ಮಹಾನಗರದಲ್ಲಿ ಚತುರ ಸಾರಿಗೆಗೆ ಮರುಜೀವ?

ಸಮರ್ಪಕ ನಿರ್ವಹಣೆ ಮಾಡುವುದಾಗಿ ಕಂಪನಿ ಭರವಸೆ ಹಿನ್ನೆಲೆ | ಮರುಟೆಂಡರ್‌ಗೆ 200 ಕೋಟಿ ಖರ್ಚು; ಸಮಯವೂ ವ್ಯಯ?

Team Udayavani, Sep 20, 2019, 11:18 AM IST

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನೆನೆಗುದಿಗೆಬಿದ್ದಿರುವ “ಚತುರ ಸಾರಿಗೆ ವ್ಯವಸ್ಥೆ’ (ಐಟಿಎಸ್‌)ಯ ಗುತ್ತಿಗೆಯನ್ನು ಆರ್ಥಿಕವಾಗಿ ದಿವಾಳಿಯಾಗಿದ್ದ ಟ್ರೈಮ್ಯಾಕ್ಸ್‌ ಕಂಪನಿಯೊಂದಿಗೇ ಮುಂದುವರಿಸಲು ಚಿಂತನೆ ನಡೆದಿದೆ. ಬಸ್‌ಗಳ ಟ್ರ್ಯಾಕಿಂಗ್‌ ಯೂನಿಟ್‌ (ವಿಟಿಯು) ಹಾಗೂ ನಿತ್ಯ ಬಳಕೆಯಾಗುವ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷಿನ್‌ (ಇಟಿಎಂ) ಗಳ ನಿರ್ವಹಣೆ ಕೆಲದಿನಗಳಿಂದ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಇಡೀ ವ್ಯವಸ್ಥೆ ನೆನೆಗು ದಿಗೆ ಬಿದ್ದಿದೆ. ಈಗ ಅದಕ್ಕೆ ಮರುಕಾಯಕಲ್ಪ ನೀಡಲಾಗುತ್ತಿದ್ದು, ಇದರ ಮೊದಲ ಹಂತವಾಗಿ ಟ್ರೈಮ್ಯಾಕ್ಸ್‌ ಕಂಪನಿ ಯೊಂದಿಗೆ ಬಿಎಂಟಿಸಿ ಮಾತು ಕತೆ ನಡೆಸಿದೆ. ಪೂರಕ ಸ್ಪಂದನೆ ದೊರಕಿದ್ದು, ಅಂದುಕೊಂಡಂತೆ ಎಲ್ಲವೂ ನಡೆದರೆ ಪ್ರಸ್ತುತ ಇರುವ ಟೆಂಡರ್‌ ಮುಂದುವರಿಯಲಿದೆ.

ಹೊಸದಾಗಿ ಟೆಂಡರ್‌ ಕರೆದು, ಐಟಿಎಸ್‌ ವ್ಯವಸ್ಥೆಯನ್ನು ಪುನರ್‌ಸ್ಥಾಪನೆ ಮಾಡಲು ಕನಿಷ್ಠ 200 ಕೋಟಿ ರೂ. ಖರ್ಚಾಗುತ್ತದೆ. ಜತೆಗೆ ಈ ಪ್ರಕ್ರಿಯೆಗೆ ಸಾಕಷ್ಟು ಸಮಯವೂ ವ್ಯಯವಾಗಲಿದೆ. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಂಟಿಸಿಗೆ ಇದು ಮತ್ತಷ್ಟು ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಟ್ರೈಮ್ಯಾಕ್ಸ್‌ನ ಮನವೊಲಿಸಿ ವ್ಯವಸ್ಥೆಯನ್ನು ದುರಸ್ತಿಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಿಂದ ವ್ಯಕ್ತವಾಗಿದೆ ಎನ್ನಲಾಗಿದೆ.

