ಬಕ್ರೀದ್‌ಗಾಗಿ ಬಂದಿಳಿದಿವೆ ಭರ್ಜರಿ ಟಗರು!


Team Udayavani, Aug 20, 2018, 12:43 PM IST

bakrid.jpg

ಬೆಂಗಳೂರು: “ಟಗರು ಬಂತು ಟಗರು’. ನಾಟಿ ಖಡಕ್‌ ತಳಿ, ಹೈಬ್ರಿಡ್‌ ಖದರ್‌ ತಳಿ, ಬೇಗ ಬಂದವರಿಗೆ ಒಳ್ಳೆ ತಳಿ ಸಿಗುತ್ತದೆ. ನಾಳೆ ಎಂದರೆ ಬೆಲೆ ಹೆಚ್ಚು… ಚಾಮರಾಜಪೇಟೆಯ ಈದ್ಗಾ ಮೈದಾನ, ಜೆ.ಸಿ.ರಸ್ತೆಯ ಟಿ.ವಿ.ಟವರ್‌ ಮೈದಾನದಲ್ಲಿ ಇಂತಹ ಮಾತುಗಳು ನಿಮ್ಮನ್ನು ಕ್ಷಣಕಾಲ ನಿಲ್ಲಿಸಿಬಿಡುತ್ತವೆ.

ಬಸ್‌, ಬೈಕ್‌, ಕಾರಲ್ಲಿ ಪಯಣಿಸುತ್ತಿದ್ದರೂ ಒಂದೈದು ನಿಮಿಷವಾದರೂ ವಾಹನ ನಿಲ್ಲಿಸಿ ಈ ಟಗರು, ಹೋತ, ಕುರಿಗಳ ಜಾತ್ರೆ ನೋಡೋಣ. “ನಿ ಕೊಡೆ- ನಾ ಬಿಡೆ’ ಎಂಬ ವ್ಯಾಪಾರದ ಜುಗಲ್‌ಬಂದಿಯನ್ನೊಮ್ಮೆ ಕೇಳ್ಳೋಣ ಎಂದು ಅನಿಸದೇ ಇರಲು ಸಾಧ್ಯವಿಲ್ಲ.

ಬಕ್ರೀದ್‌ ಹಬ್ಬಕ್ಕೆ ಇನ್ನು ನಾಲ್ಕು ದಿನ ಬಾಕಿಯಿರುವಾಗಲೇ ರಾಜಧಾನಿಯಲ್ಲೀಗ ಟಗರು, ಕುರಿ, ಮೇಕೆಗಳ ವ್ಯಾಪಾರ ಜೋರಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳು, ದೇಶಿ ಹೈಬ್ರಿಡ್‌ ತಳಿಯ ಕುರಿ-ಟಗರುಗಳ ಮಾರಾಟ ನಗರದ ಹಲವು ಭಾಗಗಳಲ್ಲಿ ನಡೆಯುತ್ತಿದೆ.

ಈದ್ಗಾ ಮೈದಾನ, ಗೌರಿಪಾಳ್ಯ, ಜೆ.ಸಿ.ನಗರ ಟಿವಿ ಟವರ್‌ ಸಮೀಪದ ಮೈದಾನ, ಟ್ಯಾನರಿ ರಸ್ತೆಯ ಕುರಿದೊಡ್ಡಿ, ಶಿವಾಜಿನಗರ, ಫ್ರೆàಜರ್‌ ಟೌನ್‌, ಜಗಜೀವನರಾಮ್‌ ನಗರ, ಕೆ.ಆರ್‌.ಪುರ ಸೇರಿ ನಗರದ ವಿವಿಧ ಭಾಗಗಳಲ್ಲಿ ಬಕ್ರೀದ್‌ ಹಬ್ಬದ ಟಗರು, ಕುರಿಗಳ ಮಾರಾಟ ಜೋರಾಗಿದೆ. ನಿತ್ಯ ಸಾವಿರಾರು ಕುರಿ, ಟಗರು ಮಾರಾಟ ನಡೆಯುತ್ತಿದ್ದು, ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದೆ.

