ರಸ್ತೆ ಪರಿಕರಗಳಿಗೂ “ಏಕರೂಪ ವಿನ್ಯಾಸ’

Team Udayavani, May 13, 2019, 3:07 AM IST

ಚಿತ್ರಗಳು: ಫ‌ಕ್ರುದ್ದೀನ್‌ ಎಚ್‌.

ಬೆಂಗಳೂರು: ನಗರದ ರಸ್ತೆ, ಫ‌ುಟ್‌ಪಾತ್‌ಗಳಿಗೆ ಒಂದು ಮಾದರಿ ಇರುವಂತೆಯೇ ರಸ್ತೆಗಳಲ್ಲಿ ಅಳವಡಿಸುವ ಪರಿಕರಗಳಿಗೂ “ಏಕರೂಪದ ವಿನ್ಯಾಸ ನೀತಿ’ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ.

ರಸ್ತೆ ಮತ್ತು ಫ‌ುಟ್‌ಪಾತ್‌ಗಳ ಬದಿಯಲ್ಲಿ ಅಳವಡಿಸುವ ಬ್ಯಾರಿಕೇಡ್‌, ವಿಭಜಕಗಳು ಒಂದೊಂದು ಕಡೆ, ಒಂದೊಂದು ರೀತಿ ಇವೆ. ಕೆಲವೆಡೆ ಸಾಕಷ್ಟು ಎತ್ತರದಲ್ಲಿದ್ದರೆ, ಹಲವೆಡೆ ಚಿಕ್ಕದಾಗಿವೆ. ಈ ವಿಭಿನ್ನ ಮಾದರಿಗಳಿಂದ ರಸ್ತೆಗಳ ಅಂದಗೆಡುತ್ತಿದೆ.

ಆದ್ದರಿಂದ ಸೌಂದರ್ಯ ಹೆಚ್ಚಿಸುವುದರ ಜತೆಗೆ ಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಡೀ ನಗರದ ರಸ್ತೆಗಳಲ್ಲಿ ಅಳವಡಿಸುವ ಪರಿಕರಗಳಿಗೆ ಒಂದೇ ಮಾದರಿ ಅನುಸರಿಸಲು ಬಿಬಿಎಂಪಿ ಉದ್ದೇಶಿಸಿದ್ದು, ಈ ಸಂಬಂಧ ಪ್ರತ್ಯೇಕ ನೀತಿಯೊಂದನ್ನು ರೂಪಿಸಲು ಪಾಲಿಕೆ ನಿರ್ಧರಿಸಿದೆ.

ತಿಂಗಳಲ್ಲಿ ಪ್ರಸ್ತಾವನೆ?: ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ನಿರ್ದೇಶನದ ಮೇರೆಗೆ ಈ ನೀತಿ ರೂಪಿಸಲಾಗುತ್ತಿದೆ. ಮೇ ಅಂತ್ಯದೊಳಗೆ ಇದು ಸಿದ್ಧಗೊಳ್ಳಲಿದ್ದು, ಅದರಂತೆ ಮುಂದಿನ ದಿನಗಳಲ್ಲಿ ಒಂದೇ ರೀತಿಯ ವಿನ್ಯಾಸದ ರಸ್ತೆ ಪರಿಕರಗಳ ಅಳವಡಿಕೆ ಆಗಲಿದೆ.

“ಈಗಾಗಲೇ ರಸ್ತೆ ಮತ್ತು ಫ‌ುಟ್‌ಪಾತ್‌ಗಳಿಗೆ ಒಂದು ನಿರ್ದಿಷ್ಟ ಗುಣಮಟ್ಟ ಇದೆ; ಆದರೆ, ರಸ್ತೆ ಫ‌ರ್ನಿಚರ್‌ಗಳು ಅದರಲ್ಲೂ ಮುಖ್ಯವಾಗಿ ವಿಭಜಕಗಳು, ಬ್ಯಾರಿಕೇಡ್‌ಗಳಿಗೆ ಯಾವುದೇ ನಿರ್ದಿಷ್ಟ ಮಾದರಿ ಇಲ್ಲ. ಆದ್ದರಿಂದ ಮುಖ್ಯರಸ್ತೆಗಳು ಮತ್ತು ಉಪ ಮುಖ್ಯರಸ್ತೆಗಳಿಗೆ ಏಕರೂಪದ ವಿನ್ಯಾಸ ಸಿದ್ಧಪಡಿಸಲು ಉದ್ದೇಶಿಸಲಾಗಿದೆ.

