ರಣಾಂಗಣವಾದ ಚುನಾವಣಾ ಸಭೆ
Team Udayavani, Sep 29, 2018, 12:27 PM IST
ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳ ಆಯ್ಕೆಗೆ ಶುಕ್ರವಾರ ನಡೆದ ಚುನಾವಣಾ ಸಭೆ ತಳ್ಳಾಟ-ನೂಕಾಟ, ಗಲಾಟೆ, ವಾಕ್ಸಮರ, ಅವ್ಯಾಚ ನಿಂದನೆ ಘಟನೆಗಳಿಂದಾಗಿ ಅಕ್ಷರಶಃ ರಣಾಂಗಣವಾಗಿತ್ತು. ಶುಕ್ರವಾರ ಬಿಬಿಎಂಪಿ ಗದ್ದುಗೆ ಹಿಡಿಯಲು ತಯಾರಿ ನಡೆಸಿದ್ದ ಬಿಜೆಪಿ, ನಾಲ್ವರು ಪಕ್ಷೇತರರು ಹಾಗೂ ಜೆಡಿಎಸ್ ಸದಸ್ಯರನ್ನು ಸೆಳೆದಿತ್ತು.
ಆದರೆ, ಚುನಾವಣೆ ಆರಂಭವಾಗುವ ಕೆಲ ನಿಮಿಷ ಮೊದಲು ಪಕ್ಷೇತರ ಸದಸ್ಯ ಆನಂದಕುಮಾರ್ ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡರು. ಇದರಿಂದ ಆಕ್ರೋಶಗೊಂಡ ಬಿಜೆಪಿ ನಾಯಕರು ಆನಂದ್ ಅವರನ್ನು ತಮ್ಮತ್ತ ಸೆಳೆಯಲು ಮುಂದಾದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ, ಮಾತಿನ ಚಕಮಕಿ ನಡೆದು, ಒಂದು ಹಂತದಲ್ಲಿ ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು.
ಚುನಾವಣೆ ಪ್ರಕ್ರಿಯೆ ಆರಂಭಕ್ಕೂ ಮೊದಲೇ ಪೌರ ಸಭಾಂಗಣಕ್ಕೆ ಶಾಸಕ ಆರ್.ಅಶೋಕ್ ಅವರು ತಮಗೆ ಬೆಂಬಲ ನೀಡಿದ ಇಬ್ಬರು ಪಕ್ಷೇತರರ ಸದಸ್ಯರನ್ನು ಕರೆತರುವ ಸಂದರ್ಭದಲ್ಲಿ ಆನಂದ್ ಅವರನ್ನು ಕಾಂಗ್ರೆಸ್ನವರು ಸೆಳೆದುಕೊಂಡರು. ಇದರಿಂದ ಸಿಟ್ಟಿಗೆದ್ದ ಶಾಸಕ ಸತೀಶ್ ರೆಡ್ಡಿ, ಆನಂದ್ರನ್ನು ವಾಪಸ್ ಕರೆತರಲು ಹೋದಾಗ ಕಾಂಗ್ರೆಸ್ ಸದಸ್ಯರು ಅವರನ್ನು ತಳ್ಳಿದರು.
ಈ ವೇಳೆ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಸೇರಿದಂತೆ ಪ್ರಮುಖರು ಆನಂದ್ರನ್ನು ಬರುವಂತೆ ಕೇಳಿದರು. ಆದರೆ, ಆನಂದ್ ನಾನು ಕಾಂಗ್ರೆಸ್ಗೆ ಬೆಂಬಲಿಸುತ್ತೇನೆಂದು ಹಸ್ತ ತೋರಿಸಿದರು. ಜತೆಗೆ ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಂಡು ನಾನು ಬರಲ್ಲ ಎಂದರು.
