ಅವೈಜ್ಞಾನಿಕ ಯೋಜನೆಗಳಿಂದ ಕೆರೆಗಳಿಗೆ ಕುತ್ತು
Team Udayavani, Nov 27, 2019, 3:10 AM IST
ಬೆಂಗಳೂರು: ನಗರದ ಕೆರೆಗಳ ಹಣೆಬರ ಹವೇ ಸರಿ ಇಲ್ಲ. ಒಮ್ಮೆ ಅವುಗಳಿಂದ ನೊರೆ ಉಕ್ಕಿಹರಿಯುತ್ತದೆ. ಮತ್ತೂಮ್ಮೆ ಬೆಂಕಿಯೇ ಬೀಳುತ್ತದೆ. ಮೊಗದೊಮ್ಮೆ ಅವು ಮಾಯವಾಗುತ್ತವೆ. ಈಗ ತುಂಬಿದ ಕೆರೆಗಳು ಒಡೆಯುವ ಸರದಿ!
ಕೇವಲ ಒಂದೂವರೆ ತಿಂಗಳಲ್ಲಿ ಮೂರು ಕೆರೆಗಳ ಕೋಡಿ ಮತ್ತು ಏರಿ ಒಡೆದ ಘಟನೆಗಳು ವರದಿಯಾಗಿವೆ. ಅದರಿಂದ ಸುತ್ತಲಿನ ನಿವಾಸಿಗಳ ಬದುಕು ಬೀದಿಪಾಲಾಗಿದೆ. ನೆಲೆ ಕಳೆದುಕೊಂಡ ಜನ ದಿಕ್ಕುತೋಚದಾಗಿದ್ದಾರೆ. ಅಷ್ಟಕ್ಕೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ನಗರದಲ್ಲಿ ಮಳೆ ಪ್ರಮಾಣ ತುಂಬಾ ಕಡಿಮೆ. ಹಾಗಿದ್ದರೆ, ಕೆರೆಗಳು ಒಡೆಯುತ್ತಿರುವುದಾದರೂ ಯಾಕೆ? ಉತ್ತರ- ಅವೈಜ್ಞಾನಿಕ ನಿರ್ವಹಣೆ ಎನ್ನುತ್ತಾರೆ ತಜ್ಞರು.
ಬೆಂಗಳೂರು ಮೂರು ಸಾವಿರ ಅಡಿ ಎತ್ತರದಲ್ಲಿದೆ. ಇಲ್ಲಿ ವ್ಯಾಲಿ ಮಾದರಿಯಲ್ಲಿ ಕೆರೆಗಳು ಇವೆ. ಇದೇ ಮಾದರಿಯಲ್ಲಿ (ಮೇಲಿನಿಂದ ಕೆಳಕ್ಕೆ) ಇರುವ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಕೆಳಗಿನ ಕೆರೆಗಳನ್ನು ಮೊದಲು ಅಭಿವೃದ್ಧಿಪಡಿಸಿ, ಆಮೇಲೆ ಮೇಲಿನ ಕೆರೆಗಳನ್ನು ಅಭಿವೃದ್ಧಿಪಡಿಸಿದರೆ, ತಳಭಾಗದಲ್ಲಿರುವ ಕೆರೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆದರೆ, ಪ್ರಸ್ತುತ ಇದಾವುದೂ ಆಗುತ್ತಿಲ್ಲ.
ತಾಂತ್ರಿಕ ವಿಜ್ಞಾನಕ್ಕೆ ಯಾವುದೇ ಮಹತ್ವ ನೀಡಿಲ್ಲ, ತಜ್ಞರ ತಂಡವೂ ಇಲ್ಲ. ಈ ಯೋಜನೆಗಳಲ್ಲಿ ಎಂಜಿನಿಯರ್‌ಗಳನ್ನಷ್ಟೇ ಸೇರಿಸಿಕೊಳ್ಳು ತ್ತಾರೆ. ಕೆರೆಯ ಸಾಮರ್ಥ್ಯ ವೇನು, ಕೆರೆಯ ನೀರು ಯಾವ ಮಾರ್ಗ ದಲ್ಲಿ ಹರಿದು ಹೋಗಬೇಕು ಎನ್ನುವುದರ ಬಗ್ಗೆ ತಿಳಿದವರನ್ನು ನೇಮಿಸಿಕೊಂಡರೆ ಈ ಸಮಸ್ಯೆಯಾಗುವುದಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ (ಐಐಎಸ್ಸಿ)ಪ್ರೊ.ಟಿ.ವಿ. ರಾಮಚಂದ್ರ ತಿಳಿಸಿದರು.
