ಡೆಂಘೀ ಬಗ್ಗೆ ಎಚ್ಚರ ಅಗತ್ಯ

ಅರಿವು ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ರೇವಣ್ಣ ಸಲಹೆ

Team Udayavani, May 27, 2019, 7:25 AM IST

ದೇವನಹಳ್ಳಿ ಕೃಷ್ಣ ಬಿ.ಇಡಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆಯಿಂದ ನಡೆದ ಡೆಂಘೀ ಮತ್ತು ಚಿಕೂನ್‌ಗುನ್ಯಾ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೇವಣ್ಣ ಮಾತನಾಡಿದರು.

ದೇವನಹಳ್ಳಿ: ಸ್ವಚ್ಛತೆ ಇಲ್ಲದಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘೀ ಮತ್ತು ಚಿಕೂನ್‌ಗುನ್ಯಾ ಜ್ವರ ಬರುತ್ತವೆ. ಆದ್ದರಿಂದ ಪರಿಸರ ವನ್ನು ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳು ಉತ್ಪತ್ತಿ ಆಗದಂತೆ ಎಚ್ಚರ ವಹಿಸಬೇಕೆಂದು ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ರೇವಣ್ಣ ಹೇಳಿದರು.

ನಗರದ ಬೈಚಾಪುರ ರಸ್ತೆಯಲ್ಲಿರುವ ಕೃಷ್ಣ ಬಿ.ಇಡಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿ ಯಿಂದ ಹಮ್ಮಿಕೊಂಡಿದ್ದ ಡೆಂಘೀ ಮತ್ತು ಚಿಕೂನ್‌ಗುನ್ಯಾ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ಸ್ವಚ್ಛವಾಗಿಡಿ: ರೋಗ ಬಂದ ಮೇಲೆ ಎಚ್ಚೆತ್ತುಕೊಳ್ಳುವುದರ ಬದಲಾಗಿ ರೋಗ ಹರಡುವ ಸೊಳ್ಳೆ ನಿಯಂತ್ರಣ ಅತೀ ಮುಖ್ಯವಾಗಿದೆ. ಸಿಮೆಂಟ್ ತೊಟ್ಟಿಗಳು, ಪ್ಲಾಸ್ಟಿಕ್‌ ಡ್ರಮ್‌, ಹಳೇ ಟೈರ್‌, ಏರ್‌ ಕೂಲರ್‌ ಹಾಗೂ ತೆಂಗಿನ ಚಿಪ್ಪುಗಳಲ್ಲಿ ನೀರು ಸಂಗ್ರವಾಗದಂತೆ ಎಚ್ಚರ ವಹಿಸಬೇಕು. ಮನೆಯ ಆವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಹೇಳಿದರು.ಸ್ವಯಂ ಔಷಧ ಬೇಡ: ಯಾವುದೇ ಕಾರಣಕ್ಕೂ ಸ್ವಯಂ ಔಷಧಗಳನ್ನು ತೆಗೆದು ಕೊಳ್ಳಬೇಡಿ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆ ಆರೋಗ್ಯ ಕಾರ್ಯಕತೆ‌ರ್ರು ಹಾಗೂ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಅಥವಾ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ರೋಗ ಲಕ್ಷಣಗಳು: ಹಠಾತ್ತನೆ ಬರುವ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು, ಮೈ ಕೈ ನೋವು, ಕೀಲುಗಳಲ್ಲಿ ನೋವು, ವಾಕರಿಕೆ ಮತ್ತು ವಾಂತಿ, ರೋಗ ಲಕ್ಷಣಗಳು ಕಂಡುಬರುತ್ತವೆ. ರೋಗದ ಲಕ್ಷಣ ಕಂಡುಬಂದ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ರೋಗವನ್ನು ನಿರ್ಲಕ್ಷಿಸಬಾರದು. ಇದರ ಬಗ್ಗೆ ವಿದ್ಯಾರ್ಥಿಗಳು ಅಕ್ಕ ಪಕ್ಕದ ಮನೆಯವರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಮಳೆಗಾಲ ಬಂತೆಂದರೆ ಸೊಳ್ಳೆಗಳ ಕಾಟ ಪ್ರಾರಂಭವಾಗುತ್ತದೆ. ಮಳೆ ಗಾಲದಲ್ಲಿ ಎಲ್ಲೆಂದರಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪನ್ನಕ್ಕೆ ಕಾರಣವಾಗಿ ಈಜಿಪ್ಪ್ತ್ರೈ ಎಂಬ ಸೊಳ್ಳೆಗಳು ಮನುಷ್ಯರನ್ನು ಹಗಲು ಹೊತ್ತಿನ್ನಲ್ಲಿಯೇ ಕಚ್ಚುವುದರಿಂದ ಡೆಂಘೀ ಮತ್ತು ಚಿಕೂನ್‌ಗುನ್ಯಾ ಜ್ವರ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದ‌ು ಹೇಳಿದರು.

ಈ ವೇಳೆ ಶ್ರೀಕೃಷ್ಣ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಆರ್‌.ಬಿ.ದೇಸಾಯಿ, ಸಿಬ್ಬಂದಿ ವರ್ಗ, ಹಿರಿಯ ಆರೋಗ್ಯ ಸಹಾಯಕರಾದ ವೆಂಕಟೇಶ್‌, ಪ್ರಸನ್ನಕುಮಾರ್‌, ಆಂಜಿನಮ್ಮ, ಜಯಮ್ಮ ಇತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