ಮೆಟ್ರೋ ಕಾಮಗಾರಿ ಮುಗಿದರೂ ತಪ್ಪದ ತೊಂದರೆ

Team Udayavani, Jun 12, 2019, 3:04 AM IST

ಕೆಂಗೇರಿ: ಮೈಸೂರು ರಸ್ತೆಯ ಕೆಂಗೇರಿ ಸಮೀಪ ಮೂರು ವರ್ಷಗಳಿಂದ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಮೆಟ್ರೋ ಸೇತುವೆ ನಿರ್ಮಾಣ ಬಹುತೇಕ ಮುಗಿದಿದೆ. ಆದರೂ ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿಲ್ಲ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ.

ಮೈಸೂರು ರಸ್ತೆಯ ಕೆಂಗೇರಿ ಭಾಗದ ಅಗತ್ಯವಿರುವ ಕೆಲವೆಡೆ ವಾಹನಗಳು ಯು ಟರ್ನ್ ತೆಗೆದುಕೊಳ್ಳಲು ರಸ್ತೆ ವಿಭಜಕ ತೆರವು ಮಾಡಲಾಗಿತ್ತು. ಆದರೆ, ಮೆಟ್ರೋ ಮಾರ್ಗದ ಕಾಮಗಾರಿ ಆರಂಭಿಸಿದ ನಂತರ ಬಿಎಂಆರ್‌ಸಿಎಲ್‌, ಎಲ್ಲಾ ಕಡೆ ವಿಭಜಕ ಅಳವಡಿಸಿದೆ.

ಹೀಗಾಗಿ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರ ಸಿಬ್ಬಂದಿ, ಕೆಂಗೇರಿಯ ಕೋಟೆ ಹಾಗೂ ವಿದ್ಯಾಪೀಠ ರಸ್ತೆಗೆ ಹೋಗುವವರು ಕಿ.ಮೀಗಟ್ಟಲೆ ಸುತ್ತಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ. ಜನ ಇಷ್ಟೊಂದು ಸಮಸ್ಯೆ ಎದುರಿಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಮತ್ತು ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಂಗೇರಿಯು ಈ ಭಾಗದ ಪ್ರಮುಖ ಮಾರುಕಟ್ಟೆಯಾಗಿದ್ದು, ಇಲ್ಲಿ ದಿನ ನಿತ್ಯ ಸಂತೆ ನಡೆಯುತ್ತದೆ. ಹೀಗಾಗಿ ವ್ಯಾಪಾರಿಗಳು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಈಗಾಗಲೆ ಕಾಮಗಾರಿ ಸಹ ಬಹುತೇಕ ಪೂರ್ಣಗೊಂಡಿದೆ. ಹೀಗಿರುವಾಗ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕಾದ್ದು ಬಿಎಂಆರ್‌ಸಿಎಲ್‌ ಕರ್ತವ್ಯ. ಆದರೆ ನಿಗಮವು ಆ ಕೆಲಸ ಮಾಡುತ್ತಿಲ್ಲ. ಜನಪ್ರತಿನಿಧಿಗಳೂ ಪ್ರಶ್ನಿಸುತ್ತಿಲ್ಲ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸೇತುವೆ ಕೆಳಗೆ ಕಸ: ಸಂಚಾರ ಸಮಸ್ಯೆ ಒಂದೆಡೆಯಾದರೆ, ಮೆಟ್ರೋ ಸೇತುವೆ ಕೆಳಗೆ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದೆ. ಗುಂಡಿಗಳು ಇರುವ ಸ್ಥಳದಲ್ಲಿ ನೀರು ನಿಂತು, ದುರ್ವಾಸನೆ ಬೀರುತ್ತಿದ್ದು, ಜನತೆ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಸೇತುವೆ ಕೆಳಗೆ ರಾತ್ರಿ ಕಸ ಸುರಿಯುತ್ತಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದೆ, ಇದು ಮೆಟ್ರೋಗೆ ಸಂಬಂಧಿಸಿದ್ದು, ಅವರ ಬಳಿ ಹೋಗಿ ಎನ್ನುತ್ತಾರೆ. ಮೆಟ್ರೋ ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಸಮಸ್ಯೆ ಯಾರ ಬಳಿ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ.
-ಶಾರದಮ್ಮ, ಕೆಂಗೇರಿ ನಿವಾಸಿ

ಈ ಭಾಗದಲ್ಲಿ ಕಾಮಗಾರಿ ಮುಗಿದು ತಿಂಗಳುಗಳೇ ಕಳೆದಿದ್ದು, ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಸರಕಾರಿ ಶಾಲೆ ಮಕ್ಕಳು, ಪಾದಚಾರಿಗಳಿಗಂತೂ ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ.
-ಶ್ರೀನಿವಾಸ್‌, ಸ್ಥಳೀಯ ನಿವಾಸಿ

* ರವಿ ವಿ.ಆರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಮತದಾರರೊಬ್ಬರು, "ಕ್ಷೇತ್ರಕ್ಕೆ ಅತಿಥಿ ಶಾಸಕರಾಗಬೇಡಿ, ಬಂದು...

  • ಬೆಂಗಳೂರು: "ಗಿರೀಶ್‌ ಕಾರ್ನಾಡ್‌ ಅವರನ್ನು ಎಡಪಂಥೀಯ ಎನ್ನುವುದರ ಬಗ್ಗೆ ನನಗೆ ಆಕ್ಷೇಪಣೆ ಇದೆ. ಕನ್ನಡ ಚಿತ್ರರಂಗದಲ್ಲಿ ಅವರಂತಹ ಪ್ರಖರ ಚಿಂತಕ ಮತ್ತೊಬ್ಬರಿಲ್ಲ...

  • ಬೆಂಗಳೂರು: ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅಭಿನಂದನ ಬಳಗದ ವತಿಯಿಂದ ಜೂ.18 ರಂದು ನಗರದಲ್ಲಿ "ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ)-80' ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ...

  • ಬೆಂಗಳೂರು: ವಿಮರ್ಶೆಗೆ ನಿಷ್ಠರಾಗಿದ್ದ ಗಿರಡ್ಡಿ ಗೋವಿಂದರಾಜ ಅವರು ತಮ್ಮ ಬದುಕಿನುದ್ದಕ್ಕೂ ಅದನ್ನು ಒಂದು ವ್ರತದಂತೆ ಆಚರಿಸಿದರು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ...

  • ಬೆಂಗಳೂರು: ಮೈತ್ರಿ ಸರ್ಕಾರದ ನಡೆಯನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ನಾಯಕರೊಂದಿಗೆ ಚರ್ಚೆಗೆ ಸಿದ್ಧವಿದ್ದು, ಮಾತುಕತೆಗೆ ಸಮಯ ನಿಗದಿಪಡಿಸುವಂತೆ...

ಹೊಸ ಸೇರ್ಪಡೆ