ಆರ್‌.ಆರ್‌.ನಗರದಲ್ಲಿಂದು ಮತದಾನ

Team Udayavani, May 28, 2018, 9:58 AM IST

ಬೆಂಗಳೂರು: ಸಾವಿರಾರು ಅಸಲಿ ಓಟರ್‌ ಐಡಿಗಳು ಅಕ್ರಮವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಮುಂದೂಡಲ್ಪಿಟ್ಟಿದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಸೋಮವಾರ (ಮೇ 28) ಮತದಾನ ನಡೆಯಲಿದೆ. ಇದರೊಂದಿಗೆ ಆಡಳಿತಾರೂಡ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರಕ್ಕೆ ಹೊಸ ಅಗ್ನಿಪರೀಕ್ಷೆ ಎದುರಾಗಿದೆ.

ಸೋಮವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಬಿಜೆಪಿಯ ತುಳಸಿ ಮುನಿರಾಜುಗೌಡ, ಕಾಂಗ್ರೆಸ್‌ನ ಮುನಿರತ್ನ ಹಾಗೂ ಜೆಡಿಎಸ್‌ನ ಜಿ.ಎಚ್‌. ರಾಮಚಂದ್ರ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾರರ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗುತ್ತದೆ. ಸರ್ಕಾರ ರಚನೆಗೆ ಮೈತ್ರಿ
ಮಾಡಿಕೊಂಡ ಬಳಿಕ ಈ ಕ್ಷೇತ್ರದಲ್ಲೂ ಚುನಾವಣಾ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಯೋಚಿಸಿತ್ತಾದರೂ ಅದು ವಿಫ‌ಲವಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಾತರಿಯಾಗಿದೆ.

ಚುನಾವಣಾ ಮೈತ್ರಿ ಕುರಿತಂತೆ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಮತ್ತು ಜೆಡಿಎಸ್‌ ಅಭ್ಯರ್ಥಿ ರಾಮಚಂದ್ರ ಅವರೊಂದಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌, ಡಿ.ಕೆ.ಸುರೇಶ್‌ ಅವರು ಸಭೆ ನಡೆಸಿದರೂ ಇಬ್ಬರೂ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲು ನಿರಾಕರಿಸಿದ್ದರು. ಅಲ್ಲದೆ, ಪಕ್ಷದ ಹಿರಿಯರು ಕೂಡ ಅಭ್ಯರ್ಥಿಯನ್ನು ಹಿಂದೆ ಸರಿಯುವಂತೆ ಮನವೊಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಅಧಿಕಾರ ಮೈತ್ರಿಯ ನಡುವೆಯೂ ಕಾಂಗ್ರೆಸ್‌-ಜೆಡಿಎಸ್‌ನಲ್ಲಿ ಚುನಾವಣಾ ಹಣಾಹಣಿ ಮುಂದುವರಿಯುವಂತಾಗಿದೆ.

421 ಮತಗಟ್ಟೆಗಳು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,71,459 ಮತದಾರರಿದ್ದಾರೆ. ಇದರಲ್ಲಿ 2,46,282 ಪುರುಷರು ಹಾಗೂ 2,25,092 ಮಹಿಳೆಯರು ಸೇರಿದ್ದಾರೆ. ಮತದಾನಕ್ಕೆ 421 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 186 ಸೂಕ್ಷ್ಮ ಹಾಗೂ 47 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ 2,524 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

