“ಸಿಕ್ಸ್‌ ಪ್ಯಾಕ್‌’ ಪಿಎಸ್‌ಐ ಹುರಿಮೀಸೆ ಖದರ್‌

ಏಳು ತಿಂಗಳ ಸತತ ವರ್ಕೌಟ್‌ ಪರಿಣಾಮ ಪಿಎಸ್‌ಐ ಅರ್ಜುನ್‌ ಅಂಗಸಾಧನೆ

Team Udayavani, Apr 24, 2019, 4:02 AM IST

ಬೆಂಗಳೂರು: ಹುರಿಗಟ್ಟಿದ ಮೈಕಟ್ಟು ..ಖಡಕ್‌ ಕಣ್‌ನೋಟ… ಹುರಿಮೀಸೆ.. ಖದರ್‌…. ಈ ಅಂಗಸೌಷ್ಠವ ಸಿನಿಮಾ ಹೀರೋ ಅಥವಾ ದೇಹದಾರ್ಡ್ಯ ಪಟು ಎಂದುಕೊಂಡರೆ.. ನಿಮ್ಮ ಊಹೆ ತಪ್ಪಾದೀತು? ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಹೊತ್ತಿರುವ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಅರ್ಜುನ್‌ ಸಿ.ಆರ್‌ ಸತತ ಏಳು ತಿಂಗಳಲ್ಲಿ ತಮ್ಮ ದೇಹವನ್ನು ಹುರಿಗೊಳಿಸಿರುವ ಬಗೆ ಇದು.

ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿರುವ ಅರ್ಜುನ್‌ ತಮ್ಮ ಕರ್ತವ್ಯ ನಿಭಾಯಿಸಿಕೊಂಡೇ ಸಿಕ್ಸ್‌ಪ್ಯಾಕ್‌ ರೂಪಿಸಿಕೊಂಡಿದ್ದಾರೆ. ಏಳು ತಿಂಗಳ ಸತತ ವರ್ಕೌಟ್‌ ಪರಿಣಾಮ ಮೈಕಟ್ಟು ಗಟ್ಟಿಗೊಂಡಿದೆ. ಪೊಲೀಸ್‌ ಅಧಿಕಾರಿಗೆ ಇರಬೇಕಾದ ಅಂಗಸೌಷ್ಟವ ರೂಪಿಸಿಕೊಂಡ ಅವರ ಶ್ರಮಕ್ಕೆ ಇಲಾಖೆಯಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

“ಸಿಕ್ಸ್‌ ಪ್ಯಾಕ್‌’ ಖದರ್‌ ಲುಕ್‌ ಬೇರೆ.. ಸಿನಿಮಾದಲ್ಲಿ ಹೀರೋ ಅವಕಾಶ ಬರಬಹುದು ಎಂಬ “ಉದಯವಾಣಿ’ಯ ಪ್ರಶ್ನೆಗೆ, ಸಣ್ಣ ನಗುವಿನೊಂದಿಗೆ ಮಾತು ಆರಂಭಿಸಿದ ಪಿಎಸ್‌ಐ ಅರ್ಜುನ್‌ “ನನಗೆ ಪೊಲೀಸ್‌ ಇಲಾಖೆಯ ಕರ್ತವ್ಯ ಮೊದಲು” ಎಂದು ಮಾತಿಗಿಳಿದರು.

ಮೊದಲಿನಿಂದಲೂ ಮನೆಯಲ್ಲಿಯೇ ದೇಹವನ್ನು ಹಗುರವಾಗಿಟ್ಟುಕೊಳ್ಳುವ ಕೆಲವೊಂದು ವರ್ಕೌಟ್‌ ಮಾಡುತ್ತಿದ್ದೆ. ಆದರೆ, 2014ರಲ್ಲಿ ಬಲಕಾಲಿಗೆ ಸಣ್ಣ ಆಪರೇಶನ್‌ ಆಗಿತ್ತು. ಈ ವೇಳೆ ವರ್ಕೌಟ್‌ ಕೆಲಕಾಲ ನಿಲ್ಲಿಸಿದ್ದೆ. ಕಳೆದ ಎಂಟು ತಿಂಗಳ ಹಿಂದೆ ಪುನಃ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಲು ಪ್ರಾರಂಭಿಸಿದೆ.

