ಬಿಜೆಪಿ ಸರ್ಕಾರದ ಗೊಂದಲಕ್ಕೆ “ಜಾತಿ’ ಬಣ್ಣ

Team Udayavani, Oct 17, 2019, 3:08 AM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದ ಕಾರ್ಯ ಚಟುವಟಿಕೆ ಹಾಗೂ ಪಕ್ಷದ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಇದೀಗ “ಜಾತಿ’ ಬಣ್ಣ ಲೇಪಿತವಾಗುತ್ತಿದೆ. ರಾಜ್ಯದಲ್ಲಿನ ಕೆಲ ಬೆಳವಣಿಗೆ ಆಧರಿಸಿ ಆಡಳಿತಾರೂಢ ಬಿಜೆಪಿ ಒಕ್ಕಲಿಗ ವಿರೋಧಿ ಎಂಬಂತೆ ಕೆಲ ಸಂಘಟನೆಗಳೊಂದಿಗೆ ಕಾಂಗ್ರೆಸ್‌, ಜೆಡಿಎಸ್‌ ಕೂಡ ಆರೋಪಿಸುತ್ತಿವೆ. ಇನ್ನೊಂದೆಡೆ, ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಸ್ವಪಕ್ಷೀಯ ಶಾಸಕರೇ ದೂರಿದ್ದಾರೆ.

ಅದರ ಬೆನ್ನಲ್ಲೇ ಬಿಜೆಪಿ ರಾಜ್ಯ ಕಾರ್ಯಾಲಯದ ಕೆಲ ಸಿಬ್ಬಂದಿ ಬದಲಾವಣೆಗೆ “ಜಾತಿ’ ಕಾರಣ ನೀಡಲಾಗುತ್ತಿದೆ. ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದು, ಸದ್ಯ ಎರಡೂವರೆ ತಿಂಗಳ ಅಧಿಕಾರ ಪೂರ್ಣಗೊಳಿಸಿದ್ದಾರೆ. ಈ ಅವಧಿಯಲ್ಲಿ ಅವರ ನಡೆ, ನುಡಿ, ಕಾರ್ಯ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಯಾಗಿರುವುದನ್ನು ಆಪ್ತರೂ ಒಪ್ಪುತ್ತಾರೆ. ಇನ್ನೊಂದೆಡೆ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ನೇಮಕಗೊಂಡ ಬಳಿಕ ಪಕ್ಷ ಹಾಗೂ ಸರ್ಕಾರದ ಕಾರ್ಯ ಚಟುವಟಿಕೆಗಳಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ.

ಇದೀಗ ಅದು “ಜಾತಿ’ ಬಣ್ಣದ ರೂಪ ಪಡೆಯುತ್ತಿರುವುದು ಹೊಸ ಬೆಳವಣಿಗೆ. ಒಂದೆಡೆ, ಡಿ.ಕೆ.ಶಿವಕುಮಾರ್‌ ಬಂಧನ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕೇಳಿ ಬಂದ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು. ಬಿಬಿಎಂಪಿ ಮೇಯರ್‌ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡದಿರುವುದು ಸೇರಿದಂತೆ ಇತರ ಕೆಲ ವಿಚಾರಗಳನ್ನಿಟ್ಟುಕೊಂಡು ಬಿಜೆಪಿ, ಒಕ್ಕಲಿಗ ವಿರೋಧಿ ಎಂದು ಆರೋಪಿಸಲಾಗುತ್ತಿದೆ.

ಇದನ್ನು ರಾಜ್ಯ ಬಿಜೆಪಿ ನಾಯಕರು ಅಲ್ಲಗಳೆಯುತ್ತಿದ್ದರೂ ಎಲ್ಲೊ ಒಂದು ಕಡೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವುದೇ ಎಂಬ ಆತಂಕ ನಾಯಕರಲ್ಲಿದೆ. ಈ ನಡುವೆ, ಬಿಜೆಪಿಯಲ್ಲೇ ಯಡಿಯೂರಪ್ಪ ಅವರ ಜತೆಗೆ ಲಿಂಗಾಯಿತರನ್ನು ಕಡೆಗಣಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿವೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಹಿರಂಗವಾಗಿಯೇ ಆರೋಪ ಮಾಡುತ್ತಿರುವುದು ಪಕ್ಷದಲ್ಲಿ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಗೆ ನಾಂದಿ ಹಾಡಿದಂತಿದೆ.

