ಪರಾರಿಯಾಗಲೆತ್ನಿಸಿದ ರೌಡಿಶೀಟರ್‌ ಕಾಲಿಗೆ ಗುಂಡು

Team Udayavani, Mar 6, 2019, 6:20 AM IST

ಬೆಂಗಳೂರು: ರೌಡಿ ಪ್ರಶಾಂತ್‌ಕುಮಾರ್‌ ಕೊಲೆ ಪ್ರಕರಣದ ಆರೋಪಿ ಲೋಕೇಶ್‌ ಕಾಲಿಗೆ ಗುಂಡೇಟು ಹೊಡೆದು ಮಾರತ್‌ಹಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಲೋಕೇಶ್‌ ಪರಾರಿಯಾಗಲು ಯತ್ನಿಸಿದ ವೇಳೆ ಪ್ರಾಣರಕ್ಷಣೆ ಸಲುವಾಗಿ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಶಾಂತ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಹಾಗೂ ಮಾರತ್‌ಹಳ್ಳಿ ಠಾಣೆಯ ಎರಡು ವಿಶೇಷ ತಂಡಗಳು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಲೋಕೇಶ್‌ ಸೇರಿ 12ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ. ಫೆ.27ರಂದು ರಾತ್ರಿ ಹಳೆ ವೈಷಮ್ಯಕ್ಕೆ ಹೊರಮಾವು ಜಂಕ್ಷನ್‌ ಸಮೀಪ ರೌಡಿ ಪ್ರಶಾಂತ್‌ಕುಮಾರ್‌ನ್ನು ಲೋಕೇಶ್‌ ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದರು.

ಆರೋಪಿಗಳ ಬಂಧನಕ್ಕೆ ಸಹಕಾರ ನೀಡುವಂತೆ ಪೂರ್ವವಿಭಾಗದ ಡಿಸಿಪಿ ರಾಹುಲ್‌ಕುಮಾರ್‌ ಶಹಾಪುರವಾಡ್‌ ಕೋರಿದ್ದರು. ಈ ಹಿನ್ನೆಲೆಯಲ್ಲಿ ಮಾರತ್‌ಹಳ್ಳಿ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ತಮಿಳುನಾಡಿನಿಂದ ಸೋಮವಾರ ರಾತ್ರಿ ಲೋಕೇಶ್‌ ಸೇರಿದಂತೆ 9 ಮಂದಿಯನ್ನು ಬಂಧಿಸಿ ಕರೆತಂದಿತ್ತು.

ವಿಚಾರಣೆ ವೇಳೆ ಪ್ರಕರಣದ ಪ್ರಮುಖ ಆರೋಪಿ ಶಿವರಾಜ್‌ ಇರುವ ಸ್ಥಳವನ್ನು ತೋರಿಸುವುದಾಗಿ ಲೋಕೇಶ್‌ ತಿಳಿಸಿದ್ದ. ಹೀಗಾಗಿ ಮಂಗಳವಾರ ಮಧ್ಯಾಹ್ನ 3.15ರ ಸುಮಾರಿಗೆ ಇನ್ಸ್‌ಪೆಕ್ಟರ್‌ ಗಿರೀಶ್‌ ನೇತೃತ್ವದ ತಂಡ ಲೋಕೇಶ್‌ನನ್ನು ಬೆಳ್ಳಂದೂರು ಸಮೀಪ ಕರೆದೊಯ್ಯುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಜತೆಗೆ ಹಿಡಿಯಲು ಹೋದ ಮುಖ್ಯ ಪೇದೆ ರವಿಶಂಕರ್‌ ಕೈಗೆ ಕಲ್ಲಿನಿಂದ ಹೊಡೆದಿದ್ದಾನೆ.

ಶರಣಾಗುವಂತೆ ಸೂಚಿಸಿದರೂ ಒಪ್ಪದೆ ಹಲ್ಲೆ ಮುಂದುವರಿಸಿದ್ದ. ಈ ಸಂದರ್ಭಧಲ್ಲಿ ಇನ್ಸ್‌ಪೆಕ್ಟರ್‌ ಗಿರೀಶ್‌ ಪ್ರಾಣರಕ್ಷಣೆಗಾಗಿ, ಲೋಕೇಶ್‌ ಎಡಕಾಲಿಗೆ ಗುಂಡು ಹೊಡೆದಿದ್ದಾರೆ. ಗುಂಡೇಟಿನಿಂದ ಕುಸಿದು ಬಿದ್ದ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ವಿನಯ್‌ ಕಿಡ್ನಾಪ್‌ ಕೇಸ್‌ನ ಆರೋಪಿ ಪ್ರಶಾಂತ್‌!: ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪ್ರಶಾಂತ್‌ ಕುಮಾರ್‌ 2017ರಲ್ಲಿ ಶಾಸಕ ಕೆ.ಎಸ್‌ ಈಶ್ವರಪ್ಪ ಅವರ ಮಾಜಿ ಆಪ್ತ ಸಹಾಯಕ ವಿನಯ್‌ ಕಿಡ್ನಾಪ್‌ ಹಾಗೂ ಹಲ್ಲೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರಶಾಂತ್‌ ಜಾಮೀನಿನ ಆಧಾರದಲ್ಲಿ ಬಿಡುಗಡೆಗೊಂಡಿದ್ದ.

