ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ

Team Udayavani, Jun 29, 2019, 3:00 AM IST

ದೇವನಹಳ್ಳಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಕಚೇರಿಗಾಗಿ ಜಾಗ ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ದೊಡ್ಡಬಳ್ಳಾಪುರ ಶಾಸಕ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ವೆಂಕಟರಮಣಯ್ಯ ತಿಳಿಸಿದರು.

ನಗರದ ಸೂಲಿ ಬೆಲೆ ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಪ್ರಾಧಿಕಾರದ ಕಚೇರಿ ಆವರಣದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಅಭಿವೃದ್ಧಿಗೆ ಮೊದಲ ಆದ್ಯತೆ: ಕಟ್ಟಡ ನಿರ್ಮಾಣಕ್ಕಾಗಿರುವ ಜಾಗ ವ್ಯಾಜ್ಯದಲ್ಲಿರುವುದರಿಂದ ಬೇರೆಡೆ ಜಾಗ ಹುಡುಕಿ ಕಚೇರಿ ನಿರ್ಮಿಸಬೇಕಿದೆ. ಅಧಿಕಾರ ಶಾಶ್ವತ ಅಲ್ಲ. ಆದರೆ ಇರುವಷ್ಟು ದಿನ ನಾವು ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ.

1996ರಲ್ಲಿ ಪ್ರಾಧಿಕಾರ ಸ್ಥಾಪನೆ ಆಗಿದ್ದು, ಪ್ರಾಧಿಕಾರದ ವ್ಯಾಪ್ತಿಯ ಕಸಬ ಹೋಬಳಿ 53, ಕುಂದಾಣ ಹೋಬಳಿ 46, ವಿಜಯಪುರ ಹೋಬಳಿ 53, ಚನ್ನರಾಯ ಪಟ್ಟಣ ಹೋಬಳಿ 36 ಮತ್ತು ಬೆಂಗಳೂರು ನಗರ ಜಿಲ್ಲೆಯ ಜಾಲ ಹೋಬಳಿಯ 39 ಗ್ರಾಮಗಳನ್ನು ಒಳಗೊಂಡಂತೆ ಒಟ್ಟಾರೆ 228 ಗ್ರಾಮಗಳಿವೆ. ಒಟ್ಟು ವಿಸ್ತೀರ್ಣ 451.22 ಚದರ ಕಿ.ಮೀ.ಗಳಾಗಿರುತ್ತದೆ.

ಪ್ರಾಧಿಕಾರದ ಸುತ್ತಲಿನ ಗ್ರಾಮಗಳ ಅಭಿವೃದ್ಧಿಯನ್ನು ನಿಯಂತ್ರಿಸುವ ಉದ್ದೇಶವಾಗಿದೆ ಪ್ರಾಧಿಕಾರ ವ್ಯಾಪ್ತಿಯಲ್ಲಿ ವಿನ್ಯಾಸ ಮತ್ತು ಅನುಮೋದನೆ ಮತ್ತು ಕಟ್ಟಡ ಅಭಿವೃದ್ಧಿಗೆ ಅನುಮತಿ ನೀಡಲಾಗುವುದು ಎಂದರು.

ಪಾರದರ್ಶಕ ಆಡಳಿತದ ಭರವಸೆ: ದೊಡ್ಡಬಳ್ಳಾಪುರ ತಾಲೂಕಿನ ಜನತೆ ಆರ್ಶೀವಾದದಿಂದ ಶಾಸಕನಾಗಿ 2ನೇ ಬಾರಿ ಆಯ್ಕೆಯಾಗಿದ್ದೇನೆ. ತಾಲೂಕಿನಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರ ಫ‌ಲವೇ 2ನೇ ಬಾರಿಗೆ ಶಾಸಕನಾಗಿದ್ದೇನೆ.

ಅದೇ ಮಾದರಿಯಲ್ಲಿ ಪ್ರಾಧಿಕಾರದಲ್ಲೂ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗುವುದು. ಮೈತ್ರಿ ಸರ್ಕಾರದಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್‌, ಸಚಿವರಾದ ಡಿ.ಕೆ. ಶಿವಕುಮಾರ್‌, ಕೃಷ್ಣ ಭೈರೇಗೌಡ, ಮಾಜಿ ಸಂಸದ ವೀರಪ್ಪ ಮೊಯ್ಲಿ,

ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು ಸೇರಿದ‌ಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಪ್ರತಿ ಕಾರ್ಯಕ್ರಮಗಳು ಜನರಿಗೆ ತಲುಪುವಂತೆ ಆಗಬೇಕು. ದೊಡ್ಡಬಳ್ಳಾಪುರ ಕ್ಕೆ ಯಾವುದೇ ಚ್ಯುತಿ ತರದೆ ಪಾದರ್ಶಕವಾಗಿ ಆಡಳಿತ ನಡೆಸಲಾಗುವುದು ಎಂದು ಹೇಳಿದರು.