ಯಡಿಯೂರಪ್ಪ ಕಡೆಗಣನೆ ಆರೋಪ- ಅಸಮಾಧಾನ: ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಬಳಿಕ ಸಂಪುಟ ವಿಸ್ತರಣೆ ವಿಳಂಬ, ನೆರೆ ಪ್ರದೇಶದಲ್ಲಿ ಏಕಾಂಗಿ ಪ್ರವಾಸ, ಪ್ರಧಾನಿ ಭೇಟಿಗೆ ಅವಕಾಶ ಸಿಗದಿದ್ದಾಗ ಯಡಿಯೂರಪ್ಪ ಅವರನ್ನು ಕಡೆಗಣಿಸುವ ಮೂಲಕ ವೀರಶೈವ- ಲಿಂಗಾಯಿತರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ, ಅಖೀಲ ಭಾರತ ವೀರಶೈವ ಮಹಾಸಭಾದ ಯುವ ಘಟಕ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿತ್ತು.

ಬಳಿಕ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ, “ನಾನು ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಿದ್ದರೂ ಅನಗತ್ಯವಾಗಿ ಆರೋಪ ಮಾಡಲಾಗುತ್ತಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿದ್ದರು. ಅದರಲ್ಲಿ ಪ್ರತಿಪಕ್ಷಗಳಿಗಿಂತ ಸ್ವಪಕ್ಷೀಯರ ಬಗ್ಗೆಯೇ ಹೆಚ್ಚು ಅಸಮಾಧಾನ ಹೊರಹಾಕಿದಂತೆ ಕಂಡಿತ್ತು. ನಂತರ, ರಾಜ್ಯ ಬಿಜೆಪಿ ಮಾಜಿ ಉಪಾಧ್ಯಕ್ಷ ಭೀಮಾಶಂಕರ್‌ ಪಾಟೀಲ್‌, ಯಡಿಯೂರಪ್ಪ ಅವರನ್ನು ಕಡೆಗಣಿಸಿ ಅವರ ವಿರೋಧಿಗಳನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.

ಸಂಚಲನ ಮೂಡಿಸಿದ ಯತ್ನಾಳ್‌ ಹೇಳಿಕೆ: ನೆರೆ ಪರಿಹಾರ ವಿತರಿಸದೆ ಯಡಿಯೂರಪ್ಪ ಅವರನ್ನು ಟಾರ್ಗೆಟ್‌ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಯತ್ನಾಳ್‌ ಆರೋಪಿಸುವ ಮೂಲಕ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಸಂಬಂಧ ಹೈಕಮಾಂಡ್‌ ನೀಡಿದ ನೋಟಿಸ್‌ಗೆ ಉತ್ತರಿಸದ ಯತ್ನಾಳ್‌, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ರಾಜ್ಯದ ಇಬ್ಬರು ಕೇಂದ್ರ ಸಚಿವರು ಪ್ರಯತ್ನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬದಲಾವಣೆಗೆ ಜಾತಿ ಬಣ್ಣ: ರಾಜ್ಯ ಬಿಜೆಪಿ ನೂತನ ಅಧ್ಯಕ್ಷರ ನೇಮಕದ ಬಳಿಕ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲೂ ಕೆಲ ಬದಲಾವಣೆಯಾಗಿದೆ. ಕಾರ್ಯಾಲಯದ ಕಾರ್ಯದರ್ಶಿ ಸೇರಿದಂತೆ ಈವರೆಗೆ 9 ಮಂದಿಯ ಬದಲಾವಣೆಯಾಗಿದೆ. ಇವರಲ್ಲಿ ಹೆಚ್ಚಿನವರು ಲಿಂಗಾಯಿತ ಸಮುದಾಯದವರು ಎಂಬುದು ಹಲವರ ಆರೋಪ. ಆ ಮೂಲಕ ಯಡಿಯೂರಪ್ಪ ಅವರ ಕಡೆಗಣನೆ ಆರೋಪ ಕ್ರಮೇಣ ಸಮುದಾಯದ ಕಡೆಗಣನೆ ಎಂಬ ರೂಪ ಪಡೆಯುತ್ತಿರುವುದು ಪಕ್ಷದ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ.

