ನಗರದ 29 ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ
ನೇರ ನೋಂದಣಿಗೆ ಹಿರಿಯ ನಾಗರಿಕರು ಆಧಾರ್‌ಕಾರ್ಡ್, ಓಟರ್ ಐಡಿ ಹೊಂದಿರಬೇಕು
Team Udayavani, Feb 28, 2021, 11:36 AM IST
ಬೆಂಗಳೂರು: ರಾಜಧಾನಿಯಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ವಿತರಿಸಲು ಸರ್ಕಾರಿ, ಖಾಸಗಿ ಮತ್ತು ಮೆಡಿಕಲ್ ಕಾಲೇಜು ಸೇರಿ 29 ಆಸ್ಪತ್ರೆಗಳನ್ನು ನಿಗದಿಪಡಿಸಲಾಗಿದೆ.
ಬೆಂಗಳೂರು ನಗರ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಐದು ಆಸ್ಪತ್ರೆಗಳು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 24 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರು ಈ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ.
45-59 ವರ್ಷದೊಳಗಿನ ದೀರ್ಘಕಾಲಿನ ಅನಾರೋಗ್ಯ ಹೊಂದಿರುವ ವ್ಯಕ್ತಿಗಳು ತಮ್ಮ ಅನಾರೋಗ್ಯ ಸಮಸ್ಯೆ ಬಗ್ಗೆ ನೋಂದಾಯಿತ ವೈದ್ಯರು ನೀಡುವ ಪ್ರಮಾಣಪತ್ರ ಹೊಂದಿರಬೇಕು. ಕೊರೊನಾ ಲಸಿಕಾ ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವ ಹಿರಿಯ ನಾಗರಿಕರು ಆಧಾರ್ ಕಾರ್ಡ್ ಅಥವಾ ಚುನಾವಣಾ ಮತದಾರರ
ಗುರುತಿನ ಚೀಟಿ ಹೊಂದಿರಬೇಕು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿರುವವರು ಆನ್‌ಲೈನ್ ನೋಂದಣಿ ವೇಳೆ ನೀಡಿರುವ ಗುರುತಿನ ಚೀಟಿ ಹೊಂದಿರಬೇಕು. ದೀರ್ಘಕಾಲೀನ ಅನಾರೋಗ್ಯವುಳ್ಳವು ಗುರುತಿನ ಚೀಟಿ ಹಾಗೂ ಅಧಿಕೃತ ವೈದ್ಯರಿಂದ ಪ್ರಮಾಣ ಪತ್ರ ಒದಗಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
1.32 ಲಕ್ಷ ಮಂದಿಗೆ ಲಸಿಕೆ: ಈವರೆಗೂ ನಗರದಲ್ಲಿ 105431ಆರೋಗ್ಯ ಕಾರ್ಯರ್ತರು ಮತ್ತು 27309 ಮಂದಿ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ. ಒಟ್ಟು 1.32 ಲಕ್ಷ ಮಂದಿ. ಈ ಪೈಕಿ ಈಗಾಗಲೇ 28448 ಮಂದಿ ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್ ಕೂಡಾಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರಲ್ಲಿ ಶೇ.45 ರಷ್ಟು, ಮುಂಚೂಣಿ ಕಾರ್ಯಕರ್ತರಲ್ಲಿ 37 ರಷ್ಟು ಲಸಿಕೆ ಪ್ರಕ್ರಿಯೆ ಗುರಿಸಾಧನೆಯಾಗಿದೆ.
ಮಾ.1 ರಿಂದ ನಗರದಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡುವ ಆಸ್ಪತ್ರೆಗಳು :
- ರಾಜರಾಜೇಶ್ವರಿ ಮೆಡಕಲ್ ಕಾಲೇಜ್, ಆಸ್ಪತ್ರೆ
- ನಾರಾಯಣ ಹೃದಯಾಲಯ ಪ್ರೈವೇಟ್ ಲಿಮಿಟೆಡ್
- ಆನೇಕಲ್ ತಾಲೂಕ್ ಆಸ್ಪತ್ರೆ
- ಕೃಷ್ಣರಾಜಪುರಂ ತಾಲೂಕು ಆಸ್ಪತ್ರೆ
- ಯಲಹಂಕ ತಾಲೂಕ್ ಆಸ್ಪತ್ರೆ
- ಕೆ.ಸಿ.ಜನರಲ್ ಆಸ್ಪತ್ರೆ
- ಜಯನಗರ್ ಜನರಲ್ ಆಸ್ಪತ್ರೆ
- ಬೆಂಗಳೂರು ಮೆಡಿಕಲ್ ಕಾಲೇಜ್ ಅಂಡ್ ಹಾಸ್ಪಿಟಲ್
- ಬೌರಿಂಗ್ ಮೆಡಿಕಲ್ ಕಾಲೇಜ್ ಅಂಡ್ ಹಾಸ್ಪಿಟಲ್
- ಸಿ.ವಿ.ರಾಮನ್ ಜನರಲ್ ಆಸ್ಪತ್ರೆ
- ವಿಕ್ರಮ್ ಆಸ್ಪತ್ರೆ
- ಬಿಜಿಎಸ್ ಜಿಮ್ಸ್
- ಮಣಿಪಾಲ್ ಆಸ್ಪತ್ರೆ, ಹಳೆ ವಿಮಾನನಿಲ್ದಾಣ ರಸ್ತೆ.
