ಹಳೇ ದ್ವೇಷಕ್ಕೆ ಇಬ್ಬರು ವ್ಯಾಪಾರಿಗಳ ಕೊಲೆ

Team Udayavani, May 16, 2019, 3:02 AM IST

ಬೆಂಗಳೂರು: ವೈಯಕ್ತಿಕ ದ್ವೇಷಕ್ಕೆ ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಾಪಾರಿಗಳನ್ನು ಪರಿಚಯಸ್ಥರೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಬುಧವಾರ ನಡೆದಿದೆ.

ವೈಯಕ್ತಿಕ ದ್ವೇಷಕ್ಕೆ ಮೀನಿನ ವ್ಯಾಪಾರಿಯನ್ನು ಆರು ಮಂದಿ ದುಷ್ಕರ್ಮಿಗಳು ಆತನ ಮನೆಯಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ಡಿ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ.

ರೋಷನ್‌ನಗರ ನಿವಾಸಿ ಝರಾರ್‌(38) ಕೊಲೆಯಾದ ಮೀನು ವ್ಯಾಪಾರಿ. ಈ ಸಂಬಂಧ ಆತನ ಮನೆ ಸಮೀಪದಲ್ಲೇ ವಾಸವಾಗಿರುವ ಮೊಹಮ್ಮದ್‌ ಇಸಾಕ್‌, ಮೊಹಮ್ಮದ್‌ ಘೋಷ್‌, ಸಾದಿಕ್‌, ರಿಜ್ವಾನ್‌, ಸೈಯದ್‌ ಮತ್ತು ಸಲ್ಮಾನ್‌ ಬಂಧಿತರು.

ಆರೋಪಿಗಳೆಲ್ಲರೂ ಸೋದರ ಸಂಬಂಧಿಗಳಾಗಿದ್ದು, ಬುಧವಾರ ಮುಂಜಾನೆ 4.30ರ ಸುಮಾರಿಗೆ ಝರಾರ್‌ನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎಂದು ಪೊಲೀಸರು ಹೇಳಿದರು.

ರೋಷನ್‌ನಗರದಲ್ಲಿ ಮೀನು ವ್ಯಾಪಾರ ಮಾಡುವ ಝರಾರ್‌ಗೆ ಈ ಮೊದಲು ಆರೋಪಿ ಇಸಾಕ್‌ ಸಹೋದರಿ ಜತೆ ಸ್ನೇಹವಿತ್ತು. ಈ ವಿಚಾರ ತಿಳಿದ ಇಸಾಕ್‌ ಸಹೋದರಿಗೆ ಮತ್ತೂಮ್ಮ ಝರಾರ್‌ ಜತೆ ಮಾತನಾಡದಂತೆ ಬುದ್ದಿ ಹೇಳಿದ್ದ.

ಹೀಗಾಗಿ ಆಕೆ ಕೂಡ ಆತನಿಂದ ದೂರವಾಗಿದ್ದರು. ಅದಕ್ಕೆ ಆಕ್ರೋಶಗೊಂಡಿದ್ದ ಝರಾರ್‌, ಪ್ರತಿನಿತ್ಯ ಮದ್ಯದ ಅಮಲಿನಲ್ಲಿ ಆರೋಪಿಗಳ ಮನೆ ಮುಂದೆ ಗಲಾಟೆ ಮಾಡುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಮನೆಯಲ್ಲೇ ಭೀಕರ ಹತ್ಯೆ: ಮದ್ಯದ ಅಮಲಿನಲ್ಲಿ ಝರಾರ್‌ ಮಂಗಳವಾರ ರಾತ್ರಿಯೂ ಇಸಾಕ್‌ ಮನೆ ಮುಂದೆ ಗಲಾಟೆ ಮಾಡಿದ್ದು, ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಸ್ಥಳೀಯರು ಇಬ್ಬರನ್ನು ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದರು.