ಅಧಿಕಾರಿಗಳಿಗೆ ತರಬೇತಿ ಚುನಾವಣಾ ಆಯೋಗದ ಅಧಿಕಾರಿಗಳು ಮತಗಟ್ಟೆ ಅಧಿಕಾರಿಗಳಿಗೆ ಕ್ಷೇತ್ರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ನಿರ್ಮಿಸಿದ್ದ ಮಸ್ಟರಿಂಗ್‌ ಕೇಂದ್ರದಲ್ಲಿ ಭಾನುವಾರ ಇವಿಎಂ ಹಾಗೂ ವಿವಿ ಪ್ಯಾಟ್‌ ಬಳಕೆ, ತೋರುಬೆರಳಿಗೆ ಶಾಯಿ ಹಚ್ಚುವಾಗ ವಹಿಸಬೇಕಾದ ತರಬೇತಿ, ಯಾವುದೇ ಅಹಿತ ಕರ ಘಟನೆ ನಡೆದರೆ ಅಥವಾ ಮತಯಂತ್ರದಲ್ಲಿ ದೋಷ ಕಂಡುಬಂದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷನಿಗೆಐಟಿ ಅಧಿಕಾರಿಗಳ ಶಾಕ್‌!
ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮತದಾನದ ಮುನ್ನಾ ದಿನ ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆ ಶಾಕ್‌ ನೀಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರ ಆಪ್ತ ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರವಿ ಗೌಡ ನಿವಾಸಕ್ಕೆ ಭಾನುವಾರ ದಿಢೀರ್‌ ಭೇಟಿ ನೀಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಕೆಲಕಾಲ ಶೋಧ ಕಾರ್ಯ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್‌ ಬಳಿ ಇರುವ ರವಿಗೌಡ ಅವರ ನಿವಾಸಕ್ಕೆ ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ಏಕಾಏಕಿ ಭೇಟಿ ನೀಡಿದ 15 ಮಂದಿ ಐಟಿ ಅಧಿಕಾರಿಗಳ ತಂಡ, ಎರಡು ಗಂಟೆಗಳಿಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿ, ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ.
 
ಆರ್‌.ಆರ್‌ ನಗರ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಭಾರೀ ಮೊತ್ತದ ಹಣ ಕೂಡಿಟ್ಟ ಮಾಹಿತಿ ಮೇರೆಗೆ ಐಟಿ
ಅಧಿಕಾರಿಗಳು ದಾಳಿ ನಡೆಸಿದ್ದು, ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಹಣ ಅಥವಾ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳ ಜಪ್ತಿ ಕುರಿತು ಐಟಿ ಇಲಾಖೆ ಸ್ಪಷ್ಟಪಡಿಸಿಲ್ಲ. ಅಲ್ಲದೆ, ತಮ್ಮ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಯಾವುದೇ ಹಣ ಸಿಕ್ಕಿಲ್ಲ ಎಂದು ರವಿಗೌಡ ಸ್ಪಷ್ಟಪಡಿಸಿದ್ದಾರೆ.

ಹಣ ಹಂಚಿದ ಆರೋಪಿ ಬಂಧನ
ಆರ್‌.ಆರ್‌ ನಗರ ಚುನಾವಣೆಗೆ ಸೋಮವಾರ ಮತದಾರರಿಗೆ ಹಣ ಹಂಚುತ್ತಿದ್ದ ಆರೋಪ ಸಂಬಂಧ ಪ್ರಶಾಂತ್‌ ಶೆಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುತ್ಯಾಲನಗರದಲ್ಲಿ ಕಾರು ನಿಲ್ಲಿಸಿಕೊಂಡು ಪ್ರಶಾಂತ್‌ ಶೆಟ್ಟಿ ಹಣ ಹಂಚುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಯಶವಂತಪುರ ಠಾಣೆ ಪೊಲೀಸರು, ಶೆಟ್ಟಿಯನ್ನು ಬಂಧಿಸಿ ಆತನ ಬಳಿಯಿದ್ದ 1 ಲಕ್ಷ ರೂ. ನಗದು ವಶಪಡಿಸಿ ಕೊಂಡಿದ್ದಾರೆ. ಆರೋಪಿ ಪ್ರಶಾಂತ್‌ ಬಿಜೆಪಿ ಕಾರ್ಯಕರ್ತ ಎನ್ನಲಾಗುತ್ತಿದ್ದು, ಹಣ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ವಿವಿಗೆ ರಜೆ ರಾಜರಾಜೇಶ್ವರಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜ್ಞಾನಭಾರತಿ ಆವರಣದಲ್ಲಿ
ಇರುವ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೋಮವಾರ ರಜೆ ಘೋಷಿಸಲಾಗಿದೆ. ವಿಶ್ವವಿದ್ಯಾಲಯವು ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಮೇ 28ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.