ಸಭಾತ್ಯಾಗ ಮಾಡಿದ ಬಿಜೆಪಿ: ಪ್ರಾದೇಶಿಕ ಆಯುಕ್ತರು ಹಾಜರಾತಿ ಪಡೆದು ಚುನಾವಣೆ ಪ್ರಕ್ರಿಯೆ ಆರಂಭಿಸಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದಾಗ ಮತ್ತೆ ಗಲಾಟೆ ಶುರುವಾಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ, ಸಿ.ಆರ್.ಮನೋಹರ್, ರಘು ಆಚಾರ್ ಹಾಗೂ ಜೈರಾಮ್ ರಮೇಶ್ ಅವರಿಗೆ ಮತದಾನದ ಹಕ್ಕು ನೀಡಬಾರದೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರಾದೇಶಿಕ ಆಯುಕ್ತರು ನಿರಾಕರಿಸಿದಾಗ ಅಕ್ರಮವಾಗಿ ಚುನಾವಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಸಭಾತ್ಯಾಗ್ಯ ಮಾಡಿದರು.
ಮೊಬೈಲ್ನಲ್ಲಿ ಮುಳುಗಿದ ಹಿರಿಯರು: ಸಭೆ ಸಂಪೂರ್ಣ ಗದ್ದಲದಿಂದ ಕೂಡಿದ್ದರೂ ಕೇಂದ್ರ ಸಚಿವರಾದ ಸದಾನಂದಗೌಡ, ಸಂಸದರಾದ ವೀರಪ್ಪ ಮೊಯ್ಲಿ, ಡಿ.ಕೆ.ಸುರೇಶ್ ಮೌನವಾಗಿದ್ದರು. ಇನ್ನು ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್, ಬಿ.ಕೆ.ಹರಿಪ್ರಸಾದ್, ರಾಜೀವ್ಗೌಡ, ಸಿ.ಕೆ.ರಾಮಮೂರ್ತಿ, ಚಂದ್ರಶೇಖರ್ ಸೇರಿದಂತೆ ಪ್ರಮುಖರು ಮೊಬೈಲ್ ಬಳಕೆಯಲ್ಲಿ ಮುಳಯಗಿದ್ದರು.
ರಾಷ್ಟ್ರಗೀತೆಗೆ ಅಗೌರವ: ಪ್ರಾದೇಶಿಕ ಆಯುಕ್ತರು ಸಭೆ ಆರಂಭಿಸಿದ ಕೂಡಲೇ ಸಭೆಯಲ್ಲಿ ರಾಷ್ಟ್ರಗೀತೆ ಮೊಳಗಿತು. ಆದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ರಾಷ್ಟ್ರಗೀತೆ ಕೇಳಿಸಿಕೊಳ್ಳದೆ ಗಲಾಟೆಯಲ್ಲಿ ಮುಳುಗಿದ್ದರು. ಈ ಸಂದರ್ಭದಲ್ಲಿ ಕ್ಯಾಮೆರಾಗಳು ಅವರತ್ತ ಫೋಕಸ್ ಆಗುತ್ತಿದ್ದಂತೆ ಎಚ್ಚೆತ್ತ ಸದಸ್ಯರು, ಗಲಾಟೆ ನಿಲ್ಲಿಸಿದರು. ಆ ವೇಳೆಗಾಗಲೇ ರಾಷ್ಟ್ರಗೀತೆ ಮುಗಿದಿತ್ತು.
ಕಾಲು ಮುಟ್ಟಿ ಕ್ಷಮೆ ಕೇಳಿದ ರಮೇಶ್: ಮೊದಲಿಗೆ ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ತಿಳಿಸಿದ್ದ ಪಕ್ಷೇತರ ಸದಸ್ಯ ರಮೇಶ್ ಕೊನೆಯ ಕ್ಷಣದಲ್ಲಿ ಬಿಜೆಪಿ ಸೇರಿದರು. ಆರ್.ಅಶೋಕ್ ಜತೆಗೆ ಸಭೆಗೆ ಬಂದ ಅವರು, ಮೊದಲಿಗೆ ಬಿಜೆಪಿ ಸದಸ್ಯರ ಸಾಲಿನಲ್ಲಿ ಕುಳಿತಿದ್ದರು. ನಂತರ ಸಭೆ ಆರಂಭಕ್ಕೂ ಮೊದಲೇ ರಾಮಲಿಂಗಾರೆಡ್ಡಿ ಅವರ ಬಳಿ ಹೋಗಿ ಕ್ಷಮೆಯಾಚಿಸಿದರು. ಈ ವೇಳೆ ಬೈರತಿ ಬಸವರಾಜು ಅವರು ಕಾಂಗ್ರೆಸ್ಗೆ ಬೆಂಬಲಿಸುವಂತೆ ಕೋರಿದಾಗ ಅವರ ಕಾಲು ಮುಗಿದು ಕ್ಷಮಿಸುವಂತೆ ಹೇಳಿ ಹೋದರು.
ಅವ್ಯಾಚ ಪದಗಳ ಬಳಕೆ: ವಿಜಿನಾಪುರ ಪಾಲಿಕೆ ಸದಸ್ಯ ಎಸ್.ರಾಜು ಹಾಗೂ ಮಾಜಿ ಆಡಳಿತ ಪಕ್ಷ ನಾಯಕ ಮಹಮದ್ ರಿಜ್ವಾನ್ ಪರಸ್ಪರ ಅವ್ಯಾಚ ಶಬ್ದಗಳಿಂದ ನಿಂದಿಸಿಕೊಂಡ ಪ್ರಸಂಗ ನಡೆಯಿತು. ಆನಂದ್ರನ್ನು ಕರೆತರುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅವಾಚ್ಯ ಪದಗಳಿಂದ ನಿಂದಿಸಿಕೊಂಡರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಕೈ ಮೀಸಲಾಯಿದ್ದು ನಡೆಯಿತು.
ಮತದಾನ ಹಕ್ಕು ಕಳೆದುಕೊಂಡ ಲಲಿತಾ: ಸಭೆ ಆರಂಭಿಸಿದ ಎಲ್ಲ ಮತದಾರರ ಹಾಜರಾತಿ ಪಡೆದ ನಂತರ ಸಭೆ ಬಂದಿದ್ದರಿಂದ ಕಾಂಗ್ರೆಸ್ ಸದಸ್ಯೆ ಲಲಿತಾ ತಿಮ್ಮನಂಜಯ್ಯಗೆ ಮತದಾನದ ಅವಕಾಶ ನೀಡಲು ಪ್ರಾದೇಶಿಕ ಆಯುಕ್ತರು ನಿರಾಕರಿಸಿದರು. ಈ ಕುರಿತು ಪ್ರಾದೇಶಿಕ ಆಯುಕ್ತರನ್ನು ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಕಾನೂನು ಬಾಹಿರವಾಗಿ ನೀವು ಸಭೆ ನಡೆಸುತ್ತಿದ್ದೀರ. ಯಾವ ನಿಯಮದಂತೆ ಅವರಿಗೆ ಮತದಾನದ ಅವಕಾಶ ನಿರಾಕರಿಸುತ್ತಿದ್ದೀರ ಹೇಳಿ ಎಂದು ಪಟ್ಟು ಹಿಡಿದರು. ಅದಕ್ಕೆ ಉತ್ತರಿಸಿದ ಶಿವಯೋಗಿ ಅವರು, ನೀವು ಕಾನೂನು ತಜ್ಞರಿದ್ದೀರ, ನಾನು ನಿಯಮದಂತೆ ನಡೆಸುತ್ತಿದ್ದು ಸಹಕರಿಸಬೇಕು ಎಂದರು.
