ನಿತ್ಯ ನರಕದ ಜನ-ವಾಹನ ಸಂಚಾರ

ಮೆಟ್ರೋ ಫೋಕಸ್‌

Team Udayavani, Mar 29, 2019, 11:49 AM IST

ಬೆಂಗಳೂರು: ವೇಗವಾಗಿ ಚಲಿಸುವ ವಾಹನಗಳನ್ನು ಲೆಕ್ಕಿಸದೆ ರಸ್ತೆಬದಿಯಲ್ಲಿ ನಡೆದು ಹೋಗುವ ಜನ, ಅಳಿದುಳಿದ ಪಾದಚಾರಿ ಮಾರ್ಗ ಅಕ್ರಮಿಸಿದ ಬೀದಿ ವ್ಯಾಪಾರಿಗಳು, ಬೃಹತ್‌ ವಾಹನಗಳು ಸಂಚರಿಸಿದಾಗ ರಸ್ತೆಯಿಂದ ಒಮ್ಮೆಗೆ ಮೇಲೇಳುವ ದಟ್ಟ ಧೂಳು, ವಾಹನಗಳ ದಾರಿ ತಪ್ಪಿಸುವ ರಸ್ತೆಯಲ್ಲಿನ ಉಬ್ಬು-ತಗ್ಗು.

ಅತಿ ಹೆಚ್ಚು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿರುವ ಐಟಿಪಿಎಲ್‌ ಹಾಗೂ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವ ಮಹದೇವಪು ವಿಧಾನಸಭಾ ಕ್ಷೇತ್ರದ ವೈಟ್‌ಫೀಲ್ಡ್‌ ಮುಖ್ಯರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಕಂಡುಬರುವ ದೃಶ್ಯಗಳಿವು.

ಕೆ.ಆರ್‌.ಪುರದ ರೈಲು ನಿಲ್ದಾಣದ ಜಂಕ್ಷನ್‌ನಿಂದ ವೈಟ್‌ಫೀಲ್ಡ್‌ವರೆಗಿನ ನಮ್ಮ ಮೆಟ್ರೋ ಮಾರ್ಗ ಕಾಮಗಾರಿಯನ್ನು ಬಿಎಂಆರ್‌ಸಿಎಲ್‌ ಕೈಗೆತ್ತಿಕೊಂಡಿದೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸ್ಥಳೀಯ ಸಂಸ್ಥೆಗಳು ಪ್ರಯತ್ನಿಸುತ್ತಿವೆಯೇ ಹೊರತು, ಪಾದಚಾರಿಗಳು ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫ‌ಲವಾಗಿವೆ.

ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಮುಖ್ಯರಸ್ತೆಯ ವಿಭಜಕದಲ್ಲಿ ಬ್ಯಾರಿಕೇಡಿಂಗ್‌ ಅಳವಡಿಸಲಾಗಿದೆ. ರಸ್ತೆ ಕಿರಿದಾಗಿರುವುದರಿಂದ ತೀವ್ರ ವಾಹನ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ಬಡಾವಣೆ ರಸ್ತೆಗಳಿಗೆ ನುಗ್ಗುತ್ತಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಬಡಾವಣೆಗಳ ಜನ ತೊಂದರೆ ಅನುಭವಿಸುವಂತಾಗಿದೆ.

ವೈಟ್‌ಫೀಲ್ಡ್‌ ಮುಖ್ಯರಸ್ತೆ ಪರಿಸ್ಥಿತಿ ಹೇಗಿದೆ?: ಕೆ.ಆರ್‌.ಪುರ ರೈಲು ನಿಲ್ದಾಣದಿಂದ ಹೂಡಿ ವೃತ್ತದವರೆಗಿನ 3.5 ಕಿ.ಮೀ. ಉದ್ದದ ರಸ್ತೆಯಲ್ಲಿ ಕೆಲವು ಕಡೆ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಕೆಲವು ಕಡೆ ಪ್ರಗತಿಯಲ್ಲಿದ್ದು, ಕಾಮಗಾರಿಗೆ ಬಳಸುತ್ತಿರುವ ಜಲ್ಲಿ ಕಲ್ಲುಗಳು ರಸ್ತೆಗೆ ಬಂದಿವೆ. ಪರಿಣಾಮ ಭಾರೀ ವಾಹನಗಳು ಸಂಚರಿಸಿದಾಗ ಚಕ್ರಗಳಿಗೆ ಸಿಕ್ಕಿ ಸಿಡಿಯುತ್ತಿವೆ.

