ಅರ್ಹರು ಯೋಜನೆಗಳಿಂದ ವಂಚಿತರಾದರೆ ಸಹಿಸಲ್ಲ

Team Udayavani, Aug 22, 2019, 3:00 AM IST

ನೆಲಮಂಗಲ: ವಿಧಾನಸಭೆ ಕ್ಷೇತ್ರದ ಜನರಿಗೆ ಸರ್ಕಾರದಿಂದ ದೊರೆಯಬಹುದಾದ ಯೋಜನೆ ಮತ್ತು ಸವಲತ್ತುಗಳನ್ನು ಅರ್ಹಫ‌ಲಾನುಭವಿಗಳಿಗೆ ದೊರಕಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕಬಾರದು. ಅರ್ಹ ಫ‌ಲಾನುಭವಿಗಳು ಯೋಜನೆಗಳಿಂದ ವಂಚಿತರಾದರೆ ಸಹಿಸುವುದಿಲ್ಲ ಎಂದು ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿರುವ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಹಂತದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿಸ್ವಾರ್ಥ ಸೇವೆ ಸಲ್ಲಿಸಿ: ತಾಲೂಕಿನ ಜನರಿಗೆ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ರೀತಿಯ ಸೌಲಭ್ಯ ಮತ್ತು ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಕೊಡಿಸಿಕೊಡಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿಕೊಂಡು ಓಡಾಡುವ ಬದಲಿಗೆ ತಮಗೆ ಎದುರಾಗು ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಗೆ ತಮ್ಮ ಹಿರಿಯ ಅಧಿಕಾರಿಗಳು ಅಥವಾ ತಾಂತ್ರಿಕ ಸಿಬ್ಬಂದಿಯಿಂದ ಪರಿಹಾರ ಕಂಡುಕೊಂಡು ಯೋಜನೆಗಳ ಗುರಿ ಮುಟ್ಟಬೇಕು. ವಿನಾಕಾರಣ ಕಾಲಹರಣ ಮಾಡದೇ ನಿಸ್ವಾರ್ಥದಿಂದ ಸಾರ್ವಜನಿಕ ಸೇವೆ ಮಾಡಬೆಕು ಎಂದರು.

ರಾಜೀನಾಮೆ ತಾಕೀತು: ತಾಲೂಕಿನಲ್ಲಿ ಸಾಕಷ್ಟು ಅಂಗನವಾಡಿಗಳು ಕಾಲಕಾಲಕ್ಕೆ ನಿರ್ಮಾಣವಾಗದೇ ನನೆಗುದಿಗೆ ಬಿದ್ದಿವೆ. ತಾಲೂಕಿನ ಸಿಡಿಪಿಒ ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳಿಂದಲೂ ಒಂದೇ ಕತೆ ಹೇಳುತಿದ್ದಾರೆ. ಹೊರಾತಾಗಿ ಕಾಮಗಾರಿಗಳಲ್ಲಿ ಪ್ರಗತಿ ಕಾಣುತ್ತಿಲ್ಲ. ಸಭೆಗಳಿಗೆ ಹಾಜರಾಗುವ ಅಧಿಕಾರಿಗಳು ಸೂಕ್ತ ಮಾಹಿತಿಯೊಂದಿಹಗೆ ಆಗಮಿಸಿ ಮಾಹಿತಿ ನೀಡಬೇಕು. ವಿನಾಕಾರಣ ಸಮಜಾಯಿಷಿ ನೀಡುವುದನ್ನು ಬಿಡಬೇಕು. ಯೋಜನೆಗಳ ಪ್ರಗತಿ ಮತ್ತು ಫ‌ಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕವಾಗಿರಬೇಕು. ಸ್ಥಳಿಯ ಜನಪ್ರತಿನಿಧಿಗಳನ್ನು ಅಧಿಕಾರಿಗಳು ಕಡೆಗಣಿಸುತ್ತಿರುವುದು ಸಲ್ಲದು. ಕಾಮಗಾರಿಗಳ ಸ್ಥಳಗಳಿಗೆ ಶಾಸಕರು ಒಮ್ಮೆ ಸ್ಥಳ ಪರಿಶೀಲಿಸಿ, ಮಾಹಿತಿ ಸತ್ಯವಾಗಿದ್ದರೆ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವನಹಳ್ಳಿ ರಂಗನಾಥ್‌ ತಾಕೀತು ಮಾಡಿದರು.