ಅಲ್ಲಿಂದ ಇಲ್ಲಿಗೆ ಹಾರಿದ ಸದಸ್ಯರು: ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಜೆಡಿಎಸ್ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ ಹಾಗೂ ದೇವದಾಸ್ ಮೊದಲಿಗೆ ಬಿಜೆಪಿ ಸದಸ್ಯರ ಸಾಲಿನಲ್ಲಿ ಕುಳಿತಿದ್ದರು. ಆದರೆ, ಬಿಜೆಪಿ ಸಭಾತ್ಯಾಗ ಮಾಡಿ ಹೊರಗೆ ಹೋಗುವಾಗ ಇಬ್ಬರೂ ಸದಸ್ಯರು ಕೌನ್ಸಿಲ್ ಹೊರಗೆ ಹೋಗಲು ಮುಂದಾದರು. ಈ ವೇಳೆ ಅವರನ್ನು ತಡೆದ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಜೆಡಿಎಸ್ ಸಾಲಿನಲ್ಲಿ ಕುಳಿತು ಮತ ಹಾಕುವಂತೆ ತಿಳಿಸಿದರು. ಅದರಂತೆ ಗಂಗಾಂಬಿಕೆ ಪರವಾಗಿ ಇಬ್ಬರೂ ಮತ ಚಲಾಯಿಸಿದರೆ, ರಮೀಳಾ ಪರವಾಗಿ ಮಂಜುಳಾ ನಾರಾಯಣ ಸ್ವಾಮಿ ಮತ ಚಲಾಯಿಸದೆ ಸಭೆಯಿಂದ ಹೊರ ನಡೆದರು.
ಚುನಾವಣೆಗೆ ಐವರು ಗೈರು: ಪಾಲಿಕೆಯ 198 ಸದಸ್ಯರು, ರಾಜ್ಯಸಭಾ ಸದಸ್ಯರು, ಲೋಕಸಭಾ ಸದಸ್ಯರು, ನಗರ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ 259 ಮತದಾರರನ್ನು ಹೊಂದಿದ್ದ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ನ ರೋಷನ್ ಬೇಗ್, ಆಶಾ ಸುರೇಶ್, ನಾಜೀಂ ಖಾನ್, ಬಿಜೆಪಿಯ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಅನಂತಕುಮಾರ್ ಗೈರಾಗಿದ್ದರು. ಇದರಿಂದಾಗಿ ಮತದಾರರ ಸಂಖ್ಯೆ 253ಕ್ಕೆ ಇಳಿದು ಸರಳ ಬಹುಮತಕ್ಕೆ 127 ಸದಸ್ಯರ ಬೆಂಬಲ ಬೇಕಾಗಿತ್ತು.
ಹಣ ಕೊಟ್ಟಿದ್ದೀರಾ ಹೇಳಿ?: ಬಿಜೆಪಿ ನಾಯಕರು ಆನಂದ್ ಅವರನ್ನು ತಮ್ಮತ್ತ ಸೆಳೆಯಲು ಬಂದಾಗ ಕೆಲ ಸದಸ್ಯರು ನಾವು ಅವರಿಗೆ ಹಣ ಕೊಟ್ಟಿದೇವೆ. ಈಗ ನಮಗೆ ಮೋಸ ಮಾಡಿ ನಿಮ್ಮ ಕಡೆ ಬಂದಿದ್ದಾರೆ ಎಂದು ದೂರಿದ ಹಿನ್ನೆಲೆಯಲ್ಲಿ ವಾಜೀದ್ ಅವರು, ನೀವು ಹಣ ಕೊಟ್ಟಿàದ್ದೀರಾ? ಹಾಗಾದರೆ ಅಲ್ಲಿ ಮಾಧ್ಯಮ ಪ್ರತಿನಿಧಿಗಳು ಇದ್ದಾರೆ, ನೀವು ಹಣ ಕೊಟ್ಟಿದ್ದೀರ ಎಂದು ಅವರಿಗೆ ಹೇಳಿ ಎಂದು ತೋರಿಸಿದರು. ಇದರಿಂದ ಬಿಜೆಪಿ ಸದಸ್ಯರು ಹಣದ ವಿಷಯ ಪ್ರಸ್ತಾಪ ನಿಲ್ಲಿಸಿದರು.
