ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
Team Udayavani, Sep 1, 2018, 4:25 PM IST
ಬೆಂಗಳೂರು: ಸರ್ಕಾರದಿಂದ ಒಂದು ಶಾಲೆಗೆ ಪರವಾನಗಿ ಪಡೆದು ಅನೇಕ ಕಡೆ ಶಾಲೆಗಳನ್ನು ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಕೇಳಿಬಂದಿದೆ.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್, ಆಂಧ್ರಪ್ರದೇಶ ಮೂಲದ ಶಿಕ್ಷಣ ಸಂಸ್ಥೆಯೊಂದು ಈ ರೀತಿ ಶಾಲೆಗಳನ್ನು ನಡೆಸುತ್ತಿದೆ. ಆದರೂ, ಬೆಂಗಳೂರು ಮತ್ತು ದಕ್ಷಿಣ ಜಿಲ್ಲೆ ಉಪ
ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳೇ ಗಮನಕ್ಕೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಖಾಸಗಿ ಶಾಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಸ್ಪಷ್ಟನೆ ನೀಡಿದ ಜಿಲ್ಲಾ ಉಪನಿರ್ದೇಶಕರು, ಬಿಐಒಗಳು ನೀಡಿದ ಮಾಹಿತಿ ಆಧಾರದ ಮೇಲೆ ಉತ್ತರ ನೀಡಲಾಗಿದೆ. ಮತ್ತೂಮ್ಮೆ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಬಿಲ್ಲುಗಳ ಅವ್ಯವಹಾರ: ಬೆಂಗಳೂರು ಉತ್ತರ ತಾಲೂಕಿನ ಸಿಂಗನಾಯಕನಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಸುತ್ತಿರುವ ಆರ್‌ಎಫ್ಒ ಒಬ್ಬರು, ಬಿಲ್ಲುಗಳ ಅವ್ಯವಹಾರ ನಡೆಸಿರುವುದು ಕೂಡ ಸಭೆಯಲ್ಲಿ ಚರ್ಚೆಯಾಯಿತು. ಒಂದು ವರ್ಷದಲ್ಲಿ
ಆಗಬೇಕಾಗಿರುವ ಕೆಲಸವನ್ನು ಒಂದೇ ರಾತ್ರಿಯಲ್ಲಿ ಮಾಡಿರುವ ಆರ್‌ಎಫ್ಒ, ಎಂ.ಬಿ.ಬುಕ್ ಕೂಡ ಕಳೆದಿದ್ದಾರೆ. ಉಚಿತ ಸಸಿ ವಿತರಣೆ ಮಾಡುವ ಬದಲು ಜನರಿಂದ ಹಣ ಪಡೆದು ಸಸಿ ವಿತರಣೆ ಮಾಡಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಸದಸ್ಯೆ ಲಾವಣ್ಯ ಆಗ್ರಹಿಸಿದರು. ಇದಕ್ಕೆ ಉಪ ಅರಣ್ಯ ಸಂರಕ್ಷಕರು, ಈ ಬಗ್ಗೆ ಲೋಕಾಯುಕ್ತ
ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದರು.
ಕಾಮಗಾರಿ ಮಾಡದೇ ಬಿಲ್ಲು: ಅಂಚೇಪಾಳ್ಯ ಮತ್ತು ಮಾದಾವರದಲ್ಲಿ 3054 ಯೋಜನೆಯಡಿ ರಸ್ತೆ ಕಾಮಗಾರಿಗಾಗಿ 60 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಯನ್ನು ಮಾಡದೇ ಬಿಲ್ಲು ಮಾಡಿಕೊಳ್ಳಲಾಗಿರುವುದನ್ನು ಜಿ.ಪಂ ಸದಸ್ಯ ಚಂದ್ರಪ್ಪ ಸಭೆ ಗಮನಕ್ಕೆ ತಂದರು. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದರು.
ಇದೇ ವೇಳೆ ಕೃಷಿ ಪರಿಕರಗಳ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಸದಸ್ಯರು ಆರೋಪಿಸಿದರು. ರೈತರಿಗೆ ನೀಡುವ ಟಾರ್ಪಲಿನ್, ಪಂಪ್ ಸೆಟ್ ಹಾಗೂ ಇತರ ಪರಿಕರ ವಿತರಣೆಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ.
ಅಧಿಕಾರಿಗಳು- ಬ್ರೋಕರ್‌ಗಳ ಮಧ್ಯಸ್ಥಿಕೆಯಿಂದಾಗಿ ಈ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದ್ದು, ಸರ್ಕಾರಿ ಸವಲತ್ತುಗಳು ನಿಜವಾದ ರೈತರ ಕೈ ಸೇರದೆ, ಅನುಕೂಲವಾದಿಗಳ ಕೈ ಸೇರುತ್ತಿವೆ ಎಂದರು.
ಈ ವೇಳೆ ಮಾತನಾಡಿದ ಜಿ.ಪಂ ಅಧ್ಯಕ್ಷ ಮುನಿರಾಜು, ಕೃಷಿ ಪರಿಕರ ಸಮರ್ಪಕ ವಿತರಣೆ ಸಂಬಂಧ 3-4 ದಿನಗಳಲ್ಲಿ ಕಾರ್ಯನಿರ್ವಹಣಾ ಧಿಕಾರಿ, ಆಯಾ ಜಿ.ಪಂ ಸದಸ್ಯರಿಗೆ ಮಾಹಿತಿ ನೀಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
“ಬ್ಯಾಂಕ್ ಕನ್ನಡಮಯವಾಗಬೇಕು’: ಫಸಲ್ ಬಿಮಾ ಯೋಜನೆ ಮಾಹಿತಿ ಪಡೆಯಲು ರೈತರು ಬ್ಯಾಂಕ್‌ಗಳಿಗೆ ತೆರಳಿದರೆ, ಅಲ್ಲಿನ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡುತ್ತಾರೆ. ಹೀಗಾಗಿ, ಹಿಂದಿ ಬಾರದ ರೈತರು ಬ್ಯಾಂಕ್‌ಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಕೆಲ ಸದಸ್ಯರು ಆಗ್ರಹಿಸಿದರು.
ಅಧಿಕಾರಿಗಳಿಗೆ ಮೊಬೈಲ್ ಗೀಳು
ಸಭೆಯಲ್ಲಿ ಕೃಷಿ, ಶಿಕ್ಷಣ, ತೋಟಗಾರಿಕೆ, ತೆರಿಗೆ ಸೇರಿದಂತೆ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಮೊಬೈಲ್‌ನಲ್ಲಿ ತಲ್ಲೀನರಾಗಿದ್ದರು.ಇದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕೋಪಕ್ಕೆ ಕಾರಣವಾಯಿತು. ಜನರ ಸಮಸ್ಯೆಯ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದರೂ, ಅಧಿಕಾರಿಗಳು ಇದನ್ನು
ಆಲಿಸುತ್ತಿಲ್ಲ. ಕೆಲವು ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇಂತಹ ಅಧಿಕಾರಿಗಳಿಗೆ ನೀತಿ ಪಾಠ ಹೇಳಿ, ಮುಂದಿನ ಸಭೆಗಳಲ್ಲಿ ಮೊಬೈಲ್ ತರದಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಗೆ ತಾಕೀತು ಮಾಡಿದರು.