ಪ್ರಮುಖವಾಗಿ ವಿಜಯಪುರದ ಅಮೀನ್‌ಘಡ, ಹೈದ್ರಾಬಾದ್‌ನ ಡೈಮಂಡ್‌, ಮಹಾರಾಷ್ಟ್ರ, ಜೈಪುರ, ಉದಯಪುರ, ತಮಿಳುನಾಡಿನ ರಾಮ್‌ ಬುಲೆಟ್‌, ಬನ್ನೂರು, ಶಿರಾ ನಾಟಿ ತಳಿ, ಬಾಗಲಕೋಟೆಯ ಕೆರಾಡಿ ಟಗರು, ಬಳ್ಳಾರಿಯ ಹೊಸಪೇಟೆ, ಚಿತ್ರದುರ್ಗ, ಮಳವಳ್ಳಿ, ಗಂಡಸಿ, ಆನೆಕಲ್‌ನ ಜಮುನಾಪುರಿ ತಳಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ವ್ಯಾಪಾರದಲ್ಲೂಂತೂ ಈಗ ಸಾವಿರಗಳದ್ದೇ ಮಾತುಕತೆ. ಕೊಬ್ಬಿದ ಟಗರುಗಳು ಕಿವಿ ಒದರುತ್ತಿದ್ದರೆ ಅದಕ್ಕೆ ಬೇಡಿಕೆ ಹೆಚ್ಚು. ಕಪ್ಪು, ಕಂದು ಬಣ್ಣ,  ಪಚ್ಚೆ , ಬಿಳಿ ಬಣ್ಣಗಳ ಟಗರು, ಕುರಿಗಳ ಮಂದೆಗಳ ಮುಂದೆ ಜನ ಜಮಾಯಿಸುತ್ತಿದ್ದಾರೆ. ಕುರಿ, ಟಗರುಗಳ ಬೆನ್ನು ಹಿಡಿದು ಎಷ್ಟು ಕೆ.ಜಿ. ಬರಬಹುದು ಎಂದು ಲೆಕ್ಕಚಾರ ಹಾಕುವವರು ಒಂದೆಡೆಯಾದರೆ, ತಂದಿರುವ ಎಲ್ಲ ಟಗರುಗಳು ಮಾರಾಟವಾಗಲಿ ಎನ್ನುವ ವ್ಯಾಪಾರಿಗಳು ಇನ್ನೊಂದು ಕಡೆ. 

ಆಂಧ್ರಪ್ರದೇಶದಿಂದ ಬಂದ ಭಾರೀ ಗಾತ್ರದ ಟಗರುಗಳು ದಿನವೊಂದಕ್ಕೆ ಸಾವಿರಾರು ಲೆಕ್ಕದಲ್ಲಿ ಮಾರಾಟವಾಗುತ್ತಿವೆ. ಶಿರಾದ ನಾಟಿ, ಬನ್ನೂರು ತಳಿಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಹಬ್ಬಕ್ಕೆ ಬೇಕಾದ ಬಕ್ರಿ ಕೊಳ್ಳಲು ಜನರ ದಂಡೇ ಹರಿದು ಬರುತ್ತಿದೆ. ಮತ್ತೂಂದೆಡೆ ದೂರದ ಊರುಗಳಿಂದ ತಂದಿರುವ ಟಗರು, ಮೇಕೆಗಳನ್ನು ಮಾರಾಟ ಮಾಡಿ ಊರಿಗೆ ಹಿಂತಿರುಗಬೇಕೆಂಬ ಅವಸರದ ನಡುವೆ ರಂಗೇರುವ ವ್ಯಾಪಾರ. 

ಬಕ್ರೀದ್‌ ಹಿನ್ನೆಲೆಯಲ್ಲಿ ನಗರಕ್ಕೆ ಲಗ್ಗೆಯಿಟ್ಟಿರುವ ಬಕ್ರಿಗಳ  ಮಾರಾಟ ಜಾತ್ರೆಯಲ್ಲಿ ಉದಯವಾಣಿ ಸುತ್ತು ಹಾಕಿದಾಗ ಕಂಡು ಬಂದ ಕೆಲವು ಆಸಕ್ತಿಕರ ಅಂಶಗಳನ್ನು ದಾಖಲಿಸಲಾಗಿದೆ. 

