ನೀಲಗಿರಿ ಮರಗಳ ತೆರವು ಕಾರ್ಯಾಚರಣೆ

ಜಿಲ್ಲಾಧಿಕಾರಿಗಳ ಮುಂದೆ ಅಸಹಾಯಕತೆ ತೋಡಿಕೊಂಡ ರೈತರು | ಬದಲಿ ವ್ಯವಸ್ಥೆಗೆ ಮನವಿ

Team Udayavani, Aug 10, 2019, 11:36 AM IST

ದೊಡ್ಡಬಳ್ಳಾಪುರ ತಾಲೂಕಿನ ಕಾಡನೂರು ಗ್ರಾಮದಲ್ಲಿ ನೀಲಗಿರಿ ಮರಗಳ ತೆರವು ಆಂದೋಲನಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡರು ಚರ್ಚೆ ನಡೆಸಿದರು.

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಜಿಲ್ಲಾಡಳಿತ, ನೀಲಗಿರಿ ಮರಗಳ ತೆರವು ಕಾಯಾಚರಣೆ ನಡೆಸಿದ್ದರೆ, ಆರ್ಥಿಕ ಸಂಕಷ್ಟದಿಂದ ಪಾರಾಗಲು ಅನಿವಾರ್ಯವಾಗಿ ನೀಲಗಿರಿ ಮರಗಳನ್ನು ಬೆಳೆಯುತ್ತಿದ್ದೇವೆ ಎಂದು ತಾಲೂಕಿನ ಕಾಡನೂರು ರೈತರು ತಮ್ಮ ಅಸಹಾಯಕತೆಯನ್ನು ಜಿಲ್ಲಾಧಿಕಾರಿ ಕರೀಗೌಡರ ಎದುರು ತೋಡಿಕೊಂಡರು.

ಜಿಲ್ಲಾಧಿಕಾರಿಗಳಿಗೆ ರೈತರ ಅಳಲು: ರೈತರು ತಮ್ಮ ಗದ್ದೆಗಳಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿ ಸುವಂತೆ ಗ್ರಾಪಂ, ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸಿ, ವಿದ್ಯಾಭ್ಯಾಸಕ್ಕೆ ಹಣ, ಮದುವೆಗೆ ಅಗತ್ಯವಿರುವ ಆದಾಯ ಬರುತ್ತಿದ್ದದ್ದೇ ನೀಲಗಿರಿ ಮರಗಳಿಂದ. ಈಗ ಅಧಿಕಾರಿಗಳು ಏಕಾಏಕಿ ಮರಗಳನ್ನು ತೆರವಗೊಳಿಸಿದರೆ, ನಾವು ಸಂಕಷ್ಟದಲ್ಲಿ ಸಿಲುಕುತ್ತೇವೆ. ಜೀವನ ನಡೆಸಲು ಬೇಕಾಗಿರುವ ಹಣ ಎಲ್ಲಿಂದ ತರುವುದು. ಅಧಿಕಾರಿಗಳೇ ದಾರಿ ತೋರಿಸಬೇಕು ಎಂದು ಕಾಡನೂರು ಗ್ರಾಮದ ರೈತ ನಾಗರಾಜ್‌, ಜಿಲ್ಲಾಧಿಕಾರಿ ಕರೀಗೌಡರನ್ನು ಪ್ರಶ್ನಿಸಿದರು.