ಮರುಕಳಿಸುವ ಸಾಧ್ಯತೆ: ಕೆರೆ ನೀರು ರಭಸವಾಗಿ ಯಾವ ಕಡೆ ಹರಿಯುತ್ತದೆ, ಸಾಮರ್ಥ್ಯದ ಮಟ್ಟ ಗುರುತಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಇಂತಹ ಅನಾಹುತಗಳು ಮರುಕಳಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಡಿಪಿಆರ್‌ಗಳಲ್ಲಿ ನೀರಿನ ಸಾರ್ಮಥ್ಯ ಮತ್ತು ಗುಣಮಟ್ಟದ ಬಗ್ಗೆ ಚರ್ಚೆಯಾಗುವುದೇ ಇಲ್ಲ. ಕೆರೆಗಳ ಸೌಂದರ್ಯಕ್ಕಷ್ಟೇ ಒತ್ತುನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆಗಳು ಆಗಬೇಕು ಎಂದೂ ಸಲಹೆ ನೀಡಿದರು.
16 ಡಿಪಿಆರ್‌ಗಳಲ್ಲೂ ಸಾಮ್ಯತೆ!: ಬಿಬಿಎಂಪಿ ಅಭಿವೃದ್ಧಿಪಡಿಸಲು ಹೊರಟಿರುವ 16 ಕೆರೆಗಳ ಸಮಗ್ರ ಯೋಜನಾ ವರದಿ (ಡಿಪಿಆರ್)ಯಲ್ಲಿನ ಹಲವು ಅಂಶಗಳಲ್ಲಿ ಸಾಮ್ಯತೆ ಇದ್ದು, ನಕಲು ಮಾಡಿ ಸಿದ್ಧಪಡಿಸಿದಂತಿದೆ ಎಂಬುದು ತಜ್ಞರ ಅಭಿಮತ.
ಕಲ್ಕೆರೆ ರಾಮಪುರ ಕೆರೆ, ಚಿಕ್ಕಬೇಗೂರು, ಕೋನಪ್ಪನ ಅಗ್ರಹಾರ, ಜುನ್ನಸಂದ್ರ, ಗುಂಜೂರು ಮೌಜಿ, ಗುಂಜೂರು ಪಾಳ್ಯ, ಸೀತಾರಾಮ ಪಾಳ್ಯ, ಕೋಣನಕುಂಟೆ, ವಾರನಾಸಿ, ಗೌಡನಪಾಳ್ಯ, ಬಸಪುರ, ಬಸವನಪುರ, ಮೀನಾಕ್ಷಿ ಕೆರೆ, ಚೌಡೇಶ್ವರಿ ಕೆರೆ, ಬೈರಸಂದ್ರ ಕೆರೆ, ಯಲಚೇನಹಳ್ಳಿ ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ 198 ಕೋಟಿ ಮೊತ್ತದ ಯೋಜನೆ ರೂಪಿಸಿದೆ. ಆದರೆ, ಅವುಗಳಿಗೆ ಸಂಬಂಧಿಸಿದ ಡಿಪಿಆರ್‌ನಲ್ಲಿಯ ಹಲವು ಅಂಶಗಳು ಒಂದೇ ರೀತಿಯಾಗಿವೆ ಎಂದು ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಆಂಡ್ ದಿ ಎನ್ವಿರಾನ್‌ಮೆಂಟ್‌ನ ಪರಿಸರ ವಿಜ್ಞಾನಿ ಡಾ.ಶರಚ್ಚಂದ್ರ ಲೆಲೆ ತಿಳಿಸುತ್ತಾರೆ.
ಅಭಿವೃದ್ಧಿಪಡಿಸಲು ಹೊರಟಿರುವ ಕೆರೆಗಳ ನೀರಿನ ಸಾರ್ಮಥ್ಯ ಏನು? ಆ ಭಾಗದಲ್ಲಿ ಯಾವ ವನ್ಯಜೀವಿಗಳು ಬರುತ್ತವೆ? ಅಂದುಕೊಂಡ ರೀತಿಯಲ್ಲಿ ಅಭಿವೃದ್ಧಿಪಡಿಸಿದರೆ, ಆ ವನ್ಯಜೀವಿಗಳು ಕೆರೆಗಳಿಗೆ ಹೊಂದಿಕೊಳ್ಳುತ್ತವೆಯೇ ಎನ್ನುವ ಅಂಶಗಳ ಬಗ್ಗೆ ಯಾವುದೇ ಗಮನ ನೀಡಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.
