ಕೈ ಕೊಟ್ಟವರಿಗೆ ಬಂಪರ್‌ ಕೊಡುಗೆ

Team Udayavani, Sep 19, 2019, 3:09 AM IST

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಪ್ರತಿಪಕ್ಷಗಳ ಶಾಸಕರಿಗೆ ಒಂದೊಂದೇ ಶಾಕ್‌ ನೀಡುತ್ತಿದ್ದು, ಅನರ್ಹ ಶಾಸಕರ ಕ್ಷೇತ್ರಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವುದರ ಜೊತೆಗೆ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆಯಾಗಿದ್ದ ಅನುದಾನಕ್ಕೂ ಕತ್ತರಿ ಹಾಕುವ ಮೂಲಕ ಆಘಾತ ಉಂಟು ಮಾಡಿದೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಸಕರ ಕ್ಷೇತ್ರಗಳಿಗೆ 25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಪ್ರತಿ ಶಾಸಕರ ಕ್ಷೇತ್ರಗಳಿಗೆ 5 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ, ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಿ ಆದೇಶ ಹೊರಡಿಸಲಾಗಿದೆ.

ಆದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿದ್ದು ಮೈತ್ರಿ ಸರ್ಕಾರದ ವಿರುದ್ದ ಬಂಡೆದ್ದು ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ನಗರದ ಐವರು ಅನರ್ಹ ಶಾಸಕರಿಗೆ ಮಾತ್ರ ಬಂಪರ್‌ ಕೊಡುಗೆ ನೀಡಲಾಗಿದ್ದು, ಅವರಿಗೆ ನೀಡಿದ ಯಾವುದೇ ಅನುದಾನ ಕಡಿತಗೊಳಿಸದೇ ಇರುವುದು ಹೊಸ ಸರ್ಕಾರ ಪ್ರತಿಪಕ್ಷಗಳ ಶಾಸಕರನ್ನು ಮಾತ್ರ ಗುರಿಯಾಗಿಸಿ ನಿರ್ಧಾರ ತೆಗೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುವಂತಿದೆ.

ಬಿಬಿಎಂಪಿ ಬಜೆಟ್‌ನಲ್ಲಿ ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ವಿಜಯನಗರ, ಪುಲಕೇಶಿನಗರ, ಶಿವಾಜಿನಗರ, ಸರ್ವಜ್ಞನಗರ, ಶಾಂತಿನಗರ, ಬ್ಯಾಟರಾಯನಪುರ ಕ್ಷೇತ್ರಗಳಿಗೆ ತಲಾ 20 ಕೋಟಿ ಗಾಂಧಿನಗರ ಹಾಗೂ ಯಶ್ವಂತಪುರ ಕ್ಷೇತ್ರಗಳಿಗೆ ತಲಾ 25 ಕೋಟಿ ತಲಾ 25 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಉಳಿದ ಕ್ಷೇತ್ರಗಳಿಗೆ ತಲಾ ಹತ್ತು ಕೋಟಿ ಎಂದು ನಿಗದಿ ಪಡಿಸಲಾಗಿತ್ತು.

ಆದರೆ, ಪರಿಷ್ಕೃತ ಬಜೆಟ್‌ನಲ್ಲಿ ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ನೀಡಿರುವ ಅನುದಾನವನ್ನು 20 ಕೋಟಿಯಿಂದ 5 ಕೋಟಿಗೆ ಇಳಿಸಲಾಗಿದೆ. ಆದರೆ, ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸರ್ಕಾರ ಬರಲು ಕಾರಣೀಕರ್ತರಾಗಿರುವ ಶಾಸಕರ ಕ್ಷೇತ್ರಗಳಾದ ಶಿವಾಜಿನಗರ, ಯಶವಂತಪುರ, ಕೆ.ಆರ್‌.ಪುರ, ಆರ್‌.ಆರ್‌. ನಗರ, ಮಹಾಲಕ್ಷ್ಮೀ ಲೇಔಟ್‌ ಅನುದಾನವನ್ನು ಕಡಿತಗೊಳಿಸದೇ ಯಥಾ ಸ್ಥಿತಿಯಲ್ಲಿಯೇಪರಿಷ್ಕೃತ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ.

ಆದರೆ, ಕಾಂಗ್ರೆಸ್‌ ಶಾಸಕರೇ ಪ್ರತಿನಿಧಿಸುವ ರಾಮಲಿಂಗಾ ರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್‌ ಹಾಗೂ ಅವರ ಪುತ್ರಿ ಸೌಮ್ಯ ರೆಡ್ಡಿ ಪ್ರತಿನಿಧಿಸುವ ಜಯನಗರ ಕ್ಷೇತ್ರದ ಅನುದಾನದ ಬಗ್ಗೆ ಯಾವುದೇ ಬದಲಾವಣೆ ಮಾಡದಿರುವುದು ಕೂಡ ಚರ್ಚೆಗೆ ಗ್ರಾಸವಾಗುವಂತಿದೆ. ಅದೇ ರೀತಿ ಬಿಬಿಎಂಪಿಗೆ 14ನೇ ಹಣಕಾಸು ಆಯೋಗದಿಂದ ಬಿಡುಗಡೆಯಾದ ಅನುದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಶಾಸಕರ ಕ್ಷೇತ್ರಗಳಿಗೂ 5 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.

