ವೆಲ್ಲಾರ ಜಂಕ್ಷನ್‌ ಬಳಿಯ ಮೆಟ್ರೋ ನಿಲ್ದಾಣಕ್ಕೆ ಕತ್ತರಿ?

Team Udayavani, Aug 14, 2019, 3:08 AM IST

ಬೆಂಗಳೂರು: ದಿನದಿಂದ ದಿನಕ್ಕೆ ವಿವಾದ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೆಲ್ಲಾರ ಜಂಕ್ಷನ್‌ ಬಳಿಯ ಸುರಂಗ ಮಾರ್ಗದ ಮೆಟ್ರೋ ನಿಲ್ದಾಣವನ್ನು ಮರುವಿನ್ಯಾಸಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಚಿಂತನೆ ನಡೆಸಿದೆ. ಆಲ್‌ ಸೆಂಟ್ಸ್‌ ಚರ್ಚ್‌ ಆವರಣದ ನೆಲದಡಿ ನಿರ್ಮಾಣವಾಗಲಿರುವ ಮೆಟ್ರೋ ನಿಲ್ದಾಣದ ಉದ್ದಕ್ಕೆ ಕತ್ತರಿ ಹಾಕಲು ಸಾಧ್ಯವೇ ಎಂಬುದರ ಸಾಧಕ-ಬಾಧಕಗಳ ಚಿಂತನೆ ನಡೆದಿದೆ. ಈ ಮೂಲಕ ಚರ್ಚ್‌ ಆವರಣದಲ್ಲಿನ ಮರಗಳು ಸೇರಿದಂತೆ ಇತರೆ ಕಟ್ಟಡಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ.

ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ ತಜ್ಞರು ನಿಲ್ದಾಣದ ವಿನ್ಯಾಸದಲ್ಲಿ ಮಾರ್ಪಾಡುಗಳನ್ನು ಮಾಡುವ ಪ್ರಯತ್ನ ನಡೆಸಿದ್ದಾರೆ. ಸಾಮಾನ್ಯವಾಗಿ ಸುರಂಗದಲ್ಲಿರುವ ಮೆಟ್ರೋ ನಿಲ್ದಾಣಗಳಿಗೆ ಹೋಲಿಸಿದರೆ, ಉದ್ದೇಶಿತ ವೆಲ್ಲಾರ ಜಂಕ್ಷನ್‌ ಬಳಿಯ ನಿಲ್ದಾಣದ ಉದ್ದವನ್ನು ಕನಿಷ್ಠ 25ರಿಂದ 30 ಮೀಟರ್‌ನಷ್ಟು ನಿಲ್ದಾಣದ ಉದ್ದವನ್ನು ಕಡಿಮೆಗೊಳಿಸುವ ಪ್ರಯತ್ನ ನಡೆದಿದೆ. ಆದರೆ, ಈ ಚಿಂತನೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು “ಉದಯವಾಣಿ’ಗೆ ಸ್ಪಷ್ಟಪಡಿಸಿವೆ.

ಈಗಿರುವ ಸುರಂಗ ಮೆಟ್ರೋ ನಿಲ್ದಾಣಗಳ ಉದ್ದ 192 ಮೀ. ಇದರಲ್ಲಿ 135 ಮೀ. ಬರೀ ರೈಲು ನಿಲುಗಡೆಯಾಗುವ ಪ್ಲಾಟ್‌ಫಾರಂಗೆ ಸೀಮಿತವಾಗಿರುತ್ತದೆ. ಉಳಿದ 57 ಮೀ.ನಲ್ಲಿ ಎರಡೂ ಬದಿ ಆಕಸ್ಮಿಕ ಅಗ್ನಿ ಸಂಭವಿಸಿದಾಗ ಅಗ್ನಿಶಾಮಕ ದಳ ಸಿಬ್ಬಂದಿ ಓಡಾಡಲು ಜಾಗ ಮೀಸಲಿಡಲಾಗಿರುತ್ತದೆ. ಅಲ್ಲದೆ, ಎರಡೂ ಬದಿಯಲ್ಲಿ ಟನಲ್‌ ವೆಂಟಿಲೇಷನ್‌ ಸಿಸ್ಟ್‌ಂ (ಟಿವಿಎಸ್‌) ಅಳವಡಿಸಲಾಗಿರುತ್ತದೆ. ಇದು ಮೆಟ್ರೋ ಸುರಂಗದಲ್ಲಿ ಬೆಂಕಿಯನ್ನು ನಂದಿಸುವ ಹಾಗೂ ಆ ಬೆಂಕಿ ಉಗುಳುವ ಹೊಗೆಯನ್ನೂ ಹೊರಗಡೆ ಕೊಂಡೊಯ್ಯುವ ಕೆಲಸ ಮಾಡಲಿದೆ.

