ಯುವಕರ ಗುಂಪುವಿನ ನಡುವೆ ಮಾರಾಮಾರಿ 9 ಮಂದಿಗೆ ಗಂಭೀರ ಗಾಯ

Team Udayavani, Sep 10, 2019, 3:00 AM IST

ನೆಲಮಂಗಲ: ಎರಡು ಸಮುದಾಯದ ಯುವಕರ ಗುಂಪುವಿನ ನಡುವೆ ನಡೆದ ಮಾರಾಮಾರಿಯಲ್ಲಿ 9 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ತಾಲೂಕಿನ ಕಾಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗಲಾಟೆಯಲ್ಲಿ ಕಾಚನಹಳ್ಳಿಯ ನರಸಿಂಹಯ್ಯ(28), ನಾಗರಾಜು (24), ವೆಂಕಟೇಶ್‌ (32), ನಾಗೇಂದ್ರ (26), ಕೆಂಪರಾಜು (19), ನಾಗೇಶ್‌(24), ಬೈಲಮ್ಮ(40), ನರಸಮ್ಮ(45), ಪ್ರಿಯಾ(18) ಎಂಬುವರು ಗಾಯಗೊಂಡಿದ್ದು, ಸ್ಥಳೀಯ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕಿನ ಕಾಚನಹಳ್ಳಿ ಗ್ರಾಮದ ರೂಢಿ ಸಂಪ್ರದಾಯದಂತೆ ತಳವಾರಿಕೆ ಮಾಡುವಂತೆ ಮೇಲ್ಜಾತಿಯವರು ಒತ್ತಾಯ ಮಾಡಿದರು ಆದರೆ ನಾವು ತಳವಾರಿಕೆ ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ನಮ್ಮನ್ನು ಅವಾಚ್ಯ ಶಬ್ದಗಳಿಂದ, ಬೈದು, ಜಾತಿ ನಿಂದನೆ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳುಗಳು ದೂರು ನೀಡಿದ್ದು, ಗ್ರಾಮಾಂತರ ಪೋಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳ ಭೇಟಿ: ಘಟನೆಯ ಹಿನ್ನಲೆಯಲ್ಲಿ ಕಾಚನಹಳ್ಳಿ ಗ್ರಾಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ಎಸ್ಪಿ ರವಿ.ಡಿ ಚೆನ್ನಣ್ಣನವರ್‌, ತಹಶೀಲ್ದಾರ್‌ ಎಂ.ಶ್ರೀನಿವಾಸಯ್ಯ, ಡಿವೈಎಸ್ಪಿ ಪಾಂಡುರಂಗ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್‌ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿದರು. ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಆಧಿಕಾರಿಗಳು ಘಟನೆ ಬಗ್ಗೆ ಮಾಹಿತಿ ಪಡೆದರು.

ಆರೋಪ: ತಳವಾರಿಕೆ ಮಾಡುವುದಿಲ್ಲ ಎಂದ ಕಾರಣಕ್ಕೆ ಗ್ರಾಮದ ಮೇಲ್ಜಾತಿಯ ಗಂಗರಾಜು, ರಾಮಕೃಷ್ಣ, ಸಿದ್ದಬೈರೇಗೌಡ, ಪ್ರಸನ್ನ, ಶ್ರೀನಿವಾಸ್‌, ತಿಮ್ಮೇಗೌಡ, ಮಂಜುನಾಥ್‌, ಆಂಜಿನಪ್ಪ, ಶಶಿಧರ್‌, ನಾಗೇಶ್‌ ಎಂಬುವರು ಏಕಾಏಕಿ ಮನೆಯ ಬಳಿ ಬಂದು ಜಾತಿ ನಿಂದನೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ನಾಗೇಶ್‌ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಊಹಾಪೋಹ: ಕಾಚನಹಳ್ಳಿಯಲ್ಲಿ ಭಾನುವಾರ ರಾತ್ರಿ ಗಣೇಶನ ವಿಸರ್ಜನೆಯ ನಂತರ ಕೆಲವು ಯುವಕರು ಮದ್ಯ ಸೇವಿಸಿ ತಮಟೆ ಬಾರಿಸುವ ವಿಷಯದಲ್ಲಿ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಗ್ರಾಮದಲ್ಲಿ ಎಲ್ಲಾ ಜಾತಿಯ ಜನರು ಅಣ್ಣತಮ್ಮಂದಿರಂತೆ ವಾಸಿಸುತಿದ್ದು, ಗ್ರಾಮದಲ್ಲಿ ಕಲಹ ಉಂಟು ಮಾಡಲು ಈ ರೀತಿ ಮಾಡಲಾಗಿದೆ ಎಂಬ ಊಹಾ ಪೋಹದ ಮಾತುಗಳು ಕಾಚನಹಳ್ಳಿ ಹಾಗೂ ತಾಲೂಕಿನಾದ್ಯಂತ ಕೇಳಿ ಬಂದಿದೆ.

ಕಾಚನಹಳ್ಳಿ ಗ್ರಾಮದ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದೆ. ಜಾತಿ ನಿಂದನೆ ಮಾಡಿ ಹಲ್ಲೆ ಮಾಡಲಾಗಿದೆ ಎಂದು ದೂರು ಬಂದಿದ್ದು, ಸ್ಥಳ ಪರಿಶೀಲಿಸಿ ಗಾಯಾಳುಗಳ ಹೇಳಿಕೆ ಪಡೆಯಲಾಗಿದೆ. ಘಟನೆ ಕುರಿತಂತೆ ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಶೀಘ್ರದಲ್ಲೇ ಉಳಿದವರನ್ನು ಬಂಧಿಸಲಾಗುವುದು.
-ರವಿ.ಡಿ ಚೆನ್ನಣ್ಣನವರ್‌, ಎಸ್ಪಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