“ಪರಿಸರ ಸ್ನೇಹಿ’ ಆಚರಣೆಗೆ ನಾವು ರೆಡಿ; ನೀವು?

Team Udayavani, Aug 22, 2019, 3:09 AM IST

ಬೆಂಗಳೂರು: ನಗರದ ವಿವಿಧ ಮಾರುಕಟ್ಟೆಗಳಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳ ಅಬ್ಬರ ನಡೆಯುತ್ತಿದೆ. ಕೆಲವು ಅಧಿಕಾರಿಗಳು ಸದ್ದಿಲ್ಲದೆ ಇವುಗಳ ಮಾರಾಟಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಆದರೆ, ಕೆಂಗೇರಿ ಸಮೀಪ ಒಳಗೆರೆಹಳ್ಳಿಯಲ್ಲಿ ಪರಿಸ್ಥಿತಿ ಉಲ್ಟಾ ಆಗಿದೆ. ಆ ಪ್ರದೇಶಗಳಲ್ಲಿ ಪಿಒಪಿ ಗಣೇಶ ಕಂಡುಬಂದರೆ, ಸ್ವತಃ ನಿವಾಸಿಗಳೇ ಬಿಬಿಎಂಪಿಗೆ ದೂರು ನೀಡುತ್ತಾರೆ.

ಅಷ್ಟೇ ಏಕೆ, ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌, “ಕಡ್ಡಾಯವಾಗಿ ಪರಿಸರ ಸ್ನೇಹಿ ಗಣೇಶನನ್ನೇ ಪ್ರತಿಷ್ಠಾಪನೆ ಮಾಡಬೇಕು’ ಎಂದು ತನ್ನ ಎಲ್ಲ ಸದಸ್ಯರಿಗೂ ಮೌಖೀಕವಾಗಿ ಫ‌ರ್ಮಾನು ಹೊರಡಿಸಿದೆ. ಈ ಒಕ್ಕೂಟದಡಿ 80 ಸಾವಿರ ಫ್ಲ್ಯಾಟ್‌ಗಳಿರುವ 450 ಅಪಾರ್ಟ್‌ಮೆಂಟ್‌ಗಳು ಬರುತ್ತವೆ.

ವರ್ತೂರು, ವೈಟ್‌ಫಿಲ್ಡ್‌ ಸುತ್ತಮುತ್ತ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಅಲ್ಲಿನ ನಾಗರಿಕ ವೇದಿಕೆಗಳು ಮುಂದಾಗಿವೆ. ಈ ಸಂಬಂಧ ಸುತ್ತಲಿನ ಅಪಾರ್ಟ್‌ಮೆಂಟ್‌ ಹಾಗೂ ಬಡಾವಣೆಗಳ ಜನರಲ್ಲಿ ಜಾಗೃತಿ ಮೂಡಿಸಿವೆ. ಹೀಗಾಗಿ, ಸಾರ್ವಜನಿಕವಾಗಿ ಪಿಒಪಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಬಾರದು. ನಿಯಮ ಮೀರಿ ಪಿಒಪಿ ಗಣೇಶ ಮೂರ್ತಿ ಕೂರಿಸುವವರಿಗೆ ವಿದ್ಯುತ್‌, ನೀರು ಮತ್ತಿತರ ಮೂಲಸೌಲಭ್ಯ ನೀಡಬಾರದು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಲು ಚಿಂತನೆ ನಡೆಸಿದ್ದಾರೆ!

ಇವು ನಗರದಲ್ಲಿ ಮಣ್ಣಿನ ಗಣಪತಿ ಜನಪ್ರಿಯಗೊಳ್ಳುತ್ತಿರುವುದಕ್ಕೆ ಹಾಗೂ ಜನ ಜಾಗೃತರಾಗಿರುವುದಕ್ಕೆ ಕೆಲ ಸ್ಯಾಂಪಲ್‌ಗ‌ಳು. ಇಂತಹ ನೂರಾರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಅಪಾರ್ಟ್‌ಮೆಂಟ್‌ ನಿವಾಸಿಗಳು ಈಗ ಮಣ್ಣಿನ ಗಣೇಶನತ್ತ ಮುಖಮಾಡಿದ್ದಾರೆ. ಇದರ ಪರಿಣಾಮ ಸುತ್ತಲಿನ ಕೆರೆಗಳಿಗೆ ಪರೋಕ್ಷವಾಗಿ ಮರುಜೀವ ಬಂದಂತಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಪಿಒಪಿ ಮೂರ್ತಿ ನಿಷೇಧಿಸಿದ್ದರೂ ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಇದನ್ನು ತಡೆಯಲು ನಗರದ ಸಂಘ-ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಒಕ್ಕೂಟಗಳು ಕೈಜೋಡಿಸಬೇಕೆಂದು ಬಿಬಿಎಂಪಿ ಮನವಿ ಮಾಡುತ್ತಾ ಬಂದಿತ್ತು. ಸದ್ಯ ಅಪಾರ್ಟ್‌ಮೆಂಟ್‌ ಫೆಡರೇಷನ್‌ಗಳು, ವಿವಿಧ ನಾಗರಿಕ ವೇದಿಕೆ, ಒಕ್ಕೂಟಗಳು ತಮ್ಮ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ಗಣೇಶನ ಉತ್ಸವಕ್ಕೆ ಎಲೆಮರೆಯ ಕಾಯಿಗಳಂತೆ ಕಾರ್ಯನಿರ್ವಹಿಸುತ್ತಿವೆ.

