ಬೆಂಕಿ ಬಿದ್ದಾಗ ಬಾವಿ ತೋಡುವ ಸ್ಥಿತಿ!

ಮಾರುಕಟ್ಟೆಗೆಂದು ಕಾಯಕಲ್ಪ?

Team Udayavani, Jun 11, 2019, 3:08 AM IST

ಬೆಂಗಳೂರು: ನಗರದ ಮಾರುಕಟ್ಟೆಗಳು ಎಷ್ಟು ಅಸುರಕ್ಷಿತ ಎನ್ನುವುದಕ್ಕೆ ಈ ಹಿಂದೆ ಸಂಭವಿಸಿರುವ ಬೆಂಕಿ ಅವಘಡಗಳೇ ಸಾಕ್ಷಿ. ಇದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಲಿತಿರುವ ಪಾಠ ಮಾತ್ರ ಶೂನ್ಯ! “ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೊಡಿದರು’ ಎನ್ನುವಂತೆ ಅವಘಡಗಳು ಸಂಭವಿಸುವವರೆಗೆ ಬಿಬಿಎಂಪಿ ಎಚ್ಚೆತ್ತುಕೊಳ್ಳುವುದಿಲ್ಲ. ಅವಘಡಗಳು ಸಂಭವಿಸಿದ ನಂತರವಾದರೂ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತೆ ಎಂದರೆ ಅದೂ ಇಲ್ಲ. ಬಿಬಿಎಂಪಿ ಕಂಡುಕೊಳ್ಳುವುದೆಲ್ಲ “ತಾತ್ಕಾಲಿಕ’ ಪರಿಹಾರ. ಬೆಂಕಿ ಅವಘಡ ಸಂಭವಿಸದಂತೆ ತಡೆಯುವ ವಿಚಾರದಲ್ಲೂ ಅದೇ ಪ್ರವೃತಿ ಮುಂದುವರಿದಿದೆ.

ಒತ್ತುವರಿಗೆ ಶ್ರೀರಕ್ಷೆ: ನಗರದ ಯಾವುದೇ ಮಾರುಕಟ್ಟೆಗಳಲ್ಲಿ ಬೆಂಕಿ ನಂದಿಸಲು ಇರಬೇಕಾದ ಸಾಧನಗಳಾಗಲಿ, ಎಚ್ಚರಿಕೆ ಸೈರನ್‌ ವ್ಯವಸ್ಥೆಯಾಗಲಿ ಇಲ್ಲ. ಬಹುತೇಕ ಮಾರುಕಟ್ಟೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ರಸ್ತೆಗಳನ್ನು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ಆ್ಯಂಬುಲೆನ್ಸ್‌, ಅಗ್ನಿಶಾಮಕ ವಾಹನಗಳು ಮಾರುಕಟ್ಟೆ ಪ್ರದೇಶಗಳನ್ನು ಪ್ರವೇಶಿಸಲು ಏಳು ಸುತ್ತಿನ ಕೋಟೆ ಸುತ್ತಿಕೊಂಡು ಬಂದಂತೆ ಸುತ್ತಿಕೊಂಡು ಬರಬೇಕಾದ ಸ್ಥಿತಿ. ಒತ್ತುವರಿ ವಿಷಯದಲ್ಲಿ ಬಿಬಿಎಂಪಿ ಅಧಿಕಾರಿಗಳನ್ನು ಮಾತ್ರ ದೂರುವಂತಿಲ್ಲ. ಇದಕ್ಕೆ ಆಯಾ ಮಾರುಕಟ್ಟೆ ವ್ಯಾಪ್ತಿಯ ಜನಪ್ರತಿನಿಧಿಗಳ “ಶ್ರೀರಕ್ಷೆ’ಯೂ ಇದೆ. “ಬಿಬಿಎಂಪಿಯವರು ಮಳಿಗೆಗಳನ್ನು ಎತ್ತಿಸಿಬಿಟ್ಟಿದ್ದರು. ಸಾಹೇಬ್ರಿಗೆ ಹೇಳಿ ಮತ್ತೆ ಹಾಕಿಸಿಕೊಂಡಿದ್ದೇವೆ. ಪಾರ್ಕಿಂಗ್‌ಗೂ ಸಾಹೇಬ್ರು ಜಾಗ ಮಾಡಿಸಿಕೊಟ್ಟಿದ್ದಾರೆ’ ಎಂದು ಹಲವು ಮಾರುಕಟ್ಟೆಯ ವ್ಯಾಪಾರಿಗಳು ಹೇಳುತ್ತಾರೆ. ಆ ಸಾಹೇಬ್ರು ಯಾರು ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಕೋರ್ಟ್‌ ಆದೇಶಕ್ಕೂ ಬೆಲೆಯಿಲ್ಲ: ಕೃಷ್ಣರಾಜೇಂದ್ರ ಮಾರುಕಟ್ಟೆಯ ಹೂವಿನ ವ್ಯಾಪಾರಿಗಳ ಒಕ್ಕೂಟ, “ಮಾರುಕಟ್ಟೆಯಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವ್ಯಾಪಾರಿ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಅನಧಿಕೃತವಾಗಿ ನಿರ್ಮಾಣವಾಗಿರುವ ಮಳಿಗೆಗಳನ್ನು ತೆರವುಗೊಳಿಸಬೇಕು,’ ಎಂದು ಹೈಕೋರ್ಟ್‌ ಮೊರೆ ಹೋಗಿತ್ತು. ಪ್ರಕರಣದ ತನಿಖೆ ನಡೆಸಿದ ಹೈಕೋರ್ಟ್‌ ಮಾರುಕಟ್ಟೆಗಳಲ್ಲಿ ಬೆಂಕಿ ಅವಘಡ ಸಂಭವಿಸಿದರೆ ನಂದಿಸಲು ಇರಬೇಕಾದ ವ್ಯವಸ್ಥೆಯ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ವರದಿ ಕೇಳಿತ್ತು. ಅಗ್ನಿಶಾಮಕ ಇಲಾಖೆಯ ವರದಿಯನ್ನು ಆಧರಿಸಿ ಕೋರ್ಟ್‌ ಬಿಬಿಎಂಪಿಗೆ ಕೆಲವೊಂದು ಸೂಚನೆಗಳನ್ನು ನೀಡಿತ್ತು. ಆದರೆ, ಅವುಗಳಲ್ಲಿ ಯಾವುದೇ ಒಂದೇ ಒಂದಂಶವೂ ಕಾರ್ಯರೂಪಕ್ಕೆ ಬಂದಿಲ್ಲ.