ಸೋಮವಾರ ನಿಗದಿಯಾಗಿದ್ದ ಬಿಎ, ಬಿ.ಕಾಂ, ಬಿಎಚ್‌ಎಂ, ಬಿಎಸ್‌ಡಬ್ಲ್ಯೂ, ಬಿಸಿಎ, ಬಿಬಿಎಂ ಮೊದಲಾದ ಕೋರ್ಸ್‌ಗಳ ಎರಡನೇ ಸೆಮಿಸ್ಟರ್‌ ಹಾಗೂ ಬಿ.ವೊಕ್‌ 4ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಜೂನ್‌ 13ಕ್ಕೆ, ಬಿಎ, ಬಿಎಸ್ಸಿ, ಬಿಬಿಎಂ ಮೊದಲಾದ ಕೋರ್ಸ್‌ಗಳ 6ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಜೂನ್‌ 7ರಂದು ಹಾಗೂ ಬಿಎ, ಬಿಎಸ್ಸಿ ಎರಡನೇ ಸೆಮಿಸ್ಟರ್‌ ಪರೀಕ್ಷೆ ಯನ್ನು ಜೂನ್‌ 14ಕ್ಕೆ ಮುಂದೂಡಲಾಗಿದೆ ಎಂದು ಬೆಂವಿವಿ ಮೌಲ್ಯಮಾಪನ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕ್ಷೇತ್ರಾದ್ಯಂತ ಖಾಕಿ ಕಣ್ಗಾವಲು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಖಾಕಿ ಕಟ್ಟೆಚ್ಚರದಲ್ಲಿ ಮತದಾನ ನಡೆಯಲಿದೆ. ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಮತ್ತು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮೇ 31ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಅಲ್ಲದೆ, ಭಾನುವಾರ ಮಧ್ಯರಾತ್ರಿಯಿಂದ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ. ಜತೆಗೆ ಮತ ಎಣಿಕೆ ದಿನವಾದ ಮೇ 31ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ಇರುವುದಿಲ್ಲ.

ಮತದಾರರ ಗುರುತಿನ ಚೀಟಿಯ ಅಕ್ರಮ ಸಂಗ್ರಹ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದೆ. ಕ್ಷೇತ್ರದ 421 ಮತಗಟ್ಟೆಗಳ ಪೈಕಿ 4 ಕಷ್ಟಕರ, 47 ಅತಿಸೂಕ್ಷ್ಮ ಹಾಗೂ 186 ಸೂಕ್ಷ್ಮಮತಗಟ್ಟೆಗಳೆಂದು ಗುರುತಿಸಲಾಗಿದೆ. 31 ಮತಗಟ್ಟೆಗಳಲ್ಲಿ ಮತದಾನದ ವೀಡಿಯೊ ಚಿತ್ರೀಕರಣ ಮಾಡಲಿದೆ.

