ಇತಿಹಾಸ ಪುಸ್ತಕ ರಚನೆ ಸುಲಭವಲ್ಲ

Team Udayavani, Jul 8, 2019, 3:00 AM IST

ದೇವನಹಳ್ಳಿ: ಚರಿತ್ರೆ ಓದಿ ಪುಸ್ತಕ ರಚಿಸಿದರೆ ಅದಕ್ಕೆ ಅರ್ಥ ಬರುತ್ತದೆ. ಚರಿತ್ರೆ ಮತ್ತು ಇತಿಹಾಸ ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ ಎಂದು ಚಿಕ್ಕಬಳ್ಳಾಪುರ ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ತಿಳಿಸಿದರು.

ನಗರದ ಕೋಡಿ ಮಂಚೇನಹಳ್ಳಿಯಲ್ಲಿರುವ ಸಾಹಿತಿ ಬಿಟ್ಟಸಂದ್ರ ಗುರುಸಿದ್ಧಯ್ಯ ನಿವಾಸದಲ್ಲಿ ಆವತಿ ನಾಡಪ್ರಭು ರಣಭೈರೇಗೌಡ ಕಿರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಕುರಿತು ಮಾತನಾಡಿದರು.

ಇತಿಹಾಸದ ಪುಸ್ತಕ ಬರೆಯುವುದು ಸುಲಭದ ಕೆಲಸವಲ್ಲ. ನಮ್ಮ ನಾಡನ್ನು ಆಳಿದ ಹಲವಾರು ರಾಜರುಗಳು ತಮ್ಮ ಪ್ರಾಂತಗಳ ಆಳ್ವಿಕೆಯನ್ನು ಶಾಸನಗಳಲ್ಲಿ ಉಲ್ಲೇಖೀಸಿದ್ದಾರೆ. ಪ್ರೊ.ಎಚ್‌.ಗವಿಸಿದ್ದಯ್ಯ ಬರೆದಿರುವ ಕಿರು ಹೊತ್ತಿಗೆಯಲ್ಲಿ ರಣಭೈರೇಗೌಡರ ಚರಿತ್ರೆಯನ್ನೊಳಗೊಂಡ ಇತಿಹಾಸ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ಇತಿಹಾಸವನ್ನು ಎಲ್ಲರೂ ಬರೆಯಲು ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಇತಿಹಾಸ ತಿರುಚಿ ಬರೆಯುವುದುಂಟು. ಆದರೆ ಇತಿಹಾಸಕಾರರ ಬರವಣಿಗೆಯಲ್ಲಿ ಮುಂದಿನ ಪೀಳಿಗೆಗೆ ಕೊಡುಗೆಯಾಗುವಂತಹ ಸತ್ಯಾಂಶ ಇರಬೇಕು. ರಣಭೈರೇಗೌಡರು ಆವತಿಯನ್ನು ತಮ್ಮ ನೆಲೆಯನ್ನಾಗಿಸಲು ಹಲವಾರು ಕಾರಣಗಳಿವೆ.

ಬಳಿಕ ಸಾಮ್ರಾಜ್ಯ ವಿಸ್ತರಣೆ ಹೇಗಾಯಿತು? ಎಂಬ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿದೆ. ಕೆಲವು ಕಟ್ಟುಕತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಇತಿಹಾಸ ಬರೆಯಬೇಕಾಗುತ್ತದೆ. ಮುಂದಿನ ಪೀಳಿಗೆಗೆ ತಪ್ಪು ಸಂದೇಶ ನೀಡುವಂತಾಗಬಾರದು ಎಂದರು.

ಪುರಸಭೆ ಸದಸ್ಯ ಎಸ್‌.ನಾಗೇಶ್‌ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಸಾಹಿತಿಗಳು, ಶಿಕ್ಷಕರಾದ ನೀವು ಬಹಳ ಎಚ್ಚರಿಕೆಯಿಂದ ಪುಸ್ತಕಗಳನ್ನು ಬರೆಯುತ್ತೀರಿ. ಅದನ್ನು ಶಿಷ್ಯಂದಿರುಗಳು ಓದಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಲು ಸಹಕಾರಿಯಾಗುತ್ತದೆ. ಗವಿಸಿದ್ದಯ್ಯನವರು ಇದುವರೆಗೆ 19 ಪುಸ್ತಕಗಳನ್ನು ಬಿಡುಗಡೆಗೊಳಿಸಿದ್ದಾರೆ. ಇತಿಹಾಸದ ಪುಸ್ತಕ ಇದೇ ಮೊದಲ ಬಾರಿಗೆ ಹೊರತರುತ್ತಿರುವುದು ಶ್ಲಾಘನೀಯ ಎಂದರು.

ದೊಡ್ಡಬಳ್ಳಾಪುರ ಸಾಹಿತಿ ಮಹಲಿಂಗಯ್ಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಒಂದು ಪುಸ್ತಕ ಹೊರತರಬೇಕಾದರೆ ಅದರ ಹಿಂದೆ ಹೆಚ್ಚು ಶ್ರಮವಿರುತ್ತದೆ. ಪುಸ್ತಕ ಬರೆಯುವುದು ತಮಾಷೆ ಕೆಲಸವಲ್ಲ. ಇಂತಹ ಪುಸ್ತಕಗಳು ದಾಖಲೆಯಾಗುತ್ತದೆ. ಸಮಾಜಕ್ಕೆ ಇದೊಂದು ಪೂರಕವಾಗಿರುತ್ತದೆ ಎಂದರು.

ಪ್ರೋ.ಎಚ್‌.ಗವಿಸಿದ್ದಯ್ಯ ಅವರಿಗೆ ಹಲವಾರು ಸನ್ಮಾನಿಸಿ ಗೌರವ ಸಲ್ಲಿಸಿದರು. ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಗುರುಸಿದ್ಧಯ್ಯ.ಬಿ.ಜಿ., ಹಾರೋಹಳ್ಳಿ ಗ್ರಾಪಂ ಸದಸ್ಯ ಬುಳ್ಳಹಳ್ಳಿ ರಾಜಪ್ಪ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಬಿ.ಕೆ. ಶಿವಪ್ಪ, ಮುಖಂಡರಾದ ಸುರೇಶ್‌, ವಕೀಲ ಶ್ರೀನಾಥ್‌, ವಿವಿಧ ಕ್ಷೇತ್ರದ ಸಾಹಿತಿಗಳು, ವಕೀಲರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