ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಕ್ರಮ
Team Udayavani, Jun 24, 2020, 7:04 AM IST
ದೇವನಹಳ್ಳಿ: ಕೋವಿಡ್ 19 ಸೋಂಕು ಹರಡುವಿಕೆ ತಡೆಗಟ್ಟಲು ಮುಂಜಾಗ್ರತೆ ಕ್ರಮವಾಗಿ ಹೋಂಕ್ವಾರಂಟೈನ್‌ನಲ್ಲಿರಿಸಿರುವ ವ್ಯಕ್ತಿಗಳು ಜವಾಬ್ದಾರಿ ಮರೆತು ಸಾರ್ವಜನಿಕ ಸ್ಥಳಗಳಲ್ಲಿ ಓಡಾತ್ತಿರುವು ದರಿಂದ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ವಿಪತ್ತು ನಿರ್ವಾಹಣಾ ಕಾಯ್ದೆ- 2005ರ ಅಡಿ ಪ್ರಕರಣ ದಾಖಲಿಸಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಗೃಹಬಂಧನ ಮೇಲುಸ್ತುವಾರಿ ನೋಡಲ್ ಅಧಿಕಾರಿ ಡಾ.ಜಗದೀಶ್.ಕೆ.ನಾಯಕ್ ತಿಳಿಸಿದ್ದಾರೆ.
ತಾಲೂಕಿನ ಜಿಲ್ಲಾಡಳಿತ ಭವನದ ಅಪರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೋಂ ಕ್ವಾರಂಟೈನ್ ಮಾಡಲಾದವರು ಅವಧಿ ಮುಗಿಯುವವರೆಗೂ ಸರ್ಕಾರಿ ಆದೇಶ ಪಾಲನೆ ಮಾಡಬೇಕು. ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾ ವಹಿಸಲು ಮೊಬೈಲ್ ಆ್ಯಪ್ ನಿಂದ ಮಾಹಿತಿ ದಾಖಲಿಸಲಾಗುತ್ತಿದೆ. ಕ್ವಾರಂಟೈನ್‌ನಲ್ಲಿರಿಸಲಾದ ವ್ಯಕ್ತಿಗಳು ತಪ್ಪಿಸಿಕೊಂಡಲ್ಲಿ ಹಾಗೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಲ್ಲಿ ಅವರ ವಿರುದ್ಧಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವುದು ಕಂಡುಬಂದಲ್ಲಿ ಜಿಲ್ಲಾಧಿಕಾರಿಯವರ ಕಚೇರಿ, ಉಪ ವಿಭಾಗಾಧಕಾರಿಯವರ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಸಮೀಪದ ಪೊಲೀಸ್ ಠಾಣೆಗಳಲ್ಲಿ ನಾಗರಿಕರು ಮಾಹಿತಿ ನೀಡಿ ಸೋಂಕು ತಡೆಗೆ ಸಹಕರಿಸಬಹುದು ಎಂದು ತಿಳಿಸಿದ್ದಾರೆ.