ವಚನ ಸಾಹಿತ್ಯ ವಿಶ್ವಕ್ಕೇ ಮಾದರಿ

Team Udayavani, May 13, 2019, 3:05 AM IST

ಬೆಂಗಳೂರು: ವಚನ ಸಾಹಿತ್ಯ ವಿಶ್ವಕ್ಕೇ ಮಾದರಿಯಾಗಿದ್ದು, ವಚನಗಳಲ್ಲಿ ಅಡಗಿರುವ ವಿಜ್ಞಾನ ಅಂಶಗಳ ಅಧ್ಯನಯನ ನಡೆಯುತ್ತಿರುವುದು ಸಂತಸದ ವಿಚಾರ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್‌ ತಿಳಿಸಿದರು. ಬಸವ ವೇದಿಕೆ ವತಿಯಿಂದ ನಗರ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಬಸವಣ್ಣ ಸೇರಿ ಪ್ರಮುಖ ವಚನಕಾರರ ವಚನಗಳು ಸಮಾನತೆ, ಕಾಯಕ ನಿಷ್ಠೆಯಂತಹ ಸಾಕಷ್ಟು ಸಾಮಾಜಿಕ ಮೌಲ್ವಿಕ ವಿಚಾರಗಳನ್ನು ಒಳಗೊಂಡು ವಿಶ್ವಕ್ಕೆ ಮಾದರಿಯಾಗಿವೆ.

ಎರಡು ತಿಂಗಳಿಂದ ವಚನಗಳಲ್ಲಿರುವ ವಿಜ್ಞಾನದ ಅಂಶಗಳ ಪತ್ತೆ ಕುರಿತು ಅಧ್ಯಯನ ನಡೆಯುತ್ತಿರುವುದು ಸಂತಸದ ವಿಚಾರವಾಗಿದೆ. ಈ ಕಾರ್ಯಕ್ಕೆ ಬಸವ ವೇದಿಕೆ ಅಗತ್ಯ ವೇದಿಕೆ ನಿರ್ಮಾಣ ಮಾಡಿಕೊಡುತ್ತಿದೆ. ಇನ್ನು ವಚನ ಸಾಹಿತ್ಯ, ಸಂಸ್ಕೃತಿಯ ಅಂಶಗಳು ವಿಶ್ವದೆಲ್ಲಡೆ ಅನುಷ್ಟಾನಗೊಂಡರೆ ಭಾರತ ವಿಶ್ವ ಗುರುವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆ ದಿಸೆಯತ್ತ ನಾವೆಲ್ಲ ಚಿಂತನೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇಸ್ರೋ ಸಂಸ್ಥೆ ತನ್ನ ಕಾರ್ಯ ವೈಖರಿ ಮೂಲಕ ವಿಶ್ವದೆಲ್ಲೆಡೆ ಪ್ರಶಂಸೆ ಪಡೆದಿದೆ. ಕೇವಲ 4 ಉಪಗ್ರಹಗಳ ಸಮೂಹದಿಂದ ಇಂದು ನಾವು ನಮ್ಮ ಮೊಬೈಲ್‌ನಲ್ಲಿನ ಜಿಪಿಎಸ್‌ನಿಂದ ಎಲ್ಲಿದ್ದೇವೆ ತಿಳಿಯಬಹುದು. ಈ ಜಿಪಿಎಸ್‌ ಸಮುದ್ರದ ಸುತ್ತಮುತ್ತಲ 7,500 ಕಿ.ಮೀ ದೂರದವರೆಗೆ ಲಭ್ಯವಿದ್ದು, ಮೀನುಗಾರರಿಗೆ ಮಾತೃಭಾಷೆಯಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ವಿವರ ನೀಡಲಾಗುತ್ತಿದೆ. ಸಮುದ್ರದ ಅಲೆಗಳಲ್ಲಿ ಏರುಪೇರು ಆದರೆ ಜಲಸಾಗರ ವಲಯದಲ್ಲಿ ಅಂತಾರಾಷ್ಟ್ರೀಯ ಗಡಿ ಭಾಗ ಬರುತ್ತಿದ್ದಂತೆ ಎಚ್ಚರಿಕೆ ವಹಿಸಿ ಎನ್ನುವುದನ್ನು ಹೇಳಲು ಈ ಉಪಗ್ರಹ ತಂತ್ರಜ್ಞಾನ ಸಹಕಾರಿಯಾಗಿದೆ ಎಂದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್‌ ಮಾತನಾಡಿ, ಧರ್ಮ ಪ್ರವರ್ತಕರು ಹಾಗೂ ಸಮಾಜ ಪ್ರವರ್ತಕರು ಎಂದು ಭಿನ್ನ ನೆಲೆಯಲ್ಲಿ ಸಾಧನೆ ಮಾಡಿದವರನ್ನು ನಾವು ಕಾಣುತ್ತೇವೆ. ಆದರೆ, 12ನೇ ಶತಮಾನದಲ್ಲಿಯೇ ಬಸವಣ್ಣನವರು ಧರ್ಮ ಹಾಗೂ ಸಮಾಜ ಎಂಬ ಎರಡೂ ವಿಷಯಗಳನ್ನು ತಮ್ಮ ವಚನಗಳ ಮೂಲಕ ಸಾರಿ ಅಂತೆಯೇ ನಡೆದು ಧರ್ಮ ಪ್ರವರ್ತಕ ಹಾಗೂ ಸಮಾಜ ಸುಧಾರಕರೂ ಆಗಿದ್ದರು. ಇನ್ನು ಕಾಯಕ ಶ್ರದ್ಧೆ, ಸಮಾನತೆ ವಿಚಾರದಲ್ಲಿ ಇಂದಿಗೂ ಬಸವಣ್ಣನ ವಚನಗಳೆ ಎಲ್ಲರಿಗೂ ಮಾದರಿ ಎಂದರು.