ಕೊಬ್ಬಿದ ಟಗರುಗಳ ಜಾತ್ರೆ: ರಾಜಧಾನಿಗೆ ಸುಮಾರು 100 ಕಿಲೋ ಮೀಟರ್‌ಗೂ ಹೆಚ್ಚಿನ ದೂರದಿಂದ ಟಗರುಗಳನ್ನು ತುಂಬಿಕೊಂಡ ಬಂದಿದ್ದ ಲಾರಿಯೊಂದು ಜೆ.ಸಿ. ರಸ್ತೆಯ ಸಮೀಪದ ಟಿವಿ ಟವರ್‌ ಮೈದಾನದಲ್ಲಿ ಗಕ್ಕನೆ ನಿಂತುಕೊಂಡಿತು. ಬಕ್ರೀದ್‌ ಹಬ್ಬಕ್ಕೆ ಕೊಬ್ಬಿದ ಟಗರು, ಕುರಿಗಳನ್ನು ಕೊಳ್ಳಲು ಆಗಮಿಸಿದ್ದ ಜನ ಕೆಲವೇ ಕ್ಷಣಗಳಲ್ಲಿ  ಲಾರಿ ಸುತ್ತುವರಿದರು.

ಲಾರಿಯಿಂದ ಇಳಿಸುತ್ತಿದ್ದ ಬಗೆ ಬಗೆಯ ಕೊಬ್ಬಿದ ಟಗರುಗಳ ಮೈದಡುವುತ್ತಾ, ಎಷ್ಟು ಕೆ.ಜಿ ಮಾಂಸ ಬರಬಹುದು? ಯಾವ ಬೆಲೆಗೆ ನಿಗದಿಯಾಗಬಹುದು ಎಂದು ಲೆಕ್ಕಾಚಾರ ಶುರು ಹಚ್ಚಿಟ್ಟುಕೊಂಡಿದ್ದರು. ಕುರಿ ಮಾಲೀಕರ ಜತೆ ಬೆಲೆ ಚೌಕೌಸಿ, ನಾ  ಕೊಡಲ್ಲ, ನಾ ಬಿಡಲ್ಲ ಎಂಬ  ಚರ್ಚೆ ಮಧ್ಯೆಯೇ 20 ನಿಮಿಷಗಳಲ್ಲಿಯೇ ಸಾಕಷ್ಟು ಕುರಿಗಳು ಭರ್ಜರಿ ಬೆಲೆಗೆ ಬಿಕರಿಯಾದವು.

ಪಕ್ಕದಲ್ಲಿಯೇ ನಿಂತುಕೊಂಡಿದ್ದ, ಹಣೆಗೆ ಕಾಸಗಲದ ಬೊಟ್ಟು ಇಟ್ಟುಕೊಂಡಿದ್ದ ಗಂಗಮ್ಮ  ಟಗರು ಮಾರಾಟದಿಂದ ಬಂದ ಹಣ ಎಣಿಸಿಕೊಂಡು, ತಂದ ಎಲ್ಲ ಟಗರು – ಕುರಿಗಳು ಹೀಗೆಯೇ ಮಾರಾಟವಾಗಲಿ ಎಂದು ಮನದಲ್ಲಿಯೇ ದೇವರಿಗೆ ಪ್ರಾರ್ಥಿಸಿದಂತಿತ್ತು ಅವರ ಮುಖದ ಮೇಲೆ ಮೂಡಿದ ನಗು.

ಅಪರೂಪದ ಕಾಶ್ಮೀರಿ ಮೇಕೆ ಕಮಾಲ್‌!: ಚಾಮರಾಜಪೇಟೆ ಈದ್ಗಾ ಮೈದಾನದ ಸಂತೆಯಲ್ಲಿ ಇದೇ ಮೊದಲ ಬಾರಿಗೆ ಕಾಶ್ಮೀರಿ ತಳಿ ಮೇಕೆಗಳು ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆದವು. ಕಾಶ್ಮೀರದ ಮೇಕೆಗಳು ಸಾಮಾನ್ಯವಾಗಿ ಎರಡು ಅಡಿಗಿಂತಲೂ ಹೆಚ್ಚು ಬೆಳೆಯುವುದಿಲ್ಲ. ಚಿಕ್ಕದಾದ ತಲೆ, ಕಿವಿಗಳನ್ನು ಹೊಂದಿರುವ ಈ ಮೇಕೆಗಳು ಮಕ್ಕಳಿಗೆ ಹೆಚ್ಚು ಆಕರ್ಷಣೀಯ ಎಂದು ವ್ಯಾಪಾರಿ ಷರೀಫ್ ಮಾಹಿತಿ ನೀಡಿದರು. 

