ಅಹಿಂದ ಕಲ್ಯಾಣಕ್ಕೆ ಭರಪೂರ ನೆರವು

Team Udayavani, Mar 16, 2017, 3:30 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಮಂತ್ರ ಈ ಬಜೆಟ್‌ನಲ್ಲಿಯೂ ಎದ್ದು ಕಾಣುತ್ತಿದ್ದು, ಅಹಿಂದ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ, ಸ್ವದ್ಯೋಗ ಕೈಗೊಳ್ಳಲು ಪ್ರೋತ್ಸಾಹ ಧನ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಜೊತೆಗೆ ಪ್ರೋತ್ಸಾಹಧನ ಹಾಗೂ ಎಸ್ಸಿ ಎಸ್ಟಿ ಸಮುದಾಯದ 2 ಲಕ್ಷ ಬಿಪಿಎಲ್‌ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದು ಸೇರಿದಂತೆ ಅಹಿಂದ ವರ್ಗದ ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಲಕ್ಷ ಪರಿಶಿಷ್ಟ ಜಾತಿ ನಿರುದ್ಯೋಗಿಗಳಿಗೆ ತರಬೇತಿ: 2017-18ನೇ ಸಾಲಿನಲ್ಲಿ ಪ್ರಮುಖವಾಗಿ ಪ್ರತಿ ಜಿಲ್ಲೆಗೊಂದರಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸಿ, ಪಿಯುಸಿವರೆಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ. ಒಂದು ಲಕ್ಷ ಎಸ್ಸಿ ಎಸ್ಟಿ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವುದು. ಎಸ್ಸಿ ಎಸ್ಟಿ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಬುಕ್‌ ಬ್ಯಾಂಕ್‌ ಸ್ಥಾಪನೆ. ಭೂ ರಹಿತ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು 10 ಲಕ್ಷದಿಂದ 15 ಲಕ್ಷ ರೂಪಾಯಿಗೆ ನೆರವು ಹೆಚ್ಚಿಸುವುದು. ಸ್ವಉದ್ಯೋಗ ಕೈಗೊಳ್ಳಲು ಶೇ.50ರ ಸಬ್ಸಿಡಿ ದರದಲ್ಲಿ 2000 ಯುವಕರಿಗೆ 5 ಲಕ್ಷದವರೆಗೆ ಸಹಾಯಧನ ನೀಡುವುದು. 5 ಸಾವಿರ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಶೇ.50ರಷ್ಟು ಸಹಾಯಧನ ನೀಡುವ ಯೋಜನೆಯಡಿ 3 ಲಕ್ಷ ರೂ.ವರೆಗೆ ನೆರವು ನೀಡಲು ನಿರ್ಧರಿಸಲಾಗಿದೆ.

ಆದಿವಾಸಿಗಳ ಸಮುದಾಯ ಭವನಕ್ಕೆ15 ಕೋಟಿ ರೂ.: ಕಾನೂನು ಪದವೀಧರರ ಮಾಸಿಕ ಭತ್ಯೆಯನ್ನು 2 ಸಾವಿರ ರೂ.ನಿಂದ 5 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಆದಿವಾಸಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಮುದಾಯಭವನ ನಿರ್ಮಾಣಕ್ಕೆ 15 ಕೋಟಿ ರೂ. ಮೀಸಲಿಡಲಾಗಿದೆ. ಬಿಪಿಎಲ್‌ ಕುಟುಂಬಗಳ ಗೃಹ ನಿರ್ಮಾಣಕ್ಕೆ ನಿಗದಿಪಡಿಸಿದ ಮೊತ್ತವನ್ನು ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷದಿಂದ 1.75 ಲಕ್ಷ ರೂ. ಹಾಗೂ ನಗರ ಪ್ರದೇಶದಲ್ಲಿ 1.8 ಲಕ್ಷದಿಂದ 2 ಲಕ್ಷ ರೂ.ಗಳಿಗೆ ಏರಿಸಲಾಗಿದೆ.

ವಿಧವೆಯರ ಪುನರ್ವಿವಾಹಕ್ಕೆ 3 ಲಕ್ಷ ರೂ.: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ವಿಧವೆಯರು ಮರುಮದುವೆಯಾದರೆ 3 ಲಕ್ಷ ರೂ. ಪ್ರೋತ್ಸಾಹ ಧನ, ಅಂತರ್ಜಾತಿ ವಿವಾಹವಾದರೆ, 2 ಲಕ್ಷ ರೂ. ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಲಾಗಿದೆ. ಜತೆಗೆ ಆ ವರ್ಗದ ಉದ್ಯಮಿಗಳಿಗೆ ಸಾಲಕ್ಕೆ ಖಾತರಿ ನೀಡಲು 100 ಕೋಟಿ ರೂ. ಮೂಲ ನಿಧಿ ಸ್ಥಾಪನೆ ಸೇರಿದಂತೆ 2017-18 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 6,363 ಕೋಟಿ ರೂ. ಮೀಸಲಿಡಲಾಗಿದೆ. 

ಹಿಂದುಳಿದ ಜಾತಿ ವಿದ್ಯಾರ್ಥಿಗಳಿಗೆ 2 ಲಕ್ಷ ರೂ.: ‘ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಹಾಸ್ಟೆಲ್‌ಗ‌ಳಲ್ಲಿ ಡಿಜಿಟಲ್‌ ಗ್ರಂಥಾಲಯ, ಐಐಎಂ, ಐಐಟಿ ಹಾಗೂ ಐಐಎಸ್‌ಸಿಯಂತಹ  ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಒಂದು ಬಾರಿ 2 ಲಕ್ಷ ರೂ. ಸಹಾಯಧನ ನೀಡಲು  ಸರ್ಕಾರ ತೀರ್ಮಾನಿಸಿದೆ. ವಿದೇಶದಲ್ಲಿ ವ್ಯಾಸಂಗ ಮಾಡುವ 100 ವಿದ್ಯಾರ್ಥಿಗಳಿಗೆ ವ್ಯಾಸಂಗ ವೇತನ ಮಂಜೂರು ಮಾಡಲು ಘೋಷಿಸಲಾಗಿದೆ. ಈ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 3,154 ಕೋಟಿ ರೂ. ಮೀಸಲಿಡಲಾಗಿದೆ.

– ಭೂರಹಿತ ಕೃಷಿಕಾರ್ಮಿಕರಿಗೆ  ಜಮೀನು ಖರೀದಿಗೆ 10 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ನೆರವು ಹೆಚ್ಚಳ

– ಆದಿವಾಸಿಗಳ ಸಮುದಾಯ ಭವನಕ್ಕೆ 15 ಕೋಟಿ ರೂ. ನೆರವು, ವಿಧವೆಯರ ಪುನರ್ವಿವಾಹಕ್ಕೂ ಪ್ರೋತ್ಸಾಹ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