ಪಡೆಯುವಂತೆ ಮಾಡಲು ಯೋಜನೆ ರೂಪಿಸಿದೆ.

2020-21ನೇ ಸಾಲಿನಿಂದ ವಿವಿಯು ತನ್ನ ವ್ಯಾಪ್ತಿಯ ಎಲ್ಲ ಕಾಲೇಜುಗಳ ಸ್ನಾತಕೋತ್ತರ ವಿಭಾಗದಲ್ಲಿ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ ಆರಂಭಿಸುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಸದ್ಯ ವಿವಿಯ ಅಧೀನದಲ್ಲಿರುವ ಕಾಲೇಜುಗಳ ಪೈಕಿ ಕೆಲವೇ ಕೆಲವು ಕಾಲೇಜುಗಳಲ್ಲಿ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ ಇದೆ. ಇದನ್ನು ತಮ್ಮ ವ್ಯಾಪ್ತಿಯ ಎಲ್ಲ ಕಾಲೇಜುಗಳ ಸ್ನಾತಕೋತ್ತರ ವಿಭಾಗದಲ್ಲಿ ಆರಂಭಿಸಲು ವಿವಿಯಿಂದ ನಿರ್ದೇಶ ನೀಡುವ ಸಾಧ್ಯತೆ ಇದೆ ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೋರ್ಸ್‌ನ ಉದ್ದೇಶವೇನು?
ಕುಟುಂಬ ವೈದ್ಯರಿಗೆ ಸಾಕಷ್ಟು ಬೇಡಿಕೆಯಿದೆ. ಆದರೆ ಬಹುತೇಕರಿಗೆ ಇದರ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ಸಣಪುಟ್ಟ ಅನಾರೋಗ್ಯಗಳು ಕಾಡಿದಾಗ ಜನರು ನೇರವಾಗಿ ತಜ್ಞ ವೈದ್ಯರನ್ನೇ ಸಂಪರ್ಕಿಸುತ್ತಾರೆ. ಇದನ್ನು ತಪ್ಪಿಸಿ, ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ವಿಚಾರಗಳಿಗೆ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ ಪೂರೈಸಿದ ವೈದ್ಯರ ಸಲಹೆ ಪಡೆಯುವ ಉದ್ದೇಶದಿಂದ ಈ ಕೋರ್ಸ್‌ನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.

ಕುಟುಂಬ ವೈದ್ಯನಿಗೆ ಒಂದು ಕುಟುಂಬದ ಪ್ರತಿ ಸದಸ್ಯನ ಆರೋಗ್ಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಮತ್ತು ಆರೋಗ್ಯ ಹಿನ್ನೆಲೆಯು ತಿಳಿದಿರುತ್ತದೆ. ಇದರಿಂದ ಗಂಭೀರ ಸಮಸ್ಯೆ ಅಥವಾ ಉನ್ನತ ಮಟ್ಟದ ಚಿಕಿತ್ಸೆಗೆ ಬೇಕಿರುವ ಅಗತ್ಯ ಸಲಹೆಯನ್ನು ಸುಲಭವಾಗಿ ಕುಟುಂಬಕ್ಕೆ ನೀಡಬಹುದಾಗಿದೆ. ಇಡೀ ಕುಟುಂಬದ ಆರೋಗ್ಯದ ಹಿತದೃಷ್ಟಿಯಿಂದ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ ತೆರೆಯಲು ವಿವಿ ಮುಂದಾಗಿದೆ.

ಕೋರ್ಸ್‌ ವಿನ್ಯಾಸ
ವಿವಿ ವ್ಯಾಪ್ತಿಯ ಕಾಲೇಜುಗಳು 2020-21ನೇ ಸಾಲಿಗೆ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ಗೆ ಅರ್ಜಿ ಆಹ್ವಾನಿಸಬೇಕು. ಪ್ರತಿ ಕಾಲೇಜಿಗೆ ವರ್ಷಕ್ಕೆ ನಾಲ್ಕು ಅಭ್ಯರ್ಥಿಗಳನ್ನು ದಾಖಲಿಸಿಕೊಳ್ಳುವ ಅವಕಾಶ ಸಿಗಲಿದೆ. ಎಂಬಿಬಿಎಸ್‌ ಪೂರೈಸಿದ ಅಭ್ಯರ್ಥಿಗಳು ಸ್ನಾತಕೋತ್ತರ ವಿಭಾಗದಲ್ಲಿ ಫ್ಯಾಮಿಲಿ ಮೆಡಿಸಿನ್‌ ಕೋರ್ಸ್‌ನ್ನು ಸ್ಪೆಷಲೈಸೇಷನ್‌ ಆಗಿ ಪಡೆದುಕೊಂಡು, ಮೂರು ವರ್ಷಗಳ ಕಾಲ ಅಧ್ಯಯನ ಮಾಡಬೇಕಾಗುತ್ತದೆ.

ಸಾಮಾನ್ಯ ಸ್ನಾತಕೋತ್ತರ ಪದವಿಯಂತೆ ಪ್ರಮಾಣಪತ್ರವನ್ನು ವಿವಿಯಿಂದ ನೀಡಲಾಗುತ್ತದೆ. ಪ್ರಮಾಣಪತ್ರ ಪಡೆದವರು ಫ್ಯಾಮಿಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅರ್ಹರಾಗುತ್ತಾರೆ ಎಂದು ವಿವಿಯ ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