ಮಾರುಕಟ್ಟೆಗಳಲ್ಲಿ ಬೆಂಕಿ ಅವಘಡಗಳು ಸಂಭವಿಸಿದರೆ ಅದನ್ನು ಎದುರಿಸಲು ಬಿಬಿಎಂಪಿ ಸಜ್ಜಾಗಿದೆ ಎಂದು ಅಗ್ನಿಶಾಮಕ ಇಲಾಖೆಯಿಂದ ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು. ಈ ಪತ್ರವನ್ನು ಮಾರುಕಟ್ಟೆಗಳಲ್ಲಿ ಎಲ್ಲರಿಗೂ ಕಾಣಿಸುವ ಪ್ರದೇಶದಲ್ಲಿ ಅಳವಡಿಸಿರಬೇಕು. ಈ ಪತ್ರವನ್ನು ಪಡೆಯದ ಹೊರತು ಮಾರುಕಟ್ಟೆ ಪ್ರಾರಂಭಿಸುವಂತೆಯೇ ಇಲ್ಲ ಎಂದು ಹೈಕೋರ್ಟ್‌ ಖಡಕ್‌ ಎಚ್ಚರಿಕೆ ನೀಡಿತ್ತು.

ಮಡಿವಾಳ ಮಾರುಕಟ್ಟೆ ಅಲ್ಲ – ಕೆಸರು ಗದ್ದೆ!: ಇದನ್ನು ಮಾರುಕಟ್ಟೆ ಎನ್ನುವುದಕ್ಕಿಂತ ಕೆಸರು ಗದ್ದೆ ಎನ್ನಬಹುದು. ಕೆಸರು ಗದ್ದೆಗೆ ಹೇಳಿಮಾಡಿಸಿದಂತೆ ಮಡಿವಾಳ ಮಾರುಟ್ಟೆ ಇದೆ. ಕೆಲವು ದಿನಗಳ ಹಿಂದಷ್ಟೇ ಬೀದಿ ಬದಿ ವ್ಯಾಪಾರ ಮಾಡಿಕೊಂಡಿದ್ದ ತರಕಾರಿ ವ್ಯಾಪಾರಿಗಳನ್ನು ರಸ್ತೆಯ ಹಿಂದಿನ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ವ್ಯಾಪರಿಗಳನ್ನು ಸ್ಥಾಳಾಂತರ ಮಾಡುವ ಮುನ್ನ ಅವರಿಗೆ ಕನಿಷ್ಠ ಸೌಲಭ್ಯಗಳನ್ನೂ ನೀಡಿಲ್ಲ. ಮಳೆಗೆ ಮಾರುಕಟ್ಟೆ ಸಂಪೂರ್ಣ ಜಲಾವೃತವಾಗುತ್ತದೆ. ಈ ಪರಿಸ್ಥಿತಿಯಿಂದ ಬೋಣಿಯೂ ಆಗುವುದಿಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಶೌಚಾಲಯಕ್ಕೆ ಹೋಗಬೇಕಾದರೂ ಇಲ್ಲಿನ ವ್ಯಾಪಾರಿಗಳು ಅರ್ಧ ಕಿ.ಮೀ ನಡೆದುಕೊಂಡು ಹೋಗಬೇಕು. ಕುಡಿಯುವ ನೀರಿನ ಸೌಲಭ್ಯ ಮರಿಚಿಕೆಯಾಗಿದೆ. ಪಾರ್ಕಿಂಗ್‌ ಬಹುದೊಡ್ಡ ಸಮಸ್ಯೆಯಾಗೇ ಉಳಿದಿದೆ.