ಈ ಸಂಬಂಧ ಮೂರ್‍ನಾಲ್ಕು ವಿನ್ಯಾಸಗಳನ್ನು ರೂಪಿಸಿದ್ದು, ಅದರಲ್ಲಿ ಒಂದನ್ನು ಅಂತಿಮಗೊಳಿಸಿ, ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಮುಖ್ಯ ಎಂಜಿನಿಯರ್‌ (ಮುಖ್ಯರಸ್ತೆ) ಸೋಮಶೇಖರ್‌ ಸ್ಪಷ್ಟಪಡಿಸಿದರು. ಒಂದೊಂದು ರಸ್ತೆಗಳಲ್ಲಿ ಆಯಾ ವ್ಯಾಪ್ತಿಯ ಎಂಜಿನಿಯರ್‌ಗಳು ತಮ್ಮದೇ ಆದ ವಿನ್ಯಾಸ ಅಳವಡಿಸಿಕೊಳ್ಳುತ್ತಿದ್ದಾರೆ.

ಕೆಲವರು ಸ್ಟೇನ್‌ಲೆಸ್‌ ಸ್ಟೀಲ್‌ ಮತ್ತೆ ಹಲವರು ಮೈಲ್ಡ್‌ ಸ್ಟೀಲ್‌, ಕಾಂಕ್ರೀಟ್‌ ಬ್ಲಾಕ್‌ಗಳು, ಡಕ್ಟ್ಗಳನ್ನು ಅಳವಡಿಸಿಕೊಂಡಿದ್ದಾರೆ. ಅವುಗಳ ಗಾತ್ರದಲ್ಲೂ ತುಂಬಾ ವ್ಯತ್ಯಾಸಗಳಿವೆ. ಇನ್ನು ಹಲವು ರಸ್ತೆಗಳಲ್ಲಿ ಅಳವಡಿಕೆಯೇ ಆಗಿರುವುದಿಲ್ಲ.

ಹಾಗಾಗಿ, ಪಾದಚಾರಿಗಳು ರಸ್ತೆಗಿಳಿಯುವ ಹಾಗೂ ವಾಹನಗಳು ಫ‌ುಟ್‌ಪಾತ್‌ಗೆ ಏರುವ ಉದಾಹರಣೆಗಳೂ ಇವೆ. ಇದೆಲ್ಲದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ಮಾದರಿಯನ್ನು ರೂಪಿಸಲು ಆದೇಶಿಸಲಾಗಿದೆ.

“ನಗರದಲ್ಲಿ ಸುಮಾರು 19 ಸಾವಿರ ಕಿ.ಮೀ. ಉದ್ದದ ರಸ್ತೆಗಳಿವೆ. ಪಾದಚಾರಿಗಳು ಹಾಗೂ ವಾಹನಗಳ ಸಂಖ್ಯೆ ಹೆಚ್ಚಿರುವ ಮುಖ್ಯ ಮತ್ತು ಉಪ ಮುಖ್ಯರಸ್ತೆಗಳಲ್ಲಿ ಈ ಏಕರೂಪದ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಅಂತಹ ಮಾರ್ಗಗಳನ್ನು ಈಗ ಗುರುತಿಸುವ ಕೆಲಸವೂ ಜಾರಿಯಲ್ಲಿದೆ’ ಎಂದು ಮತ್ತೂಬ್ಬ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ. ನಾಗರಾಜ್‌ ತಿಳಿಸಿದರು.

ರಸ್ತೆ ಅಭಿವೃದ್ಧಿಗೆ ಮಾರ್ಗಸೂಚಿ: ಈ ಮಧ್ಯೆ ಇಡೀ ಬೆಂಗಳೂರು ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ರಸ್ತೆಗಳು, ಫ‌ುಟ್‌ಪಾತ್‌ಗಳ ಗುಣಮಟ್ಟ, ವಿನ್ಯಾಸ ಮತ್ತಿತರ ಅಂಶಗಳನ್ನು ಮಾರ್ಗಸೂಚಿ ಒಳಗೊಂಡಿರುತ್ತದೆ. ಈ ಕುರಿತ ಕರಡು ಸಿದ್ಧಗೊಳ್ಳುತ್ತಿದ್ದು, ಶೀಘ್ರ ಹೊರಬರಲಿದೆ ಎಂದು ಬಿಬಿಎಂಪಿ ಎಂಜಿನಿಯರ್‌ ಒಬ್ಬರು ತಿಳಿಸಿದರು.