ಅಂಗವಿಕಲ ಆಗಲಿದೆ!: ವಿನ್ಯಾಸದಲ್ಲಿ ಮಾರ್ಪಾಡು ಮಾಡಿದಲ್ಲಿ, ಇದರಲ್ಲಿ ಯಾವುದಾದರೂ ಒಂದು ಭಾಗಕ್ಕೆ ಕತ್ತರಿ ಹಾಕಬೇಕಾಗುತ್ತದೆ (ಪ್ಲಾಟ್‌ಫಾರಂ ಹೊರತುಪಡಿಸಿ). ಆಗ ಉಳಿದ ನಿಲ್ದಾಣಗಳಿಗೆ ಹೋಲಿಸಿದರೆ, ಉದ್ದೇಶಿತ ಜಂಕ್ಷನ್‌ ಬಳಿ ನಿಲ್ದಾಣವು ಅಂಗವಿಕಲ (ಹ್ಯಾಂಡಿಕ್ಯಾಪ್ಡ್) ಆಗಲಿದೆ! ಪ್ರಸ್ತುತ ನಿಲ್ದಾಣದ ನಿರ್ಮಾಣಕ್ಕೆ ನಿಗದಿಪಡಿಸಿದ ಒಟ್ಟಾರೆ 192 ಮೀ. ಪೈಕಿ 80ರಿಂದ 90 ಮೀ. ಚರ್ಚ್‌ ಆವರಣದಲ್ಲಿ ಬಂದರೆ, 60ರಿಂದ 70 ಮೀ. ಪಕ್ಕದ ಫಾತಿಮಾ ಬೇಕರಿ ಮತ್ತು ಪೆಟ್ರೋಲ್‌ ಬಂಕ್‌ ಜಾಗ ಹಾಗೂ 35ರಿಂದ 45 ಮೀ. ರಕ್ಷಣಾ ಇಲಾಖೆಗೆ ಸೇರಿದ ಭೂಮಿಯನ್ನು ಪಡೆಯಲಾಗಿದೆ. 25ರಿಂದ 30 ಮೀ. ಕಡಿಮೆ ಮಾಡಿಕೊಂಡರೆ, ಚರ್ಚ್‌ ಆವರಣದಲ್ಲಿ ಬರುವ ಅಂಗವಿಕಲ ಮಕ್ಕಳ ಶಾಲೆ ಅಥವಾ ವೃದ್ಧಾಶ್ರಮ ಉಳಿಸಬಹುದು ಅಥವಾ ಮರಗಳ ಕಡಿತಲೆ ತಗ್ಗಿಸಬಹುದು ಎಂಬುದು ಬಿಎಂಆರ್‌ಸಿಎಲ್‌ ಎಂಜಿನಿಯರ್‌ಗಳ ಲೆಕ್ಕಾಚಾರ.

ಭವಿಷ್ಯದಲ್ಲಿ ಸಮಸ್ಯೆ: ಈಗಿನ ವಿವಾದದ ತಲೆನೋವಿನಿಂದ ಪಾರಾಗಲು ಹೀಗೆ ನಿಲ್ದಾಣಗಳ ಗಾತ್ರವನ್ನು ಕುಗ್ಗಿಸಬಹುದು. ಆದರೆ ಇದು ತಾತ್ಕಾಲಿಕ ಪರಿಹಾರ ಆಗಲಿದ್ದು, ಭವಿಷ್ಯದಲ್ಲಿ ಇದು ಮತ್ತೂಂದು ರೀತಿಯ ಸಮಸ್ಯೆಗೆ ಕಾರಣವಾಗಲಿದೆ. “ನಮ್ಮ ಮೆಟ್ರೋ’ ಮೊದಲ ಹಂತ ಪೂರ್ಣಗೊಳ್ಳುತ್ತಿದ್ದಂತೆ ರೈಲುಗಳ ಗಾತ್ರ ದುಪ್ಪಟ್ಟಾಯಿತು (ಬೋಗಿಗಳ ಸಂಖ್ಯೆ ಮೂರರಿಂದ ಆರಕ್ಕೆ ಏರಿಕೆ). ಮೆಜೆಸ್ಟಿಕ್‌ನ ಕೆಂಪೇಗೌಡ ಇಂಟರ್‌ಚೇಂಜ್‌ ತುಂಬಾ ದೊಡ್ಡದಾಯಿತು ಎಂಬ ಕೂಗು ಆರಂಭದಲ್ಲಿತ್ತು. ಈಗ “ಪೀಕ್‌ ಅವರ್‌’ನಲ್ಲಿ ಆ ನಿಲ್ದಾಣವೇ ಸಾಲುತ್ತಿಲ್ಲ. ಹೀಗಿರುವಾಗ, ಪ್ರಯಾಣಿಕರ ದಟ್ಟಣೆ ಮತ್ತು ರೈಲುಗಳ ಸಂಖ್ಯೆ ಹೆಚ್ಚಿದಂತೆ ವೆಲ್ಲಾರ ಜಂಕ್ಷನ್‌ ಬಳಿಯ ನಿಲ್ದಾಣದಲ್ಲಿ ಎಲ್ಲ ರೀತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿ ಎಂಜಿನಿಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ವಿವಾದ ಏನು?: ಚರ್ಚ್‌ ಆವರಣದ ನೆಲದಡಿ ಮೆಟ್ರೋ ನಿಲ್ದಾಣ ನಿರ್ಮಾಣದಿಂದ ಹತ್ತಾರು ಮರಗಳು ಬಲಿ ಆಗುತ್ತವೆ. ಎರಡು ಪ್ರವೇಶ ದ್ವಾರಗಳನ್ನು ಮುಚ್ಚಬೇಕಾಗುತ್ತದೆ. ಆವರಣದಲ್ಲಿ ವೃದ್ಧಾಶ್ರಮ, ಅಂಗವಿಕಲ ಮಕ್ಕಳ ಶಾಲೆ ಇವೆ. ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಆರೋಪಿಸಿ ಚರ್ಚ್‌ ಸದಸ್ಯರು ಯಾವುದೇ ಕಾರಣಕ್ಕೂ ಆವರಣದಲ್ಲಿ ನಿಲ್ದಾಣ ಬೇಡ ಎಂದು ಪಟ್ಟುಹಿಡಿದಿದ್ದಾರೆ. ಆದರೆ, ನಿಲ್ದಾಣದಿಂದ ಚರ್ಚ್‌ ಆವರಣದೊಳಗೆ ಕೇವಲ ಕಾಮಗಾರಿಗೆ ಜಾಗ ಪಡೆಯಲಾಗುತ್ತಿದೆ. ಅಲ್ಲಿ ಯಾವುದೇ ಡಂಪಿಂಗ್‌ ಯಾರ್ಡ್‌ ಬರುತ್ತಿಲ್ಲ. ಕೆಲವೇ ಕೆಲವರ ಹಿತಕ್ಕಾಗಿ ನಿಲ್ದಾಣ ಸ್ಥಳಾಂತರಿಸಿದರೆ, ಭವಿಷ್ಯದಲ್ಲಿ ಸಾವಿರಾರು ಜನರಿಗೆ ಸಮಸ್ಯೆ ಆಗುತ್ತದೆ ಎಂಬುದು ಬಿಎಂಆರ್‌ಸಿಎಲ್‌ ವಾದ.

