ಶಾಲೆಗಳಲ್ಲಿ ಸಾಮಾಜಿಕ ಜಾಲತಾಣಗಳ ನಿಷೇಧ?

Team Udayavani, Jan 7, 2018, 6:20 AM IST

ಬೆಂಗಳೂರು : ಶಾಲೆಗಳ ಕಂಪ್ಯೂಟರ್‌ ಲ್ಯಾಬ್‌ನಲ್ಲಿ ಸಾಮಾಜಿಕ ಜಾಲತಾಣದ ಸೈಟ್‌ಗಳನ್ನು ಬ್ಲಾಕ್‌ ಮಾಡಬೇಕು. ವಿದ್ಯಾರ್ಥಿಗಳು ತಂತ್ರಜ್ಞಾನದ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪಾಲಕ, ಪೋಷಕರಿಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಕಂಪ್ಯೂಟರ್‌ ಬಳಕೆ ಮಾಡುವಾಗ ಶಿಕ್ಷಕರು, ಶಾಲಾ ಮುಖ್ಯಸ್ಥರು ನಿಗಾವಹಿಸಬೇಕು.

ಇದು, ರಾಜ್ಯ ಸರ್ಕಾರ ಪ್ರಕಟಿಸಿರುವ ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ(ವರ್ಗೀಕರಣ, ನೋಂದಣಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾನ್ಯತೆ, ನಿಯಂತ್ರಣ, ಪಠ್ಯವಸ್ತು ನಿಗದಿಪಡಿಸುವಿಕೆ) ತಿದ್ದುಪಡಿ ನಿಯಮಗಳ 2017 ಕರಡು ಪ್ರತಿಯಲ್ಲಿ ಉಲ್ಲೇಖೀಸಿರುವ ಪ್ರಮುಖ ಅಂಶಗಳು.

ರಾಜ್ಯದ ಎಲ್ಲ ಶಾಲೆಗಳ ಕಂಪ್ಯೂಟರ್‌ನಲ್ಲಿ ಸಾಮಾಜಿಕ ಜಾಲತಾಣ ಮತ್ತು ಅಶ್ಲೀಲ ವೆಬ್‌ಸೈಟ್‌ ತಾಣಗಳನ್ನು ಬ್ಲಾಕ್‌ ಮಾಡುವಂತೆ ಕರಡು ಪ್ರತಿಯಲ್ಲಿ ತಿಳಿಸಿದೆ. ವಿದ್ಯಾರ್ಥಿಗಳು ಕಂಪ್ಯೂಟರ್‌ ಬಳಕೆ ಮಾಡುವಾಗ ನಿಗಾವಹಿಸಬೇಕು. ಪೋಕೊÕ ಕಾಯ್ದೆ ಕುರಿತು ಶಾಲಾ ಮಕ್ಕಳಲ್ಲಿ ಮತ್ತು ಪಾಲಕ, ಪೋಷಕರಲ್ಲಿ ಆಗಾಗ ಅರಿವು ಮೂಡಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳಗಳ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸೈಬರ್‌ ಭದ್ರತೆಗೆ ಹೆಚ್ಚಿನ ಮಹತ್ವ ನೀಡುವಂತೆ ಕರಡು ಪ್ರತಿಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಸುರಕ್ಷತೆ ಮತ್ತು ಅಸುರಕ್ಷತೆ ಕುರಿತು ಸಮಗ್ರ ಮಾಹಿತಿ ನೀಡಬೇಕು. ಮಕ್ಕಳ ವರ್ತನೆಯ ಮೇಲೆ ನಿರಂತರ ನಿಗಾವಹಿಸಬೇಕು. ಹೊಸ ಶಾಲೆ ಆರಂಭಿಸಲು ನಗರ ಪ್ರದೇಶದಲ್ಲಿ ಮಾನ್ಯತೆ ನಿಗದಿ ಪಡಿಸಿದ್ದ ಭೂಮಿ ಅಳತೆಯ ಮಿತಿ ಕಡಿಮೆಗೊಳಿಸಿದೆ. ನೋಂದಣಿ ಶುಲ್ಕ, ಮಾನ್ಯತೆ ನವೀಕರಣ, ಸಾರಿಗೆ ನಿಯಮ ಪಾಲಿಸುವುದರ ಕುರಿತು ತಿದ್ದುಪಡಿ ಮಾಡಲಾಗಿದೆ.

ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೊಸ ಖಾಸಗಿ ಶಾಲೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಮೂಲಸೌಕರ್ಯ, ಶುಲ್ಕ, ಪರವಾನಿಗೆ ಸೇರಿ ಶಾಲೆಗಳು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮ ರೂಪಿಸಿದೆ. 1995 ನಿಯಮಗಳಿಗೆ ತಿದ್ದುಪಡಿತಂದಿದ್ದು, ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ.

ನೋಂದಣಿ ನಿಯಮ:
ಪೂರ್ವ ಪ್ರಾಥಮಿಕಕ್ಕೆ ಬಿಬಿಎಂಪಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ 2 ಸಾವಿರ ಚದರ ಅಡಿ, ಇತರೆ ಪ್ರದೇಶದಲ್ಲಿ 4 ಸಾವಿರ ಚದರ ಅಡಿ ಭೂಮಿ ಇರಬೇಕು. ಪ್ರಾಥಮಿಕ ಬಿಬಿಎಂಪಿ, ನಗರಸಭೆ ವ್ಯಾಪ್ತಿಯಲ್ಲಿ 1500 ಚದರ ಅಡಿ, ಇತರೆ ಪ್ರದೇಶದಲ್ಲಿ 3 ಸಾವಿರ ಚದರ ಅಡಿ ಭೂಮಿ ಇರಬೇಕು. ಪ್ರೌಢಶಾಲೆ ಬಿಬಿಎಂಪಿ, ನಗರಸಭೆ ವ್ಯಾಪ್ತಿಯಲ್ಲಿ 1 ಸಾವಿರ ಚದರ ಅಡಿ, ಇತರೆ ಪ್ರದೇಶದಲ್ಲಿ 2 ಸಾವಿರ ಚದರ ಅಡಿ ಭೂಮಿ ಇರಬೇಕು. ನೋಂದಣಿ ಶುಲ್ಕ ಮತ್ತು ಪ್ರಕ್ರಿಯೆ ಶುಲ್ಕ ಕ್ರಮವಾಗಿ 25 ಮತ್ತು 10 ಸಾವಿರದಿಂದ ಪ್ರಾರಂಭವಾಗಿ ತರಗತಿಗಳ ಆಧಾರದ ಮೆಲೆ 1 ಲಕ್ಷ ಹಾಗೂ 20 ಸಾವಿರ ರೂ.ನಿಗದಿ ಪಡಿಸಿದೆ.

ಶೌಚಾಲಯ ತಾರತಮ್ಯ!
ಶಾಲೆಗಳ ಮೂಲಸೌಕರ್ಯದಡಿ ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಇರಬೇಕು ಎಂಬ ಅಂಶ ಇದೆ. ಬಾಲಕರ ಶೌಚಾಲಯ ಕಡ್ಡಾಯ ಎಂದು ನಮೂದಿಸಿ ಬಾಲಕಿಯರ ಶೌಚಾಲಯ ಅಗತ್ಯಕ್ಕೆ ಅನುಸಾರವಾಗಿ ನಿರ್ಮಿಸಿ ಎಂದಿದ್ದಾರೆ. ವಿದ್ಯಾರ್ಥಿಗಳಿಗೆ ಶೌಚಾಲಯ ಮತ್ತು ಕುಡಿಯುವ ನೀರು ಕಡ್ಡಾಯ, ಅದರಲ್ಲಿ ತಾರತಮ್ಯ ಸರಿಯಲ್ಲ. ಇದು ಹಾಸ್ಯಾಸ್ಪದ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಟೀಕಿಸಿವೆ.

ಶಾಲೆಗಳಿಗೆ ಪ್ರತ್ಯೇಕವಾಗಿ ಮಾನ್ಯತೆ ಪಡೆಯುವ ಪದ್ಧತಿ ರದ್ದು ಮಾಡಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗಿದೆ. ಪೂರ್ವ ಪ್ರಾಥಮಿಕ ಶಾಲೆ ತೆರೆಯಲು ನಿಗದಿ ಪಡಿಸಿದ್ದ ಮಾನದಂಡ ಅವೈಜ್ಞಾನಿಕವಾಗಿದೆ. ಶಾಲೆಗಳಲ್ಲಿ ಶೌಚಾಲಯ ಕಡ್ಡಾಯವಾಗಿರಲೇ ಬೇಕು. ಜ.13ರಂದು ನಡೆಯುವ ರಾಜ್ಯ ಮಟ್ಟದ ಸಮಾವೇಶದಲ್ಲಿ ಈ ಕುರಿತು ಚರ್ಚಿಸಲಿದ್ದೇವೆ.
– ಡಿ.ಶಶಿಕುಮಾರ್‌,  ಪ್ರಧಾನ ಕಾರ್ಯದರ್ಶಿ ಕ್ಯಾಮ್ಸ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