ಇಲಾಖೆಯ ಕೆಲಸದ ನಡುವೆಯೇ ವರ್ಕೌಟ್‌ ಮಾಡಬೇಕು ಎಂದು ನಿರ್ಧರಿಸಿದೆ. ಹೀಗಾಗಿ ವಸಂತ ವಲ್ಲಭ ನಗರದಲ್ಲಿರುವ ಈಗಲ್‌ ಫಿಟ್‌ನೆಸ್‌ ಜಿಮ್‌ಗೆ ಸೇರಿಕೊಂಡೆ. ಪ್ರತಿನಿತ್ಯ ಠಾಣೆ ಹಾಗೂ ಇಲಾಖೆಯ ಕಾರ್ಯ ನಿಭಾಯಿಸಿ ರಾತ್ರಿ 11 ಗಂಟೆಗೆ ಜಿಮ್‌ ಪ್ರವೇಶಿಸಿದರೆ ಸುಮಾರು ಎರಡು ಗಂಟೆ ವರ್ಕೌಟ್‌ ಮಾಡುತ್ತಿದ್ದೆ.

ಒಮ್ಮೊಮ್ಮೆ, ಇವತ್ತು ಸಾಕಾಗಿದೆ ಮನೆಗೆ ಬೇಗ ಹೋಗೋಣ ಎನಿಸುತ್ತಿತ್ತು. ಆದರೆ, ಜಿಮ್‌ಗೆ ಹೋಗಿ ವರ್ಕೌಟ್‌ಗೆ ಅಣಿಯಾಗುತ್ತಿದ್ದಂತೆ ಆಯಾಸ ಹೋಗಿ ಉತ್ಸಾಹ ಹೆಚ್ಚುತ್ತಿತ್ತು. ಪರಿಣಾಮ ಏಳು ತಿಂಗಳಲ್ಲಿ 89 ಕೆ.ಜಿ ತೂಕದಲ್ಲಿ ಇಪ್ಪತ್ತು ಕೆ.ಜಿ. ಇಳಿದಿದೆ. ಸಿಕ್ಸ್‌ ಪ್ಯಾಕ್‌ ಕೂಡ ಬಂದಿದೆ ಎಂದರು.

7 ತಿಂಗಳು ಅನ್ನ ತಿಂದಿಲ್ಲ!: ವರ್ಕೌಟ್‌ ಜತೆಗೆ ಆಹಾರದಲ್ಲಿ ನಿಯಮಿತ ಪಥ್ಯ ಅಗತ್ಯ. ಇದರ ಮೊದಲ ಹಂತವಾಗಿ ಅನ್ನ ಊಟ ನಿಲ್ಲಿಸಿದೆ. ಕರಿದ ಪದಾರ್ಥಗಳು ನಿಷಿದ್ಧವಾದವು .ಬಳಿಕ ಕೋಚ್‌ ಸೂಚನೆಯಂತೆ ಪ್ರೋಟಿನ್‌, ಕಾಬ್ರೋಹೈಡ್ರೇಟ್‌ ಹಣ್ಣು ಹಂಪಲು, ತರಕಾರಿ, ದಿನಕ್ಕೆ 12 ಮೊಟ್ಟೆ ನಿಗದಿಯಂತೆ ಮೂರು ಹೊತ್ತಿಗೆ ತಿನ್ನುತ್ತಿದ್ದೆ. ಮೂರು ತಿಂಗಳಿನಿಂದ ಪ್ರತಿದಿನ ಮಸಾಲೆಯಿಲ್ಲದ ಬೇಯಿಸಿದ ಮೀನು ಹಾಗೂ ಚಿಕನ್‌ ಸೇರಿ ಮೂರು ಹೊತ್ತಿಗೆ ಒಂದು ಕೆ.ಜಿ ಸೇವಿಸುತ್ತಿದ್ದೆ ಎಂದು ಆಹಾರ ನಿಯಮ ವಿವರಿಸಿದರು.