ಬೀದಿ ದೀಪಗಳಿಗೂ ಇರಲಿ ಆದ್ಯತೆ: ರಸ್ತೆ ಪರಿಕರಗಳಲ್ಲಿ ಬ್ಯಾರಿಕೇಡ್‌ಗಳ ಜತೆಗೆ ಬೀದಿ ದೀಪಗಳು ಕೂಡ ಬರುತ್ತವೆ. ಇವುಗಳ ವ್ಯವಸ್ಥೆ ಕೂಡ ನಗರದಲ್ಲಿ ಸಮರ್ಪಕವಾಗಿಲ್ಲ. ಹೀಗಾಗಿ, ಬೀದಿ ದೀಪಗಳನ್ನೂ ಪರಿಗಣಿಸಬೇಕು ಎಂದು ತಜ್ಞರು ಒತ್ತಾಯಿಸುತ್ತಾರೆ. ಹೊರವರ್ತುಲ ರಸ್ತೆಯಲ್ಲಿ ಎರಡು ವರ್ಷಗಳಿಂದ ಬೀದಿ ದೀಪಗಳೇ ಇಲ್ಲ.

ಒಂದು ವರ್ಷದಲ್ಲಿ, ಔಟರ್‌ ರಿಂಗ್‌ ರಸ್ತೆಯ ಹೆಚ್ಚು-ಕಡಿಮೆ ಒಂದೇ ಜಾಗದಲ್ಲಿ ಮೂರು ಅಪಘಾತಗಳು ಸಂಭವಿಸಿವೆ. ಸರಗಳವು ಪ್ರಕರಣಗಳೂ, ಬೀದಿ ದೀಪಗಳು ಇಲ್ಲದ ಕಡೆಯೇ ಹೆಚ್ಚಾಗುತ್ತಿವೆ ಎನ್ನಲಾಗಿದೆ. ಕೆಲವೆಡೆ ಬೀದಿ ದೀಪಗಳು ಇದ್ದೂ ಇಲ್ಲದಂತಿವೆ. ಈ ಹಿನ್ನೆಲೆಯಲ್ಲಿ ಸೌಂದರೀಕರಣಕ್ಕೆ ಸೀಮಿತವಾಗದೆ, ಜನರ ಸುರಕ್ಷತೆಗೂ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ನೀತಿಯಲ್ಲಿ ಬೀದಿ ದೀಪಗಳನ್ನೂ ಪರಿಗಣಿಸಬೇಕು ಎಂದು ತಜ್ಞರು ಆಗ್ರಹಿಸುತ್ತಾರೆ.

* ವಿಜಯಕುಮಾರ್‌ ಚಂದರಗಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್‌ ಎಂಜಿನಿಯರ್‌ ಲಕ್ಷ್ಮಣ್‌ಕುಮಾರ್‌ (33) ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಮಹದೇವಪುರ ಠಾಣೆ ಪೊಲೀಸರು,...

  • ಬೆಂಗಳೂರು: ಚಿಕ್ಕಪೇಟೆ, ಗಾಂಧೀನಗರ ಹಾಗೂ ಕಾಟನ್‌ಪೇಟೆ ವಾರ್ಡ್‌ ವ್ಯಾಪ್ತಿಯಲ್ಲಿ ಬುಧವಾರ ಪರಿಶೀಲನೆಗೆ ತೆರಳಿದ್ದ ಮೇಯರ್‌ ಎಂ.ಗೌತಮ್‌ಕುಮಾರ್‌ ನೇತೃತ್ವದ...

  • ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಾಟಕ ಪ್ರದರ್ಶಿಸಿದ್ದಕ್ಕೆ ದೇಶದ್ರೋಹ ಆರೋಪದ ಹಿನ್ನೆಲೆಯಲ್ಲಿ ಬೀದರ್‌ ನಗರದ ಶಾಹಿನ್‌ ಶಿಕ್ಷಣ ಸಂಸ್ಥೆಯ...

  • ಬೆಂಗಳೂರು: ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಗರದ ಒಂದು ಮೂಲೆಯಿಂದ ಮತ್ತೂಂದು ಮೂಲೆಗೆ ಸಂಪರ್ಕ ಕಲ್ಪಿಸುವ 87 ಕಿ.ಮೀ ಉದ್ದದ ಎಲಿವೇಟೆಡ್‌ ಕಾರಿಡಾರ್‌...

  • ಬೆಂಗಳೂರು: ಹಾಪ್‌ಕಾಮ್ಸ್‌ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ 25 ಕೋಟಿ ರೂ. ದೀರ್ಘಾವಧಿ ಸಾಲ ನೀಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗು ವುದು...

ಹೊಸ ಸೇರ್ಪಡೆ