ಹೊಸಕೋಟೆ ಬಳಿ ಭೀಕರ ಅಪಘಾತ ; ಆಂಧ್ರದ ದಂಪತಿ ಸಾವು
ಮಕ್ಕಳು ಸೇರಿ ಹಲವರಿಗೆ ಗಾಯ ; ಇಬ್ಬರ ಸ್ಥಿತಿ ಗಂಭೀರ
Team Udayavani, Oct 3, 2022, 12:00 PM IST
ಬೆಂಗಳೂರು: ನಗರದ ಹೊರವಲಯದಲ್ಲಿ ಭಾನುವಾರ ಮಧ್ಯರಾತ್ರಿ ಬಸ್ ನಿಂತಿದ್ದ ಟ್ರಕ್ ಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶದ ದಂಪತಿಗಳು ಸಾವನ್ನಪ್ಪಿದ್ದು, ಮಕ್ಕಳು ಸೇರಿದಂತೆ 18 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹೊಸಕೋಟೆ ಬಳಿಯ ಮೈಲಾಪುರ ಗೇಟ್ ಬಳಿ ಕೆಎಸ್ಆರ್ಟಿಸಿ ಬಸ್ ಕಲ್ಲುಗಳನ್ನು ಸಾಗಿಸುತ್ತಿದ್ದ ನಿಂತಿದ್ದ ಟ್ರಕ್ ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬಸ್ ಬಲಿಜಖಂಡಿಗಾ ನಗರದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಮೃತ ದಂಪತಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ.