ಕಾರಿನಲ್ಲಿ ಒಬ್ಬರಿದ್ದರೆ ಮಾಸ್ಕ್ ಕಡ್ಡಾಯವಲ್ಲ
Team Udayavani, Nov 3, 2020, 2:35 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದಲ್ಲಿ ಕಾರ್ನಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸುವುದಕ್ಕೆ ಸಂಬಂಧಿಸಿದಂತೆ ಪಾಲಿಕೆ ಷರತ್ತು ಬದ್ಧ ವಿನಾಯಿತಿ ನೀಡಿದೆ. ಕಾರ್ನ ಎಲ್ಲ ಕಿಟಕಿ (ಗಾಜು)ಮುಚ್ಚಿದ್ದು ಹಾಗೂ ಒಬ್ಬರೇ ಪ್ರಯಾಣಿಸುತ್ತಿದ್ದರೆ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.
ಕಾರಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಧರಿಸಬೇಕು ಎನ್ನುವುದಕ್ಕೆ ಅಪಸ್ವರ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ಕೋರಿ ಆಯುಕ್ತರು ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದರು. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಕೋವಿಡ್ 19 ನಿಯಂತ್ರಣ ತಜ್ಞರ ಸಮಿತಿ ಸಭೆ ನಡೆಸಿದ್ದು, ಸಭೆಯಲ್ಲಿ ಕಾರ್ನಲ್ಲಿ ಒಬ್ಬರೇ ಇದ್ದರೆ ಮಾಸ್ಕ್ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.
ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದು, ಕಿಟಕಿಯ ಗಾಜು ಮುಚ್ಚಿದ್ದರೆ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಆದರೆ, ಗಾಜು ಮುಚ್ಚದೆ, ಕಾರಿನಲ್ಲಿ ಒಬ್ಬರಿಗಿಂತ ಹೆಚ್ಚು ಪ್ರಯಾಣಿಕರು ಇದ್ದರೆ ಎಲ್ಲರೂ ಕಡ್ಡಾಯ ವಾಗಿ ಮಾಸ್ಕ್ ಧರಿಸಬೇಕು. ಇಲ್ಲವಾದರೆ ದಂಡ ವಿಧಿಸಲು ಅವಕಾಶವಿದೆ ಎಂದು ಆಯುಕ್ತರು ಆದೇಶದಲ್ಲಿ ಉಲ್ಲೇಖೀಸಿದ್ದಾರೆ.
ಬೈಕ್ ಸವಾರರಿಗೆ ಮಾಸ್ಕ್ ಕಡ್ಡಾಯ: ನಗರದಲ್ಲಿ ಬೈಕ್ ಸವಾರರಿಗೆ ಮಾಸ್ಕ್ ಧರಿಸುವುದರಿಂದ ಯಾವುದೇ ರೀತಿಯ ವಿನಾಯಿತಿ ನೀಡಿಲ್ಲ. ಬೈಕ್ ಚಾಲಾಯಿಸುವಾಗ ಒಬ್ಬರೇ ಇದ್ದರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆದೇಶ ಮಾಡಲಾಗಿದೆ.