ಟ್ರೈಮ್ಯಾಕ್ಸ್‌ ಐಟಿ ಇನ್‌ಫ್ರಾಸ್ಟ್ರಕ್ಚರ್‌ ಆಂಡ್‌ ಸರ್ವಿಸ್‌ ಲಿ.,ಗೆ 2016ರ ಜುಲೈನಲ್ಲಿ ಟೆಂಡರ್‌ ನೀಡಲಾಗಿತ್ತು. ಗುತ್ತಿಗೆ ಅವಧಿ 2021ರವರೆಗೆ ಇದೆ. ಅಂದು 68 ಕೋಟಿ ರೂ.ಗಳಿಗೆ ಇದನ್ನು ಟೆಂಡರ್‌ ನೀಡಲಾಗಿತ್ತು. ಈ ಯಂತ್ರಗಳ ಪೂರೈಕೆ ಮತ್ತು ನಿರ್ವಹಣೆಗೆ ಪ್ರತಿಯಾಗಿ ಗುತ್ತಿಗೆ ಪಡೆದ ಕಂಪೆನಿಗೆ ಬಿಎಂಟಿಸಿಯು ಮಾಸಿಕ 1.15 ಕೋಟಿಯಂತೆ 60 ತಿಂಗಳು ಪಾವತಿ ಮಾಡ  ಬೇಕಿತ್ತು. ಈ ಪೈಕಿ ಈಗಾಗಲೇ ಸುಮಾರು 35ರಿಂದ 38 ಕೋಟಿ ರೂ. ಪಾವತಿಸಲಾಗಿದೆ. ಜನವರಿಯಿಂದ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಹಾಗಾಗಿ, ಹಣ ಪಾವತಿಯೂ ಆಗುತ್ತಿಲ್ಲ. ಈಗ ಕಂಪೆನಿಯೊಂದಿಗೆ ಮಾತುಕತೆ ನಡೆದಿದ್ದು, ವ್ಯವಸ್ಥೆಗೆ ಮರುಚಾಲನೆ ಮುನ್ಸೂಚನೆಗಳು ದೊರೆತಿವೆ.

ಮರುಟೆಂಡರ್‌ ಚಿಂತನೆ ಸದ್ಯಕ್ಕಿಲ್ಲ; ಎಂಡಿ “ಈ ಹಿಂದಿನಂತೆ ಐಟಿಎಸ್‌ ನಿರ್ವಹಣೆ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುವಂತೆ ಈಗಿರುವ ಕಂಪೆನಿಗೇ ಸೂಚಿಸಲಾಗಿದೆ. ಕಂಪೆನಿಯವರಿಂದಲೂ ಪೂರಕ ಸ್ಪಂದನೆ ದೊರಕಿದೆ. ಹಾಗಾಗಿ, ಕೆಲವೇ ದಿನಗಳಲ್ಲಿಸಮಸ್ಯೆ ಪರಿಹಾರವಾಗುವ ವಿಶ್ವಾಸ ಇದೆ. ಸದ್ಯಕ್ಕೆ ಮರುಟೆಂಡರ್‌ ಚಿಂತನೆ ಇಲ್ಲ. ಈಗಾಗಲೇ ಗುತ್ತಿಗೆ ಪಡೆದಿರುವ ಕಂಪೆನಿ ಯಾವ ರೀತಿ ನಿರ್ವಹಣೆ ಮಾಡುತ್ತಿದೆ ಎಂಬುದನ್ನು ನೋಡಿಕೊಂಡು ಮುಂದುವರಿಯಲಿದ್ದೇವೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ “ಉದಯವಾಣಿ’ಗೆ ತಿಳಿಸಿದರು.