ಪರಿಷ್ಕೃತ ಬಜೆಟ್‌ನಲ್ಲಿ ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಹೆಬ್ಬಾಳ, ವಿಜಯನಗರ, ಪುಲಕೇಶಿನಗರ, ಚಾಮರಾಜಪೇಟೆ, ಶಾಂತಿನಗರ, ಗಾಂಧಿನಗರ ಕ್ಷೇತ್ರಗಳಿಗೆ ನೀಡಿರುವ ಅನುದಾನವನ್ನು 5 ಕೋಟಿಯಿಂದ 2 ಕೋಟಿಗೆ ಇಳಿಕೆ ಮಾಡಲಾಗಿದ್ದು, ಅನರ್ಹರ ಕ್ಷೇತ್ರಗಳಿಗೆ ನೀಡಿರುವ ಅನುದಾನವನ್ನು ಮಾತ್ರ ಕಡಿತಗೊಳಿಸದೇ ಇರುವುದು ಕಾಂಗ್ರೆಸ್‌ ಶಾಸಕರನ್ನು ಕೆರಳಿಸುವಂತೆ ಮಾಡಿದೆ.

2019-20 ನೇ ಸಾಲಿನ ಬಿಬಿಎಂಪಿ ಪಾಲಿಕೆ ಆದಾಯ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬರುವ ಅನುದಾನವನ್ನು ಲೆಕ್ಕ ಹಾಕಿ 12997 ಕೋಟಿ ಆದಾಯದ ನಿರೀಕ್ಷೆ ಇಟ್ಟು ಬಜೆಟ್‌ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಆದರೆ, ವೆಚ್ಚದ ಪ್ರಮಾಣ 12,958 ಕೋಟಿ ಎಂದು ಅಂದಾಜಿಸಲಾಗಿತ್ತು. ಹೊಸ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಬಿಎಂಪಿ ಅನುಮೋದನೆ ಪಡೆದ ಬಜೆಟ್‌ಗೆ ತಡೆಯೊಡ್ಡಿ ಪರಿಷ್ಕೃರಣೆಗೊಳಿಸಲು ಸೂಚಿಸಿತ್ತು.

ಬಿಬಿಎಂಪಿ ಆಯವ್ಯಯದಲ್ಲಿ ನಿರೀಕ್ಷಿತ ಆದಾಯ ಬರದಿದ್ದರೂ, ವೆಚ್ಚಗಳಿಗೆ ಬರುವ ಅನುದಾನಕ್ಕೆ ಅನುಗುಣವಾಗಿ ಜಾಬ್‌ ಕೋಡ್‌ ನೀಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದರಿಂದ ಪ್ರತಿ ವರ್ಷ ಗುತ್ತಿಗೆದಾರರಿಗೆ ನೀಡುವ ಬಾಕಿ ಪ್ರಮಾಣ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಅನುದಾನ ಕಡಿತ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. 2018-19 ನೇ ಸಾಲಿಗೆ ಹೋಲಿಸಿದಾಗ 19-20 ನೇ ಸಾಲಿನಲ್ಲಿ ಪಾಲಿಕೆ ಸ್ವಂತ ಮೂಲಗಳಿಂದ ಸಂಗ್ರಹಿಸಿದ ಆದಾಯ ಮತ್ತು ವೆಚ್ಚದ ಲೆಕ್ಕದಲ್ಲಿ ವ್ಯತ್ಯಾಸವಿದ್ದು,

ಆದಾಯದ ಪ್ರಮಾಣ 148.51 ಇದ್ದು, ವೆಚ್ಚದ ಪ್ರಮಾಣ 151.90 ಯಷ್ಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುದಾನದಲ್ಲಿಯೂ ಅದೇ ರೀತಿಯ ವ್ಯತ್ಯಾಸವಿರುವುದರಿಂದ ಆಯವ್ಯಯ ಪರಿಷ್ಕರಿಸಲು ಸರ್ಕಾರ ಸೂಚನೆ ನೀಡಿದ್ದು, ಅದರಂತೆ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಯೋಜನೆಗಳಿಗೆ ಕತ್ತರಿ ಹಾಕಿ ಪರಿಷ್ಕೃತಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆಯಾಗಿದ್ದ ಹಣ ವಾಪಸ್‌ ಪಡೆಯಲಾಗಿದ್ದು ಕಾಂಗ್ರೆಸ್‌ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ.

ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಬಿಡುಗಡೆಯಾಗಿರುವ ಹಣವನ್ನು ವಾಪಸ್‌ ಪಡೆದರೆ ನಾವು ಹೇಗೆ ಕೆಲಸ ಮಾಡುವುದು. ಹಣ ಬಿಡುಗಡೆಯಾಗಿದೆ ಎಂದು ಜನರಿಗೆ ಭರವಸೆ ನೀಡಿ ಕೆಲಸ ಆರಂಭಿಸಿರುತ್ತೇವೆ. ಈ ಸಂದರ್ಭದಲ್ಲಿ ಹಣ ವಾಪಸ್‌ ಪಡೆದರೆ, ಜನರಿಗೆ ಏನು ಉತ್ತರ ಹೇಳುವುದು. ಈ ರೀತಿ ದ್ವೇಷ ಮಾಡಿದರೆ ಹೇಗೆ ?
-ಎನ್‌.ಎ. ಹ್ಯಾರೀಸ್‌, ಶಾಂತಿನಗರ ಕಾಂಗ್ರೆಸ್‌ ಶಾಸಕ

* ಶಂಕರ ಪಾಗೋಜಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೋಮವಾರ...

  • ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸ್‌ ಅಧಿಕಾರಿ,...

  • ಗಂಗಾವತಿ: ಪ್ರವಾಹದಿಂದಾಗಿ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ರಕ್ಷಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ...

  • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

  • ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ...