ಮೂವರ ಬಲಿಪಡೆದ ಕಳಪೆ ಕಾಮಗಾರಿ

Team Udayavani, Jun 18, 2019, 3:10 AM IST

ಬೆಂಗಳೂರು: ಹೆಬ್ಬಾಳ ಹೊರ ವರ್ತುಲ ರಸ್ತೆಯ ಲುಂಬಿನಿ ಗಾರ್ಡನ್‌ ಬಳಿಯ ಜೋಗಪ್ಪ ಲೇಔಟ್‌ನಲ್ಲಿ ಬೆಂಗಳೂರು ಜಲಮಂಡಳಿ ನಿರ್ಮಿಸುತ್ತಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಮೇಲ್ಛಾವಣಿ ಕುಸಿದು ಇಬ್ಬರು ಎಂಜಿನಿಯರ್‌ ಸೇರಿ ಮೂವರು ಮೃತಪಟ್ಟು, 20 ಕಾರ್ಮಿಕರು ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಎಂಜಿನಿಯರ್‌ಗಳಾದ ದಾವಣಗೆರೆಯ ಕೃಷ್ಣ ಯಾದವ್‌ (25), ತಮಿಳುನಾಡಿನ ಪ್ರಭುರಾವ್‌ (29) ಹಾಗೂ ಕಾಮಗಾರಿ ಮೇಲ್ವಿಚಾರಕ, ಪಶ್ಚಿಮ ಬಂಗಾಳದ ಸುಮಂತ್‌ಕರ್‌ (22) ಮೃತರು. ಮಹಂತೇಶ್‌, ಶೀತಲ್‌, ಜಿತೇಶ್‌ ಕುಮಾರ್‌, ಎಸ್‌.ಕೆ.ಅಮಾನುಲ್‌, ಗುಡ್ಡು ಕುಮಾರ್‌, ಪಾಂಡವ್‌ ಕುಮಾರ್‌, ರುದ್ರೇಶ್‌, ಮನು, ಅರುಣ್‌, ಅಬ್ದುಲ್‌, ಬಿಲಾಸ್‌, ನಿರಂಜನ್‌, ಅಕ್ತರ್‌, ಭೈಯಾಲಾಲ್‌, ತರುಣ್‌, ರುದ³ಪ್ಪ, ಕಾರ್ತಿಕ್‌ ಸೇರಿ 20 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ಗುತ್ತಿಗೆದಾರ ಹಾಗೂ ಇಲಾಖೆಯ ಎಂಜಿನಿಯರ್‌ಗಳ ವಿರುದ್ಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು ಜಲಮಂಡಳಿಯಿಂದ ಹೆಬ್ಬಾಳ ಹೊರವರ್ತುಲ ರಸ್ತೆಯ ಲುಂಬಿನಿ ಗಾರ್ಡನ್‌ ಸಮೀಪದ ಜೋಗಪ್ಪ ಲೇಔಟ್‌ನ 25 ಎಕರೆ ಪ್ರದೇಶದಲ್ಲಿ 100 ಎಂಎಲ್‌ಡಿ ಸಾಮರ್ಥ್ಯದ ನಾಲ್ಕು ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸೂರತ್‌ ಮೂಲದ ಏನ್ವಿರೋ ಕಂಟ್ರೋಲ್‌ ಅಸೋಸಿಯೇಟ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದು, ಯೋಜನಾ ಸಲಹೆಗಾರರಾಗಿ ಎನ್‌ಜಿಎಸ್‌ ಎಂಜಿನಿಯರ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ವಹಿಸಲಾಗಿತ್ತು. ಈ ನಡುವೆ ಏನ್ವಿರೋ ಕಂಟ್ರೋಲ್‌ ಅಸೋಸಿಯೇಟ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಎಸ್‌ಎಂಸಿ ಇನ್ಫಾಸ್ಟ್ರಕ್ಚರ್‌ಗೆ ಸಿವಿಲ್‌ ಕಾಮಗಾರಿಯನ್ನು ಉಪಗುತ್ತಿಗೆ ನೀಡಿದೆ.

ಈ ನಾಲ್ಕು ಘಟಕಗಳ ಪೈಕಿ ಒಂದು ಘಟಕದ 50 ಅಡಿ ಎತ್ತರದ ಮೇಲ್ಛಾವಣಿಯ ಶೇ.98ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ಸೋಮವಾರ ಬೆಳಗ್ಗೆ 7 ಗಂಟೆಯಿಂದ 20ಕ್ಕೂ ಹೆಚ್ಚು ಕಾರ್ಮಿಕರು, ಬಾಕಿ ಕಾಮಗಾರಿ ಪೂರ್ಣಗೊಳಿಸುತ್ತಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಸ್ಥಳಕ್ಕೆ ಬಂದ ಎಸ್‌ಎಂಸಿ ಇನ್ಫಾಸ್ಟ್ರಕ್ಚರ್‌ ಸಂಸ್ಥೆಯ ಇಬ್ಬರು ಎಂಜಿನಿಯರ್‌ಗಳು, ಮೇಲ್ವಿಚಾರಕ ಒಳಭಾಗದಿಂದ ಮೇಲ್ಛಾವಣಿ ಕಾಮಗಾರಿ ಪರಿಶೀಲಿಸುತ್ತಿದ್ದರು. ಈ ವೇಳೆ ಕಬ್ಬಿಣದ ಕಂಬಿಗಳು (ಸೆಂಟ್ರಿಂಗ್‌) ಏಕಾಏಕಿ ಕುಸಿದಿದ್ದು, ಕೆಳಗೆ ನಿಂತಿದ್ದವರ ಮೇಲೆ ಕಂಬಿಗಳು ಮತ್ತು ಸಿಮೆಂಟ್‌ ಮಿಶ್ರಿಣ ಬಿದ್ದಿದ್ದೆ. ಜೋರು ಸದ್ದು ಕೇಳಿ ಘಟಕದ ಬಳಿ ಬಂದ ಇತರೆ ಕಾರ್ಮಿಕರು ಕೂಡಲೇ ಕಂಬಿಗಳನ್ನು ತೆರವುಗೊಳಿಸಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಮತ್ತೂಂದೆಡೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ, 20 ಮಂದಿಯ ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಸಂತೋಷ್‌ ಕುಮಾರ್‌ ನೇತೃತ್ವದ ಶ್ವಾನವನ್ನೊಳಗೊಂಡ 28 ಮಂದಿಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು 23 ಮಂದಿಯ ತುರ್ತು ಸ್ಪಂದನಾ ತಂಡ(ಕ್ಯೂಆರ್‌ಟಿ) ಗ್ಯಾಸ್‌ ಕಟರ್‌, ರ್ಯಾಡರ್‌ ಹಾಗೂ ಇತರೆ ಉಪಕರಣಗಳಿಂದ ಸುಮಾರು ಎರಡು ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ, ಮಧ್ಯಾಹ್ನ 1.30ರ ಸುಮಾರಿಗೆ ಅವಶೇಷಗಳಡಿ ಸಿಲುಕಿದ್ದ ಎಲ್ಲರನ್ನು ಆ್ಯಂಬುಲೆನ್ಸ್‌ಗಳ ಮೂಲಕ ಸಮೀಪದ ನಾಲೈದು ಆಸ್ಪತ್ರೆಗಳಿಗೆ ರವಾನಿಸಿದೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಕೃಷ್ಣಯಾದವ್‌, ಪ್ರಭುರಾವ್‌, ಸುಮಂತ್‌ಕರ್‌ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದರು.

ಸಚಿವರು, ಪೊಲೀಸರ ಭೇಟಿ: ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಸಚಿವ ಕೃಷ್ಣಬೈರೇಗೌಡ, ಶಾಸಕ ಬೈರತಿ ಸುರೇಶ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಮೂರ್ತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ: ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಮೇಲ್ಛಾವಣಿಯ ಕಾಂಕ್ರೀಟ್‌ ಹಾಕುವಾಗ ಒಳಭಾಗದಲ್ಲಿ ಹಾಕಲಾಗಿದ್ದ ಕಬ್ಬಿಣದ ಕಂಬಿಗಳು ಕುಸಿದು ಮೂವರು ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ರಕ್ಷಣಾ ಪಡೆಗಳು ಶ್ವಾನ ಹಾಗೂ ರ್ಯಾಡರ್‌ ಮೂಲಕ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾಮಗಾರಿ ವೇಳೆ ರಕ್ಷಣಾ ಕ್ರಮಗಳ ಬಗ್ಗೆ ಲೋಪದೋಷಗಳಿದ್ದಲ್ಲಿ, ಐಐಎಸ್‌ಸಿ ತಜ್ಞರ ಮೂಲಕ ಮಾಹಿತಿ ಪಡೆದು ತನಿಖೆಗೆ ಆದೇಶ ನೀಡವಾಗುವುದು. ಜತೆಗೆ ಜಲಮಂಡಳಿಯಿಂದಲೂ ದುರ್ಘ‌ಟನೆಗೆ ನಿಖರ ಕಾರಣ ತಿಳಿಸುವಂತೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಕಳಪೆ ಕಾಮಗಾರಿ: ಜಲಮಂಡಳಿಯಿಂದ ನಿರ್ಮಿಸುತ್ತಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾಮಗಾರಿಗೆ ಬಳಸುತ್ತಿರುವ ಸಿಮೆಂಟ್‌, ಮರಳು ಹಾಗೂ ಕಬ್ಬಿಣಗಳು ಉತ್ತಮ ಗುಣಮಟ್ಟದಲ್ಲ. ಹೀಗಾಗಿ ಘಟಕದ ಮೇಲ್ಛಾವಣಿ ಕುಸಿದಿದೆ. ಅಲ್ಲದೆ, ಕುಸಿದು ಬಿದ್ದಿರುವ ಮೇಲ್ಛಾವಣಿಯನ್ನು ಗಮನಿಸಿದರೆ ಯಾವ ಗುಣಮಟ್ಟದ ಸಿಮೆಂಟ್‌ ಹಾಗೂ ಇತರೆ ವಸ್ತುಗಳನ್ನು ಬಳಸಿದ್ದಾರೆ ಎಂಬುದು ತಿಳಿಯುತ್ತದೆ. ಮೇಲ್ಛಾವಣಿಗೆ ಬಳಸಿರುವ ಸಿಮೆಂಟ್‌ ಕಳಪೆ ಗುಣಮಟ್ಟದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಾರ್ಮಿಕರಿಗೆ ಭದ್ರತೆ ಇಲ್ಲ: ಒಂದು ವರ್ಷದಿಂದ ಜಲಮಂಡಳಿಯ ಕಾಮಗಾರಿಯಲ್ಲಿ ತೊಡಗಿರುವ ಬಿಹಾರ, ಪಶ್ಚಿಮ ಬಂಗಾಳ ಸೇರಿ ನೆರೆ ರಾಜ್ಯಗಳ ಸುಮಾರು 500 ಮಂದಿ ಕಾರ್ಮಿಕರಿಗೆ ಸರಿಯಾದ ಭದ್ರತೆ ಇಲ್ಲವಾಗಿದೆ. ಮಾಸಿಕ 18 ಸಾವಿರ ರೂ. ನಿಗದಿ ಮಾಡಿ ನೆರೆ ರಾಜ್ಯದಿಂದ ಕರೆ ತಂದಿರುವ ಕಾರ್ಮಿಕರಿಗೆ ನಿಯಮದ ಪ್ರಕಾರ ರಕ್ಷಣಾ ಜಾಕೇಟ್‌ ಹಾಗೂ ಇತರೆ ಯಾವುದೇ ರಕ್ಷಣಾ ಕ್ರಮಗಳನ್ನು ಗುತ್ತಿಗೆದಾರ ಸಂಸ್ಥೆಗಳು ಕೈಗೊಂಡಿಲ್ಲ. ಈ ಬಗ್ಗೆ ಜಲಮಂಡಳಿಯ ಅಧಿಕಾರಿಗಳು ಸಹ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕೆಲ ಕಾರ್ಮಿಕರು ಆರೋಪಿಸಿದರು.