ಯಾವುದೇ ಚುನಾವಣಾ ಅಕ್ರಮ ಅಥವಾ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ನಿಗಾವಹಿಸಲು ಎಂಸಿಸಿಯ ಮತ್ತು ಫ್ಲೈಯಿಂಗ್‌ ಸ್ಕ್ವಾಡ್‌ನ‌ 9 ತಂಡಗಳು, ಎಸ್‌ಎಸ್‌ಟಿ 14 ತಂಡಗಳು, ಸೆಕ್ಟರ್‌ ಮ್ಯಾಜಿಸ್ಟ್ರೇಟ್‌ ಅಕಾರಿಗಳ 45 ತಂಡಗಳು, 100 ಮತಗಟ್ಟೆ ವೀಕ್ಷಕರನ್ನು ನಿಯೋಜಿಸಲಾಗಿದೆ. ಜತೆಗೆ ಕ್ಷೇತ್ರಾದ್ಯಂತ ಸಿಪಿಎಂಎಫ್‌ 10 ತುಕಡಿ ಹಾಗೂ ಕೆಎಸ್‌ಆರ್‌ಪಿಯ 15 ತುಕಡಿಗಳ ನಿಯೋಜನೆ, ಪ್ರತಿ ಮತಗಟ್ಟೆ ಬಳಿ ಮೂರರಿಂದ ನಾಲ್ಕು ಮಂದಿ ಪೊಲೀಸ್‌ ಸಿಬ್ಬಂದಿ ಕಾರ್ಯನಿರ್ವ ಹಿಸಲಿದ್ದು. ಹಿರಿಯ ಪೊಲೀಸ್‌ ಅಧಿಕಾರಿಗಳು ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಆರ್‌.ಆರ್‌.ನಗರದಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು, ವಾಮ ಮಾರ್ಗದ ಮೂಲಕ ಗೆಲುವು ಪಡೆಯಲು ಪ್ರಯತ್ನ ನಡೆಸಿದೆ. ಆದರೆ ಕ್ಷೇತ್ರದ ಜನತೆ ಅಭಿವೃದ್ಧಿ ಕಾರ್ಯಗಳನ್ನು
ಪರಿಗಣಿಸಿ ಮತ ಹಾಕಲಿದ್ದು, ಕಾಂಗ್ರೆಸ್‌ ಗೆಲುವು ಶತಸಿದ್ಧ.
 ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ನಗರದ ಹೊರವರ್ತುಲ ರಸ್ತೆ ಸಿಲ್ಕ್ಬೋರ್ಡ್‌ ಜಂಕ್ಷನ್‌-ಬೈಯಪ್ಪನಹಳ್ಳಿ ನಡುವೆ ನಿರ್ಮಿಸಲಾಗುತ್ತಿರುವ ಪ್ರತ್ಯೇಕ ಬಸ್‌ ಪಥದಲ್ಲಿ ಇತರೆ ವಾಹನಗಳು...

  • ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಆಡಳಿತ (ಕಾಗದ ರಹಿತ) ಅಳವಡಿಸಿಕೊಂಡು ಜನ ಸ್ನೇಹಿ ವಾತಾವರಣ ನಿರ್ಮಾಣ ಮಾಡುವಲ್ಲಿ ವಿಳಂಬವಾಗುತ್ತಿದ್ದು, ಖುದ್ದು ಪಾಲಿಕೆಯ...

  • ಬೆಂಗಳೂರು: ಸಕಾಲ ಸೇವೆ ಕಲ್ಪಿಸುವಲ್ಲಿ ಬೆಂಗಳೂರು ನಗರ ಜಿಲ್ಲೆ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದ್ದು, ನವೆಂಬರ್‌ ತಿಂಗಳೊಳಗೆ ಮೊದಲ ಹತ್ತು ಸ್ಥಾನದೊಳಗೆ...

  • ಬೆಂಗಳೂರು: ಬಿಬಿಎಂಪಿಯ ರಸ್ತೆ ಮೂಲ ಸೌಕರ್ಯ ಅಭಿವೃದ್ಧಿ ವಿಭಾಗದ ಅಂಗ ಸಂಸ್ಥೆಯಾದ ಟ್ರಾಫಿಕ್‌ ಎಂಜಿನಿಯರಿಂಗ್‌ ವಿಭಾಗವು 2017-18 ಮತ್ತು 2019-20ನೇ ಸಾಲಿನಲ್ಲಿ ನಿರ್ವಹಿಸಿರುವ...

  • ಬೆಂಗಳೂರು: ರಾಜ್ಯ ಖಜಾನೆ ಖಾಲಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿಯೇ ಬೆಂಬಲ ಇಲ್ಲ ಎಂಬ ವಿಷಯಗಳ ಕುರಿತು "ನೆರೆ ಬರ ಸಂತ್ರಸ್ತರ ಬಹಿರಂಗ...

ಹೊಸ ಸೇರ್ಪಡೆ