ಚುನಾವಣೆ ಟೈಮ್ಲೈನ್
ಬೆಳಗ್ಗೆ 8: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
ಬೆಳಗ್ಗೆ 9-9.30: ಕಾಂಗ್ರೆಸ್ನ ಗಂಗಾಂಬಿಕೆ ಹಾಗೂ ಜೆಡಿಎಸ್ನ ರಮೀಳಾ, ಬಿಜೆಪಿಯ ಶೋಭಾ ಹಾಗೂ ಪ್ರತಿಭಾ ನಾಮಪತ್ರ ಸಲ್ಲಿಕೆ
ಬೆಳಗ್ಗೆ 11.25: ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ, ಜಿಲ್ಲಾಧಿಕಾರಿ ವಿಜಯ್ ಶಂಕರ್ ಹಾಗೂ ಎನ್.ಮಂಜುನಾಥ ಪ್ರಸಾದ್ ಸಭಾಂಗಣಕ್ಕೆ ಆಗಮನ
ಬೆಳಗ್ಗೆ 11.30: ಚುನಾವಣಾ ಸಭೆ ಆರಂಭ
ಬೆಳಗ್ಗೆ 11.34: ಪಕ್ಷೇತರ ಸದಸ್ಯನ ಹೈಜಾಕ್ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಗಲಾಟೆ
ಬೆಳಗ್ಗೆ 11.50: ಮೇಯರ್ ಚುನಾವಣೆ ಪ್ರಕ್ರಿಯೆ ಆರಂಭ
ಮಧ್ಯಾಹ್ನ 12.28: ಚುನಾವಣೆ ಕಾನೂನು ಬಾಹಿರ ಎಂದು ಆರೋಪಿಸಿ ಬಿಜೆಪಿ ಸಭಾತ್ಯಾಗ
ಮಧ್ಯಾಹ್ನ 12.50: ಗಂಗಾಂಬಿಕೆ ಪರ ಇರುವವರ ಕೈ ಎತ್ತಲು ಸೂಚನೆ
ಮಧ್ಯಾಹ್ನ 1.04: ಗಂಗಾಂಬಿಕೆ ಮೇಯರ್; ಅಧಿಕೃತ ಘೋಷಣೆ
ಮಧ್ಯಾಹ್ನ 1.05: ಉಪಮೇಯರ್ ಚುನಾವಣೆ ಪ್ರಕ್ರಿಯೆ ಆರಂಭ
ಮಧ್ಯಾಹ್ನ 1.25: ರಮೀಳಾ ಉಪಮೇಯರ್; ಅಧಿಕೃತ ಘೋಷಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಜೂನಿಯರ್ ಮೇಲೆ ರ್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು
ಹೊಸ ಸೇರ್ಪಡೆ
ದೆಹಲಿಯಲ್ಲಿ ನೇಣಿಗೆ ಶರಣಾದ ವಿಜಯಪುರ ಜಿಲ್ಲೆಯ ಯೋಧ
ಕ್ರಿಪ್ಟೋಕರೆನ್ಸಿಗಳನ್ನು ಮೌಲ್ಯಮಾಪನ ಮಾಡಲು ಸರ್ಕಾರ ಮುಕ್ತವಾಗಿದೆ : ಅನುರಾಗ್ ಠಾಕೂರ್
ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ: ದಾಸಯ್ಯನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪೂಜಾರಿ!
ಶಾಹೀದ್ ಅಫ್ರಿದಿ ಮಗಳ ಜೊತೆ ಪಾಕ್ ಬೌಲರ್ ಶಹೀನ್ ಅಫ್ರಿದಿ ವಿವಾಹ ನಿಶ್ಚಿತಾರ್ಥ
ಮತ ನೀಡದಿದ್ದರೆ ನೀರು, ವಿದ್ಯುತ್ ಏನೂ ಕೊಡಲ್ಲ.. ಮತದಾರರಿಗೆ ಸಚಿವರ ಬೆದರಿಕೆ