ಚುನಾವಣೆ ಕಾರ್ಯದಲ್ಲಿ ಲೋಪಬೇಡ

Team Udayavani, Mar 29, 2019, 1:07 PM IST

ದೇವನಹಳ್ಳಿ: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲೋಪವಿಲ್ಲದೆ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಮತಯಂತ್ರದ ಲೋಪದೋಷ ಕಂಡುಬಂದರೆ ಕೂಡಲೇ ಅದನ್ನು ನಿಭಾಯಿಸುವ ಶಕ್ತಿ ಹೊಂದಿರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಸೂಚನೆ ನೀಡಿಸಿದರು.

ನಗರದ ಪ್ರಸನ್ನಹಳ್ಳಿ ರಸ್ತೆಯ ಆಕಾಶ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳಿಗೆ ಮತಯಂತ್ರ ಮತ್ತು ವಿವಿ ಪ್ಯಾಟ್‌ ನಿರ್ವಹಣೆ ಬಗ್ಗೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

710 ಜನರಿಗೆ ತರಬೇತಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 292 ಮತಗಟ್ಟೆಗಳು ಬರಲಿದ್ದು, ಅದರಲ್ಲಿ 710 ಜನರಿಗೆ ತರಬೇತಿ ನೀಡುತ್ತಿದ್ದೇವೆ. ಮತಗಟ್ಟೆ ಅಧಿಕಾರಿಗಳು, ಸಹಾಯಕ ಅಧ್ಯಧಿಕಾರಿಗಳು, ಎರಡನೇ ಪೋಲಿಂಗ್‌ ಅಧಿಕಾರಿ, ಮತಗಟ್ಟೆ 3 ಪೋಲಿಂಗ್‌ ಅಧಿಕಾರಿ, ಮತಗಟ್ಟೆ 4 ಪೋಲಿಂಗ್‌ ಅಧಿಕಾರಿ ಹಾಗೂ ಹೆಚ್ಚುವರಿ ಅಧಿಕಾರಿಗಳು, ಗುರುತು ಹಿಡಿಯುವ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದ್ದೇವೆ.

ಕಂಟ್ರೋಲ್‌ ಯೂನಿಟ್‌, ಬ್ಯಾಲೇಟ್‌ ಯೂನಿಟ್‌ಗಳು ಅಭ್ಯರ್ಥಿಗಳ ಸಂಖ್ಯೆಗೆ ಅನುಸಾರವಾಗಿ, ಮತದಾನ ಖಾತ್ರಿಯಂತ್ರ, ಮತದಾರರ ರಿಜಿಸ್ಟ್ರರ್‌ ನಮೂನೆ 17 ಎ ಪುಸ್ತಕ, ಮತದಾರರ ಚೀಟಿ, ಅಧಿಕೃತ ಮತದಾರರ ಪಟ್ಟಿ, ಇತರ ಮತದಾರರ ಪಟ್ಟಿಗಳು ಮುಂತಾದವುಗಳನ್ನು ಪರಿಶೀಲಿಸಬೇಕು ಎಮದು ಹೇಳಿದರು.

ಜವಾಬ್ದಾರಿಗಳ ಮನವರಿಕೆ: ಮತಗಟ್ಟೆಯ ಸಂಪೂರ್ಣ ಉಸ್ತುವಾರಿ, ಅಣಕು ಮತದಾನ, ಮತದಾನ ಕೇಂದ್ರದಲ್ಲಿ ಇತರೆ ಮತಗಟ್ಟೆ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಮತಗಟ್ಟೆ ಸಂಖ್ಯೆ ಖಾತ್ರಿ ಮಾಡಿಕೊಳ್ಳಿ: ಮತದಾನದ ಹಿಂದಿನ ದಿನ ಬೆಳಗ್ಗೆ ಮತಗಟ್ಟೆ ಅಧಿಕಾರಿಗಳು ತಮ್ಮ ತಂಡದ ಸಮೇತ ಮಾಸ್ಟರಿಂಗ್‌ ಕೇಂದ್ರದಲ್ಲಿರಬೇಕು. ಮತಗಟ್ಟೆಗೆ ತಲುಪಿದ ಮೇಲೆ ತಮಗೆ ಹಂಚಿಕೆಯಾದ ಮತಗಟ್ಟೆ ಒಳ ಪ್ರವೇಶಿಸುವ ಮುನ್ನಾ ಮತಗಟ್ಟೆ ಸಂಖ್ಯೆ ನೋಡಿ ತಮಗೆ ಹಂಚಿಕೆಯಾದುದೇ ಎಂಬುವುದರ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು ಎಂದರು.

