ಲ್ಯಾಬ್‌ ತಂತ್ರಜ್ಞರಿಗೆ ಮತದಾರ ಪಟ್ಟಿ ಪರಿಷ್ಕರಣೆ ಅಧಿಕ ಹೊರೆ

Team Udayavani, Sep 11, 2019, 3:09 AM IST

ಬೆಂಗಳೂರು: ಸೆಂಟ್ರಲ್‌ ಮಲೇರಿಯಾ ಲ್ಯಾಬ್‌ನ ತಂತ್ರಜ್ಞರನ್ನು ಚುನಾವಣಾ ಆಯೋಗದ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿಸಿರುವ ಹಿನ್ನೆಲೆಯಲ್ಲಿ ಪ್ರಯೋಗಾಲಯಗಳಲ್ಲಿ ನಿತ್ಯ ಸಾವಿರಾರು ರಕ್ತ ಮಾದರಿಗಳು ಪರೀಕ್ಷೆಯಾಗದೇ ಉಳಿಯುತ್ತಿವೆ.

ಬಿಬಿಎಂಪಿ ನಗರದಲ್ಲಿ ಮತದಾರಪಟ್ಟಿ ಪರಿಷ್ಕರಣೆ ಅಭಿಯಾನ ಹಮ್ಮಿಕೊಂಡಿದೆ. ಈ ಕೆಲಸಕ್ಕೆ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೆಂಟ್ರಲ್‌ ಮಲೇರಿಯಾ ಲ್ಯಾಬ್‌ನ 32 ಸಿಬ್ಬಂದಿ ಪೈಕಿ 28 ಮಂದಿಯನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಲ್ಯಾಬ್‌ನ ಭಾಗಶಃ ಪರೀಕ್ಷೆಗಳು ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವಂತಾಗಿದೆ.

ಬದಲಾದ ಹವಾಮಾನದಿಂದಾಗಿ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಳವಾಗುತ್ತಿವೆ. ನಗರದಲ್ಲಿ ಡೆಂಘೀ ಉಲ್ಬಣಗೊಳ್ಳುತ್ತಿದೆ. ಪ್ರಸ್ತಕ ವರ್ಷ ರಾಜ್ಯದ ವಿವಿಧೆಡೆ 10 ಲಕ್ಷಕ್ಕೂ ಅಧಿಕ ಮಲೇರಿಯಾ ಶಂಕಿತರ ರಕ್ತ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. 200ಕ್ಕೂ ಹೆಚ್ಚು ಮಂದಿಯಲ್ಲಿ ಮಲೇರಿಯಾ ದೃಢಪಟ್ಟಿದೆ.

9 ಸಾವಿರ ರಕ್ತ ಮಾದರಿಗಳ ಪರೀಕ್ಷೆ ಬಾಕಿ: ಈ ಸೆಂಟ್ರಲ್‌ ಮಲೇರಿಯಾ ಲ್ಯಾಬ್‌ ರಾಜ್ಯ ವಿವಿಧ ಭಾಗಗಳಿಂದ ಮಲೇರಿಯ, ಪೈಲೇರಿಯಾ ಸೋಂಕಿನ ಮರು ಪರೀಕ್ಷೆಗೆ ನಿತ್ಯ 1,000ಕ್ಕೂ ಹೆಚ್ಚು ರಕ್ತ ಮಾದರಿಗಳು ಬರುತ್ತವೆ. ಇಲ್ಲಿನ ಹಿರಿಯ ಪ್ರಯೋಗಾಲಯ ತಂತ್ರಜ್ಞರು ಅವುಗಳನ್ನು ಮತ್ತೂಮ್ಮೆ ಪರೀಕ್ಷೆ ನಡಿಸಿ ಸೋಂಕನ್ನು ದೃಢಪಡಿಸುವ ಕಾರ್ಯ ಮಾಡುತ್ತಿದ್ದರು. ಸೆ.1 ರಿಂದ ಲ್ಯಾಬ್‌ ತಂತ್ರಜ್ಞರು ಚುನಾವಣೆ ಕಾರ್ಯಕ್ಕೆ ತೆರಳಿರುವುದರಿಂದ ಒಂಭತ್ತು ಸಾವಿರಕ್ಕೂ ಹೆಚ್ಚು ಮಲೇರಿಯಾ ಹಾಗೂ ಫೈರೇರಿಯಾ ರೋಗಗಳ ರಕ್ತ ಮಾದರಿಗಳು ಪರೀಕ್ಷೆಯಾಗದೇ ಉಳಿದಿವೆ.