ರೈತರ ಅಸಹಾಯಕತೆ: ರೈತರ ಕೃಷಿ ಕೆಲಸಕ್ಕೆ ಕಾರ್ಮಿಕರೇ ದೊರೆಯುತ್ತಿಲ್ಲ. ಕೈಗಾರಿಕೆಗಳಲ್ಲಿ ರೈತರು ನೀಡುವುದಕ್ಕಿಂತಲೂ ಕಡಿಮೆ ಕೂಲಿ, ಆರೋಗ್ಯಕ್ಕೆ ತೊಂದರೆಯಾಗುವಂತಹ ಕೆಲಸಗಳಾದರೂ ಸರಿ ಹೋಗುತ್ತಾರೆ. ಆದರೆ ಹೊಲ, ಗದ್ದೆಗಳಲ್ಲಿ ಕೆಲಸ ಮಾಡಲು ಕಾರ್ಮಿಕರೇ ಬರುತ್ತಿಲ್ಲ. ನೆಲದಲ್ಲಿ ಏನು ಬೆಳೆದರೂ ಸೂಕ್ತ ಹಾಗೂ ಬೆಂಬಲ ಬೆಲೆ ದೊರೆಯುತ್ತಿಲ್ಲ. ಸಾವಿರಾರು ಅಡಿಗಳವರೆಗೆ ಕೊಳವೆ ಬಾವಿಕೊರೆಸಿದರೂ ಸಹ ನೀರು ಬರದೆ ಕಂಗಾಲಾಗಿದ್ದೇವೆ. ಹೀಗಾಗಿಯೇ ಸಾಕಷ್ಟು ಜನ ಬೇಸಾಯ ಮಾಡಿಸಲು ಸಾಧ್ಯವಾಗದೆ ನೀಲಗಿರಿ ಮರಗಳನ್ನು ಬೆಳೆಯಲು ಮುಂದಾಗಿದ್ದಾರೆ. ಈಗ ಮರಗಳನ್ನು ತೆರವು ಮಾಡಿ ಯಾವ ಬೆಳೆ ಬೆಳೆಯಬೇಕು ಎನ್ನುವುದೇ ತೋಚುತ್ತಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಅಂತರ್ಜಲ ಬತ್ತಲು ನೀಲಗಿರಿಯೇ ಮುಖ್ಯ ಕಾರಣ: ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ, ಅಂತ ರ್ಜಲ ಬತ್ತಲು ಅತಿಮುಖ್ಯ ಕಾರಣಗಳಲ್ಲಿ ನೀಲಗಿರಿ ಮರಗಳನ್ನು ಈ ಭಾಗದಲ್ಲಿ ಅತಿಯಾಗಿ ಬೆಳೆಸಿರು ವುದು ಕಾರಣವಾಗಿದೆ ಎನ್ನುವುದು ಈಗಾಗಲೇ ಹಲ ವಾರು ಅಧ್ಯಯನಗಳು ಸಾಬೀತುಪಡಿಸಿವೆ. ಹೀಗಾಗಿ ನೀಲಗಿರಿ ಮರಗಳನ್ನು ತೆರವುಗೊಳಿಸಿ ಅರಣ್ಯ ಕೃಷಿ ಆಧಾರಿತ ಬೇಸಾಯ ಕ್ರಮ ಪಾಲಿಸುವುದು ರೈತರಿಗೆ, ಪರಿಸರಕ್ಕೆ ಅನುಕೂಲವಾಗಲಿದೆ. ರೈತರು ತಮ್ಮ ಹೊಲಗಳಲ್ಲಿ ಬೇವು, ಮಾವು, ಹುಣಸೆ, ನೇರಳೆ, ತೇಗ, ಸಾಗವಾನಿ ಸೇರಿದಂತೆ ಇತರೆ ಮರಗಳನ್ನು ಬೆಳೆಸಲು ನರೇಗಾದಲ್ಲಿ ಆರ್ಥಿಕ ನೆರವು ದೊರೆಯಲಿದೆ. ಕನಿಷ್ಠ 2 ವರ್ಷಗಳ ಕಾಲ ಕಷ್ಟಪಟ್ಟರೆ ಜೀವನವಿಡೀ ಕುಳಿತು ಕೊಂಡು ಜೀವನ ಮಾಡುವಂತೆ ಮಾಡಿಕೊಳ್ಳಬಹು ದಾಗಿದೆ. ಅರಣ್ಯ ಆಧಾರಿತ ಕೃಷಿಗೆ ಮಳೆ ಬಂದರೆ ಸಾಕಾಗಲಿದೆ. ಕೋಲಾರ ಜಿಲ್ಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ನಷ್ಟ ಅನುಭವಿಸಿರುವ ರೈತರು ಈಗ ಅರಣ್ಯ ಆಧಾರಿತ ಕೃಷಿಯಲ್ಲಿ ತೊಡಗಿಕೊಂಡು ನೆಮ್ಮದಿ ಬದುಕು ಕಂಡುಕೊಳ್ಳುತ್ತಿದ್ದಾರೆ. ಅರಣ್ಯ ಆಧಾರಿತ ಕೃಷಿ ತೋಟಗಳಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಹನುಮೇಗೌಡ ಮಾತನಾಡಿ, ಕಾಡನೂರು ಗ್ರಾಮದ ಸುತ್ತಮುತ್ತ ಸುಮಾರು 20 ಎಕರೆ ಪ್ರದೇಶದಲ್ಲಿ ರೈತರು ಬೆಳೆಸಿದ್ದ ನೀಲಗಿರಿ ಮರಗಳನ್ನು ತೆರವು ಮಾಡುತ್ತಿದ್ದಾರೆ. ಜಿಲ್ಲಾ ಆಡಳಿತ ನಡೆಸುತ್ತಿರುವ ನೀಲಗಿರಿ ಮರಗಳ ತೆರವು ಆಂದೋಲನಕ್ಕೆ ನಮ್ಮ ಬೆಂಬಲ ಇದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರು ತಮ್ಮ ಹೊಲಗಳಲ್ಲಿ ಲಾಭದಾಯಕ ಮರ ಬೆಳೆಸಲು ಅನು ಕೂಲವಾಗುವಂತೆ ಸಸಿಗಳನ್ನು ನೀಡುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸಲು ಸೂಚನೆ ನೀಡಬೇಕು ಎಂದು ಹೇಳಿದರು.

ಟಿಎಪಿಎಂಸಿಎಸ್‌ ನಿರ್ದೇಶಕ ಮಾರೇಗೌಡ, ಮುಖಂಡರಾದ ಅಶ್ವತ್ಥಪ್ಪ, ರಾಜ್ಯ ರೈತ ಸಂಘದ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ವಸಂತಕುಮಾರ್‌, ಸತೀಶ್‌, ನಾರಾಯಣಸ್ವಾಮಿ, ಕರವೇ ಪ್ರವೀಣ್‌ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ಪರಿ ಸರ ಸಿರಿ ಅಭಿವೃದ್ಧಿ ಸಂಘದ ಕೃಷ್ಣಮೂರ್ತಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