ರಂಜಾನ್‌ ಹಬ್ಬದ ಪ್ರಯುಕ್ತ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಊಟ ಮಾಡಲು ಸ್ಥಳೀಯರು ಝರಾರ್‌ ಮನೆ ಬಾಗಿಲು ಬಡಿದು ಎದ್ದೇಳುವಂತೆ ಕೂಗಿದ್ದಾರೆ. ಆದರೆ, ಮಧ್ಯದ ಅಮಲಿನಲ್ಲಿದ್ದ ಆತ, ಇಸಾಕ್‌ ಕುಟುಂಬದರೇ ಬಾಗಿಲು ಬಡಿದ್ದಾರೆ ಎಂದು ಭಾವಿಸಿ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಇದರಿಂದ ಆಕ್ರೋಶಕೊಂಡ ಆರೋಪಿಗಳು ಮಾರಕಾಸ್ತ್ರಗಳನ್ನು ತಂದು ಆತನ ಮನೆಯಲ್ಲೇ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ನಿಂಬೆಹಣ್ಣು ವ್ಯಾಪಾರಿ ಹತ್ಯೆ: ಮತ್ತೂಂದು ಪ್ರಕರಣದಲ್ಲಿ ಹಳೇ ದ್ವೇಷಕ್ಕೆ ನಿಂಬೆಹಣ್ಣು ವ್ಯಾಪಾರಿಯನ್ನು ನಾಲ್ವರು ದುಷ್ಕರ್ಮಿಗಳು ಕೆ.ಆರ್‌. ಮಾರುಕಟ್ಟೆ ಆವರಣದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಹಳೆಗುಡ್ಡದಹಳ್ಳಿ ನಿವಾಸಿ ಭರತ್‌(31) ಕೊಲೆಯಾದವ. ಕೃತ್ಯ ಎಸಗಿದ ರೌಡಿಶೀಟರ್‌ ಮಾರ್ಕೆಟ್‌ ವೇಲು ಸಂಬಂಧಿ, ಹಣ್ಣಿನ ವ್ಯಾಪಾರಿ ಶರವಣ, ಆತನ ಸಹೋದರ ವೆಂಕಟೇಶ್‌ ಹಾಗೂ ಇತರರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಕೆ.ಆರ್‌.ಮಾರುಕಟ್ಟೆಯ ಪೂರ್ವ ದ್ವಾರದ ಬಳಿ ಭರತ್‌ ನಿಂಬೆಹಣ್ಣು ವ್ಯಾಪಾರ ಮಾಡುತ್ತಿದ್ದು, ಅದೇ ಸ್ಥಳದಲ್ಲಿ ಶರವಣ ಹಣ್ಣಿನ ವ್ಯಾಪಾರ ಮಾಡುತ್ತಾನೆ. ಆರೇಳು ತಿಂಗಳ ಹಿಂದೆ ಭರತ್‌ ಸಂಬಂಧಿ ಮಹಿಳೆಯೊಬ್ಬರು ಹೂವಿನ ಅಂಗಡಿ ಇಡಲು ಮುಂದಾಗಿದ್ದರು. ಈ ವೇಳೆ ಮಾರ್ಕೆಟ್‌ ವೇಲು ಬಂಬಲಿಗರು ಗಲಾಟೆ ಮಾಡಿ, ಅಡ್ಡಿಪಡಿಸಿದ್ದರು. ಆಗ ಆರೋಪಿ ಶರವಣ ಮಧ್ಯಸ್ಥಿಕೆ ವಹಿಸಿ ಭರತ್‌ಗೆ ಸಹಕಾರ ನೀಡಿದ್ದ.

ಆದರೆ, ಈ ಮಧ್ಯೆ ಮೂರು ತಿಂಗಳ ಹಿಂದೆ ಏಕಾಏಕಿ ಶರವಣ, ಭರತ್‌ ಜತೆ ವೈಯಕ್ತಿಕ ವಿಚಾರಕ್ಕೆ ಜಗಳ ಮಾಡಿಕೊಂಡು, ಮಾರ್ಕೆಟ್‌ ವೇಲು ಜತೆ ಗುರುತಿಸಿಕೊಂಡಿದ್ದ. ಇದರಿಂದ ಆಕ್ರೋಶಗೊಂಡಿದ್ದ ಭರತ್‌ 15 ದಿನಗಳ ಹಿಂದೆ ಜೆ.ಜೆ.ನಗರದ ಗೋರಿಪಾಳ್ಯದಲ್ಲಿ ಶರವಣ ಮೇಲೆ ಹಲ್ಲೆ ನಡೆಸಿ,ಜೈಲು ಸೇರಿದ್ದ ಎಂದು ಪೊಲೀಸರು ಹೇಳಿದರು.