- ರಾಘವೇಂದ್ರ ಪೀಪಲ್ ಟ್ರೀ ಆಸ್ಪತ್ರೆ
- ಸಪ್ತಗಿರಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಸ್
- ಕೊಲಂಬಿಯಾ ಆಸ್ಪತ್ರೆ, ಯಶವಂತಪುರ
- ಅಪೊಲೊ ಆಸ್ಪತ್ರೆ, ಶೇಶಾದ್ರಿಪುರಂ
- ಕೊಲಂಬಿಯಾ ಏಷಿಯಾ, ಸರ್ಜಾಪುರ
- ಕೊಲಂಬಿಯಾ ಏಷಿಯಾ, ವೈಟ್ ಫೀಲ್ಡ್
- ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ
- ಅಪೊಲೊ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ
- ಸ್ಪರ್ಶ್ ಆಸ್ಪತ್ರೆ, ಆರ್‌ಆರ್‌ನಗರ
- ಕೊಲಂಬಿಯಾ ಏಷಿಯಾ ಆಸ್ಪತ್ರೆ, ಹೆಬ್ಟಾಳ
- ಆಸ್ಟರ್ ಸಿಎಂಐ ಆಸ್ಪತ್ರೆ, ಹೆಬ್ಬಾಳ
- ಅಪೊಲೊ ಸ್ಪೆಷಾಲಿಟಿ ಆಸ್ಪತ್ರೆ, ಜಯನಗರ
- ದಯಾನಂದ್ ಸಾಗರ್ ಆಸ್ಪತ್ರೆ, ಕುಮಾರಸ್ವಾಮಿ ಲೇಔಟ್
- ಮಲ್ಲಿಗೆ ಆಸ್ಪತ್ರೆ
- ಸುಶೃಶಾ ಆಸ್ಪತ್ರೆ
- ಎಂಎಸ್‌ರಾಮಯ್ಯ ಮೆಡಿಕಲ್ ಕಾಲೇಜ್ ಅಂಡ್ ಹಾಸ್ಪಿಟಲ್
ಆಸ್ಪತ್ರೆಗಳು ಇವುಗಳನ್ನು ಹೊಂದಿರಬೇಕು :
- ಲಸಿಕೆ ಸಂಗ್ರಹಕ್ಕೆ ಶೀತಲೀಕರಣ ವ್ಯವಸ್ಥೆ.
- ಲಸಿಕೆ ವಿತರಣೆಗೆ ಅಗತ್ಯ ಸ್ಥಳಾವಕಾಶ.
- ವ್ಯಾಕ್ಸಿನಿ ನೀಡುವವರು ಹಾಗೂ ಸಹಾಯಕ ಸಿಬ್ಬಂದಿ. (ವ್ಯಾಕ್ಸಿನೇಟರ್)
- ಲಸಿಕೆ ಪಡೆದ ನಂತರ ಉಂಟಾಗುವ ಅಡ್ಡ ಪರಿಣಾಗಳನ್ನು ನಿಭಾಯಿಸವ ಸಿಬ್ಬಂದಿ, ಅಗತ್ಯ ವ್ಯವಸ್ಥೆ.
3 ವಿಧಗಳಲ್ಲಿ ಸಾರ್ವಜನಿಕರಿಗೆ ನೋಂದಣಿ :
- ಆರೋಗ್ಯ ಸೇತು / ಕೋವಿನ್ ಆ್ಯಪ್ ಬಳಸಿ ಸ್ವಯಂ ನೋಂದಣಿ.
- ನೇರವಾಗಿ ಲಸಿಕೆ ವಿತರಣಾ ಕೇಂದ್ರ ತೆರಳಿ ನೋಂದಣಿ.
- ಆಶಾ ಮತ್ತು ಕಿರಿಯ ಆರೋಗ್ಯ ಸಹಾಯಕರು ಹಾಗೂ ಸ್ವಯಂ ಸೇವಾಸಂಘಗಳು ಫಲಾನುಭವಿಗಳನ್ನು ಗುರುತಿಸಿ ಲಸಿಕಾ ಕೇಂದ್ರಕ್ಕೆ ತರುವುದು