ಕೆರೆ ಕೋಡಿ ಒಡೆದ ಆರೋಪ: ವಿಚಾರಣೆ
ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದು ಸಾರ್ವಜನಿಕ ಆಸ್ತಿ -ಪಾಸ್ತಿ ಹಾನಿಯುಂಟು ಮಾಡಿದ ಆರೋಪಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಮಂಗಳವಾರ ವಿಚಾರಣೆ ನಡೆಸಿದ್ದಾರೆ.
ಕೆರೆಯ ಬಳಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಗೃಹರಕ್ಷಕ ಸಿಬ್ಬಂದಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗಿದೆ. ಅವರಿಂದ ಮಾಹಿತಿ ಪಡೆದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಮತ್ತೂಮ್ಮೆ ಅವರನ್ನು ವಿಚಾರಣೆ ನಡೆಸಲು ತೀರ್ಮಾನಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿಲಾಗಿದೆ ಎಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.
ಮತ್ತೂಂದೆಡೆ ಜಲಮಂಡಳಿಯ ಸಹಾಯಕ ಅಭಿಯಂತರ ಕಾರ್ತಿಕ್ ಅವರನ್ನು ಕೂಡ ವಿಚಾರಣೆ ನಡೆಸಲಾಗಿದೆ. ಅವರಿಂದ ಕೆಲವು ಅಗತ್ಯ ಮಾಹಿತಿ ಲಭ್ಯವಾಗಿದೆ. ಅವರ ಹೇಳಿಕೆ ಆಧರಿಸಿ ಕೆಲವರನ್ನು ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ. ತನಿಖಾ ದೃಷ್ಟಿಯಿಂದ ವಿಚಾರಣೆಗೊಳಪಡುವವರ ಮಾಹಿತಿ ಬಹಿರಂಪಡಿಸಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕೆರೆಯ ನೀರನ್ನು ಬೇರೆಡೆ ಹರಿಸಿ ಕೋಡಿ ಮಟ್ಟವನ್ನು ತಗ್ಗಿಸಲು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ ಎಂದು ನ.20ರಂದು ಸಹಾಯಕ ಅಭಿಯಂತರ ಕಾರ್ತಿಕ್ ಪಾಲಿಕೆಯ ಪಾಲಿಕೆಯ ಸಹಾಯಕ ಅಭಿಯಂತರ ಶಿಲ್ಪಾ ಅವರ ಬಳಿ ಕೇಳಿದ್ದರು. ಈ ಮಧ್ಯೆ ನ.24ರಂದು ಕೆರೆ ಕೋಡಿಯ ಸಮೀಪ ಜೆಸಿಬಿಯಿಂದ ಮಣ್ಣು ಅಗೆದ ಪರಿಣಾಮ ಭಾರೀ ಪ್ರಮಾಣದ ನೀರು ಹರಿದುಹೋಗಿತ್ತು. ಹೀಗಾಗಿ ಕಾರ್ತಿಕ್ ಅಥವಾ ಅವರ ಕಡೆಯವರು ಕೆರೆಯ ಕಟ್ಟೆ ಹೊಡೆಸಿರುವ ಸಾಧ್ಯತೆಯಿದೆ ಎಂದು ಬಿಬಿಎಂಪಿಯ ಲಿಂಗೇಗೌಡ ದೂರು ನೀಡಿದ್ದಾರೆ.