1955ರಲ್ಲಿ ಜಯಚಾಮರಾಜ ಒಡೆಯರ್‌ ಅವರು ರಾಜಪ್ರಮುಖ್‌ ಸ್ಥಾನ ಬಿಟ್ಟುಕೊಟ್ಟಾಗ, ಕೆಂಗಲ್‌ ಹನುಮಂತಯ್ಯ ಅವರು ಆ ನಿರ್ಧಾರವನ್ನು ದೊಡ್ಡ ತ್ಯಾಗ ಎಂದು ಬಣ್ಣಿಸಿದ್ದರು. ನಮ್ಮ ರಾಜವಂಶದ ಮಹಾರಾಜರು ಕೂಡಾ ಜನರೇ ಸ್ವವಲಂಭಿಗಳಾಗಿ ಆಡಳಿತ ನಡೆಸಬೇಕು, ಅವಶ್ಯಕ ನೀತಿ ನಿಯಮಗಳು ಅವರೇ ರೂಪಿಸಿಕೊಳ್ಳಬೇಕು ಎಂಬ ಆಶಯ ಹೊಂದಿದ್ದರು ಎಂದು ತಿಳಿಸಿದರು.

ತೋಂಟದಾರ್ಯ ಸಂಸ್ಥಾನ ಮಠ ಡಾ.ತೊಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಅಸಮಾನತೆ, ಶೋಷಣೆ, ಅಧಃಶ್ರದ್ಧೆ, ಮೂಡನಂಬಿಕೆಗೆ ಹೋಗಲಾಡಿಸಲು ಬಸವಣ್ಣನವರು ನಿರಂತರ ಶ್ರಮಿಸಿದ್ದಾರೆ. ಕಾಯಕ, ದಾಸೋಹದಂತಹ ಮೌಲಿಕ ತತ್ವ, ಮಾನವೀಯತೆಯ ದಾರಿಯನ್ನು ಜಗತ್ತಿಗೆ ಸಾರಿದ ಧಾರ್ಮಿಕ ನೇತಾರ, ಶ್ರೇಷ್ಠ ಸಮಾಜ ಸುಧಾರಕರೂ ಆಗಿದ್ದರು. ಹೀಗಾಗಿಯೇ 800 ವರ್ಷಗಳ ನಂತರ ದೇಶದ ನಾನಾ ಭಾಗಗಳಲ್ಲಿಯೂ ಬಸವ ಸ್ಮರಣೆ ನಡೆಯುತ್ತಿದೆ ಎಂದರು.

ಬಸವಣ್ಣ ಎಂದಿಗೂ ಮನುಕುಲಕ್ಕೆ ಆದರ್ಶ ಪ್ರಾಯರು. ವಚನ ಸಾಹಿತ್ಯ ಇಂದಿಗೂ ಎಂದೆಗೂ ಮೇರು ಸಾಹಿತ್ಯವಾಗಿದ್ದು, ಕನ್ನಡ ಸಾಹಿತ್ಯ ಮೌಲ್ವಿಕತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ, ಆ ಸಾಹಿತ್ಯವನ್ನು ಸಾಮಾನ್ಯ ಜನರಿಗೂ ಮುಟ್ಟಿಸುವ ಕೆಲಸ ಹೆಚ್ಚಾಗಬೇಕು ಎಂದರು.

ಪಾವಗಡದ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್‌, ಹಿರಿಯ ರಂಗಭೂಮಿ ಕಲಾವಿದೆ ಬಿ.ಜಯಶ್ರೀ, ಆಳ್ವ ಶೈಕ್ಷಣಿಕ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಮೋಹನ್‌ ಆಳ್ವ, ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಬಸವ ವೇದಿಕೆ ವತಿಯಿಂದ ಪ್ರಸಕ್ತ ಸಾಲಿನ ಬಸವ ಶ್ರೀ ಪ್ರಶಸ್ತಿಯನ್ನು ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್‌, ವಚನ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಹಿರಿಯ ಕವಿ ಜರಗನಹಳ್ಳಿ ಶಿವಶಂಕರ್‌ ಹಾಗೂ ಅಲ್ಲಮಪ್ರಭಯ ಪೀಠ ಪ್ರಧಾನ ನಿರ್ದೇಶಕ ಡಾ.ನಾ.ಮೊಗಸಾಲೆ ಅವರಿಗೆ ನೀಡಿ ಗೌರವಿಸಲಾಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