ತ್ಯಾಜ್ಯ ಪುಡಿಗಟ್ಟಲು ಯಂತ್ರಗಳ ಬಳಕೆ

Team Udayavani, Jun 24, 2019, 3:09 AM IST

ಬೆಂಗಳೂರು: ನಗರದಲ್ಲಿ ದೊಡ್ಡ ಮಟ್ಟದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಸತ್ತ ಪ್ರಾಣಿಗಳ ತ್ಯಾಜ್ಯ (ಮಾಂಸ) ಮತ್ತು ಮರದ ಎಲೆ ತ್ಯಾಜ್ಯ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದಕ್ಕೆ ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ಪ್ರಾಣಿ ಮಾಂಸ ತ್ಯಾಜ್ಯ ಸಂಸ್ಕರಣೆ ಹಲವು ವರ್ಷಗಳಿಂದ ಕಗ್ಗಂಟಾಗೇ ಉಳಿದಿದೆ.

ಮತ್ತು ಬಿದ್ದ ಮರಗಳನ್ನು ತೆರವು ಮಾಡುವುದಕ್ಕೆ ಹೆಚ್ಚು ಸಮಯ ಮತ್ತು ಹಣವೂ ವ್ಯಯವಾಗುತ್ತಿದೆ. ಬಿದ್ದ ಮರದ ತ್ಯಾಜ್ಯವನ್ನು ವಾರ್ಡ್‌ಗಳ ಪಾರ್ಕ್‌ನಲ್ಲೇ ಶೆಟರ್ಯಂತ್ರ (ಮರದ ಎಲೆ ಮತ್ತು ಹಸಿಕಸವನ್ನು ಗೊಬ್ಬರವನ್ನಾಗಿ ಪರಿರ್ವತಿಸುವ ಯಂತ್ರ) ಅಳವಡಿಸಲು ಬಿಬಿಎಂಪಿ ಮುಂದಾಗಿದೆ.

ಅದೇ ರೀತಿಯಲ್ಲಿ ಪ್ರಾಣಿ ತ್ಯಾಜ್ಯ ಸಂಸ್ಕರಿಸಲು ರೆಂಡರಿಂಗ್‌ಯಂತ್ರ (ತ್ಯಾಜ್ಯವನ್ನು ಪುಡಿಮಾಡುವ ಸಾಧನ) ಅಳವಡಿಸಲು ಯೋಜನೆ ರೂಪಿಸುತ್ತಿದೆ. ಬಿದ್ದ ಮರದ ಎಲೆ ಮತ್ತು ರಂಬೆಕೊಂಬೆಗಳನ್ನು ತೆರವು ಮಾಡುವುದಕ್ಕೆ ತ್ಯಾಜ್ಯ ನಿರ್ವಹಣೆಯ ವಾಹನವನ್ನೇ ಬಳಸಲಾಗುತ್ತಿದ್ದು, ತೆರವು ಮಾಡುವುದಕ್ಕೆ ತಡವಾಗುತ್ತಿದೆ.

ಮರದ ತುಂಡನ್ನು ತೆರವು ಮಾಡಿದರೆ ಉಳಿದ ತ್ಯಾಜ್ಯವನ್ನು ಲಾರಿಗಳಲ್ಲಿ ತುಂಬಿಸಲು ಸಾಧ್ಯವಿಲ್ಲ ಮತ್ತು ಅದು ತೂಕವೂ ಇರುವುದರಿಂದ ರಸ್ತೆ ಬದಿಯಲ್ಲಿ ಒಂದೆರಡು ದಿನ ಉಳಿಸಿ ಮರದ ತುಂಡಿನ ತೂಕ ಕಡಿಮೆಯಾದ ಮೇಲೆ ಪೌರಕಾರ್ಮಿಕರು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಆದರೆ, ಈ ವೇಳೆಗಾಗಲೇ ಮರ ಬಿದ್ದಿರುವ ಜಾಗದಲ್ಲೇ ಸಾರ್ವಜನಿಕರು ತ್ಯಾಜ್ಯವನ್ನೂ ಸುರಿಯುತ್ತಿರುವುದರಿಂದ ಇದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ, ಶೆಟರ್ ಯಂತ್ರವನ್ನು ಪಾರ್ಕ್‌ಗಳಲ್ಲಿ 10ರಿಂದ 15 ಅಡಿ ಜಾಗದಲ್ಲಿ ಅಳವಡಿಸಲು ಮುಂದಾಗಿದ್ದು, ಜಾಗ ಸೂಚಿಸುವಂತೆ ಪಾಲಿಕೆ ಸದಸ್ಯರನ್ನು ಕೇಳಲಿದೆ. ಘನ ತ್ಯಾಜ್ಯ ನಿರ್ವಾಹಣೆಗೆ ಇರುವ ವೆಚ್ಚದಲ್ಲೇ ಯಂತ್ರವನ್ನು ಅಳವಡಿಸಲಿದ್ದು, ಇದಕ್ಕೆ 12 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಾಣಿ ತ್ಯಾಜ್ಯಕ್ಕೆ ರೆಂಡರಿಂಗ್‌ ಯಂತ್ರ: ಕೋಳಿ, ಮೀನು, ಕುರಿ ಮತ್ತು ದನದ ಮಾಂಸದ ತ್ಯಾಜ್ಯ ವಿಲೇವಾರಿ ಬಹುವರ್ಷಗಳಿಂದ ಕಗ್ಗಂಟಾಗೇ ಉಳಿದಿದೆ. ಕೋಳಿ ಮಾಂಸ ತ್ಯಾಜ್ಯವನ್ನು ಮೂಟೆಗಳಲ್ಲಿ ತುಂಬಿ ರಾಜಕಾಲುವೆ, ಕೆರೆ, ರಿಂಗ್‌ರೋಡ್‌ ಬದಿ ಮತ್ತು ಖಾಲಿ ಜಾಗಗಳಲ್ಲಿ ಎಸೆಯುತ್ತಿರುವುದರಿಂದ ಹಲವು ಸಮಸ್ಯೆಗಳು ಉಂಟಾಗುತ್ತಿವೆ.