ಪ್ರಾಧಿಕಾರದಲ್ಲಿರುವ ಸಮಸ್ಯೆ ಪರಿಹರಿಸಿ: ಮಾಜಿ ಶಾಸಕ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್‌.ಜಿ. ವೆಂಕಟಾಚಲಯ್ಯ ಮಾತನಾಡಿ, ಪ್ರಾಧಿಕಾರದಲ್ಲಿ ಹಲವು ಸಮಸ್ಯೆಗಳಿದ್ದು, ಪರಿಹಾರಕ್ಕೆ ನೂತನ ಅಧ್ಯಕ್ಷರು ಶ್ರಮಿಸಬೇಕು.

ಅತ್ಯಂತ ಜಾಗ್ರತೆಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು. ಇಂತಿಷ್ಟು ದಿವಸ ಅಧ್ಯಕ್ಷರ ಗಿರಿ ಇದೆ ಎಂಬುವುದರ ಬಗ್ಗೆ ತಿಳಿದಿಲ್ಲ ಇರುವಷ್ಟು ದಿನಗಳು ಉತ್ತಮ ಸೇವೆ ಮಾಡಿ ತಾಲೂಕಿಗೆ ಹೆಸರು ಬರುವಂತೆ ಮಾಡಬೇಕು ಎಂದು ಹೇಳಿದರು.

ಅಭಿವೃದ್ಧಿಗೆ ಅಧಿಕಾರಿಗಳು ಸಹಕರಿಸಿ: ಮಾಜಿ ಸಂಸದ ಸಿ. ನಾರಾಯಣ ಸ್ವಾಮಿ ಮಾತನಾಡಿ, ಭಾರೀ ವೇಗದಲ್ಲಿ ನಗರ ಬೆಳೆಯುತ್ತಿದೆ. ಹಲವು ಗ್ರಾಮಗಳಲ್ಲಿ ಗ್ರಾಮಠಾಣ ಜಾಗಗಳನ್ನು ಗುರುತಿಸಬೇಕು. ಕಂದಾಯ ಜಾಗಗಳಲ್ಲಿ ಬಡವಣೆಗಳು ನಿರ್ಮಾಣಗೊಂಡಿದ್ದು, ಅವುಗಳನ್ನು ಗುರುತಿಸಬೇಕು. ನೂತನ ಅಧ್ಯಕ್ಷರು ಹೆಚ್ಚು ಅನುಭವ ಹೊಂದಿದ್ದಾರೆ. ಇಲ್ಲಿನ ಅಧಿಕಾರಿಗಳು ಅಧ್ಯಕ್ಷರೊಂದಿಗೆ ಉತ್ತಮ ಕಾರ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ, ಸದಸ್ಯ ಲಕ್ಷ್ಮಿನಾರಾಯಣ್‌, ದೇವನಹಂ ಅಧ್ಯಕ್ಷೆ ಭಾರತಿ, ಕೆಪಿಸಿಸಿ ಸದಸ್ಯರಾದ ಚೇತನ್‌ ಗೌಡ, ಲಕ್ಷ್ಮಿಪತಿ, ಚಿನ್ನಪ್ಪ, ದೊಡ್ಡಬಳ್ಳಾಪುರ ನಗರ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌, ದೊಡ್ಡಬಳ್ಳಾಪುರ ತಾಪಂ ಅಧ್ಯಕ್ಷ ಶ್ರೀವಾಸ್ತವ್‌, ಉಪಾಧ್ಯಕ್ಷೆ ಭಾರತಿ ಅರವಿಂದ್‌, ಜಿಲ್ಲಾ ಕಾಂಗ್ರೆಸ್‌ ಉಪಧ್ಯಕ್ಷ ರವಿಕುಮಾರ್‌,

ಎಪಿಎಮ್‌ ಸಿ ಅಧ್ಯಕ್ಷ ಸುಧಾಕರ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರೇವತಿ, ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಗೋವಿಂದ್‌ ರಾಜು, ಎಪಿಎಮ್‌ ಸಿ ಮಾಜಿ ನಿರ್ದೇಶಕ ಸೋಮಣ್ಣ, ಜಿಲ್ಲಾ ಅಲ್ಪಾ ಸಂಖ್ಯಾತ ಘಟಕದ ಅಧ್ಯಕ್ಷ ಪಾಷಾ, ದೊಡ್ಡಬಳ್ಳಾಪುರ ಕಸಬ ಹೊಬಳಿ ಬ್ಯಾಂಕ್‌ ಅಧ್ಯಕ್ಷ ವೆಂಕಟೇಶ್‌, ಮುಖಂಡರಾದ ಚನ್ನಪ್ಪ, ರಾಮಣ್ಣ, ಲಕ್ಷ್ಮಣ್‌ ಗೌಡ, ಶ್ರೀನಿವಾಸ್‌, ಪಟಾಲಪ್ಪ, ಕೋದಂಡರಾಮ್‌, ರಾಮ ಚಂದ್ರಪ್ಪ, ಅಶೋಕ್‌, ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