ಜೋಡಿ ಹೋತಗಳ ಬೆಲೆ 1.80 ಲಕ್ಷ: ಕಳೆದ ಒಂದು ವಾರದಿಂದ ಕುರಿ-ಮೇಕೆಗಳ ಮಾರಾಟ ಜೋರಾಗಿರುವುದರ ಜತೆಗೆ ಮಾರುಕಟ್ಟೆ ಉತ್ತಮವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಕಳೆದ ವರ್ಷ ಒಂದು ಜೋಡಿ ಹೋತ 2.20 ಲಕ್ಷ ರೂ.ಗೆ ಮಾರಾಟವಾಗಿದ್ದವು, ಅದೇ ರೀತಿ ಒಂದು ಜೋಡಿ ಬನ್ನೂರು ಕುರಿ 1.40 ಲಕ್ಷಕ್ಕೆ ಮಾರಾಟವಾಗಿತ್ತು. ಆದರೆ, ಈ ಬಾರಿ ಬಾಗೇಪಲ್ಲಿ ಹಾಗೂ ಶ್ರೀನಿವಾಸಪುರದ ಜೋಡಿ ಹೋತಗಳು ತಲಾ 1.80 ಲಕ್ಷ ಬೆಲೆಗೆ ಮಾರಾಟವಾಗಿದ್ದು, ಇದುವರೆಗಿನ ಮಾರುಕಟ್ಟೆಯ ದಾಖಲೆಯಾಗಿದೆ.

ಬಾಲ ನೋಡಿ ತಳಿ ಹೇಳ್ತಾರೆ!: ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಮಾರುಕಟ್ಟೆಗೆ ಬರುವ ತರಹೇವಾರಿ ಕುರಿ – ಮೇಕೆಗಳ ಬಾಲ ಹಾಗೂ ಕಾಲುಗಳನ್ನು ನೋಡಿ ಅದು ಯಾವ ತಳಿ ಎಂದು ಗುರುತಿಸಲಾಗುತ್ತದೆ. ಉದಾಹರಣೆಗೆ ಗಿಡ್ಡ ಕಾಲುಗಳನ್ನು ಹೊಂದಿರುವ ಕುರಿ, ಟಗರುಗಳನ್ನು ಬನ್ನೂರು ತಳಿಯೆಂದು, ಕೆಂಪು ಬಣ್ಣದ ಟಗರುಗಳನ್ನು ಬಳ್ಳಾರಿ ತಳಿಯೆಂದು ಗುರುತಿಸಲಾಗುತ್ತದೆ. ಅದೇ ರೀತಿ ಒಂದೊಂದು ಊರಿನ ಕುರಿ, ಮೇಕೆಗಳನ್ನು ಅದರ ಬಾಲ ಹಾಗೂ ಕಾಲುಗಳನ್ನು ನೋಡಿ ಸುಲಭವಾಗಿ ಗುರುತಿಸಲಾಗುತ್ತದೆ.

ತೂಕ ಅಳೆಯೋದಕ್ಕೂ ಒಂದು ವಿಧ: ವ್ಯಾಪಾರಕ್ಕೆ ತಂದಿರುವ ಟಗರು, ಹೋತಗಳ ಮಾಂಸ ಎಷ್ಟು ಬರಬಹುದು ಎಂಬುದು ಕುತೂಹಲಕಾರಿ ಅಂಶ. ಟಗರು, ಮೇಕೆಯ ಬೆನ್ನು ಹಿಡಿದು ನೋಡಿದರೆ, ಅದು ಎಳೆಯ ಪ್ರಾಯದ್ದೇ, ಮಾಂಸ ಎಷ್ಟು ಬರಬಹುದು ಎಂಬುದನ್ನು  ಗ್ರಾಹಕರು ಅಂದಾಜಿಸುತ್ತಾರೆ. ಇದಕ್ಕೆಂದೇ ವ್ಯಾಪಾರಿಗಳು ಟಗರುಗಳ ಹೊಟ್ಟೆ ಹಾಗೂ ಬೆನ್ನಿನ ಅಳತೆಗೆ ಕಪ್ಪು ದಾರವನ್ನು ಸುತ್ತುತ್ತಾರೆ. ಇದು ಆಕರ್ಷಕವಾಗಿಯೂ ಕಾಣುತ್ತದೆ ಎಂಬುದು ವ್ಯಾಪಾರಿ ನರಸಿಂಹಲು ಅವರ ಅಭಿಪ್ರಾಯ. 