ಒಟ್ಟು 3.5 ಕಿ.ಮೀ. ಉದ್ದ ರಸ್ತೆಯಲ್ಲಿ 11 ಕಡೆ ಯು ಟರ್ನ್ಗಳಿದ್ದು, ಭಾರಿ ವಾಹನ ಯು ಟರ್ನ್ ಮಾಡಲು ಕನಿಷ್ಠ ಎರಡು ಮೂರು ನಿಮಿಷ ಬೇಕಾಗುತ್ತದೆ. ವಾಹನ ಯು ಟರ್ನ್ ಮಾಡುವ ವೇಳೆಗೆ ಎರಡು ಬದಿಯ ರಸ್ತೆಗಳಲ್ಲಿ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಕೇವಲ 3 ಕಿ.ಮೀ. ಉದ್ದದ ರಸ್ತೆ ಕ್ರಮಿಸಲು ಕನಿಷ್ಠ 30 ನಿಮಿಷಗಳಾಗುತ್ತಿದ್ದು, ದಟ್ಟಣೆ ನಿವಾರಣೆಗೆ ಸಂಚಾರ ಪೊಲೀಸರು ಹರಸಾಹಸ ಪಡುವಂತಾಗಿದೆ.

ಪಾದಚಾರಿ ಮಾರ್ಗವೇ ಮಾಯ!: ಕೆ.ಆರ್‌.ಪುರ ರೈಲು ನಿಲ್ದಾಣ ಜಂಕ್ಷನ್‌ನಿಂದ ಹೂಡಿ ವೃತ್ತದವರೆಗಿನ 3.5 ಕಿ.ಮೀ. ಉದ್ದದ ರಸ್ತೆಯಲ್ಲಿ ಹೆಚ್ಚಿನ ಕಡೆ ಪಾದಚಾರಿ ಮಾರ್ಗ ಮಾಯವಾಗಿದೆ. ಇನ್ನು ಕೆಲವೆಡೆ ಬಿಎಂಆರ್‌ಸಿಎಲ್‌ನವರು ಕಾಮಗಾರಿಗೆ ಬಳಸಿದ್ದ ಬ್ಯಾರಿಕೇಡ್‌ಗಳನ್ನು ವಿಲೇವಾರಿ ಮಾಡಿದ್ದು, ಹೆಚ್ಚಿನ ಭಾಗಗಳಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯಲಾಗಿದೆ. ಪಾದಚಾರಿ ಮಾರ್ಗ ಉತ್ತಮವಾಗಿರುವ ಕಡೆಗಳಲ್ಲಿ ವಾಹನ ನಿಲುಗಡೆಗೆ ಪಾದಚಾರಿ ಮಾರ್ಗ ಬಳಸುತ್ತಿರುವುದರಿಂದ ಪಾದಚಾರಿಗಳು ಅನಿವಾರ್ಯವಾಗಿ ವಾಹನಗಳ ಜತೆ ಜತೆಗೇ ರಸ್ತೆಯಲ್ಲಿ ಸಾಗಬೇಕಾಗಿದೆ.

ಬೆಳಗ್ಗೆ-ಸಂಜೆ ನರಕ ದರ್ಶನ: ಐಟಿಪಿಎಲ್‌, ವೈಟ್‌ಫೀಲ್ಡ್‌ಗೆ ಇದೇ ಮಾರ್ಗವಾಗಿ ಹೋಗಬೇಕಿರುವುದರಿಂದ ಬೆಳಗ್ಗೆ 7ರಿಂದ 10 ಗಂಟೆವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 9 ಗಂಟೆವರೆಗೆ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರೊಂದಿಗೆ ಇದೇ ಮಾರ್ಗದಲ್ಲಿರುವ ಫಿನಿಕ್ಸ್‌ ಮಾರ್ಕೆಟ್‌ ಸಿಟಿ ಮಾಲ್‌, ಬ್ರಾಂಡ್‌ ಫ್ಯಾಕ್ಟರಿ ಸೇರಿದಂತೆ ಇತರೆ ಮಳಿಗೆಗಳಿದ್ದು, ವಾರಾಂತ್ಯದಲ್ಲಿ ಸಾವಿರಾರು ಜನ ಭೇಟಿ ನೀಡುವುದರಿಂದ ಜನ ಗಂಟೆಗಟ್ಟಲೆ ದಟ್ಟಣೆಯಲ್ಲಿ ಸಿಲುಕಬೇಕಾಗಿದೆ.