ಮಾಂಸ ತ್ಯಾಜ್ಯವನ್ನು ರಾಜಕಾಲುವೆಗಳಲ್ಲಿ ಎಸೆಯುವುದರಿಂದ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವುದಕ್ಕೆ ತಡೆಯಾಗುತ್ತಿದೆ. ಕೆರೆ ಮತ್ತು ಖಾಲಿ ಜಾಗದಲ್ಲಿ ಮಂಆಸ ತ್ಯಾಜ್ಯ ಎಸೆಯುತ್ತಿರುವ ಕಾರಣ, ನಗರದ ಹಲವು ಪ್ರದೇಶಗಳಲ್ಲಿ ಜನ ಮೂಗು ಮುಚ್ಚಿಕೊಂಡೇ ನಡೆದಾಡಬೇಕಾದ ಪರಿಸ್ಥಿತಿ ಇದೆ.

ಮಾಂಸದ ಅಂಗಡಿಗಳ ಮಾಲೀಕರ ನಿರ್ಲಕ್ಷ್ಯ ಮತ್ತು ಪರ್ಯಾಯ ವ್ಯವಸ್ಥೆಯ ಕೊರತೆಯಿಂದ ಪರೋಕ್ಷವಾಗಿ ನಾಯಿಗಳು ವ್ಯಾಘ್ರ ರೂಪತಾಳುವುದಕ್ಕೂ ಕಾರಣವಾಗುತ್ತಿದೆ. ಕೊನೆಗೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳವಲ್ಲಿ ಬಿಬಿಎಂಪಿ ಮೊದಲ ಹೆಜ್ಜೆ ಇಟ್ಟಿದೆ. ನಗರದ ನಾಲ್ಕು ಕಡೆ ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ ರೆಂಡರಿಂಗ್‌ಯಂತ್ರ ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ. ಪ್ರತ್ಯೇಕ ಟೆಂಡರ್‌ ಪ್ರಕ್ರಿಯೆ ಮೂಲಕ ಯಂತ್ರಗಳನ್ನು ಖರೀದಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ರೆಂಡರಿಂಗ್‌ಯಂತ್ರದಿಂದ ಬಿಬಿಎಂಪಿಗೆ ಹೆಚ್ಚುವರಿ ವೆಚ್ಚ ಆಗದಂತೆ ಯೋಜನೆ ರೂಪಿಸಲಾಗುತ್ತಿದೆ. ಇದರ ನಿರ್ವಾಹಣೆ ವೆಚ್ಚವನ್ನು ಮಾಂಸದ ಅಂಗಡಿ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು. ಯಂತ್ರಗಳನ್ನು ಅಳವಡಿಸುವುದರಿಂದ ಸಮಸ್ಯೆಗೆ ಮುಕ್ತಿ ಸಿಗಲಿದೆ.
-ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

ಶಟರ್ ಮತ್ತು ರೆಂಡರಿಂಗ್‌ಯಂತ್ರಗಳನ್ನು ಅಳವಡಿಸುವುದರಿಂದ ಮರದ ರಂಬೆಕೊಂಬೆ ತ್ಯಾಜ್ಯ ಮತ್ತು ಪ್ರಾಣಿ ತ್ಯಾಜ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇದನ್ನು ಮುಂದೆ ಗೊಬ್ಬರವಾಗಿಯೂ ಬಳಸಿಕೊಳ್ಳಬಹುದು.
-ಗಂಗಾಂಬಿಕೆ ಮಲ್ಲಿಕಾರ್ಜುನ್‌, ಬಿಬಿಎಂಪಿ ಮೇಯರ್‌

* ಹಿತೇಶ್‌ ವೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