* 192 ಮೀ. ಸಾಮಾನ್ಯವಾಗಿ ಸುರಂಗದಲ್ಲಿರುವ ಮೆಟ್ರೋ ನಿಲ್ದಾಣದ ಉದ್ದ
* 90 ಮೀ. ಚರ್ಚ್‌ ಆವರಣದಲ್ಲಿ ಬರುವ ನಿಲ್ದಾಣದ ಭಾಗ
* 25-30 ಮೀ.ನಷ್ಟು ಉದ್ದ ತಗ್ಗಿಸಲು ಚಿಂತನೆ
* 150-160 ಮೀ. ಎತ್ತರಿಸಿದ ಮಾರ್ಗದಲ್ಲಿನ ನಿಲ್ದಾಣದ ಉದ್ದ

* ವಿಜಯಕುಮಾರ್‌ ಚಂದರಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ರಾಜಾಜಿನಗರದಲ್ಲಿ ಭಾನುವಾರ ಮುಂಜಾನೆ ನಡೆದಿದ್ದ ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ವ್ಯಾಪಾರಿ ಜೈಕುಮಾರ್‌ರನ್ನು...

  • ಬೆಂಗಳೂರು: ಡೆಂಘೀ ಜ್ವರಕ್ಕೆ ತುತ್ತಾಗಿ ಪ್ಲೇಟ್‌ಲೆಟ್‌ಗಾಗಿ ಖಾಸಗಿ ರಕ್ತನಿಧಿಗಳಿಗೆ ಸಾವಿರಾರು ರೂ. ನೀಡಿ ಬಳಲಿರುವ ಬಡ ರೋಗಿಗಳ ನೆರವಿಗೆ ಧಾವಿಸಿರುವ ಬೃಹತ್‌...

  • ಬೆಂಗಳೂರು: ಜಿಲ್ಲಾಡಳಿತಕ್ಕೆ ಆದಾಯ ತಂದು ಕೊಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಂದಾಗಿದೆ. ಇದರ ಭಾಗವಾಗಿಯೇ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ...

  • ಬೆಂಗಳೂರು: ಬೈಸಿಕಲ್‌ಗ‌ಳು, ಬೈಕ್‌ಗಳು, ಅಷ್ಟೇ ಯಾಕೆ ಐಷಾರಾಮಿ ಕಾರುಗಳೂ ಬಾಡಿಗೆ ಸಿಗುವುದು ಸರ್ವೇಸಾಮಾನ್ಯ. ಆದರೆ, ಈಗ ದೇವರು ಅದರಲ್ಲೂ ಗಣೇಶ ಕೂಡ ಬಾಡಿಗೆಗೆ...

  • ಬೆಂಗಳೂರು: ರಾಜ್ಯ ಸರ್ಕಾರವು ಬಿಬಿಎಂಪಿಯ ಬಜೆಟ್‌ ತಡೆಹಿಡಿದಿರುವುದರ ಬಗ್ಗೆ ಸೋಮವಾರ ನಡೆದ ಕೌನ್ಸಿಲ್‌ ಸಭೆಯು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದದ...

ಹೊಸ ಸೇರ್ಪಡೆ