ಟಗರಿಗೂ ಸಿಂಗಾರ: ಮಾರುಕಟ್ಟೆಗೆ ಟಗರುಗಳನ್ನು ತೆಗೆದುಕೊಂಡು ಬಂದಿದ್ದ ವ್ಯಾಪಾರಿಗಳು ಜನರನ್ನು  ಸೆಳೆಯುವ ಉದ್ದೇಶದಿಂದ ಟಗರುಗಳ ಕೊಂಬುಗಳಿಗೆ ಬಣ್ಣ, ಕೊರಳಿಗೆ ಹಾರ ಹಾಗೂ ಕಾಲ್ಗೆಜ್ಜೆಯಿಂದ ಸಿಂಗಾರಗೊಳಿಸಿದ್ದು ಆಕರ್ಷಣಿಯವಾಗಿತ್ತು. ಇದರಿಂದ ಹೆಚ್ಚಿನ ಜನರು ವ್ಯಾಪಾರಿಗಳತ್ತ ಧಾವಿಸಿ ಟಗರುಗಳನ್ನು ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದರು.

ಕುರಿ ಕೊಬ್ಬಿಸೋದು ಹೇಗೆ?: ಕುರಿ ಹಾಗೂ ಮೇಕೆಗಳು ದಷ್ಟ-ಪುಷ್ಟವಾಗಬೇಕೆಂಬ ಉದ್ದೇಶದಿಂದ ಮೇವು, ಬೂಸಾ, ಅಲಸಂದೆ ಹೊಟ್ಟು, ಕಡಲೆ ಹೊಟ್ಟು ನೀಡುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಲೆಯ ಕುರಿ ಹಾಗೂ ಹೋತಗಳಿಗೆ ಮಾರುವ ಒಂದು ವಾರದ ಮೊದಲಿನಿಂದ ಬಾದಾಮಿ ಹಾಗೂ ಪಿಸ್ತಾ ತಿನ್ನಿಸಲಾಗುತ್ತದೆ ಎಂದು ಕುರಿ ವ್ಯಾಪಾರಿ ನರೇಂದ್ರ ಹೇಳುತ್ತಾರೆ.

ಮೇವಿಗೂ ಡಿಮ್ಯಾಂಡ್‌!: ದೂರದ ಊರುಗಳಿಂದ ಮಾರಾಟಕ್ಕೆ ಬರುವವರು ಮೇವನ್ನು ತಂದಿರುವುದಿಲ್ಲ. ಹೀಗಾಗಿ ಮೇವು ಮಾರಾಟಗಾರರಿಗೂ ಕೈ ತುಂಬಾ ಕಾಸು ಮಾಡುವ ಅವಕಾಶ ಇದಾಗಿದೆ. ಕುರಿ ಮಾರಾಟ ಸಂತೆಗಳಲ್ಲಿ ಮೇವು ಮಾರಾಟಗಾರರಿಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಕುರಿ ವ್ಯಾಪಾರಿಗಳು ಎರಡು ದಿನಕ್ಕೆ ಆಗುವಷ್ಟು ಮೇವು ತಮ್ಮೊಟ್ಟಿಗೆ ಬಂದರೂ ಎರಡು ದಿನಗಳಲ್ಲಿ ಕುರಿಗಳು ಮಾರಾಟವಾಗದ ಹಿನ್ನೆಲೆಯಲ್ಲಿ ಒಂದು ಕಟ್ಟು ಜೋಳದ ಕಡ್ಡಿಗೆ 30-40 ರೂ. ಕೊಟ್ಟು ಖರೀದಿಸುವುದು ನಡೆದಿದೆ. 