ಆರು ತಿಂಗಳಿಂದ ಐಟಿಸಿ ನೆನೆಗುದಿಗೆ:  ಸುಮಾರು ಆರು ತಿಂಗಳಿನಿಂದ ಈ ಐಟಿಎಸ್‌ ನೆನೆಗುದಿಗೆ ಬಿದ್ದಿದೆ. ಆರು ಸಾವಿರ ಬಸ್‌ಗಳ ಪೈಕಿ ಶೇ. 60ಕ್ಕೂ ಹೆಚ್ಚು ವಾಹನಗಳಲ್ಲಿನ ಜಿಪಿಎಸ್‌ ಕೈಕೊಟ್ಟಿದೆ. ಇದರಿಂದ ಯಾವ ಬಸ್‌ಗಳು ಎಲ್ಲಿ ನಿಂತಿವೆ? ಯಾವ ಮಾರ್ಗದಲ್ಲಿ ಬರುತ್ತಿವೆ? ಎಷ್ಟೊತ್ತಿಗೆ ಟ್ರಿಪ್‌ ಪೂರ್ಣಗೊಳಿಸಲಿವೆ ಇದಾವುದರ ನಿಖರ ಮಾಹಿತಿ ತಕ್ಷಣಕ್ಕೆ ಲಭ್ಯವಾಗುತ್ತಿಲ್ಲ. ಮತ್ತೂಂದೆಡೆ 10ರಿಂದ 11 ಸಾವಿರ ಇಟಿಎಂಗಳಲ್ಲಿ ಶೇ. 30ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದವು ದುರಸ್ತಿಯಾಗಿಲ್ಲ. ಇದರಿಂದ ಹಳೆಯ ಪದ್ಧತಿಯಂತೆ ಮುದ್ರಿತ ಪೇಪರ್‌ ಟಿಕೆಟ್‌ ವಿತರಿಸಲಾಗುತ್ತಿದ್ದು, ಆದಾಯದಲ್ಲೂ ಖೋತಾ ಆಗುತ್ತಿದೆ. ಆದ್ದರಿಂದ ತ್ವರಿತ ಗತಿಯಲ್ಲಿ ಸಮಸ್ಯೆ ಇತ್ಯರ್ಥಪಡಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಅಂದಹಾಗೆ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಐಟಿಎಸ್‌ ಅನುಷ್ಠಾನಗೊಳಿಸಲಾಗಿತ್ತು. ಈ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಸಂಸ್ಥೆಯಲ್ಲಿ ಸೋರಿಕೆ ಪ್ರಮಾಣ ಕೂಡ ಇಳಿಕೆ ಆಗಿತ್ತು.

ಪೇಪರ್‌ ಟಿಕೆಟ್‌ಗೂ ಚೌಕಾಸಿ! :  ಇಟಿಎಂಗಳು ಕೈಕೊಟ್ಟಿದ್ದರಿಂದ ಮುದ್ರಿತ ಪೇಪರ್‌ ಟಿಕೆಟ್‌ಗಳನ್ನು ವಿತರಿಸಲಾಗುತ್ತಿದೆ. ಆದರೆ, ಈ

ಟಿಕೆಟ್‌ಗಳು ಕೂಡ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಟಿಕೆಟ್‌ಗಳಿಗೆ ಏಕಾಏಕಿ ತುಂಬಾ ಬೇಡಿಕೆ ಬಂದಿರುವುದರಿಂದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಯ ಮುದ್ರಣಾಲಯದಲ್ಲಿ ಮಾತ್ರವಲ್ಲ; ಸರ್ಕಾರಿ ಮುದ್ರಣಾಲಯದಲ್ಲೂ ಟಿಕೆಟ್‌ಗಳು ಮುದ್ರಿತವಾಗುತ್ತಿವೆ. ಆದರೂ ಸಾಕಾಗುತ್ತಿಲ್ಲ. ಕಳೆದ ವಾರ ಸಮರ್ಪಕವಾಗಿತ್ತು. ಈ ವಾರ ಕೊರತೆ ಉಂಟಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಬಸ್‌ ಪ್ರಯಾಣದ ಕನಿಷ್ಠ ದರ 5 ರೂ. ಆದರೆ, ಈ ಮೌಲ್ಯದ ಪೇಪರ್‌ ಟಿಕೆಟ್‌ಗಳೇ ಲಭ್ಯವಾಗುತ್ತಿಲ್ಲ. 1 ಅಥವಾ 2 ರೂ. ಟಿಕೆಟ್‌ಗಳನ್ನು ಸೇರಿಸಿ ವಿತರಿಸಲಾಗುತ್ತಿದೆ. ಕೆಲವೊಮ್ಮೆ ಸಮರ್ಪಕ ಟಿಕೆಟ್‌ಗಳು ದೊರೆಯುವುದಿಲ್ಲ. ಹಾಗಾಗಿ, ವಿತರಣೆಗೂ ಚೌಕಾಸಿ ಮಾಡಬೇಕಾ ಗುತ್ತದೆ ಎಂದು ಯಶವಂತಪುರ ಘಟಕದ ನಿರ್ವಾಹಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

 

●ವಿಜಯಕುಮಾರ್‌ ಚಂದರಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