ದಟ್ಟಣೆಯಲ್ಲಿ ಸಿಲುಕುವ ಆ್ಯಂಬುಲೆನ್ಸ್‌ಗಳು: ವೈದೇಹಿ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸಸ್‌ ಆಂಡ್‌ ರಿಸರ್ಚ್‌ ಸೆಂಟರ್‌ ಹಾಗೂ ಮಣಿಪಾಲ್‌ ಆಸ್ಪತ್ರೆಗಳು ವೈಟ್‌ಫೀಲ್ಡ್‌ನಲ್ಲಿವೆ. ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್‌ಗಳು ತಲುಪಲು ಕನಿಷ್ಠ ಒಂದು ಗಂಟೆ ಬೇಕಾದ ಪರಿಸ್ಥಿತಿಯಿದೆ. ಇನ್ನು ಬೆಳಗ್ಗೆ ಹಾಗೂ ಸಂಜೆ ವೇಳೆಯಂತೂ ಆ್ಯಂಬುಲೆನ್ಸ್‌ಗಳು ದಟ್ಟಣೆಯಲ್ಲಿ ಸಿಲುಕಿರುವ ದೃಶ್ಯ ಕಂಡುಬರುತ್ತದೆ.

ಅವೈಜ್ಞಾನಿಕ ಸಂಚಾರ ವ್ಯವಸ್ಥೆ: ವೈಟ್‌ಫೀಲ್ಡ್‌ ಮುಖ್ಯರಸ್ತೆಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣದ ಹಿನ್ನೆಲೆಯಲ್ಲಿ ಕುಂದಲಹಳ್ಳಿ ಮುಖ್ಯರಸ್ತೆ ಜಂಕ್ಷನ್‌ನಿಂದ ಹೂಡಿ ವೃತ್ತದವರೆಗಿನ 1 ಕಿ.ಮೀ. ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ, ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದರೂ ಸಂಚಾರ ಪೊಲೀಸರು ಮಾತ್ರ ದ್ವಿಮುಖ ಸಂಚಾರಕ್ಕೆ ಕ್ರಮಕೈಗೊಂಡಿಲ್ಲ.

ಕಾರಣ, ವೈಟ್‌ಫೀಲ್ಡ್‌ ಕಡೆಯಿಂದ ಬರುವವರು ಕುಂದಲಹಳ್ಳಿ ಮುಖ್ಯರಸ್ತೆ ಮೂಲಕ ಸುಮಾರು 3 ಕಿ.ಮೀ. ಸುತ್ತಿಕೊಂಡು ವೈಟ್‌ಫೀಲ್ಡ್‌ ಮುಖ್ಯರಸ್ತೆಗೆ ಬರುವಂತಾಗಿದ್ದು, ಹೂಡಿ ವೃತ್ತದಿಂದ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂಬುದು ಸವಾರರ ಒತ್ತಾಯ.

* ವೆಂ.ಸುನೀಲ್‌ಕುಮಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಇಂದಿರಾನಗರದ ಮಹೇಶ್‌ ತಿಂಗಳ ಹಿಂದೆ ಬೈಕ್‌ನಲ್ಲಿ ಹೋಗುವಾಗ ಸಿಗ್ನಲ್‌ ಜಂಪ್‌ ಮಾಡಿದ್ದರು. ಆಗ ಈ ನಿಯಮ ಉಲ್ಲಂಘನೆಗೆ ಇದ್ದ ದಂಡದ ಮೊತ್ತ 100 ರೂ. ಆದರೆ,...

  • ಬೆಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ (ಎಸ್‌ಟಿಪಿ) ಸಂಸ್ಕರಿಸಿದ ನೀರನ್ನು ಕಾಮಗಾರಿಗಳಿಗೆ ಬಳಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡುವ ಜಲಮಂಡಳಿಯು ಇಂದಿಗೂ...

  • ಬೆಂಗಳೂರು: ನಾಡಿನ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ನಾಡಿನ ವಿವಿಧ...

  • ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಮತ್ತು ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆಗಳು ಧೂಳಿನಿಂದ ಕೂಡಿರುವುದು ಸಾಮಾನ್ಯ...

  • ಬೆಂಗಳೂರು: ಶಾಸಕರ ರಾಜೀನಾಮೆ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಬರುವವರೆಗೂ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿಯವರು ವಿಶ್ವಾಸಮತ...

ಹೊಸ ಸೇರ್ಪಡೆ