ಲಾಬಿ; ಕೊನೆ ಗಳಿಗೆಯಲ್ಲಿ ಅವಕಾಶ: ಸಾರ್ವಜನಿಕರ ಪ್ರಯತ್ನಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಥೆಗಳೂ ಕೈಜೋಡಿಸುವ ಅಗತ್ಯವಿದೆ. ಹಬ್ಬದ ಕೊನೆಯ ಗಳಿಗೆಯಲ್ಲಿ ಲಾಬಿಗೆ ಮಣಿದು ಪಿಒಪಿ ಗಣೇಶನ ಮಾರಾಟಕ್ಕೆ ಅಧಿಕಾರಿಗಳು ಅನುಮತಿ ಕೊಡುತ್ತಾರೆ. ಹಿಂದಿನ ಎರಡು-ಮೂರು ವರ್ಷಗಳಲ್ಲಿ ಆಗಿರುವುದು ಇದೇ. ಈ ಮಧ್ಯೆ “ಪರಿಸರ ಸ್ನೇಹಿ ಜಾಗೃತಿ’ ಕೂಡ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಪರಿಸರವಾದಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌ ವ್ಯಾಪ್ತಿಯಲ್ಲಿ 450 ಅಪಾರ್ಟ್‌ಮೆಂಟ್‌ಗಳು, 80 ಸಾವಿರ ಫ್ಲಾಟ್‌ಗಳು ಬರಲಿವೆ. ಈಗಾಗಲೇ ಫೆಡರೇಷನ್‌ನಿಂದ ನಿವಾಸಿಗಳಿಗೆ ಸಭೆಗಳಲ್ಲಿ, ಫೇಸ್‌ಬುಕ್‌, ವ್ಯಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಬ್ಬ ಸಮೀಪಿಸುತ್ತಿದ್ದಂತೆ ನಿವಾಸಿಗಳ ಅಧಿಕೃತ ಇ-ಮೇಲ್‌ ಹಾಗೂ ಮೊಬೈಲ್‌ ನಂಬರ್‌ಗೆ “ಪಿಒಪಿ ಮೂರ್ತಿ ಬೇಡ; ಮಣ್ಣಿನ ಮೂರ್ತಿ ಬಳಸಿ ಪರಿಸರ ಸ್ನೇಹಿಯಾಗೋಣ’ ಎಂಬ ಸಂದೇಶ ಕಳಿಸಲಾಗುತ್ತದೆ.

ಇನ್ನು ಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಲೋಹದಿಂದ ತಯಾರಿಸಿ ಕಾಯಂ ಪ್ರತಿಷ್ಠಾಪನೆ ಮಾಡಿರುವ ಮೂರ್ತಿಗಳಿದ್ದು, ಅಲ್ಲಿಯೇ ಬಂದು ಪೂಜಿಸಿ, ಸಾಂಸ್ಕೃತಿಕ ಚಟುವಟಿಗಳಲ್ಲಿ ಸಾಕಷ್ಟು ಮಂದಿ ಭಾಗವಹಿಸಲಿದ್ದಾರೆ ಎಂದು ಫೆಡರೇಷನ್‌ ಕಾರ್ಯದರ್ಶಿ ಶ್ರೀಕಾಂತ್‌ ತಿಳಿಸಿದರು. ಇದೇ ಮಾದರಿಯನ್ನು ಬಹುತೇಕ ಅಪಾರ್ಟ್‌ಮೆಂಟ್‌ಗಳು ಅನುಸರಿಸುತ್ತಿವೆ.

ಗಣೇಶ ಹಬ್ಬದ ನಿಮಿತ್ತ ಈ ವಾರಾಂತ್ಯ ಸಭೆ ನಡೆಯಲಿದ್ದು, ಈ ಸಭೆಗಳಲ್ಲಿ ಪರಿಸರ ಸ್ನೇಹಿ ಗಣಪ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ನಿಯಮಗಳಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಅಂಶ ಸೇರಿಸಿ ಜಾರಿಗೆ ತರಲಾಗುತ್ತಿದೆ ಎಂದು ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಸದಸ್ಯರೊಬ್ಬರು ತಿಳಿಸಿದರು.

8 ಸಾವಿರಕ್ಕೂ ಅಧಿಕ ಅಪಾರ್ಟ್‌ಮೆಂಟ್‌: ರಾಜಧಾನಿಯಲ್ಲಿ ಎಂಟು ಸಾವಿರಕ್ಕೂ ಅಧಿಕ ಅಪಾರ್ಟ್‌ಮೆಂಟ್‌ಗಳಿವೆ. ಅದರಲ್ಲಿ ಮೂರು ಲಕ್ಷಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಒಂದು ವೇಳೆ ಅವರೆಲ್ಲರೂ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಗಣೇಶನಿಗೆ ಮೊರೆಹೋದರೆ, ಸುತ್ತಲಿನ ಹತ್ತಾರು ಕೆರೆಗಳು ಕಲುಷಿತಗೊಳ್ಳುತ್ತವೆ. ಜತೆಗೆ ಅಂತರ್ಜಲ ಕೂಡ ವಿಷವಾಗುತ್ತದೆ.

ಒಳಗೆರೆಹಳ್ಳಿಯಲ್ಲಿ ಮಣ್ಣಿನ ಮೂರ್ತಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಒಂದು ವೇಳೆ ಬಡವಾಣೆಗಳ ವ್ಯಾಪ್ತಿಯಲ್ಲಿ ಯಾರಾದರೂ ಪಿಒಪಿ ಗಣೇಶ ಪ್ರತಿಷ್ಠಾಪಿಸಿದರೆ, ಬಿಬಿಎಂಪಿಗೆ ದೂರು ನೀಡಲಾಗುತ್ತದೆ. ಇದೇ ಮಾದರಿಯನ್ನು ನಗರದ ಎಲ್ಲಾ ಒಕ್ಕೂಟಗಳು, ಸಂಘಗಳು ಅಳವಡಿಸಿಕೊಳ್ಳಬೇಕು.
-ಎನ್‌.ಕದರಪ್ಪ, ಒಳಗೆರೆ ನಿವಾಸಿಗಳ ಒಕ್ಕೂಟದ ಅಧ್ಯಕ್ಷ

ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಸ್ವತಃ ನಿರ್ಣಯ ಕೈಗೊಳ್ಳುವ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಮುಂದಾಗಿರುವುದು ಸಂತಸದ ವಿಚಾರ. ಈ ಮಾದರಿಯನ್ನು ನಗರದ ಚಿಕ್ಕ ಸಂಘ ಸಂಸ್ಥೆಗಳೂ ಅನುಸರಿಸಿದರೆ ಬೆಂಗಳೂರು ಕೆರೆಗಳು ಇನ್ನಷ್ಟು ಅವನತಿಗೆ ಸರಿಯುವುದನ್ನು ತಪ್ಪಿಸಬಹುದು.
-ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ

ಬಹುತೇಕ ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕ ವೇದಿಕೆಗಳು ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಮುಂದಾಗಿವೆ. ಅವುಗಳಿಗೆ ಬಿಬಿಎಂಪಿ ಅಗತ್ಯ ಸೌಲಭ್ಯ ನೀಡಬೇಕು. ಈ ಕುರಿತು ಚರ್ಚೆ ನಡೆಸಿ ತಾತ್ಕಾಲಿಕ ಕೊಳನ್ನು ಹೆಚ್ಚಿಸಿ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು.
-ಜಗದೀಶ್‌, ವರ್ತೂರು ರೈಸಿಂಗ್‌ ನಾಗರಿಕ ಒಕ್ಕೂಟ

* ಜಯಪ್ರಕಾಶ್‌ ಬಿರಾದಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ನೋ ಪಾರ್ಕಿಂಗ್‌ ಸ್ಥಳದಲ್ಲಿ ನಿಂತಿದ್ದ ಬೈಕ್‌ ಅನ್ನು ಟೋಯಿಂಗ್‌ ಮಾಡಿದ್ದಕ್ಕೆ, ಟೋಯಿಂಗ್‌ ವಾಹನ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ,...

  • ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಕೆ.ಆರ್‌.ಪುರಂ, ಮಹಾಲಕ್ಷ್ಮೀ ಲೇಔಟ್‌, ಯಶವಂತಪುರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅ.21ರಂದು ನಡೆಯಲಿದ್ದು,...

  • ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ...

  • ಬೆಂಗಳೂರು: ಹೈಕೋರ್ಟ್‌ ಕಟ್ಟಡ ಸ್ಫೋಟ ಮಾಡುವುದಾಗಿ ದೆಹಲಿ ಮೂಲದ ವ್ಯಕ್ತಿಯೋರ್ವನಿಂದ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದು ಆತಂಕ ಸೃಷ್ಟಿಸಿದೆ....

  • ಬೆಂಗಳೂರು: "ಹಿಂದೆ ರಂಗ ಕ್ಷೇತ್ರದಲ್ಲಿ ಭಾಗವತರಿಗೆ ಭಾರೀ ಗೌರವ, ಮನ್ನಣೆಯಿತ್ತು. ಆ ಗೌರವ ಪಡೆಯಲು ನಾನು ಮೂಡಲಪಾಯ ಯಕ್ಷಗಾನ ಕ್ಷೇತ್ರದ ಭಾಗವತನಾದೆ,' ಎಂದು ಹಿರಿಯ...

ಹೊಸ ಸೇರ್ಪಡೆ