ಸಖತ್‌ ಟೇಸ್ಟಿ ಶಿರಾ ನಾಟಿ ತಳಿ: ಶಿರಾ, ಚಿತ್ರದುರ್ಗ ಬಯಲು ಸೀಮೆ ಭಾಗದಿಂದ ಬಂದ ನಾಟಿ ಟಗರಿಗೆ ಬೇಡಿಕೆ ಹೆಚ್ಚಿದೆ. ಅತ್ಯಂತ ರುಚಿಯಾದ ಮಾಂಸವಿರುವ ಈ ಟಗರು ಖರೀದಿಸಲು ಜನ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಕಡಿಮೆ ತೂಕ ಬಂದರೂ ರುಚಿಯ ಕಾರಣಕ್ಕೆ ನಾಟಿ ಟಗರು ಬಯಸುವ ಜನ ಹೆಚ್ಚಿದ್ದಾರೆ ಎಂದು ವ್ಯಾಪಾರಿ ಸುಬ್ರಮಣಿ ತಿಳಿಸಿದರು. ಶಿರಾ, ಚಳ್ಳಕೆರೆ, ಹಿರಿಯೂರು ಸೇರಿದಂತೆ ಇನ್ನಿತರೆ ಭಾಗಗಳಿಂದ ಮಂದೆ ಮಂದೆ ಟಗರುಗಳನ್ನು ತಂದಿರುವ ವ್ಯಾಪಾರಸ್ಥರು ಈ ಬಾರಿಯೂ ಹೆಚ್ಚು ಲಾಭದ ನಿರೀಕ್ಷೆಯಲ್ಲಿದ್ದಾರೆ. ಶಿರಾ ತಳಿ ಟಗರಿಗೆ  ಆರಂಭದ ಬೆಲೆ 7ರಿಂದ 35 ರಿಂದ 40 ಸಾವಿರ ರೂ.ಗಳವರೆಗೆ ಮಾರಾಟ ಬೆಲೆಯಿದೆ. 

ತಮಿಳುನಾಡಿನ ರಾಮ್‌ ಬುಲೆಟ್‌!: ತಮಿಳುನಾಡಿನ  ರಾಮ್‌ ಬುಲೆಟ್‌ ಟಗರಿಗೂ ಬೇಡಿಕೆ ಸಾಕಷ್ಟಿದೆ. ಫ್ರೆಂಚ್‌ ಮೂಲದ ಈ ತಳಿ ತಮಿಳುನಾಡು ಭೂ ಪ್ರದೇಶಕ್ಕೆ ಹೊಂದಿಕೊಂಡು ಸಾಕಷ್ಟಿರುತ್ತದೆ. ಆ ಭಾಗದಲ್ಲಿಯೂ ಸಾಕುವ ರಾಮ್‌ಬುಲೆಟ್‌ ಟಗರನ್ನು ಬಕ್ರೀದ್‌ ಹಬ್ಬದ ಮಾರಾಟಕ್ಕೆ ಕರೆತಂದಿದ್ದಾರೆ. ಆರಂಭದ ಬೆಲೆ 10ರಿಂದ 45 ಸಾವಿರ ರೂ.ಗಳಷ್ಟಿದೆ.  

ಬನ್ನೂರು ಕುರಿಗೂ ಡಿಮ್ಯಾಂಡ್‌!: ಅಷ್ಟೇನು ಎತ್ತರವಿಲ್ಲದ, ಎಳೆಪ್ರಾಯದ ಬನ್ನೂರು ಕುರಿ ಮಾಂಸಪ್ರಿಯರ ಫೇವರಿಟ್‌ ಎನಿಸಿಕೊಂಡಿವೆ. ಕುರಿ ತಳಿಗಳ ಪೈಕಿ ಬನ್ನೂರಿನ ಕುರಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಸಭೆ ಸಮಾರಂಭಗಳಿಗೆ ಇದೇ ಮಾಂಸ ಮಾಡುವ ರೂಢಿಯಿದೆ. ಅದರಲ್ಲಿಯೂ ಮಂಡ್ಯದ ಕಿರುಗಾವಲು, ಕನಕಪುರ, ಚನ್ನಪಟ್ಟಣ ಭಾಗದ ಜನರು ಹೆಚ್ಚು ಅಪೇಕ್ಷೀಸುವ ಮಾಂಸವಿದು. 

