ಹೈಕೋರ್ಟ್‌ ಮೆಟ್ಟಿಲೇರಿದ ದೇವಾಲಯ ನೆರೆ ಪರಿಹಾರ

Team Udayavani, Sep 7, 2018, 6:20 AM IST

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಆಯ್ದ 81 ಅಧಿಸೂಚಿತ ದೇವಾಲಯಗಳ ಸುಮಾರು 1,230 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಪ್ರಕರಣ ಇದೀಗ ಹೈಕೋರ್ಟ್‌ ಮೆಟ್ಟಿಲೇರಿದೆ.

ಈ ಸಂಬಂಧ ಬೆಂಗಳೂರಿನ ಮಲ್ಲೇಶ್ವರದ ಭಾರತ ಪುನರುತ್ಥಾನ ಟ್ರಸ್ಟ್‌ನ ಟ್ರಸ್ಟಿ ಗಿರೀಶ್‌ ಭಾರದ್ವಾಜ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕೇವಲ ಹಿಂದು ದೇವಾಲಯಗಳನ್ನು ಗುರಿಯಾಗಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ತಾರತಮ್ಯದಿಂದ ಕೂಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಕೊಡಗು ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿ ಹಣಕ್ಕಾಗಿ ಮುಜರಾಯಿ ಇಲಾಖೆ ಅಧೀನದ ಅಧಿಸೂಚಿತ ದೇವಾಲಯಗಳಲ್ಲಿ ಸಂಗ್ರಹವಾಗಿರುವ ಹಣವನ್ನು ಸಿಎಂ ಪರಿಹಾರ ನಿಧಿಗೆ ವರ್ಗಾಯಿಸಲು ಆ.21ರಂದು ಮುಜರಾಯಿ ಇಲಾಖೆ (ಕಂದಾಯ) ಆದೇಶಿಸಿದೆ. ಇದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಅವುಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕು. ಬೇರೆ ಉದ್ದೇಶಗಳಿಗೆ ಅದು ಬಳಸುವಂತಿಲ್ಲ. ರಾಜ್ಯದ 35 ಸಾವಿರ ದೇವಾಲಯಗಳು ಮುಜರಾಯಿ ಇಲಾಖೆಯ ಅಧೀನದಲ್ಲಿವೆ. ಈ ಪೈಕಿ 16 ಜಿಲ್ಲೆಗಳ ಆಯ್ದ 81 ದೇವಾಲಯಗಳಲ್ಲಿರುವ 1,230.75 ಕೋಟಿ ರೂ. ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸಲು ಆದೇಶಿಸಲಾಗಿದೆ. ಸರ್ಕಾರದ ಈ ಕ್ರಮ  ಕಾನೂನು ಹಾಗೂ ಸಂವಿಧಾನ ಬಾಹಿರವಾಗಿದೆ. ಇತರೆ ಧರ್ಮದ ದೇವಾಲಯಗಳನ್ನು ಹೊರತುಪಡಿಸಿ ಕೇವಲ ಹಿಂದು ಧರ್ಮದ ದೇವಸ್ಥಾನಗಳನ್ನೇ ಗುರಿಯಾಗಿಸಿರುವ ಸರ್ಕಾರ, ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