ಹಿರಿಯ ಅಧಿಕಾರಿಗಳ ಪ್ರೋತ್ಸಾಹ!: ವರ್ಕೌಟ್‌ ವಿಚಾರದಲ್ಲಿ ಹಿರಿಯ ಅಧಿಕಾರಿಗಳ ಸಹಕಾರವೂ ಇದೆ. ಡಿಸಿಪಿ ಅಣ್ಣಾಮಲೈ ಹಾಗೂ ಹಿರಿಯ ಅಧಿಕಾರಿಗಳು ಬೆನ್ನುತಟ್ಟಿ ಹುರಿದುಂಬಿಸಿದರು. ಜತೆಗೆ, ಜಿಮ್‌ ಮಾಲೀಕ ಹಾಗೂ ಕೋಚ್‌ ವಿಶ್ವಾಸ್‌ ಕೂಡ ರಾತ್ರಿ 11 ಗಂಟೆಯ ಬಳಿ ವರ್ಕೌಟ್‌ ಮಾಡಲು ಅವಕಾಶ ನೀಡಿ ಸಲಹೆ ಸೂಚನೆ ನೀಡಿದರು. ಜತೆಗೆ, ಪತ್ನಿ ಸೌಮ್ಯಾ ಸಹಕಾರವನ್ನೂ ನೆನೆಯಲೇಬೇಕು ಎಂದು ಸಬ್‌ ಇನ್ಸ್‌ಪೆಕ್ಟರ್‌ ಅರ್ಜುನ್‌ ತಿಳಿಸಿದರು.

“ಇಲಾಖೆಯ ಕಾರ್ಯವನ್ನು ನಿಭಾಯಿಸುತ್ತಲೇ ಪಿಎಸ್‌ಐ ಅರ್ಜುನ್‌ ಅವರ ಖಾಸಗಿ ಸಮಯದಲ್ಲಿ ವರ್ಕೌಟ್‌ ಮಾಡಿ ದೇಹದಾರ್ಡ್ಯತೆ ಉತ್ತಮಗೊಳಿಸಿಕೊಂಡಿರೋದು ಸಂತಸದ ವಿಚಾರವಾಗಿದೆ. ಇಲಾಖೆಯ ಸಿಬ್ಬಂದಿ ಉತ್ತಮ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಬದ್ಧತೆ ರೂಪಿಸಿಕೊಳ್ಳಬೇಕು.ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕಾಂಪ್ರಮೈಸ್‌ ಆಗಬಾರದು”.
-ಅಣ್ಣಾಮಲೈ, ಡಿಸಿಪಿ, ದಕ್ಷಿಣ ವಿಭಾಗ


ಈ ವಿಭಾಗದಿಂದ ಇನ್ನಷ್ಟು

  • ದೊಡ್ಡಬಳ್ಳಾಪುರ: ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನೀಡದಿರುವ ಪರಿಣಾಮ ಇಂದು ಉದ್ಯೋಗಗಳು ಅನ್ಯ ರಾಜ್ಯದವರ ಪಾಲಾಗುತ್ತಿದೆ. ಸಂವಿಧಾನದಲ್ಲಿ...

  • ಯಲಹಂಕ: ವಹ್ನಿಕುಲ ಕ್ಷತ್ರಿಯರ ಆರಾಧ್ಯ ದೈವ, ಇತಿಹಾಸ ಪ್ರಸಿದ್ಧ ಶ್ರೀ ಮಹೇಶ್ವರಮ್ಮ ದೇವಿಯ ಕರಗ ಮಹೋತ್ಸವ ಬುಧವಾರ (ಮೇ 22) ರಾತ್ರಿ ನೆರವೇರಲಿದೆ. ದೇವಿಯ ಹಸಿ...

  • ಬೆಂಗಳೂರು: ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ಬಿಬಿಎಂಪಿ, ಜಿಲ್ಲಾಡಳಿತ ಹಾಗೂ ನಗರ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು,...

  • ಬೆಂಗಳೂರು: ಕನ್ನಡ ಸಾಹಿತ್ಯವನ್ನು ಸೀಮಿತ ಚರಿತ್ರೆಯ ಚೌಕಟ್ಟಿನೊಳಗಿಟ್ಟು ನೋಡುವುದು ಸರಿಯಲ್ಲ ಎಂದು ಹಿರಿಯ ವಿಮರ್ಶಕ ಡಾ.ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ಕನ್ನಡ...

  • ಬೆಂಗಳೂರು: ಸಮಾಜದಲ್ಲಿ ಶಾಂತಿ, ಸಮಾನತೆ, ಜ್ಯಾತ್ಯತೀತತೆ ಬಯಸದ ಬಿಜೆಪಿ ನಾಯಕರಿಗೆ ಗೋಡ್ಸೆ ಚಿಂತನೆಗಳು ಮಾದರಿಯಾಗಿವೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌.ದೊರೆಸ್ವಾಮಿ...

ಹೊಸ ಸೇರ್ಪಡೆ