ಮತದಾನದ ಅಣಕು ಪ್ರದರ್ಶನ ನಡೆಸಿ: ಮತದಾನದ ದಿನ ಬೆಳಗ್ಗೆ 6 ರಿಂದ 7ರವರೆಗೆ ಬೂತ್‌ ಏಜೆಂಟರಿಗೆ ಮತ್ತು ಸಾರ್ವಜನಿಕರಿಗೆ ಮತದಾನದ ಅಣಕು ಪ್ರದರ್ಶನ ಮಾಡಬೇಕು. ಬೆಳಗ್ಗೆ 6.15ರ ತನಕ ಯಾರು ಬರುತ್ತಾರೋ, ಬರುವುದಿಲ್ಲವೋ ಎಂಬುದನ್ನು ಖಾತರಿಪಡಿಸಿಕೊಂಡು, ಯಾರು ಬಂದಿಲ್ಲ ಎಂಬುದರನು ಢೀಕರಣ ಪತ್ರ ನೀಡಬೇಕು. ಕನಿಷ್ಠ 50 ಮತಗಳನ್ನು ಚಲಾಯಿಸಬೇಕು ಎಂದು ಮಾಹಿತಿ ತಿಳಿಸಿದರು.

ನೋಟಕ್ಕೂ ಒಂದು ಮತ ಹಾಕಿ: ಎಲ್ಲಾ ಅಭ್ಯರ್ಥಿಗಳಿಗೆ ಮತ ಚಲಾವಣೆಯಾಗದಂತೆ ನೋಡಿಕೊಳ್ಳಬೇಕು. ನೋಟಕ್ಕೂ ಕನಿಷ್ಠ ಒಂದು ಮತ ಚಲಾಯಿಸಬೇಕು. ಪಿಆರ್‌ಒ ಹಾಜರಿದ್ದ ಏಜೆಂಟರ ಮಾಹಿತಿಯನ್ನು ಬರೆದಿಟ್ಟುಕೊಳ್ಳಬೇಕು. ಅಣಕು ಮತದಾರರ ಪ್ರಮಾಣ ಪತ್ರ ಸಿದ್ಧಪಡಿಸಿಕೊಳ್ಳಬೇಕು ಎಂದರು.

ಬೆ.7ರಿಂದ ಸಂಜೆ 6ರ ವರೆಗೆ ಮತದಾನ: ಏಪ್ರಿಲ್‌ 18ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮತಗಟ್ಟೆಯಲ್ಲಿ ತಗುಲಿ ಹಾಕಿರುವ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಯಾವುದೇ ನಾಯಕರ ಭಾವಚಿತ್ರಗಳನ್ನು ತೆಗೆದುಹಾಕಬೇಕು ಅಥವಾ ಪೂರ್ತಿಯಾಗಿ ಮುಚ್ಚಿಡಬೇಕು.

ನೀವು ನಿಮ್ಮ ಪೋಲಿಂಗ್‌ ಅಧಿಕಾರಿಗಳು ಮತ್ತು ಉಮೇದುದಾರರ ಪೊಲೀಂಗ್‌ ಏಜೆಂಟರು ಕುಳಿತುಕೊಳ್ಳುವ ಸ್ಥಳ ಮತ್ತು ಮತಯಂತ್ರಗಳನ್ನು ಇಡುವ ಸ್ಥಳವನ್ನು ನಿರ್ಧರಿಸಬೇಕು. ಮತಗಟ್ಟೆಗಳಿಂದ 100 ಮೀ. ದೂರವನ್ನು ಗುರುತು ಮಾಡಿಸಿ ಗಮನಿಸಬೇಕು. ಕಾರ್ಯಾಗಾರದಲ್ಲಿ ಕಲಿತಿರುವುದನ್ನು ಅನುಸರಿಸಿದರೆ ಚುನಾವಣೆ ನಡೆಸಬಹುದು ಎಂದು ತಿಳಿಸಿದರು.

ಈ ವೇಳೆ ತಹಶೀಲ್ದಾರ್‌ ಮಂಜುನಾಥ್‌, ಗ್ರೇಡ್‌ 2 ತಹಶೀಲ್ದಾರ್‌ ಬಾಲಕೃಷ್ಣ, ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ವಿಜಯಪುರ ಪುರಸಭಾ ಮುಖ್ಯಾಧಿಕಾರಿ ನಾಗರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ಅಧಿಕಾರಿ ಚನ್ನಬಸಪ್ಪ, ಉಪ ತಹಶೀಲ್ದಾರ್‌ ಚಿದಾನಂದ್‌, ರಾಜಸ್ವ ನಿರೀಕ್ಷಕ ಚಂದ್ರಶೇಖರ್‌ ಮತ್ತಿತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