ನೋಡೋಕೆ ಬರೋರು ಸಾಕಷ್ಟು ಜನ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ಕುರಿ ಸಂತೆ ನಗರದ ಜನರನ್ನು ಸೆಳೆಯುತ್ತಿದ್ದು, ಕುರಿ ಖರೀದಿಸುವವರಿಗಿಂತಲೂ ಸಂತೆ ವೀಕ್ಷಿಸಲೆಂದೇ ಹೆಚ್ಚಿನ ಜನರು ಬರುತ್ತಿದ್ದಾರೆ. ವರ್ಷಕ್ಕೆ ಒಮ್ಮೆ ಮಾತ್ರ ಇಲ್ಲಿ ಕುರಿ ಮಾರಾಟ ಸಂತೆ ನಡೆಯುವುದರಿಂದ ಮೈದಾನಕ್ಕೆ ಲಗ್ಗೆಯಿಟ್ಟಿರುವ ಹತ್ತಾರು ಬಗೆಯ ಕುರಿ-ಮೇಕೆಗಳನ್ನು ಕಣ್ತುಂಬಿಕೊಳ್ಳಲು ಜನರು ಮೈದಾನದ ಕಡೆಗೆ ಬರುತ್ತಿದ್ದಾರೆ. 

ಎಲ್ಲೆಲ್ಲಿಂದ ಬಂದಿದ್ದಾವೆ ಬಕ್ರಿ? 
-ಬಾಗಲಕೋಟೆಯ ಜಿಲ್ಲೆಯ ಕೆರಾಡಿ 
-ಆಂಧ್ರಪ್ರದೇಶದ ಅನಂತಪುರ, ಮದನಪಲ್ಲಿ 
-ಹೈದ್ರಾಬಾದ್‌ನ ಹಸೀಲ್‌, ಡೈಮಂಡ್‌ ತಳಿ, 
-ಆನೇಕಲ್‌ನ ಜಮುನಾಪುರಿ 
-ಸಿಂಧೂನೂರು 
-ಬನ್ನೂರು ತಳಿ 
-ಅಮಿನಘಡ 
-ರಾಮ್‌ಬುಲೆಟ್‌ ಟಗರು
-ಶಿರಾದ ನಾಟಿ ಟಗರು
-ಬಳ್ಳಾರಿ 
-ಚಿತ್ರದುರ್ಗ 
-ದಾವಣಗೆರೆ 

ಬಕ್ರೀದ್‌ ಆಚರಣೆಯ ಮಹತ್ವ: ತ್ಯಾಗ, ಬಲಿದಾನದ ಪ್ರತೀಕವಾಗಿ ಮುಸ್ಲಿಮರು ಜಗತ್ತಿನಾದ್ಯಂತ ಆಚರಿಸುವ ಬಕ್ರಿದ್‌ ಹಬ್ಬಕ್ಕೆ ಶತಮಾನಗಳ ಇತಿಹಾಸವಿದೆ. ದೇವ ಪ್ರವಾದಿ ಇಬ್ರಾಹಿಮರು ಅಲ್ಲಾಹನ ಅಗ್ನಿಪರೀಕ್ಷೆಗೊಳಪಟ್ಟು ತಮ್ಮ ವೃದ್ದಾಪ್ಯದ ಆಸರೆಯಾಗಿದ್ದ ಪುತ್ರ ಇಸ್ಮಾಯಿಲರನ್ನು ಬಲಿ ಕೊಡಲು ಮುಂದಾಗುತ್ತಾರೆ.