ನೀರಿನ ಸಮಸ್ಯೆ ಪರಿಹಾರಕ್ಕೆ ಎಸ್‌ಟಿಪಿ ಘಟಕ ನಿರ್ಮಾಣ: ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್‌ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು 146 ಕೊಳವೆ ಬಾವಿಗಳಿವೆ. ಅವುಗಳಲ್ಲಿ 44ರಲ್ಲಿ ನೀರಿಲ್ಲ.102 ಕೊಳವೆ ಬಾವಿಗಳ ಮೂಲಕ ಪಟ್ಟಣಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಪುರಸಭೆ ವ್ಯಾಪ್ತಿಯ 23, 14 ಹಾಗೂ 01ನೇ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಶೀಘ್ರದಲ್ಲಿಯೇ ಪಟ್ಟಣದ ಸಮೀಪದಲ್ಲಿರುವ ಭಿನ್ನಮಂಗಲ ಕೆರೆಯ ಎರಡು ಎಕರೆ ಪ್ರದೇಶದಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಎಸ್‌ಟಿಪಿ ಘಟಕವನ್ನು ನಿರ್ಮಾಣ ಮಾಡಲಾಗುತ್ತದೆ. ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶಿಥಿಲಗೊಂಡಿದ್ದ ಬೃಹತ್‌ ಒವರ್‌ಹೆಡ್‌ ಟ್ಯಾಂಕನ್ನು ತೆರವುಗೊಳಿಸಲಾಗಿದೆ. ನೂತನ ಟ್ಯಾಂಕ್‌ ನಿರ್ಮಾಣಕ್ಕೆ ಸೂಕ್ತ ಅನುದಾನ ನೀಡಬೇಕು ಎಂದು ಸಭೆಯಲ್ಲಿ ತಿಳಿಸಿದರು.

ವಿತರಣೆ: ತಾಲೂಕಿನ ಮೀನುಗಾರಿಕೆ ಇಲಾಖೆಯಿಂದ ಅರ್ಹಫ‌ಲಾನುಭವಿಗಳಿಗೆ ಸಭೆಯಲ್ಲಿ ಮೀನಿನ ಮರಿಗಳನ್ನು ವಿತರಿಸಲಾಯಿತು. ಇಲಾಖೆಯ ಸಹಾಯಕ ನಿರ್ದೇಶಕಿ ಅಮೃತಾ ಮತ್ತು ಫ‌ಲಾನುಭವಿಗಳು ಇದ್ದರು. ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ತಮ್ಮ ಇಲಾಖೆಗಳ ಯೋಜನೆಗಳು ಮತ್ತು ಅವುಗಳ ಅನುಷ್ಠಾನ, ಕಾಮಗಾರಿ ಮತ್ತು ಯೋಜನೆಗಳ ಪ್ರಗತಿ ಕುರಿತಾಗಿ ತಾವುಗಳು ಮುಟ್ಟಿರುವ ಗುರಿಯ ಸಮರ್ಪಕ ಮಾಹಿತಿ ನೀಡಿದರು. ತಾಪಂ ಅಧ್ಯಕ್ಷೆ ಮಮತಾ ಗೋವಿಂದರಾಜು, ಉಪಾಧ್ಯಕ್ಷೆ ಬಿಂದು ರಂಗನಾಥ್‌, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ರಂಗನಾಥ್‌, ತಾಪಂ ಕಾರ್ಯನಿರ್ವಹಣಾಧಿಕಾರಿ ನಾಗರಾಜು, ಸಹಾಯಕ ನಿರ್ದೇಶಕ ಡಿ. ಪದ್ಮನಾಭ್‌ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