ರಸ್ತೆ ನುಂಗುವ ಯಶವಂತಪುರ ವ್ಯಾಪಾರಿಗಳು: ಸಂಜೆ ಸಮಯದಲ್ಲಿ ಯಶವಂತಪುರ ಮಾರುಕಟ್ಟೆಯ ವ್ಯಾಪಾರಿಗಳು ರಸ್ತೆಯನ್ನು ನುಂಗಿಕೊಳ್ಳುತ್ತಾರೆ. ಇದರಿಂದ ನಿತ್ಯ ಸಂಜೆ ಈ ಪ್ರದೇಶದಲ್ಲಿ ಟ್ರಾಫಿಕ್‌ಜಾಮ್‌ ಸಮಸ್ಯೆ ಸಾಮಾನ್ಯವಾಗಿದೆ. ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಬಳಸುವ ವಾಹನ ಮಾರುಕಟ್ಟೆಯ ಮಧ್ಯೆದಲ್ಲೇ ಇರುವುದರಿಂದ ದುರ್ವಾಸನೆ ವ್ಯಾಪಾರಿಗಳನ್ನು ಹೈರಾಣಾಗಿಸಿದೆ. ಈ ಮಾರುಕಟ್ಟೆಯಲ್ಲಿ ಮಾಂಸ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳಾವಕಾಶವಿಲ್ಲ. ಎಲ್ಲ ಮಾರುಕಟ್ಟೆಗಳಂತೆ ಇಲ್ಲೂ ಮಳೆ ಬಂದರೆ ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ಇದೆ.

ಸುರಂಗ ಸವಾರಿ ಅಪಾಯಕಾರಿ!: ಯಶವಂತಪುರ ಮಾರುಕಟ್ಟೆ ಪ್ರವೇಶಿಸಲು ಬಸ್‌ ನಿಲ್ದಾಣ ಮಾರ್ಗವಾಗಿ ಪ್ರವೇಶಿಸಲು ಇರುವ ಸುರಂಗ ಮಾರ್ಗವನ್ನು ಕತ್ತಲು ಆವರಿಸಿದೆ. ಮಳೆ ಬಂದರೆ ಮಾರುಕಟ್ಟೆಯ ಮಾಂಸ ತ್ಯಾಜ್ಯ ನೀರು, ಕೊಳಚೆನೀರು ಮೊಣಕಾಲವರೆಗೆ ನಿಂತುಕೊಳ್ಳುತ್ತದೆ. ಇದೇ ಮಾರ್ಗದಲ್ಲಿ ದ್ವಿಚಕ್ರ ವಾಹನಗಳೂ ಸಾಗುವುದರಿಂದ ಸಣ್ಣ ಜಾಗದಲ್ಲಿ ಪಾದಚಾರಿಗಳು ಸರ್ಕ್‌ಸ್‌ ಮಾಡಬೇಕಾದ ಪರಿಸ್ಥಿತಿ ಇದೆ.

ಮಲ್ಲೇಶ್ವರ ಮಾರುಕಟ್ಟೆ: ಮಲ್ಲೇಶ್ವರ ಮಾರುಕಟ್ಟೆ ಸಮಸ್ಯೆಗಳು ಕಗ್ಗಂಟಾಗೇ ಉಳಿದಿವೆ. ಮಾರುಕಟ್ಟೆ ನವೀಕರಣದ ಹೆಸರಿನಲ್ಲಿ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಗೊಂಡ ವ್ಯಾಪರಿಗಳು ಬೀದಿಗೆ ಬಿದ್ದಿದ್ದು, ರಸ್ತೆ ಬದಿಯಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ. ಮಳೆ, ಬಿಸಿಲಿಗೆ ಇಲ್ಲಿನ ವ್ಯಾಪಾರಿಗಳಿಗೆ ಒಂದು ಸೂಕ್ತ ನೆಲೆ ಇಲ್ಲದಂತಾಗಿದೆ.

