ರೈತರಿಗೆ ಅಗತ್ಯವಿರುವ ನೆರವು ಸಿಗಲಿ

Team Udayavani, Aug 22, 2019, 3:00 AM IST

ದೇವನಹಳ್ಳಿ: ತಾಲೂಕಿನಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ರೈತರಿಗೆ ಸಿಗಬೇಕು. ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ತಾಪಂ ಅಧ್ಯಕ್ಷೆ ಚೈತ್ರಾ ತಿಳಿಸಿದರು. ನಗರದ ತಾಪಂ ಸಭಾಂಗಣದಲ್ಲಿ ತಾಪಂ ವತಿಯಿಂದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರಿಗೆ ಬಿತ್ತನೆ ಬೀಜ ಸಿಗಲಿ: ಕಳೆದ ಮೂನಾಲ್ಕು ದಿನಗಳಿಂದ ಮಳೆ ಬೀಳುತ್ತಿರುವುದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವುದರಿಂದ ಸಕಾಲದಲ್ಲಿ ಬಿತ್ತನೆ ಬೀಜಗಳು ದೊರೆಯುವಂತೆ ಆಗಬೇಕು. ರಸಗೊಬ್ಬರ ಕೊರತೆ ಇಲ್ಲದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ರೈತರಿಗೆ ಎಲ್ಲಾ ರೀತಿಯ ತಾಂತ್ರಿಕ ಮಾಹಿತಿ ನೀಡಬೇಕು. ಸಮಾಜದ ಕಟ್ಟಕಡೆ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು.

ಅಧಿಕಾರಿಗಳು ಸಭೆಗೆ ಬರುವಾಗ ಹೆಚ್ಚಿನ ಮಾಹಿತಿ ತರಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಇತ್ತಿಚೇಗೆ ದೊಡ್ಡಬಳ್ಳಾಪುರ ಹತ್ತಿರದ ಗೀತಂ ವಿವಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಭಿನಂದನೆ ಕಾರ್ಯಕ್ರಮವನ್ನು ತರಾತುರಿಯಲ್ಲಿ ಮಾಡಿದ್ದಾರೆ. ಶಾಸಕರು ಮತ್ತು ನಾವು ದೇವನಹಳ್ಳಿಯಲ್ಲಿ ಮಾಡಿ ಎಂದು ತಿಳಿಸಿದ್ದೆವು ಎಂದು ಹೇಳಿದರು.

ಫ‌ಲಾನುಭವಿಗಳ ವೇತನದ ಸಮಸ್ಯೆ ಪರಿಹರಿಸಿ: ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್‌ ಮಾತನಾಡಿ, ಕಳೆದ 8 ತಿಂಗಳಿನಿಂದ ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ವೇತನಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಸಾಕಷ್ಟು ಜನ ನಿರೀಕ್ಷೆಯಲ್ಲಿದ್ದಾರೆ. ಅಂಚೆ ಕಚೇರಿಗೆ ಬಂದಿಲ್ಲವೆಂದು ಹೇಳುತ್ತಾರೆ. ತಹಶೀಲ್ದಾರ್‌ ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು. ಪಿಂಚಣಿಯಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. ವೃದ್ಧಾಪ್ಯ ವೇತನ ಪಡೆಯಲು ಹಲವಾರು ಹಿರಿಯರು, ಇಂದು, ನಾಳೆ ಬರುತ್ತೆ ಎಂದು ಕಾಯುತ್ತಿದ್ದಾರೆ. ಇದಕ್ಕೆ ಕೂಡಲೇ ಪರಿಹಾರ ಕಲ್ಪಿಸಬೇಕು ಎಂದು ಸೂಚಿಸಿದರು.

ಉತ್ತಮ ಫ‌ಲಿತಾಂಶ ಬಂದಿರುವುದು ಸ್ವಾಗತಾರ್ಹ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ 3ನೇ ಸ್ಥಾನ ಬಂದಿರುವುದು ಸ್ವಾಗತಿಸುತ್ತೇವೆ. ಆದರೆ ಜಿಪಂ ಸಿಇಒ, ಜನಪ್ರತಿನಿಧಿಗಳು ಮತ್ತು ಎಸ್‌ಡಿಎಂಸಿ ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಕರೆದು ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿರುವವರನ್ನು ಅಭಿನಂದಿಸಬೇಕಾಗಿತ್ತು. ಜಿಲ್ಲೆಯಲ್ಲಿ ತಾಲೂಕು ಮೊದಲ ಸ್ಥಾನಕ್ಕೆ ಬರಲು ನಮ್ಮ ಕೊಡುಗೆ ಏನೂ ಇಲ್ಲವೆ?

ಸಿಇಒ ಸುಪ್ರೀಂ ತರಹ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ಮುಂದೆಯಾದರೂ ತಾಪಂ ಸದಸ್ಯರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮಿತಿ ಗಣನೆಗೆ ತೆಗೆದುಕೊಳ್ಳುವಂತೆ ಆಗಬೇಕು. ಮುಂಬರುವ ದಿನಗಳಲ್ಲಿ ತಾಲೂಕಿಗೆ ಹೆಚ್ಚಿನ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಬಂದರೆ ಶೈಕ್ಷಣಿಕವಾಗಿ ಹೆಚ್ಚು ಪ್ರಗತಿಯಾಗುತ್ತದೆ ಎಂದು ಹೇಳಿದರು.

ತಾಪಂ ಸದಸ್ಯ ಭೀಮರಾಜ್‌ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಹಿಂದಿ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಮಕ್ಕಳು ಬೇರೆ ರಾಜ್ಯಗಳಿಗೆ ಹೋದರೆ ಹಿಂದಿ ಭಾಷೆಯ ಸಮಸ್ಯೆಯಾಗುತ್ತಿದೆ ಎಂದು ಬಿಇಒ ಗಮನಕ್ಕೆ ತಂದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸೋಮತ್ತನಹಳ್ಳಿ ಮಂಜುನಾಥ್‌ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ.

ಸರ್ಕಾರ ಈಗಾಗಲೇ ಆಂಗ್ಲ ಮಾಧ್ಯಮ ತೆರೆದಿರುವುದರಿಂದ ಶಿಕ್ಷಕರು ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ, ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಆಂದೋಲನದ ರೀತಿ ಪೋಷಕರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ತಾಪಂ ಇಒ ಮುರುಡಯ್ಯ, ಪ್ರಭಾರ ತಹಶೀಲ್ದಾರ್‌ ಬಾಲಕೃಷ್ಣ, ತಾಪಂ ಉಪಾಧ್ಯಕ್ಷೆ ಲಲಿತಮ್ಮ, ತಾಪಂ ಸದಸ್ಯರಾದ ಭಾರತಿ, ನಂದಿನಿ, ಶೆ„ಲಜಾ, ವೆಂಕಟೇಶ್‌, ಮುನೇಗೌಡ, ಉಷಾ ರಾಣಿ, ಅನ್ನಪೂರ್ಣಮ್ಮ, ಗೋಪಾಲಸ್ವಾಮಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