ಲೋಕಾಯುಕ್ತ ದೂರು
ಬೆಂಗಳೂರು: ಹುಳಿಮಾವು ಪ್ರದೇಶದಲ್ಲಿರುವ ಕೆರೆಕಟ್ಟೆಯೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಘಟನೆ ಕಾರಣವಾದ ವ್ಯಕ್ತಿಗಳ ವಿರುದ್ಧ ಯಾವ ರೀತಿಯ ಕ್ರಮಕೈಗೊಂಡಿದ್ದಿರಿ ಹಾಗೂ ಸಂತ್ರಸ್ತರಿಗೆ ಪರಿಹಾರದ ಜತೆಗೆ ಸುರಕ್ಷತೆ ಕ್ರಮಕೈಗೊಂಡಿರುವ ಬಗ್ಗೆ ಡಿ.10ರ ಮಧ್ಯಾಹ್ನ 3 ಗಂಟೆಯೊಳಗೆ ಲೋಕಾಯುಕ್ತರಿಗೆ ಲಿಖೀತ ರೂಪದಲ್ಲಿ ವರದಿ ನೀಡುವಂತೆ ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ, ಜಲಮಂಡಳಿ ಅಧ್ಯಕ್ಷರು, ಬಿಬಿಎಂಪಿ ವೈದ್ಯಕೀಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಘಟನೆಗೆ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಯಾವ ರೀತಿ ಕ್ರಮಕೈಗೊಳ್ಳಲಾಗಿದೆ. ಒಟ್ಟಾರೆ ಕೆರೆ ಹೊಡೆದು ಉಂಟಾಗಿರುವ ನೆರೆ ಕುರಿತ ಸುರಕ್ಷತಾ ಕ್ರಮಗಳ ಬಗ್ಗೆ ಸಂಪೂರ್ಣ ವರದಿಯನ್ನು ನೀಡಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ.
ಎನ್‌ಸಿಸಿ ವಿದ್ಯಾರ್ಥಿಗಳಿಂದ ಕೆರೆ ಸ್ವಚ್ಛತೆ
ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿರುವ 35 ಎಕರೆ ವಿಸ್ತೀರ್ಣದ ಹಾಡೋಸಿದ್ಧಾಪುರ ಕೆರೆಯನ್ನು ಸ್ವಚ್ಛ ಮಾಡಲು ಕರ್ನಾಟಕ ಮತ್ತು ಗೋವಾದ ಎನ್‌ಸಿಸಿ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಪರಿಸರವಾದಿ ಆನಂದ್ ಮಲಿಗವಾಡ್ ಅವರ ನೇತೃತ್ವದಲ್ಲಿ ಕೆರೆ ಸ್ವಚ್ಛತೆ ಕೆಲಸ ನಡೆಯಲಿದೆ. ಆನಂದ್ ಮಲಿಗವಾಡ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಈ ಕೆರೆಯನ್ನು ಸ್ವಚ್ಛ ಮಾಡುವ ಕೆಲಸ ನಡೆದಿಲ್ಲ. ಅಲ್ಲದೆ ಕೆರೆಯ ಸುತ್ತಮತ್ತಲಿನ ಪ್ರದೇಶದಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಕೆರೆ ಅವನತಿ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಬುಧವಾರ ನ.27ಕ್ಕೆ ಕೆರೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದರು.
ಹಾಡೋಸಿದ್ಧಪುರ ಕೆರೆಗೆ ಒಂದಿಕೊಂಡಿರುವಂತೆ ಈ ಭಾಗದಲ್ಲಿ ಒಟ್ಟು ಆರು ಕೆರೆಗಳಿದ್ದು, ಹಂತ ಹಂತವಾಗಿ ಈ ಕೆರೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು. ಕೆರೆ ಸ್ವಚ್ಛತೆ 2,500 ಎನ್‌ಸಿಸಿ ವಿದ್ಯಾರ್ಥಿಗಳು ಭಾಗವಹಿಸುವ ಸಾಧ್ಯತೆ ಇದೆ. ಈ ಮಕ್ಕಳ ಮೂಲಕ ಕೆರೆ ಸ್ವಚ್ಛತೆಯ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಆನಂದ್ ಹೇಳಿದರು. ಕರ್ನಾಟಕ ಮತ್ತು ಗೋವಾದ ಎನ್‌ಸಿಸಿ ಘಟಕದ ಮುಖ್ಯಸ್ಥರಾದ ಎಲ್.ಕೆ ಜೈನ್ ಅವರು ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ. ಪೊಲೀಸ್ ವರಿಷ್ಟಾಧಿಕಾರಿ ರವಿ ಡಿ ಚೆನ್ನಣ್ಣ ನವರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಆಗುತ್ತಿರುವ ಸಮಸ್ಯೆಗಳೇನು?: ಕೆರೆ ಅಭಿವೃದ್ಧಿ ಮಾಡುವಾಗ ಅದರಲ್ಲಿನ ಹೂಳು ತೆಗೆಯುವುದು ತೆಗೆದ ಹೂಳಿನಿಂದಲೇ ಕೆರೆಗಳ ಏರಿ ಹಾಗೂ ತಡೆಗೋಡೆ ನಿರ್ಮಾಣ ಮಾಡುವುದಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಕೆರೆಗೆ ಸೇರುವ ಕೊಳಚೆ ನೀರನ್ನು ಮೊತ್ತೂಂದು ಕೆರೆಗೆ ಸಾಗಿಸುವ ಮಾರ್ಗ ಗಳನ್ನು ಕಂಡುಕೊಳ್ಳಲಾಗು ತ್ತಿದೆ. ಶಾಶ್ವತ ವಾಗಿ ಕೆರೆಗೆ ಸೇರುವ ಕೊಳಚೆ ನೀರನ್ನು ತಡೆಯುವ ಕೆಲಸವಾಗುತ್ತಿಲ್ಲ. ಅಲ್ಲದೆ, ಅಳಿವಿನಂಚಿನಲ್ಲಿ ಇರುವ ಕೆರೆಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈಗಾ ಗಲೇ ಆ ಕೆರೆಗಳಲ್ಲಿ ಇರುವ ಜಲಚರ ಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎನ್ನುತ್ತಾರೆ ಪರಿಸರ ತಜ್ಞರು.
ಪ್ರಶ್ನೆಗಳಿಗೆ ನಿಖರ ಉತ್ತರವಿಲ್ಲ: ಕೆರೆಗಳ ವಿನ್ಯಾಸ ಹೇಗಿರಬೇಕು? ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ನೀರಿನ ಸಂಗ್ರಹ ಎಷ್ಟಿರಬೇಕು? ಕೆರೆಯ ನೀರು ಯಾವ ಮಾರ್ಗದಲ್ಲಿ ಹರಿಯಬೇಕು? ಅಂತರ್ಜಲ ಮರುಪೂರಣ ಹೇಗಿರಬೇಕು? ಇಂತಹ ಹಲವು ಪ್ರಶ್ನೆಗಳಿಗೆ ನಿಖರ ಉತ್ತರ ಕೆರೆಗಳ ನಿರ್ವಹಣೆ ಮಾಡುತ್ತಿರುವ ಸ್ಥಳೀಯ ಸಂಸ್ಥೆಗಳ ಬಳಿ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕೆರೆಗಳ ಅಭಿವೃದ್ಧಿ ಯೋಜನೆ ರೂಪಿಸಿ ಕೊಳ್ಳುವಾಗ ಅದರಲ್ಲಿ ಭೂವಿಜ್ಞಾನಿ ಗಳು, ಜಲವಿಜ್ಞಾನಿಗಳು, ಪರಿಸರ ಹಾಗೂ ವನ್ಯಜೀವಿ ತಜ್ಞರನ್ನು ಒಳಗೊಂಡ ತಂಡ ಸೇರಿದಂತೆ ಇದಾವುದೂ ಇರುವುದಿಲ್ಲ. ಹಾಗೊಂದು ವೇಳೆ ಈ ಸಮಗ್ರ ಸದಸ್ಯರನ್ನು ಒಳಗೊಂಡ ತಂಡವಿದ್ದರೆ, ಆಗುತ್ತಿರುವ ಅನಾಹುತಗಳನ್ನು ತಪ್ಪಿಸಬಹುದು ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ (ಐಐಎಸ್ಸಿ)ಪ್ರೊ.ಟಿ.ವಿ. ರಾಮಚಂದ್ರ.
* ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ
ಮಳೆಯಬ್ಬರ ಎದುರಿಸಲು ಸಕಲ ಸಿದ್ಧತೆ : ಮುಂದಿನ ವಾರ 4 ಎನ್ಡಿಆರ್ಎಫ್ ತಂಡ ರಾಜ್ಯಕ್ಕೆ
ನಟಿ ಚೇತನಾ ಸಾವು: ಶಸ್ತ್ರಚಿಕಿತ್ಸೆ ಮಾಡಿದ್ದ ಆಸ್ಪತ್ರೆಗೆ ಬೀಗ
ಗುತ್ತಿಗೆದಾರರ ಬೇಜವಾಬ್ದಾರಿ, ಕಾಮಗಾರಿ ವಿಳಂಬದಿಂದ ಮನೆಗಳಿಗೆ ನೀರು :ಎಸ್.ಟಿ.ಸೋಮಶೇಖರ್ ಕಿಡಿ
ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧ ನಡೆಸಿದರೆ ಕ್ಷಮೆ ಇಲ್ಲ : ಗೃಹ ಸಚಿವ ಎಚ್ಚರಿಕೆ