ಮಾರುಕಟ್ಟೆಯಲ್ಲೇ ಹರಿದ ನೆತ್ತರು: ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಭರತ್‌ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಮಾರುಕಟ್ಟೆಯ ಪೂರ್ವ ದ್ವಾರದ ಬಳಿ ಹೋಗುವಾಗ, ಮಾರಕಾಸ್ತ್ರಗಳನ್ನು ಹಿಡಿದು ಬಂದ ಆರೋಪಿಗಳು ಭರತ್‌ ಮೇಲೆ ಮನಸೋಇಚ್ಚೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಭರತ್‌ನ ಕಿವಿ, ಎದೆ ಭಾಗಕ್ಕೆ ಗಂಭೀರವಾದ ಗಾಯಗಳಾವೆ.

ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫ‌ಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಈ ಸಂಬಂಧ ಭರತ್‌ ಸಹೋದರ ಅಪ್ಪು ಎಂಬಾತ ಶರವಣ ಮತ್ತು ಆತನ ಸಹೋದರ ವೆಂಕಟೇಶ್‌ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ ಎಂದು ಪೊಲೀಸರು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ನಗರದ ಜನನಿಬಿಡ ಪ್ರದೇಶ, ಪ್ಯಾಲೆಸ್‌ ಗುಟ್ಟಹಳ್ಳಿಯ ಸಾಮ್ರಾಟ್‌ ಜ್ಯುವೆಲ್ಲರಿ ಒಳಗೆ ನುಗ್ಗಿ, ದರೋಡೆಗೆ ಯತ್ನಿಸಿ, ವಿಫ‌ಲರಾಗಿ ಗುಂಡು ಹಾರಿಸಿ ಮರಳಲು...

  • ಬೆಂಗಳೂರು: ನಗರದ ವಿವಿಧ ಮಾರುಕಟ್ಟೆಗಳಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳ ಅಬ್ಬರ ನಡೆಯುತ್ತಿದೆ. ಕೆಲವು ಅಧಿಕಾರಿಗಳು ಸದ್ದಿಲ್ಲದೆ...

  • ಬೆಂಗಳೂರು: ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಪುತ್ರಿಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ತಂದೆಯನ್ನು ಭೀಕರವಾಗಿ ಕೊಲೆಮಾಡಿದ ಘಟನೆಯ ನೆನಪು ಮಾಸುವ ಮುನ್ನವೇ,...

  • ಬೆಂಗಳೂರು: ಪ್ರತಿನಿತ್ಯ 40 ಲಕ್ಷ ಪ್ರಯಾಣಿಕರಿಗೆ ಸುರಕ್ಷಿತ ಸಂಚಾರ ಸೇವೆ ನೀಡುತ್ತಿರುವ ಬಿಎಂಟಿಸಿ ಸಿಬ್ಬಂದಿಯ ಜೀವನಕ್ಕೆ ಭದ್ರತೆ ಇಲ್ಲದಂತಾಗಿದ್ದು, ಒಂದು...

  • ಬೆಂಗಳೂರು: ಮೂತ್ರಪಿಂಡ ವೈಫ‌ಲ್ಯದಿಂದ ಬಳಲುತ್ತಿದ್ದ ತಾಯಿಗೆ ಮಗಳು ತನ್ನ ನಿಶ್ಚಿತಾರ್ಥ ರದ್ದು ಮಾಡಿಕೊಂಡು ಮೂತ್ರಪಿಂಡ ದಾನಮಾಡಿ ಜನ್ಮದಾತೆಯ ಜೀವ ಉಳಿಸಿದ್ದಾಳೆ....

ಹೊಸ ಸೇರ್ಪಡೆ