ಪ್ರವಾದಿ ಇಬ್ರಾಹಿಮರ ದೃಢ ನಿರ್ಧಾರ ಮೆಚ್ಚಿದ ಅಲ್ಲಾಹನು ತನ್ನ ಚಮತ್ಕಾರದಿಂದ ಇಬ್ರಾಹಿಮರ ಮಗ ಇಸ್ಮಾಯಿಲರ ಜಾಗದಲ್ಲಿ ಕುರಿಯೊಂದು ಅವತರಿಸುವಂತೆ ಮಾಡುತ್ತಾನೆ. ಅಂದಿನಿಂದ ಅದರ ಸ್ಮರಣಾರ್ಥ ಜಗತ್ತಿನಾದ್ಯಂತ ಮುಸ್ಲಿಮರು ಬಕ್ರೀದ್‌ ಹಬ್ಬದ ದಿನ ಕುರಿ, ಮೇಕೆ, ಟಗರು, ಒಂಟೆ ಬಲಿ ಕೊಡುತ್ತಾರೆ. ಇಸ್ಲಾಮಿಕ್‌ ಕ್ಯಾಲೆಂಡರ್‌ನ ದುಲ್‌ಹಜ್‌ ತಿಂಗಳ 10ನೇ ತಾರೀಕಿಗೆ ಆಚರಿಸುವ ಬಕ್ರೀದ್‌ ಹಬ್ಬದ ದಿನ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ಅವಧಿಯಲ್ಲಿ ಪವಿತ್ರ ಹಜ್‌ ಯಾತ್ರೆ ಸಹ ನಡೆಯುತ್ತದೆ. 

* ಮಂಜುನಾಥ್‌ ಲಘುಮೇನಹಳ್ಳಿ/ ವೆಂ.ಸುನೀಲ್‌ಕುಮಾರ್‌

ಟಾಪ್ ನ್ಯೂಸ್

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ

7-sagara

Sagara: ಸಿಗಂದೂರು ಲಾಂಚ್; ವಾಹನಗಳ ಸಾಗಾಣಿಕೆ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horse racing: ಕುದುರೆ ಪಂದ್ಯ ಆಯೋಜನೆಗೆ ಷರತ್ತು ಬದ್ಧ ಅನುಮತಿ

Horse racing: ಕುದುರೆ ಪಂದ್ಯ ಆಯೋಜನೆಗೆ ಷರತ್ತು ಬದ್ಧ ಅನುಮತಿ

Theft Case: ಪಕ್ಕದ ಮನೆಯ ಬೆಕ್ಕಿಗೆ ಹಾಲು ಹಾಕಲು ಬಂದು ಚಿನ್ನಾಭರಣ ಕದ್ದ ಆರೋಪಿ ಬಂಧನ

Theft Case: ಪಕ್ಕದ ಮನೆಯ ಬೆಕ್ಕಿಗೆ ಹಾಲು ಹಾಕಲು ಬಂದು ಚಿನ್ನಾಭರಣ ಕದ್ದ ಆರೋಪಿ ಬಂಧನ

POCSO: ಪೋಕ್ಸೋ ಆರೋಪಿಗೆ ಸಂತ್ರಸ್ತೆ ಜತೆ ಮದುವೆಗೆ ಮಧ್ಯಂತರ ಜಾಮೀನು

POCSO: ಪೋಕ್ಸೋ ಆರೋಪಿಗೆ ಸಂತ್ರಸ್ತೆ ಜತೆ ಮದುವೆಗೆ ಮಧ್ಯಂತರ ಜಾಮೀನು

Renukaswamy Case: ಸಾಕ್ಷಿ ಸಿಕ್ಕಿವೆ, ಮೃತನಿಗೆ ನ್ಯಾಯ ಕಲ್ಪಿಸುತ್ತೇವೆ: ಆಯುಕ್ತ

Renukaswamy Case: ಸಾಕ್ಷಿ ಸಿಕ್ಕಿವೆ, ಮೃತನಿಗೆ ನ್ಯಾಯ ಕಲ್ಪಿಸುತ್ತೇವೆ: ಆಯುಕ್ತ

AlokMohan

Bengaluru: ಕಣ್ಣುಕುಕ್ಕುವ ಹೆಡ್‌ಲೈಟ್‌ ಹಾಕಿದ್ರೆ ಪ್ರಕರಣ: ಎಡಿಜಿಪಿ ಅಲೋಕ್‌

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

BRural

Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Chilli chicken Movie: ಜೂ. 21ಕ್ಕೆ ಚಿಲ್ಲಿ ಚಿಕನ್‌

Chilli chicken Movie: ಜೂ. 21ಕ್ಕೆ ಚಿಲ್ಲಿ ಚಿಕನ್‌

Sandalwood: ಶಿವಣ್ಣ ಭೈರತಿ ಮುಂದಕ್ಕೆ?

Sandalwood: ಶಿವಣ್ಣ ಭೈರತಿ ಮುಂದಕ್ಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.