ಈ ಜಾಗದಲ್ಲಿ ಬಿಬಿಎಂಪಿ ಮತ್ತು ಬಿಡಿಎ ಜಂಟಿಯಾಗಿ ಮಾಲ್‌ ನಿರ್ಮಾಣ ಮಾಡಲು ನಿರ್ಧೃಇಸಿದ್ದವು. ಇಲ್ಲಿನ ವ್ಯಾಪಾರಿಗಳ ಹೋರಾಟದ ಫ‌ಲವಾಗಿ, ವ್ಯಾಪಾರಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡುವುದಾಗಿ ಬಿಬಿಎಂಪಿ ಭರವಸೆ ನೀಡಿತ್ತು. ಆದರೆ, ಈ ವ್ಯವಸ್ಥೆ ಕೆಲವರಿಗೆ ಮಾತ್ರ ಸಿಕ್ಕಿದೆ. ಬಿಬಿಎಂಪಿಯ ನೆಲೆ ನೀಡುವ ಭರವಸೆ ಹಲವು ವರ್ಷಗಳಿಂದ ಭರವಸೆಯಾಗೇ ಉಳಿದಿದೆ. ಹಳೆಯ ಮಾರುಕಟ್ಟೆಯನ್ನು ಕೆಡವಿ ಐದಾರು ವರ್ಷಗಳೇ ಕಳೆದಿದೆದ್ದು, ಹೊಸ ಮಾರುಕಟ್ಟೆ ಪೂರ್ಣವಾಗುವುದಕ್ಕೆ ಮುಹೂರ್ತ ಕೂಡಿಬಂದಿಲ್ಲ.

ಕೃಷ್ಣರಾಜಪುರ ಮಾರುಕಟ್ಟೆ: ಕೆ.ಆರ್‌.ಪುರದ ಮಾರುಕಟ್ಟೆಗೆ ಹೊಸಕೋಟೆ, ಕೋಲಾರ ಮತ್ತು ದೇವನಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲು ಬರುತ್ತಾರೆ. ಹೊಸಕೋಟೆ ಹೊರತುಪಡಿಸಿದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಹೀಗಾಗಿ, ಸುತ್ತಮುತ್ತಲಿನ ರೈತರು ಮತ್ತು ವ್ಯಾಪಾರಿಗಳು ಕೆ.ಆರ್‌.ಪುರ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಈ ಮಾರುಕಟ್ಟೆಯ ಪಕ್ಕವೇ ತ್ಯಾಜ್ಯದ ಪಿರಮಿಡ್‌ ನಿರ್ಮಾಣವಾಗುವುದರಿಂದ, ಮಳೆಬಂದರೆ ತ್ಯಾಜ್ಯವೆಲ್ಲ ಮಾರುಕಟ್ಟೆಗೆ ಸೇರಿಕೊಳ್ಳುತ್ತದೆ.

ಹೈಕೋರ್ಟ್‌ ನೀಡಿದ್ದ ಆದೇಶದಲ್ಲಿ ಏನಿದೆ?
-ಮಾರುಕಟ್ಟೆಯ ಪಾದಚಾರಿ ಮಾರ್ಗವನ್ನು ಯಾರೂ ಅತಿಕ್ರಮಿಸಿಕೊಳ್ಳಬಾರದು. ವ್ಯಾಪಾರಿಗಳು, ಮಳಿಗೆ ಮಾಲೀಕರು ಮತ್ತು ಸಾರ್ವಜನಿಕರು ವಾಹನಗಳ ನಿಲುಗಡೆಗೆ ಈ ಜಾಗವನ್ನು ಬಳಸಬಾರದು.

-ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಮಾರುಕಟ್ಟೆಯ ಒಳ ಪ್ರದೇಶಗಳಲ್ಲಿ ಸಹ ಹೆಚ್ಚುವರಿ ಸ್ಥಳವನ್ನು ಬಳಸಿಕೊಳ್ಳುವಂತಿಲ್ಲ.
ಬೆಂಕಿ ಅವಘಡಗಳು ಸಂಭವಿಸಿದರೆ ಅದನ್ನು ಸೂಚಿಸುವ ಧ್ವನಿ ವರ್ಧಕ ಮತ್ತು ಸೆನ್ಸಾರ್‌ ಅಳವ ಡಿಸಬೇಕು.

-ಬೆಂಕಿ ಅವಘಡಗಳು ಸಂಭವಿಸಿದರೆ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ತೆರಳಲು ಮಾರ್ಗಸೂಚಿಗಳನ್ನು ಅಳವಡಿಸಬೇಕು.

-ಬೆಂಕಿ ನಂದಿಸುವ ಸಾಧನಗಳನ್ನು ಅಲ್ಲಲ್ಲಿ ಅಳವಡಿಸಬೇಕು ಸೇರಿದಂತೆ 19 ಅಂಶಗಳ ಸುರಕ್ಷತಾ ಕ್ರಮಗಳನ್ನು ಹೈಕೋರ್ಟ್‌ ನೀಡಿತ್ತು.

* ಹಿತೇಶ್‌ ವೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