ಚುನಾವಣಾ ಆಯೋಗವು ಸೂಚಿಸಿದ ಸರ್ಕಾರಿ ಇಲಾಖೆಗಳ ಸಿಬ್ಬಂದಿಗಳು ಕಡ್ಡಾಯವಾಗಿ ಚುನಾವಣಾ ಕಾರ್ಯಕ್ಕೆ ತೆರಳಬೇಕು. ಸದ್ಯ ನಡೆಯುತ್ತಿರುವ ಮತದಾರಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ ನಿತ್ಯ ಮನೆಮನೆಗೆ ತೆರಳಿ ಮತದಾರ ನೋಂದಣಿ, ಹೆಸರು, ಸ್ಥಳ, ಜನ್ಮದಿನ ತಿದ್ದುಪಡಿಯಂತಹ ಕಾರ್ಯ ಮಾಡಬೇಕಾಗಿರುತ್ತದೆ. ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಳವಾಗಿ ಪ್ರಯೋಗಾಲಯ ತಂತ್ರಜ್ಞರ ಅವಶ್ಯಕತೆ ಹೆಚ್ಚಿರುವಾಗ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅವರನ್ನು ನಿಯೋಜಿಸುವ ಅಗತ್ಯವಿರಲಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಒಂದು ತಿಂಗಳು ತಡ: ಬಿಬಿಎಂಪಿ ಮತದಾರರ ಪರಿಷ್ಕರಣೆ ಅಭಿಯಾನವು ಅ. 15ರ ವರೆಗೂ ನಡೆಯಲಿದ್ದು, ಅಲ್ಲಿಯ ತನಕ ಲ್ಯಾಬ್‌ನ ತಂತ್ರಜ್ಞರು ಚುನಾವಣಾ ಕಾರ್ಯ ನಿರ್ವಹಿಸಬೇಕು. ಮರಳಿ ಲ್ಯಾಬ್‌ಗ ಬರುವುದರೊಳಗೆ ಕನಿಷ್ಠ 30 ಸಾವಿರಕ್ಕೂ ಹೆಚ್ಚು ರಕ್ತ ಮಾದರಿಗಳು ಬಾಕಿ ಉಳಿವ ಸಾಧ್ಯತೆಯಿದೆ. ಇದಕ್ಕೆ ಹೆಚ್ಚುವರಿ ಕೆಲಸ ಮಾಡಬೇಕು. ಜತೆಗೆ ಒತ್ತಡವೂ ಹೆಚ್ಚಾಗಲಿದೆ. ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಮತದಾರ ಪರಿಷ್ಕರಣೆ ಅಭಿಯಾನ ನಡೆಯುತ್ತದೆ. ಈ ವೇಳೆ ಲ್ಯಾಬ್‌ ಸಿಬ್ಬಂದಿಯನ್ನೇ ನಿಯೋಜಿಸಲಾಗುತ್ತಿದೆ. ಸಾಕಷ್ಟು ಬಾರಿ ಮನವರಿಕೆ ಮಾಡಿದರೂ ನಿಯೋಜಿಸುತ್ತಾರೆ. ಹೀಗಾಗಿ, ಲ್ಯಾಬ್‌ನ ಪರೀಕ್ಷೆಗಳಿಗೆ ಸಾಕಷ್ಟು ಹಿನ್ನಡೆಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಪರೀಕ್ಷೆಗೆ ತೊಂದರೆ : ಸೆಂಟ್ರಲ್‌ ಮಲೇರಿಯಾ ಲ್ಯಾಬ್‌ ಆಗಿರುವುದರಿಂದ ನಿತ್ಯ ಸಾವಿರಾರು ಮಲೇರಿಯಾ ಹಾಗೂ ಪೈಲೇರಿಯಾ ರಕ್ತ ಮಾದರಿಗಳು ಪರೀಕ್ಷೆಗೆ ಬರುತ್ತವೆ. ಇಲ್ಲಿನ ಬಹುತೇಕ ಪ್ರಯೋಗಾಲಯ ತಂತ್ರಜ್ಞರು ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ತೆರಳಿರುವುದರಿಂದ ನಿತ್ಯ 100 ರಕ್ತ ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗುತ್ತಿಲ್ಲ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಇಂದು ಬಿಬಿಎಂಪಿಗೆ ಮನವಿ: ಸೆಂಟ್ರಲ್‌ ಮಲೇರಿಯಾ ಲ್ಯಾಬ್‌ನ ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ಪಡೆದಿರುವುದರಿಂದ ಆಗಿರುವ ಸಮಸ್ಯೆಗಳನ್ನು ತಿಳಿಯ ಪಡಿಸುವ ಮೂಲಕ ಚುನಾವಣಾ ಕಾರ್ಯದಿಂದ ವಿನಾಯ್ತಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ.

* ಜಯಪ್ರಕಾಶ್‌ ಬಿರಾದಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