ಇನ್ನು, ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಎಂಟು ಮಂದಿ ಸಚಿವರು ಲಿಂಗಾಯಿತ ಸಮುದಾಯದವರೇ ಆಗಿದ್ದಾರೆ. ಆ ಮೂಲಕ ಪ್ರಮುಖ ಮತಬ್ಯಾಂಕ್‌ ಎನಿಸಿರುವ ಸಮುದಾಯಕ್ಕೆ ಬಿಜೆಪಿ ಆದ್ಯತೆ ನೀಡಿದಂತಿದೆ. ಇದೀಗ ಆ ಸಮುದಾಯವನ್ನೇ ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಪಕ್ಷದಲ್ಲೇ ಕೇಳಿ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಮಠಾಧೀಶರ ಧ್ವನಿ: ಇನ್ನೊಂದೆಡೆ, ಯಡಿಯೂರಪ್ಪ ಅವರ ಪರವಾಗಿ ಮಠಾಧೀಶರು ಸಹ ಧ್ವನಿ ಎತ್ತಲಾರಂಭಿಸಿದ್ದಾರೆ. ಕಲಬುರಗಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವೀರಶೈವ- ಲಿಂಗಾಯತ ಸಮುದಾಯದ ಮಠಾಧೀಶರು, ಯಡಿಯೂರಪ್ಪ ಅವರನ್ನು ಕೆಣಕಿದರೆ ಬೀದಿಗಿಳಿಯುವುದಾಗಿ ಎಚ್ಚರಿಕೆ ನೀಡಿದ್ದರು. ಇನ್ನು, ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತುಪಾಲನಾ ಸಮಿತಿ ನೋಟಿಸ್‌ ಜಾರಿ ಮಾಡಿದಾಗ ಅವರು ರಾಜ್ಯದ ಜನರ ಪರವಾಗಿ ಹೇಳಿಕೆ ನೀಡಿದ್ದು, ಪಂಚಪೀಠದ ಸ್ವಾಮೀಜಿಗಳ ಬೆಂಬಲವೂ ಇದೆ. ಹಾಗಾಗಿ, ನೋಟಿಸ್‌ನ್ನು ವಾಪಸ್‌ ಪಡೆಯಬೇಕು ಎಂದು ಕೋರಿ ಶ್ರೀಶೈಲ ಮಠದ ಸ್ವಾಮೀಜಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು.

ಗೊಂದಲ ನಿವಾರಣೆಯಾಗಲಿದೆ: ರಾಜ್ಯ ಬಿಜೆಪಿಯಲ್ಲಾಗಲಿ, ಸರ್ಕಾರದಲ್ಲಾಗಲಿ ಯಾವುದೇ ಸಮಸ್ಯೆ ಇಲ್ಲ. ಯತ್ನಾಳ್‌ ಅವರೊಂದಿಗೆ ಪಕ್ಷದ ಹಿರಿಯ ನಾಯಕರು, ಮುಖ್ಯಮಂತ್ರಿಗಳು ಚರ್ಚಿಸಿ ಗೊಂದಲ ನಿವಾರಿಸುವ ನಿರೀಕ್ಷೆ ಇದೆ. ಯಾವುದೇ ಸಮುದಾಯದ ಕಡೆಗಣನೆಯ ಪ್ರಶ್ನೆಯೇ ಇಲ್ಲ. ಕಾರ್ಯಾಲಯ ಸಿಬ್ಬಂದಿ ಬದಲಾವಣೆ ಪಕ್ಷದ ಆಂತರಿಕ ವಿಚಾರ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

* ಎಂ. ಕೀರ್ತಿಪ್ರಸಾದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಸಂಚಾರ ದಟ್ಟಣೆ ನಿರ್ವಹಣೆಯೇ ದೊಡ್ಡ ಸವಾಲಾಗಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ನಾನಾ ಪ್ರಯೋಗಗಳು ನಡೆಯುತ್ತಿವೆ. ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ...

  • ಬೆಂಗಳೂರು: ಉಪ ಚುನಾವಣೆ ಬಳಿಕ "ಇಂದಿರಾ ಕ್ಯಾಂಟೀನ್‌' ಹೆಸರು ಬದಲಾಯಿಸಿ "ಕೆಂಪೇಗೌಡ ಕ್ಯಾಂಟೀನ್‌' ಎಂದು ಮರು ನಾಮಕರಣ ಮಾಡುವುದಕ್ಕೆ ಬಿಬಿಎಂಪಿ ಆಡಳಿತ ಚಿಂತನೆ...

  • ಬೆಂಗಳೂರು: ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ...

  • ಬೆಂಗಳೂರು: ಸದಾ ಪೊಲೀಸ್‌ ಬೂಟುಗಳ ಸದ್ದು ಕೇಳಿ ಬರುತ್ತಿದ್ದ ಸ್ಥಳದಲ್ಲಿ ಮಕ್ಕಳ ಕಲರವ... ಖಾಕಿಯ ಭಯವಿಲ್ಲದೆ ನಾನಾ ವೇಷದಲ್ಲಿ ಕುಣಿದು ಕಪ್ಪಳಿಸಿದ ಮಕ್ಕಳು... ಪುಟಾಣಿ...

  • ಬೆಂಗಳೂರು: ಸಂಚಾರ ಪೊಲೀಸ್‌ ಅಧಿಕಾರಿಗಳು ನಿರ್ವಹಿಸಬೇಕಾದ ಪಿಡಿಎ ಯಂತ್ರ (ದಂಡ ವಿಧಿಸುವ ಯಂತ್ರ) ವನ್ನು ಟೋಯಿಂಗ್‌ ಸಿಬ್ಬಂದಿ ಇಟ್ಟುಕೊಂಡಿದ್ದು, ಅದನ್ನು ಪ್ರಶ್ನಿಸಿದ...

ಹೊಸ ಸೇರ್ಪಡೆ