ಸಹೋದರನ ಕೊಲೆ ಕೇಸ್‌ಗಾಗಿ ಹತ್ಯೆ!: ಕೊಲೆಯಾದ ಪ್ರಶಾಂತ್‌ ಅಣ್ಣ ವಿನೋದ್‌ಕುಮಾರ್‌ನನ್ನು ಕೊಲೆಗೈದ ಆರೋಪ ಪ್ರಕರಣದಲ್ಲಿ ಶಿವರಾಜ್‌ ಮತ್ತಿತರರು ಭಾಗಿಯಾಗಿರುವ ಆರೋಪಿಗಳಾಗಿದ್ದಾರೆ. ಹೀಗಾಗಿ, ಕೇಸ್‌ ವಾಪಾಸ್‌ ತೆಗೆದುಕೊಳ್ಳಲು ಹಲವು ಬಾರಿ ಪ್ರಶಾಂತ್‌ಗೆ ಸೂಚಿಸಿದರೂ ಕೇಳಿರಲಿಲ್ಲ. ಇದೇ ಕಾರಣಕ್ಕೆ ಪ್ರಶಾಂತ್‌ನನ್ನು ಕೊಲೆಮಾಡಿರುವ ಸಾಧ್ಯತೆಯಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಶಾಂತ್‌ ಕೊಲೆಪ್ರಕರಣದ ಆರೋಪಿಗಳಾದ ಲೋಕೇಶ್‌ ಸೇರಿ 12 ಮಂದಿಯನ್ನು ಬಂಧಿಸಿದ್ದು, ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ಬಾಣಸವಾಡಿ ಪೊಲೀಸರಿಗೆ ಒಪ್ಪಿಸಲಾಗುತ್ತದೆ.
-ಅಬ್ದುಲ್‌ ಅಹದ್‌, ಡಿಸಿಪಿ ವೈಟ್‌ಫೀಲ್ಡ್‌ ವಿಭಾಗ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂದಾಪುರ: ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆ ಮಂಗಳವಾರದಿಂದ ಆರಂಭವಾಗಿದೆ. ಕೆಲವು ವರ್ಷಗಳಿಂದ ನಿಂತಿದ್ದ ಮರಳುಗಾರಿಕೆಗೆ ಅನುಮತಿ ದೊರೆತು...

  • ಸುಳ್ಯ: ಅಂತರ್ಜಲದ ಸಂರಕ್ಷಣೆ ಅಗತ್ಯ ಈ ಕಾಲಘಟ್ಟದಲ್ಲಿ ದೇಶದ ಭವಿಷ್ಯದಷ್ಟೇ ಮಹತ್ವದ್ದು. ಇದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಜತೆಗೂಡಿಸಿ...

  • ಉಡುಪಿ: ಮ್ಯಾನ್‌ ಹೋಲ್‌ಗ‌ಳ್ಳೋ ಅಥವಾ ಮರಣಶ್ಯೆ ದಿಬ್ಬಗಳ್ಳೋ! ಇವುಗಳನ್ನು ಏನೆಂದು ಹೆಸರಿಸಿದರೆ ಸೂಕ್ತ ಎನ್ನುವ ಜಿಜ್ಞಾಸೆ ನಗರವಾಸಿಗಳನ್ನು ಕಾಡುತ್ತಿದೆ. ನೆಲದೊಳಗೆ...

  • ಶೀತ, ಕೆಮ್ಮು ಇದ್ದಾಗ ಏನೇನು ಮಾಡಬೇಕು ಅಂತೆಲ್ಲಾ ಗೊತ್ತೇ ಇದೆ. ಕಷಾಯ ಕುಡಿಯಬೇಕು, ದೇಹವನ್ನು ಬೆಚ್ಚಗಿಡಬೇಕು ಇತ್ಯಾದಿ. ಆದರೆ, ಏನೇನೆಲ್ಲಾ ತಿನ್ನಬಾರದು ಅಂತ...

  • 19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ...