ಮಧ್ಯಸ್ಥಿಕೆ, ರಾಜಿ-ಸಂಧಾನ ಮೂಲಕ ವ್ಯಾಜ್ಯ ಇತ್ಯರ್ಥ

Team Udayavani, Sep 11, 2019, 3:09 AM IST

ಬೆಂಗಳೂರು: ಮಧ್ಯಸ್ಥಿಕೆ, ರಾಜಿ-ಸಂಧಾನ ವಿಧಾನಗಳ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಂಡ ವಾದಿ-ಪ್ರತಿವಾದಿಗಳಿಗೆ ಶೇ.100ರಷ್ಟು ಕೋರ್ಟ್‌ ಶುಲ್ಕ ಮರುಪಾವತಿ ಮಾಡುವ ವಿಚಾರದಲ್ಲಿ ಖುದ್ದು ಹೈಕೋರ್ಟ್‌ ವಕಲಾತ್ತು ವಹಿಸಿದ್ದು, ಈ ಕುರಿತು “ಕರ್ನಾಟಕ ನ್ಯಾಯಾಲಯ ಶುಲ್ಕ ಹಾಗೂ ದಾವೆಗಳ ಮೌಲ್ಯಮಾಪನ ಕಾಯ್ದೆ-1958ರ ಸೆಕ್ಷನ್‌ 66ರ ಉಪನಿಯಮ 1ನ್ನು ತಿದ್ದುಪಡಿಗೆ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿ ಮಹತ್ವದ ಆದೇಶ ನೀಡಿದೆ.

ಲೋಕ್‌ ಅದಾಲತ್‌ ಹೊರತಾಗಿ ವ್ಯಾಜ್ಯ ಇತ್ಯರ್ಥದ ಇತರ ಪರ್ಯಾಯ ವಿಧಾನಗಳಾದ ಮಧ್ಯಸ್ಥಿಕೆ, ರಾಜಿ-ಸಂಧಾನ ಮೂಲಕ ತಮ್ಮ ವ್ಯಾಜ್ಯಗಳನ್ನು ಇತ್ಯರ್ಥ ಅಥವಾ ರಾಜಿ ಮಾಡಿಕೊಂಡರೆ ಅಂತಹ ಪ್ರಕರಣಗಳ ಉಭಯ ಕಕ್ಷಿದಾರರಿಗೆ ಪೂರ್ಣ ಪ್ರಮಾಣದ (ಶೇ.100) ಶುಲ್ಕ ಮರುಪಾತಿ ಮಾಡುವ ಬಗ್ಗೆ ಸುಪ್ರೀಂಕೋರ್ಟ್‌ನ ಶಿಫಾರಸುಗಳನ್ನು ಪರಿಗಣಿಸಿ, ರಾಜ್ಯದ ಕಾಯ್ದೆಯಡಿ ಶುಲ್ಕ ಮರುಪಾವತಿಗೆ ಅವಕಾಶ ಮಾಡಿಕೊಡಬೇಕೆಂದು ಆದೇಶದಲ್ಲಿ ಹೇಳಿರುವ ಹೈಕೋರ್ಟ್‌, ಇದರಿಂದ ವ್ಯಾಜ್ಯ ಪರಿಹಾರಗಳ ಪರ್ಯಾಯ ವಿಧಾನಗಳಿಗೆ ಉತ್ತೇಜನ ಸಿಗಲಿದೆ ಎಂದು ಆಶಯ ವ್ಯಕ್ತಪಡಿಸಿದೆ.

“ಸಿವಿಲ್‌ ಪ್ರೊಸಿಜರ್‌ ಕೋಡ್‌ 1908’ರ ಸೆಕ್ಷನ್‌ 89 ರನ್ವಯ ವ್ಯಾಜ್ಯ ಇತ್ಯರ್ಥಕ್ಕೆ ಯಾವುದೇ ಪರ್ಯಾಯ ವಿಧಾನ ಅನುಸರಿಸಿದರೆ, ಅಂತಹ ಪ್ರಕರಣದ ಉಭಯ ಕಕ್ಷಿದಾರರಿಗೆ ಶೇ.100ರಷ್ಟು ಶುಲ್ಕ ಮರುಪಾವತಿ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಕೆ.ಎಸ್‌. ಪೆರಿಯಾಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾ. ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಇತ್ತೀಚಿಗೆ ಈ ಮಹತ್ವದ ಆದೇಶ ನೀಡಿದೆ.

ಲೋಕ್‌ ಅದಾಲತ್‌ ಮೂಲಕ ಇತ್ಯರ್ಥಗೊಳ್ಳುವ ವ್ಯಾಜ್ಯಗಳಿಗೆ “ರಾಷ್ಟ್ರೀಯ ಕಾನೂನು ಸೇವೆಗಳ ಕಾಯ್ದೆ-1987ರ ಸೆಕ್ಷನ್‌ 20 ಮತ್ತು 21, “ಕೇಂದ್ರ ನ್ಯಾಯಾಲಯ ಶುಲ್ಕ ಕಾಯ್ದೆ-1870ರ’ ಸೆಕ್ಷನ್‌ 16 ಅನ್ವಯ ಶೆ.100 ಶುಲ್ಕ ಮರುಪಾವತಿ ಆಗಲಿದೆ. ಹಾಗಾಗಿ, ಇಂತಹ ಪ್ರಕರಣಗಳಿದ್ದಲ್ಲಿ “ಕರ್ನಾಟಕ ನ್ಯಾಯಾಲಯ ಶುಲ್ಕ ಹಾಗೂ ವ್ಯಾಜ್ಯ ಮೌಲ್ಯಮಾಪನ ಕಾಯ್ದೆಯ ಸೆಕ್ಷನ್‌ 66ರ ಸಬ್‌ ಸೆಕ್ಷನ್‌1ರ ಹೊರತಾಗಿಯೂ ಶುಲ್ಕ ಮರುಪಾವತಿಗೆ ಅವಕಾಶ ಇರಲಿದೆ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ “ಇದೇ ರೀತಿಯಲ್ಲಿ ಶಾಸನ ರೂಪಿಸಿ ಅಥವಾ ತಿದ್ದುಪಡಿ ತನ್ನಿ’ ಎಂದು ಶಾಸಕಾಂಗಕ್ಕೆ ನಿರ್ದೇಶಿಸುವ ವ್ಯಾಪ್ತಿ ರಿಟ್‌ ನ್ಯಾಯಾಲಯಗಳಿಗೆ ಇಲ್ಲ ಎಂಬ ಸರ್ಕಾರದ ಪರ ವಕೀಲರ ವಾದವನ್ನು ಪರಿಗಣಿಸಿರುವ ಹೈಕೋರ್ಟ್‌, ಅರ್ಜಿದಾರರ ಮನವಿಯನ್ನು ಭಾಗಶ: ಮಾನ್ಯ ಮಾಡಿ, ರಾಜ್ಯ ಸರ್ಕಾರಕ್ಕೆ ಸಲಹೆ ರೂಪದಲ್ಲಿ ಆದೇಶ ಮಾಡಿದೆ. ಮಧ್ಯಸ್ಥಿಕೆ, ರಾಜಿ-ಸಂಧಾನ ವಿಧಾನಗಳ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಂಡರೆ ರಾಜ್ಯದ ಕೋರ್ಟ್‌ ಶುಲ್ಕ ಕಾಯ್ದೆ-1958ರ ಪ್ರಕಾರ ಶೇ.75ರಷ್ಟು ಶುಲ್ಕ ಮರುಪಾವತಿಗೆ ಅವಕಾಶವಿದೆ.

ಆದರೆ, ಹಲವು ರಾಜ್ಯಗಳಲ್ಲಿ ಇಂತಹ ಪ್ರಕರಣಗಳಲ್ಲಿ ಶೇ.100ರಷ್ಟು ಕೋರ್ಟ್‌ ಶುಲ್ಕ ಮರುಪಾವತಿಗೆ ಅವಕಾಶ ಮಾಡಿಕೊಡಲಾಗಿದೆ. ಸೇಲಂ ಬಾರ್‌ ಅಸೋಸಿಯೇಷನ್‌, ತಮಿಳುನಾಡು ವರ್ಸಸ್‌ ಯೂನಿಯನ್‌ ಆಫ್ ಇಂಡಿಯಾ ಪ್ರಕರಣದಲ್ಲಿ ಶೇ.100 ಶುಲ್ಕ ಮರುಪಾವತಿಗೆ ಪೂರಕವಾಗಿ ಸ್ಥಳೀಯ ಕೋರ್ಟ್‌ ಶುಲ್ಕ ಕಾಯ್ದೆಗಳಲ್ಲಿ ತಿದ್ದುಪಡಿ ತರುವಂತೆ ಸುಪ್ರೀಂಕೋರ್ಟ್‌ ಎಲ್ಲ ರಾಜ್ಯಗಳಿಗೆ ಶಿಫಾರಸು ಮಾಡಿದೆ. ಆದರೆ, ಕರ್ನಾಟಕದಲ್ಲಿ ಈವರೆಗೆ ತಿದ್ದುಪಡಿ ಆಗಿಲ್ಲ.

ಈ ಮಧ್ಯೆ ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಲಾಗಿದೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಕೋರ್ಟ್‌ ಶುಲ್ಕ ಕಾಯ್ದೆಗೂ ಉತ್ತಮ ರೀತಿಯಲ್ಲಿ ತಿದ್ದುಪಡಿಗಳನ್ನು ತರಲಾಗಿದೆ. ಆದರೆ, ಸುಪ್ರೀಂಕೋರ್ಟ್‌ನ ನಿರ್ದೇಶನಕ್ಕೆ ಅನುಗುಣವಾಗಿ ಶೇ.100 ಶುಲ್ಕ ಮರುಪಾವತಿ ವಿಚಾರದಲ್ಲಿ ಕರ್ನಾಟಕ ರಾಜ್ಯದಲ್ಲಿ ಈವರೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅರ್ಜಿದಾರರ ವಾದವನ್ನು ಹೈಕೋರ್ಟ್‌ ಪರಿಗಣಿಸಿದೆ.

ಏನಿದು ಶೇ.100 ಶುಲ್ಕ ಮರುಪಾವತಿ?: ವ್ಯಾಜ್ಯಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆ, ರಾಜಿ-ಸಂಧಾನ ಹಾಗೂ ಲೋಕ್‌ ಅದಾಲತ್‌ ಸೇರಿ ನಾಲ್ಕು ಪರ್ಯಾಯ ವ್ಯಾಜ್ಯ ಪರಿಹಾರ ವಿಧಾನಗಳಿವೆ. ಲೋಕ್‌ ಅದಾಲತ್‌ನಲ್ಲಿ ಇತ್ಯರ್ಥಗೊಳ್ಳುವ ವ್ಯಾಜ್ಯಗಳಿಗೆ “ಕೇಂದ್ರ ಕೋರ್ಟ್‌ ಶುಲ್ಕ ಕಾಯ್ದೆ’ ಅನ್ವಯವಾಗಲಿದ್ದು, ಶೇ.100 ಶುಲ್ಕ ಮರುಪಾವತಿಗೆ ಅವಕಾಶವಿದೆ. ಇದೇ ರೀತಿಯಲ್ಲಿ ಮಧ್ಯಸ್ಥಿಕೆ, ರಾಜಿ-ಸಂಧಾನ ವಿಧಾನಗಳ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಂಡರೆ ಶೇ.100 ಶುಲ್ಕ ಮರುಪಾವತಿಗೆ ಅವಕಾಶವಾಗುವಂತೆ ಆಯಾ ರಾಜ್ಯಗಳ ಕೋರ್ಟ್‌ ಶುಲ್ಕ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವಂತೆ ಸುಪ್ರೀಂಕೋರ್ಟ್‌ ಶಿಫಾರಸು ಮಾಡಿತ್ತು. ಇದನ್ನೇ ಆಧರಿಸಿ ವಕೀಲರೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

* ರಫೀಕ್‌ ಅಹ್ಮದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