ಆರು ಆರೋಪಿಗಳ ಬಂಧನ: ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಮೇಲ್ಚಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು, ಜಲಮಂಡಳಿಯ ಇಬ್ಬರು ಸಹಾಯಕ ಎಂಜಿನಿಯರುಗಳು ಹಾಗೂ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಸಂಸ್ಥೆ ನಾಲ್ವರು ಪ್ರತಿನಿಧಿಗಳು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಎಸ್‌ಎಂಸಿ ಇನ್ಫಾಸ್ಟ್ರಕ್ಚರ್‌ನ ಬೆಂಗಳೂರು ಉಸ್ತುವಾರಿ ಭರತ್‌, ಎಂಜಿನಿಯರ್‌ ಕಾರ್ತಿಕ್‌, ಏನ್ವಿರೋ ಕಂಟ್ರೋಲ್‌ ಅಸೋಸಿಯೇಟ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ‌ ಸುರೇಂದ್ರ, ಮೆಕಾನಿಕಲ್‌ ಎಂಜಿನಿಯರ್‌ ಗೌರವ್‌ ಹಾಗೂ ಜಲಮಂಡಳಿಯ ಸಹಾಯಕ ಎಂಜಿನಿಯರ್‌ಗಳಾದ ಹನೀಫ್ ಮತ್ತು ಭಾಗ್ಯಾ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪರಿಶೀಲನೆಗೆ ತೆರಳಿದ್ದವರ ಸಾವು: ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣೆ ಘಟಕದ ಕಾಮಗಾರಿ ಪರಿಶೀಲನೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ ಎನ್‌ವೈರೋ ಕಂಟ್ರೋಲ್‌ ಸಂಸ್ಥೆಯ ಮೂವರು ಪರಿಶೀಲನಾಧಿಕಾರಿಗಳೂ ದುರಂತದಲ್ಲಿ ಮೃತಪಟ್ಟಿದ್ದಾರೆ! ಸೋಮವಾರ ಬೆಳಗ್ಗೆ 11 ಗಂಟೆಗೆ ಅಂದಾಜು 30 ಅಡಿ ಎತ್ತರದ ಘಟಕದ ಮೇಲೆ ಪರಿಶೀಲನೆ ಮಾಡುವಾಗಲೇ, ಚಾವಣಿ ಕುಸಿದ ಪರಿಣಾಮ, ಘಟಕದ ಮೇಲಿಂದ ಬಿದ್ದು ಮೂವರೂ ಮೃತಪಟ್ಟಿದ್ದಾರೆ. ಪ್ರಶ್ನೆಗೆ ಉತ್ತರಿಸಬೇಕಾದವರೇ ಮೃತಪಟ್ಟಿರುವುದು, ಪ್ರಾಥಮಿಕ ಹಂತದ ತನಿಖೆಗೆ ತೊಡಕಾಗಿ ಪರಿಣಮಿಸಿದೆ.

ಘಟಕದ ಪರಿಶೀಲನೆ ಮಾಡುವ ಹೊಣೆ ಹೊತ್ತಿದ್ದ ಅಧಿಕಾರಿಗಳಾದ ಕಂಪನಿಯ ಕ್ಷೇತ್ರ ಎಂಜಿನಿಯರ್‌ ಪ್ರಭುರಾವ್‌, ಕೃಷ್ಣಯಾದವ್‌ ಮತ್ತು ಮೇಲ್ವಿಚಾರಕರಾದ ಸುಮಂತ್‌ಕರ್‌ ಸಾವನ್ನಪ್ಪಿರುವುದರಿಂದ ಕಾಮಗಾರಿ ಸಂದರ್ಭದಲ್ಲಿ ಹಲಗೆಯನ್ನು ಜೋಡಿಸುವಾಗ ಏನಾದರು ಲೋಪವಾಗಿದೆಯಾ ಅಥವಾ ಗುಣಮಟ್ಟವೇ ಕಳಪೆಯಾಗಿತ್ತೇ ಎನ್ನುವುದನ್ನು ತಿಳಿದುಕೊಳ್ಳಲು ತನಿಖಾ ವರದಿ ಬರುವವರೆಗೆ ಕಾಯಬೇಕಾಗಿದೆ ಎನ್ನುತ್ತಾರೆ ಜಲ ಮಂಡಳಿಯ ಅಧಿಕಾರಿಗಳು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